ಶುಕ್ರವಾರ, ಜುಲೈ 1, 2022
22 °C

ಚುರುಮುರಿ: ಔಟಾಫ್ ಸಿಲೆಬಸ್

ಮಣ್ಣೆ ರಾಜು Updated:

ಅಕ್ಷರ ಗಾತ್ರ : | |

Prajavani

‘ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಮಕ್ಕಳು ಉತ್ತಮ ಫಲಿತಾಂಶ ಪಡೆಯಲೆಂದು ಪೇರೆಂಟ್ಸ್ ಎಲ್ರೂ ದೇವರಲ್ಲಿ ಪ್ರಾರ್ಥನೆ ಮಾಡಿ...’ ಪೋಷಕರ ಸಭೆಯಲ್ಲಿ ಶಾಲೆಯ ಹೆಚ್ಚೆಂ ಮನವಿ ಮಾಡಿದರು.

‘ಯಾಕೆ ಮೇಡಂ, ಮಕ್ಕಳು ಚೆನ್ನಾಗಿ ಪಾಠ ಕಲಿತಿಲ್ವಾ?...’ ಪೋಷಕರು ಕಳವಳಗೊಂಡರು.

‘ಸಮವಸ್ತ್ರದ ಗಲಾಟೆ ಕಾವಲಿಗೆಂದು ಶಾಲೆಗೆ ಬಂದಿದ್ದ ಪೊಲೀಸರ ಲಾಠಿ ಭಯದಲ್ಲಿ ಅದೆಷ್ಟು ಕಲಿತಿದ್ದಾರೋ ಗೊತ್ತಿಲ್ಲ’.

‘ಮಕ್ಕಳಲ್ಲಿ ಧೈರ್ಯ ತುಂಬಿ ಪಾಠ ಹೇಳ ಬೇಕಲ್ಲವೇ?’ ಎಂದರು ಪೋಷಕರೊಬ್ಬರು.

‘ಹೇಳಿದ್ದೇವೆ. ಸಮವಸ್ತ್ರ ಧರಿಸದಿದ್ದರೆ ಆಗ ಬಹುದಾದ ನಷ್ಟ, ಧರಿಸಿದರೆ ಆಗುವ ಲಾಭ, ಈ ಎರಡನ್ನೂ ಕೂಡಿ, ಕಳೆದು ಉಳಿಯುವ ಮೊತ್ತದ ಬಗ್ಗೆ ಮಕ್ಕಳಿಗೆ ಸರಳ ಗಣಿತ ಬೋಧಿಸಿದ್ದೇನೆ’ ಎಂದರು ಗಣಿತ ಟೀಚರ್.

‘ಕಲರ್ ಡ್ರೆಸ್‍ನಿಂದ ಮಕ್ಕಳ ಮನಃಸ್ಥಿತಿ ಮೇಲಾಗುವ ದುಷ್ಪರಿಣಾಮ, ಸಮವಸ್ತ್ರದಿಂದ ಆಗುವ ಸತ್ಪರಿಣಾಮದ ಬಗ್ಗೆ ವೈಜ್ಞಾನಿಕವಾಗಿ ಮನವರಿಕೆ ಮಾಡಿಕೊಟ್ಟಿದ್ದೇನೆ’ ವಿಜ್ಞಾನ ಶಿಕ್ಷಕಿ ತಿಳಿಸಿದರು.

‘ವಸ್ತ್ರ ಸಮಾನತೆಯಿಂದ ಭಾವೈಕ್ಯ, ಸಾಮಾಜಿಕ ಸಮಾನತೆ ಸಾಧ್ಯವೆಂದು ಉದಾಹರಣೆಗಳನ್ನು ಉಲ್ಲೇಖಿಸಿ ನಾನು ಮಕ್ಕಳಿಗೆ ಪಾಠ ಹೇಳಿದ್ದೇನೆ’ ಎಂದರು ಸಮಾಜ ಶಿಕ್ಷಕಿ.

‘ಪರೀಕ್ಷೆಯಲ್ಲಿ ಸಮವಸ್ತ್ರದ ಬಗ್ಗೆ ಪ್ರಶ್ನೆಗಳಿರುತ್ತವಾ ಮೇಡಂ?’ ಮತ್ತೊಬ್ಬರು ಕೇಳಿದರು.

‘ಇಲ್ಲ, ಅದೆಲ್ಲಾ ಔಟಾಫ್ ಸಿಲೆಬಸ್...’ ಎಂದರು ಹೆಚ್ಚೆಂ.

‘ಹಿಂದಿನ ವರ್ಷಗಳಲ್ಲಿ ಕೊರೊನಾ ಪಾಠ ಹೇಳಿದ್ರಿ, ಈಗ ಯೂನಿಫಾರಂ ಬೋಧನೆ ಮಾಡಿದ್ರಿ, ಇದರ ಜೊತೆಗೆ ವಿಜ್ಞಾನ, ಗಣಿತ, ಸಮಾಜದ ಪಾಠ ಮಾಡಿದ್ರೋ ಇಲ್ವೋ?’

‘ಆ ಸಬ್ಜೆಕ್ಟ್‌ಗಳನ್ನೂ ಕಲಿಸಿ ಸಿಲೆಬಸ್ ಮುಗಿಸಿ ದ್ದೇವೆ. ಮುಂದೆ ಭಗವದ್ಗೀತೆ ಟೀಚರನ್ನು ನೇಮಕ ಮಾಡಿಕೊಂಡು ಮಕ್ಕಳಿಗೆ ಕಲಿಸುತ್ತೇವೆ’ ಎಂದರು ಹೆಚ್ಚೆಂ.

‘ಕಲಿಸಿ, ಔಟಾಫ್ ಸಿಲೆಬಸ್ ಸಬ್ಜೆಕ್ಟ್‌ಗಳನ್ನು ನೀವು ಕಲಿಸಿ, ಮನೆಯಲ್ಲಿ ನಾವು ಮಕ್ಕಳಿಗೆ ಸೈನ್ಸ್, ಮ್ಯಾಥ್ಸ್‌ ಕಲಿಸುತ್ತೇವೆ...’ ಎಂದು ಪೋಷಕರು ಸಿಟ್ಟಿನಿಂದ ಸಭೆ ಮುಗಿಸಿ ಹೊರಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು