ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಅಮ್ಮಂದಿರ ಅಡ್ಮಿಷನ್

Last Updated 16 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ಕೊರೊನಾ ಕಾಟ ಶುರುವಾದಾಗಿನಿಂದ ಪ್ರೈಮರಿ ಶಾಲೆಯ ಮಕ್ಕಳಿರುವ ಮನೆಗಳಲ್ಲಿ, ‘ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು...’ ಎನ್ನುವಂತಾಗಿದೆ.

ಕೊರೊನಾ ಕಂಟ್ರೋಲಿಗೆ ಬಂದು ಪ್ರೈಮರಿ ಮಕ್ಕಳನ್ನು ಶಾಲೆಯಲ್ಲಿ ಟೀಚರ್‌ಗಳ ಮಡಿಲಿಗೆ ಹಾಕಿ ಹಾಯಾಗಿರೋಣ ಎಂದುಕೊಂಡ ಅಮ್ಮಂದಿರಿಗೆ ಶಿಕ್ಷಣ ಮಂತ್ರಿಗಳು ಶಾಕ್ ಕೊಟ್ಟಿದ್ದಾರೆ. 1ರಿಂದ 5ನೇ ತರಗತಿವರೆಗೆ ಸ್ಕೂಲ್ ಆರಂಭಿಸಬಾರದು ಎಂದು ಶಾಲೆಗಳಿಗೆ ಕಟ್ಟಪ್ಪಣೆ ಮಾಡಿದ್ದಾರೆ.

‘ಹೀಗಾದ್ರೆ ಮಕ್ಕಳ ಶೈಕ್ಷಣಿಕ ಭವಿಷ್ಯ ಬೆಳಗುವುದು ಯಾವಾಗ ಅಂತ ಅಮ್ಮಂದಿರ ದಂಡು ಸ್ಕೂಲಿಗೆ ಹೋಗಿ ಹೆಡ್‍ಮಿಸ್ ಬಳಿ ಸಂಕಟ ತೋಡಿಕೊಂಡಿತು.

‘ಸಾರಿ, ಸರ್ಕಾರದ ರೂಲ್ಸ್ ಫಾಲೋ ಮಾಡಲೇಬೇಕು’ ಅಂದ್ರು ಹೆಚ್ಚೆಂ.

‘ಮಕ್ಕಳ ಭವಿಷ್ಯ ಕತ್ತಲಾಗುತ್ತದೆ ಮೇಡಂ’ ಅಮ್ಮಂದಿರು ಆತಂಕಪಟ್ಟರು.

‘ನಮ್ಮ ಬದುಕು, ಭವಿಷ್ಯವೂ ಕತ್ತಲಲ್ಲಿದೆ. ನೀವು ಫೀಸ್ ಕಟ್ಟಿಲ್ಲ, ನಮಗೆ ಸಂಬಳ ಕೊಟ್ಟಿಲ್ಲ...’ ಹೆಚ್ಚೆಂ ಕನ್ನಡಕ ತೆಗೆದು ಕಣ್ಣು ಒರೆಸಿಕೊಂಡರು.

‘ನಾವು ಸ್ಕೂಲಿಗೆ ಬರ್ತೀವಿ, ಮಕ್ಕಳಿಗೆ ಕಲಿಸುವುದನ್ನು ನಮಗೆ ಕಲಿಸಿ, ನಾವು ಮನೆಯಲ್ಲಿ ಮಕ್ಕಳಿಗೆ ಕಲಿಸ್ತೀವಿ’ ಒಬ್ಬರು ಅಮ್ಮ ಐಡಿಯಾ ಹೇಳಿದರು.

‘ಇದಕ್ಕೂ ಸರ್ಕಾರ ಅಬ್ಜೆಕ್ಷನ್ ಮಾಡುತ್ತದೇನೋ...’ ಹೆಚ್ಚೆಂಗೆ ದಿಗಿಲು.

‘ಮಕ್ಕಳನ್ನು ಶಾಲೆಗೆ ಸೇರಿಸಬೇಡಿ ಅಂತ ಸರ್ಕಾರ ಹೇಳಿದೆ ಹೊರತು, ಪೇರೆಂಟ್ಸ್‌ನ ಅಡ್ಮಿಟ್ ಮಾಡಿಕೊಳ್ಳಬಾರದು ಅಂತ ಹೇಳಿಲ್ವಲ್ಲಾ. ನಮ್ಮನ್ನು ಸ್ಕೂಲಿಗೆ ಅಡ್ಮಿಟ್ ಮಾಡಿಕೊಳ್ಳಿ’ ಇನ್ನೊಬ್ಬರು ಅಮ್ಮ ಹೇಳಿದರು.

ಹೆಚ್ಚೆಂಗೆ ಖುಷಿಯಾಯಿತು. ‘ಓಕೆ, ನೀವು ಫೀಸ್ ಕಟ್ಟಿ ಅಡ್ಮಿಷನ್ ಆಗಬಹುದು. ಆದರೆ, ಹೀಗೆಲ್ಲಾ ನೈಟಿ ಮೇಲೆ ಟವೆಲ್ ಹಾಕಿಕೊಂಡು ಸ್ಕೂಲಿಗೆ ಬರುವಂತಿಲ್ಲ’ ಎಂದರು.

‘ನಮಗೂ ಯೂನಿಫಾರಂ ಮಾಡ್ತೀರಾ ಮೇಡಂ?’

‘ಸ್ಕೂಲ್ ಕಮಿಟಿ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡ್ತೀವಿ’ ಎಂದರು ಹೆಚ್ಚೆಂ. ಅಮ್ಮಂದಿರಿಗೆ ಆನಂದವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT