ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ | ಸೊಳ್ಳೆ ಕಾಟ

Published 22 ಮೇ 2024, 22:30 IST
Last Updated 22 ಮೇ 2024, 22:30 IST
ಅಕ್ಷರ ಗಾತ್ರ

ಮನೆಗೆ ಬಂದ ಆರೋಗ್ಯ ಕಾರ್ಯಕರ್ತೆ, ‘ಊರಲ್ಲಿ ಡೆಂಗಿ, ಮಲೇರಿಯಾ ಹರಡ್ತಿವೆ,
ಸೊಳ್ಳೆ ಉತ್ಪಾದನೆಯಾಗದಂತೆ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಿ, ಸೊಳ್ಳೆ ಸಂತತಿ ನಾಶ ಮಾಡಿ...’ ಎಂದು ಕರಪತ್ರ ಕೊಟ್ಟರು.

‘ಇತರೆ ಜೀವಸಂಕುಲ ಅವಸಾನದ ಅಂಚಿನಲ್ಲಿದ್ದರೆ ಸೊಳ್ಳೆ ಸಂತತಿ ಬೆಳೆಯುತ್ತಲೇ ಇದೆ’ ಅಂದ ಗಿರಿ.

‘ಮನೆಗೆ ಕಳ್ಳ ನುಗ್ಗಿದರೆ ಪೊಲೀಸರಿಗೆ ದೂರು ಕೊಡಬಹುದು, ಸೊಳ್ಳೆ ನುಗ್ಗಿದರೆ ನೀವೇ
ಕಾಪಾಡಿಕೊಳ್ಳಬೇಕು, ಜಾಗೃತರಾಗಿರಿ’.

‘ಸೊಳ್ಳೆ ಕಚ್ಚಿದರೂ ಪರಿವೆಯೇ ಇಲ್ಲದೆ ಮೈಮರೆತು ಟಿ.ವಿ.ಯಲ್ಲಿ ಐಪಿಎಲ್ ಮ್ಯಾಚ್ ನೋಡುವ ನೀವು ಮೊದಲು ಜಾಗೃತರಾಗಬೇಕು’ ಗಂಡನಿಗೆ ಎಚ್ಚರಿಸಿದಳು ಅನು.

‘ಕ್ರಿಕೆಟ್ ಮ್ಯಾಚ್ ನೋಡಿ ಏನು ಪ್ರಯೋಜನ? ಒಂದು ಸೊಳ್ಳೆಯನ್ನೂ ಕ್ಯಾಚ್ ಹಿಡಿದು ಔಟ್ ಮಾಡಲಿಲ್ಲ, ಪ್ರತಿ ಸಲ ಕ್ಯಾಚ್ ಡ್ರಾಪ್ ಮಾಡ್ತೀರಿ’ ಮಗಳು ನಿಮ್ಮಿ ನಕ್ಕಳು.

‘ಬಾಲ್ ಹಿಡಿಯುವಷ್ಟು ಸುಲಭವಲ್ಲ, ಸೊಳ್ಳೆ ಹಿಡಿಯುವುದು’.

‘ಬೌಂಡರಿ, ಸಿಕ್ಸರ್ ಬಾರಿಸುವುದಿರಲಿ, ಸೊಳ್ಳೆ ಬ್ಯಾಟ್ ಹಿಡಿದು ನಾಲ್ಕೈದು ಸೊಳ್ಳೆಗಳನ್ನೂ ಬಾರಿಸಲಿಲ್ಲ ನೀವು’ ಅನು ರೇಗಿದಳು.

‘ಆರೋಗ್ಯ ಆಂಟಿ, ಕೊರೊನಾ ಕಾಲದಲ್ಲಿ ಪಿಪಿಇ ಕಿಟ್ ಇತ್ತಲ್ಲ ಹಾಗೇ ನಿಮ್ಮಲ್ಲಿ ಸೊಳ್ಳೆ ಕಿಟ್ ಇಲ್ವಾ?’ ಪಮ್ಮಿ ಕೇಳಿದಳು.

‘ಇಲ್ಲ, ಸೊಳ್ಳೆ ತಡೆ ಕ್ರಮಗಳನ್ನು ನೀವೇ ಅನುಸರಿಸಿ ಆರೋಗ್ಯ ಕಾಪಾಡಿಕೊಳ್ಳಿ’.

‘ನಮ್ಮ ರಕ್ತಸಂಬಂಧಿಯೇನೋ ಎನ್ನುವಂತೆ ಸೊಳ್ಳೆಗಳು ಮುಲಾಜಿಲ್ಲದೆ ನಮ್ಮ ರಕ್ತ ಹೀರಿಬಿಡುತ್ತವೆ’ ಅನುಗೆ ಸಿಟ್ಟು.

‘ಆಂಟಿ, ಸೊಳ್ಳೆಗಳಿಗೆ ಯಾವ ಬ್ಲಡ್ ಗ್ರೂಪ್ ಇಷ್ಟ?’

‘ಸೊಳ್ಳೆಗಳು ಗ್ರೂಪಿಸಂ ಮಾಡಲ್ಲ, ಎಲ್ಲಾ ಗ್ರೂಪಿನ ಬ್ಲಡ್ ಹೀರಿಬಿಡುತ್ತವೆ’.

‘ಸಾಧಾರಣ ಸೊಳ್ಳೆ ಅಸಾಧಾರಣ ಕಾಟ ಕೊಡುತ್ತದೆ...’ ಗಿರಿಗೆ ಆತಂಕ.

‘ಹೌದು ಸಾರ್, ಸೊಳ್ಳೆಯ ಮೂತಿ ಚಿಕ್ಕದಾದರೂ ಫಜೀತಿ ದೊಡ್ಡದು, ಹುಷಾರಾಗಿರಿ...’ ಎಂದು ಹೇಳಿ ಆರೋಗ್ಯ ಕಾರ್ಯಕರ್ತೆ ಹೊರಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT