ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ ರಾಜಕೀಯ ವಿಡಂಬನೆ: ಆಯುಧ ಪುರಾಣ!

Last Updated 7 ಅಕ್ಟೋಬರ್ 2022, 0:15 IST
ಅಕ್ಷರ ಗಾತ್ರ

‘ಏನ್ರಲೆ ಹಬ್ಬ ಜೋರಾ? ಹೆಂಗಾತು ದಸರಾ, ಆಯುಧ ಪೂಜಿ?’ ಗುಡ್ಡೆ ಹರಟೆ ಗೆಳೆಯರನ್ನ ವಿಚಾರಿಸಿದ.

‘ಏನ್ ಹಬ್ಬ ಬಿಡಲೆ, ನನ್ನೆಂಡ್ತಿ ಪೇಪರ್ ಜಾಹೀರಾತು ನೋಡಿ ‘ರೀ... ಆ ಚಿನ್ನದ ಅಂಗಡೀಲಿ ಬೆಳ್ಳಿ ನಾಣ್ಯ ಫ್ರೀ ಕೊಡ್ತಾರಂತೆ, ಒಂದು ನೆಕ್ಲೆಸ್ ಕೊಡಿಸ್ರೀ’ ಅಂತ ಗಂಟು ಬಿದ್ದಿದ್ಲು’ ದುಬ್ಬೀರ ಬೆವರೊರೆಸಿಕೊಂಡ.

‘ಹೌದಾ? ಇದು ಹೆಂಗಾತು ಅಂದ್ರೆ, ‘ಗೂಟ ಖಾಲಿ ಐತಿ, ಅದಕ್ಕೊಂದು ಎಮ್ಮಿ ಕೊಂಡು ತಂದು ಕಟ್ರಿ’ ಅಂದಂಗಾತು’ ಗುಡ್ಡೆ ಹೇಳಿದ.

‘ಸೈನಿಕರ ಆಯುಧ ಗನ್ನು, ಪತ್ರಕರ್ತರ ಆಯುಧ ಪೆನ್ನು, ರಾಜಕಾರಣಿಗಳ ಆಯುಧ ಯಾವುದು?’ ಕಡೆಮನಿ ಕೊಟ್ರೇಶಿ ಗಮನ ಸೆಳೆದ.

‘ಅವುರವು ಬಾಳದಾವು ಬಿಡಲೆ, ಸಿ.ಡಿ, ಇ.ಡಿ, ಸಿಬಿಐ, ಗುಡಿಗುಂಡಾರ, ಪಾದಯಾತ್ರೆ... ಒಂದಾ ಎರಡಾ?’ ಗುಡ್ಡೆ ವಿವರಿಸಿದ.

‘ಅವೆಲ್ಲಕ್ಕಿಂತ ರಾಜಕಾರಣಿಗಳತ್ರ ಒಂದು ದೊಡ್ಡ ಆಯುಧ ಐತಿ’

‘ಹೌದಾ? ಯಾವುದು?’

‘ಎಲುಬಿಲ್ಲದ ನಾಲಿಗಿ!’ ನಕ್ಕ ತೆಪರೇಸಿ.

‘ಲೇ ತೆಪರ, ರಾಜಕಾರಣಿಗಳ ನಾಲಿಗಿ ಬಗ್ಗೆ ಹೇಳ್ತಿಯಲ್ಲ, ನಿನ್ನೆಂಡ್ತಿ ನಾಲಿಗಿ ಮುಂದೆ ಯಾವ ಆಯುಧ ನಿಲ್ತಾವೆ ಹೇಳಲೆ’ ದುಬ್ಬೀರ ಕಾಲೆಳೆದ.

‘ದುಬ್ಬೀರ ಸರಿಯಾಗಿ ಮಾತಾಡು, ತೆಪರೇಸಿ ಆಯುಧಗಳ ಬಗ್ಗೆ ನಿಂಗೊತ್ತಿಲ್ಲ’ ಗುಡ್ಡೆ ಆಕ್ಷೇಪಿಸಿದ.

‘ಏನು? ತೆಪರನ ಆಯುಧಗಳಾ? ಯಾವಪ್ಪ ಅವು?’

‘ಒಂದು ಮೌನಾಯುಧ! ಹೆಂಡ್ತಿ ಎಷ್ಟು ಕೂಗಾಡಿದ್ರು ಪಿಟಿಕ್ಕನ್ನಂಗಿಲ್ಲ...’

‘ಎರಡು?’

‘ನಿದ್ರಾಯುಧ! ಹೆಂಡ್ತಿ ಎಷ್ಟೇ ಹಾರಾಡ್ಲಿ, ಶಿವಾ ಅಂತ ಗುಬುರಾಕ್ಕಂಡ್ ಮಲಗಿದ್ರೆ ಮುಗೀತು, ಖೇಲ್ ಖತಂ ನಾಟಕ್ ಬಂದ್!’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT