ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | ಆತ್ಮಸಾಕ್ಷಿ ಮತ!

Published 27 ಫೆಬ್ರುವರಿ 2024, 18:30 IST
Last Updated 27 ಫೆಬ್ರುವರಿ 2024, 22:30 IST
ಅಕ್ಷರ ಗಾತ್ರ

ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಆತ್ಮಸಾಕ್ಷಿ ಮತ ಚಲಾಯಿಸಿ ಮನೆಗೆ ಬಂದಿದ್ದ ಶಾಸಣ್ಣ ಯಾಕೋ ಕುಮಾರಣ್ಣ
ನಿಗಿಂತ ಹೆಚ್ಚು ಟೆನ್ಷನ್ ಮಾಡಿಕೊಂಡಿದ್ದ. ಲೋಕಾಯುಕ್ತ ಪೊಲೀಸರಂತೆ ಮನೆಯಿಡೀ ಹುಡುಕಾಡಿದರೂ ಪ್ರಯೋಜನವಾಗಲಿಲ್ಲ.

‘ಯೇ… ನೀನೇನಾದರೂ ಎತ್ತಿಟ್ಟೆಯೇನೇ?’ ಹೆಂಡತಿಯ ಮೇಲೆ ರೇಗಾಡಿದ.

‘ಲೋ… ಎಲ್ಲಿ ಹಾಳಾಗಿ ಹೋಗಿದ್ದೆ? ಮಹಡಿ ಮೇಲಿನ ಕೋಣೆಯಲ್ಲೇ ಇರಬೇಕು, ಸರಿಯಾಗಿ ಹುಡುಕು’ ಮಗನಿಗೂ ಆದೇಶ. ಚಾಲಕ ಕುಮಾರನಿಗೂ ಬೈಗುಳ: ‘ಡಿಕ್ಕಿಯಲ್ಲಿ ಸರಿಯಾಗಿ ನೋಡಿದೆಯೇನೋ? ಅಲ್ಲೇ ಬಿಟ್ಟಿರಬಹುದು ಹುಡುಕು, ಸ್ವಲ್ಪನೂ ಜವಾಬ್ದಾರಿ ಇಲ್ಲ’. ಶಾಸಣ್ಣನ ಗದರಿಕೆ ಎಲ್ಲರ ಮೇಲೂ ಗರಿಗೆದರಿತು. ಕೊನೆಗೆ ಏನೂ ತೋಚದೆ ತಿಂಗಳೇಶನಿಗೆ ಕರೆ ಮಾಡಿದ.

‘ಅದೇನು ಕಾಲ ಬಂತಪ್ಪ… ಎಡಗೈ ಬಲಗೈಯನ್ನೇ ನಂಬುವಂತಿಲ್ಲ’.

‘ಏನಾಯ್ತು? ನಿಮ್ಮ ಪಕ್ಷದ ಶಾಸಕರೇನಾದರೂ ಕ್ರಾಸ್ ವೋಟಿಂಗ್ ಮಾಡಿದರಾ? ಪಕ್ಷೇತರರೇನಾದರೂ ಕೈಕೊಟ್ಟರಾ?’

‘ಅವೆಲ್ಲಾ ವಿದ್ಯಮಾನ ವಿಧಾನಸೌಧದಲ್ಲಿ ಇದ್ದದ್ದೇ. ನಾನು ಹೇಳ್ತಿರೋದು ಮನೆಯಲ್ಲಿ ನಡೆಯುತ್ತಿರುವ ಮೋಸ. ಯಾರನ್ನೂ ನಂಬದಂತಾಗಿದೆ’.

‘ನೀನು ಒಳ್ಳೇ ಪಕ್ಷ ಬಿಡಲು ನಿರ್ಧರಿಸಿದ ಶಾಸಕನಂತೆ ಅರ್ಥವಾಗದ ರೀತಿ ಮಾತನಾಡು
ತ್ತಿದ್ದೀ. ಸರಿಯಾಗಿ ಹೇಳು, ಆಗಿದ್ದಾದರೂ ಏನು?’

‘ಏನಿಲ್ಲಾ… ಅದೇ… ಅದನ್ನು ಅರ್ಧಗಂಟೆ ಮುಂಚೆ ತಂದು ಮನೆಯಲ್ಲೇ ಇಟ್ಟಿದ್ದು ನನಗೆ ಸರಿಯಾಗಿ ನೆನಪಿದೆ. ಈಗ ನೋಡಿದರೆ ಮಾಯ!’

‘ಸದನದಲ್ಲಿ ಬಳಸುತ್ತಾರಲ್ಲ ‘ಎಲ್ಲಾ ಗೊತ್ತು, ಎಲ್ಲಾ ಬಿಚ್ಚಿಡುತ್ತೇನೆ’ ಅಂತ ಹೇಳುತ್ತಲೇ ಮುಚ್ಚಿಡುವ ತಂತ್ರ. ಹಾಗಿದೆ ನಿನ್ನ ಮಾತು…’

‘ನಿನ್ಹತ್ರ ಏನು ಮುಚ್ಚುಮರೆ... ಹೇಳ್ತೀನಿ ಕೇಳು. ನನ್ನ ಆತ್ಮಸಾಕ್ಷಿ ಮನೆಯಲ್ಲಿ ಕಳೆದುಹೋಗಿದೆ…’ ಎಂದು ಹೇಳುವಷ್ಟರಲ್ಲಿ, ‘ಅಪ್ಪಾ… ಸೂಟ್‌ಕೇಸು ಸಿಕ್ತು… ಮಂಚದ ಕೆಳಗಿತ್ತು’ ಎಂದು ಶಾಸಣ್ಣನ ಮಗ ಜೋರಾಗಿ ಕಿರುಚಿದ್ದು ತಿಂಗಳೇಶನಿಗೂ ಕೇಳಿಸಿತು! ಆತ್ಮಸಾಕ್ಷಿಯ ಸೂಟ್‌ಕೇಸು ಪ್ರಹಸನ ಸುಖಾಂತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT