ಬುಧವಾರ, ಸೆಪ್ಟೆಂಬರ್ 18, 2019
28 °C

ಟ್ರಿನ್‌... ಟ್ರೀನ್‌ ಟ್ರಂಪಣ್ಣ

Published:
Updated:
Prajavani

‘ಹಲೋ, ಬ್ರದರ್‌, ಸಾರಿ ಬಿಗ್‌ ಬ್ರದರ್‌ ಟ್ರಂಪ್‌ ಸಾಹೇಬ್ರಾ?’

‘ನೀವು ಯಾರು? ಏನ್‌ ವಿಷಯಾ?’

‘ನಾನು ಕರುನಾಡಿನ ಮಾಜಿ ಮುಖ್ಯಮಂತ್ರಿ ಕುಮಾರಣ್ಣ’.

‘ಆ್ಞಂ, ಸರಿಯಾಗಿ ಕೇಳಿಸಲಿಲ್ಲ, ಯಾರಂದ್ರಿ?’

‘ಬೆಂಗಳೂರಿನಿಂದ ಕರ್ನಾಟಕದ ಮಾಜಿ ಸಿ.ಎಂ ಮಾತಾಡ್ತಾ ಇದೀನಿ’.

‘ಬ್ಯಾಂಗ್ಳೋರ್‌ನಿಂದ ಫೋನ್‌. ಏನು ಅಂತ ಅರ್ಥ ಆಗ್ತಾ ಇಲ್ಲ. ಕಾಲ್‌ ಟ್ಯಾಪ್‌ ಮಾಡಿ’ ಅಂತ ಸಹಾಯಕರಿಗೆ ಹೇಳಿ ‘ಏನಾಯ್ತು ಹೇಳಿ ಮಿಸ್ಟರ್ ಎಕ್ಸ್‌ ಸಿ.ಎಂ’.

‘ಏನಿಲ್ಲ, ಫೋನ್‌ ಕದ್ದಾಲಿಕೆಯ ತನಿಖೆಯನ್ನು ನಿಮ್ಮ ಫ್ರೆಂಡ್‌ ‘ನಮೋ’ ಸಾಹೇಬ್ರ ಪಕ್ಷ, ಸಿಬಿಐಗೆ ವಹಿಸಿದೆ. ಅದಕ್ಕೆ ನಾನು ಸಿಬಿಐ ಏನು, ಟ್ರಂಪ್‌ ಅವರಿಂದ ಬೇಕಾದರೂ ತನಿಖೆ ನಡೆಸಿ ಅಂತ ಹೇಳ್ಬಿಟ್ಟಿದ್ದೀನಿ’.

‘ನನ್ನ ಹೆಸರು ನೆನಪಾಗಿದ್ದು ಯಾಕೆ?’

‘ಸಿಬಿಐಗಿಂತ ವಿಶ್ವದ ದೊಡ್ಡಣ್ಣನ ಎಫ್‌ಬಿಐ ಹೆಚ್ಚು ಸಮರ್ಥ ಅಲ್ವಾ. ನಾನು ಎಲ್ಲರನ್ನೂ ಬ್ರದರ್‌ ಅಂತ ವಿಶ್ವಾಸಕ್ಕೆ ತಗೋತೀನಿ. ನೀವು ಬಿಗ್‌ ಬ್ರದರ್‌ ಅಲ್ವಾ ಅದಕ್ಕೆ ಫೋನ್‌ ಮಾಡ್ದೆ’.

‘ಷ್, ಬ್ರದರ್‌ ಸ್ವಲ್ಪ ಮೆತ್ತಗೆ ಮಾತನಾಡು. ನಮ್ಮ ಮಾತನ್ನ ಇಮ್ರಾನ್‌ ಖಾನ್‌, ಪುಟಿನ್‌, ಕಿಮ್‌ ಜಾಂಗ್‌, ಷಿ’ ಕದ್ದು ಕೇಳುವ ಸಾಧ್ಯತೆ ಇದೆ’. ‘ಹೆದರಬೇಡಿ ಬ್ರದರ್‌. ಸಿಬಿಐ ತನಿಖೆಗೆ ನಾನು ತೃಣಮಾತ್ರವೂ ಹೆದರಿಲ್ಲ’.

‘ಭೇಷ್‌, ಸರಿಯಾಗಿ ಹೇಳಿದ್ರಿ. ನನಗೆ ಫೋನ್‌ ಮಾಡಲು ಕಾರಣ?’

‘ಆ ಸಿದ್ದಣ್ಣ ಪೆದ್ದಣ್ಣನಂತೆ ಮಾತನಾಡಿದ್ದಾನೆ. ನಿಮ್ಮ ಖಾಸಾ ದೋಸ್ತ್‌ ‘ನಮೋ’ಗೆ ಒಂದ್‌ ಮಾತ್ ಹೇಳಿ, ಸಿಬಿಐನಿಂದ ಎಫ್‌ಬಿಐಗೆ ತನಿಖೆಯನ್ನ ವರ್ಗಾಯಿಸಲು ಮನವಿ ಮಾಡಬೇಕು ಬ್ರದರ್‌’.

‘ಕಾಶ್ಮೀರ ವಿಷಯದಾಗ ನಾನು ಮೂಗು ತೂರಿಸಿದ್ದು ನೋಡಿ ಅವರು ನನ್ನ ಬಗ್ಗೆ ಕೋಪ ಮಾಡ್ಕೊಂಡಿದ್ದಾರೆ. ಅದು ತಣ್ಣಗಾಗುತ್ತಿದ್ದಂತೆ ಒಂದು ಮಾತೇನ್‌, ಸಾವಿರ ಹೇಳ್ತೀನಿ ಬಿಡಿ. ಸದ್ಯಕ್ಕೆ ನನಗೆ ಪುರುಸೊತ್ತಿಲ್ಲ. ಗ್ರೀನ್‌ಲ್ಯಾಂಡ್‌ ಖರೀದಿ ಬಗ್ಗೆ ತಲೆಕೆಡಿಸಿಕೊಂಡಿದೀನಿ’ ಅಂತ ಹೇಳ್ತಾ ಫೋನ್‌ ಕಟ್‌ ಮಾಡಿದ್ರು.

‘ಸದ್ಯಕ್ಕೆ ನನಗೂ ಕೆಲಸ ಇಲ್ಲ. ಟ್ರಂಪಣ್ಣ ಥರಾನೆ ಲ್ಯಾಂಡ್‌ ವಹಿವಾಟಿನತ್ತ ಗಮನ ಹರಿಸುವೆ’ ಅಂತ ಕುಮಾರಣ್ಣ ಆಕಳಿಸುತ್ತ ನೆಮ್ಮದಿಯಿಂದ ನಿದ್ದೆಗೆ ಜಾರಿದರು.

Post Comments (+)