ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ತಾಕತ್ತಿಲ್ಲದ ಶ್ರೀಸಾಮಾನ್ಯ

Last Updated 18 ಸೆಪ್ಟೆಂಬರ್ 2022, 17:36 IST
ಅಕ್ಷರ ಗಾತ್ರ

‘ನನಗ ಎರಡು– ಮೂರು ಲಕ್ಷ ರೊಕ್ಕ ಕೊಡು, ನಾ ಒಂದು ಇ-ಹರಾಜಿನೊಳಗ ಭಾಗವಹಿಸ್ತೀನಿ’ ಬೆಕ್ಕಣ್ಣನದು ಒಂದೇ ಸಮನೆ ಹಾರಾಟ.

ನಾನು ಹೌಹಾರಿಬಿಟ್ಟೆ. ‘ಹಾಲಿಗೆ, ಗ್ಯಾಸಿಗೆ ರೊಕ್ಕ ಹೊಂದಿಸಾಕೇ ತ್ರಾಸು ಪಡಾಕೆಹತ್ತೀನಿ... ಲಕ್ಷಗಟ್ಟಲೆ ಎಲ್ಲಿಂದ ತರಲಿ?’

‘ಮೋದಿಮಾಮನ ಉಡುಗೊರೆಗಳನ್ನ ಹರಾಜು ಹಾಕ್ತಾರಂತ. ಭಾರೀ ಬೆಲೆದು ಟಿಶರ್ಟು ಐತಂತ. ಮೋದಿಮಾಮನ ಹೆಸರನ್ನ ಬಂಗಾರದ ಎಳೆವಳಗ ನೇಯ್ದ ಕುರ್ತಾ ಐತಂತ. ನಾನೂ ಅದ್ಯಾವುದಾರ ಒಂದ್ ತಗಳೂಣು ಅಂದ್ರ ಎಲ್ಲಾದಕ್ಕೆ ಬ್ಯಾಡಂತೀ’ ಬೆಕ್ಕಣ್ಣ ಕೊಸಗುಡುತ್ತಲೇ ಇತ್ತು. ನಾನು ಕ್ಯಾರೆ ಎನ್ನದೇ ಸುಮ್ಮನಿದ್ದೆ.

‘ಹೋಗ್ಲಿ ಇಪ್ಪತ್ ಸಾವ್ರನಾದ್ರೂ ಕೊಡು. ದಿಲ್ಲೀ ಹೋಟೆಲ್ಲಿನಾಗೆ ಮೋದಿಮಾಮನ ಹುಟ್ಟಿದಹಬ್ಬಕ್ಕೆ ಅಂತ 56 ಇಂಚಿನ ಥಾಲಿ ಭೋಜನ ವ್ಯವಸ್ಥೆ ಮಾಡಿದಾರಂತ, ದಿಲ್ಲಿಗೆ ಹೋಗಿ 56 ಇಂಚಿನ ಮಾಂಸಾಹಾರದ ಥಾಲಿ ಉಂಡುಬರ್ತೀನಿ. ಅಕಸ್ಮಾತ್ ಅಲ್ಲಿ 8.5 ಲಕ್ಷದ ಲಾಟರಿ ಗೆದ್ದರೆ ಅದ್ರಾಗೆ ಅರ್ಧ ನಿನಗ ಕೊಡ್ತೀನಿ’ ಎಂದು ಮತ್ತೆ ಗಂಟುಬಿದ್ದಿತು.

‘ಒಳ್ಳೆ ಕಥೆ... ಆ ಥಾಲಿ ಉಂಡ್ರ ನಿಂದೇನು 56 ಇಂಚಿನ ಎದೆ ಆಗತೈತೇನು? ಇಲಿ, ಹೆಗ್ಗಣ ಹಿಡಿಯೂದು ಬಿಟ್ಟು ಒಣ ಕಾರುಬಾರು ನಡೆಸ್ತೀ’ ಎಂದು ಬೈದಿದ್ದಕ್ಕೆ ಗುರುಗುಟ್ಟಿ ಸುಮ್ಮನಾಯಿತು.

‘ಹೋಗ್ಲಿ... ಇಲ್ಲೇನೋ ಭಾರೀ ಆಫರ್ ಸೇಲ್ ನಡೆದೈತಂತ. ದಸರಾ, ದೀಪಾವಳಿಗಿಂತ ಮೊದಲೇ ಸೇಲ್ ಹಚ್ಯಾರ. ಅದಕ್ಕಾರೂ ಇಬ್ರೂ ಹೋಗೂಣೇನಾ?’ ಎಂದು ಪೇಪರು ಹಿಡಿದು ಮೆತ್ತಗೆ ಕೇಳಿತು.

ಮನೆಗೆ ಬೇಕಾದ ಸಾಮಾನುಗಳು ಇವೆಯೇನೋ ಅಂತ ನೋಡಿದರೆ ‘ಶಾಸಕಾಂಗಡಿ ಸೇಲ್, ಕಾರ್ಯಾಂಗಡಿ ಸೇಲ್’ ಎಂದು ಬರೆದಿದ್ದ ಕಾರ್ಟೂನು ತೋರಿಸಿತು.

‘ಇದೂ ನಮಗಲ್ಲಲೇ... ಶಾಸಕಾಂಗಡಿಳಗ ಕೊಂಡುಕೊಳ್ಳೊ ತಾಕತ್ತು ಇರದು ನಮ್ಮ ಕುಬೇರ ಜನಪ್ರತಿನಿಧಿಗಳಿಗೆ. ಇನ್ನ ಕಾರ್ಯಾಂಗಡಿ ವಳಗ ಕೊಂಡುಕೊಳ್ಳೊ ತಾಕತ್ತು...’

‘ನಿನ್ನಂಥ ಶ್ರೀಸಾಮಾನ್ಯರಿಗೆ ಆ ತಾಕತ್ತೂ ಇಲ್ಲ’ ಎಂದು ನನ್ನ ತಲೆಗೆ ಮೊಟಕಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT