ಶುಕ್ರವಾರ, ಡಿಸೆಂಬರ್ 3, 2021
24 °C

ಚುರುಮುರಿ | ನಾಲಿಗೆ ಚಟ

ಮಣ್ಣೆರಾಜು Updated:

ಅಕ್ಷರ ಗಾತ್ರ : | |

‘ಅಕ್ಕಾ ತರಕಾರಿ...’ ಎಂದು ಕರೆದ ತಾಯಮ್ಮ ತರಕಾರಿ ಮಂಕರಿ ಇಳಿಸಿದಳು.

‘ತರಕಾರಿ ಬೇಡ ತಾಯಮ್ಮ, ನಿನ್ನ ಹತ್ರ ರೇಟ್ ಜಾಸ್ತಿ...’ ನೈಟಿಗೆ ಕೈ ಒರೆಸಿಕೊಂಡು ಸುಮಿ ಮನೆ ಒಳಗಿನಿಂದ ಬಂದಳು.

‘ಮನೆ ಬಾಗಿಲಿಗೆ ತರಕಾರಿ ಸೇವೆ ಕೊಡ್ತಿದ್ದೀನಿ. ನಂಗೂ ಮೂರು ಕಾಸು ಬೇಡ್ವಾ ಅಕ್ಕಾ?...’ ತಾಯಮ್ಮನಿಗೆ ಹುಸಿ ಸಿಟ್ಟು.

‘ಕೇಜಿಗೆ ನೂರು ರೂಪಾಯಿ ಹೇಳ್ತೀಯಾ, ಪೆಟ್ರೋಲ್‍ಗಿಂತ ನಿನ್ನ ತರಕಾರಿ ರೇಟೇ ಜಾಸ್ತಿ...’ ಎನ್ನುತ್ತಾ ಸುಮಿ ತರಕಾರಿ ಆರಿಸಿಕೊಂಡಳು.‌

‘ಹಿಂಗೇ ಇನ್ನಷ್ಟು ದಿನ ಮಳೆ ಹುಯ್ತಿದ್ರೆ ಇದೂ ಸಿಗಲ್ಲ, ಬೆಳೆದದ್ದೆಲ್ಲಾ ಕೊಚ್ಚಿಕೊಂಡು ಹೋಗ್ತದೆ’.

‘ಈ ಮಳೆ ಯಾವತ್ತಿಗೆ ನಿಲ್ಲುತ್ತೋ?’

‘ಕೊಡ, ಕೊಡೆ ಹಿಡಿದು ಮಳೆಯನ್ನ ತಡೆಯಲಾಗುತ್ತಾ? ಆನೆ ನಡೆದಿದ್ದೇ ದಾರಿ ಅನ್ನುವಂತೆ ನೀರು ಹರಿದಿದ್ದೇ ಮೋರಿ. ಮಳೆ ನೀರಿಗೆ ದಾರಿ ಬಿಟ್ಟುಕೊಟ್ಟು ನಾವು
ಸುಮ್ಮನಿರಬೇಕಷ್ಟೇ’.

‘ತರಕಾರಿ ಬೆಲೆ ಹೀಗೆ ಹೆಚ್ಚಾಗುತ್ತಿದ್ರೆ ನಮ್ಮಂಥವರು ಏನನ್ನು ತಿಂದು ಬದುಕೋದು?’

‘ಅಡುಗೆ-ತಿಂಡಿ ಒಂದು ದಿನದ ವ್ಯವಹಾರ ಅಲ್ಲ. ಕೈಗೆ ಎಟಕುವುದಕ್ಕೆ ಉಪ್ಪು-ಖಾರ, ಒಗ್ಗರಣೆ ಸೇರಿಸಿ ತಿಂದು ನಾಲಿಗೆ ರುಚಿ ತೀರಿಸಿಕೊಳ್ಳಬೇಕು. ನಾವು ಏನನ್ನು ತಿಂದ್ವಿ ಅಂತ ಜನ ಹೊಟ್ಟೆ ಬಗೆದು ನೋಡ್ತಾರಾ? ಆಹಾರ ಅನ್ನೋದು ಅವರವರ ಹೊಟ್ಟೆಪಾಡು, ಕಟ್ಟುಪಾಡು...’

‘ಬೇರೆಯವರ ಆಹಾರ ಪದ್ಧತಿಯನ್ನ ಆಡಿಕೊಳ್ಳೋದು ಕೆಲವರಿಗೆ ನಾಲಿಗೆ ಚಟವಾಗಿದೆ’ ಸುಮಿಗೆ ಬೇಸರ.

‘ಹೌದಕ್ಕಾ, ಸಾಮಾಜಿಕ ಜಾಲತಾಣದ ಜನ ಅಂತಹವರ ಜನ್ಮ ಜಾಲಾಡಿಸಿ ಮಾನ
ಕಳೆಯುತ್ತಿರೋದ್ನ ನಾನೂ ನೋಡಿದ್ದೀನಿ’ ನಕ್ಕಳು ತಾಯಮ್ಮ.

‘ನಾವು ಸಮಾಜಕ್ಕೆ ಅಂಜಿದರೆ ಸಾಲದು, ಸಾಮಾಜಿಕ ಜಾಲತಾಣಕ್ಕೆ ಸಿಗದಂತೆ ನಾಲಿಗೆಯನ್ನ ನಿಯಂತ್ರಿಸಿಕೊಂಡು ಮರ್ಯಾದೆಯಿಂದ ಬಾಳೋದನ್ನು ಕಲೀಬೇಕು...’ ಎಂದು ಸುಮಿ ತರಕಾರಿ ದುಡ್ಡು ಕೊಟ್ಟು ತಾಯಮ್ಮನಿಗೆ ಮಂಕರಿ ಹೊರಿಸಿದಳು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.