ಸೋಮವಾರ, ಜನವರಿ 25, 2021
16 °C

ಚುರುಮುರಿ: ಮಾರ್ಜಾಲ ನಿಗಮ

ಸುಮಂಗಲಾ Updated:

ಅಕ್ಷರ ಗಾತ್ರ : | |

Prajavani

ಬೆಕ್ಕಣ್ಣ ಎರಡು– ಮೂರು ದಿನಗಳ ನಂತರ ಮನೆಗೆ ಬಂದಿತು. ‘ರಗಡ್ ಸುಸ್ತಾತು... ಆದ್ರೂ ಕೆಲಸ ಮುಗಿಸಿದ್ವಿ’ ಎಂದು ಉಸ್ಗುಟ್ಟಿತು.

‘ಏನಂಥ ರಾಜಕಾರ್ಯ ಮಾಡಿದ್ಯಲೇ’ ಎಂದು ಛೇಡಿಸಿದೆ.

‘ಫಂಡ್ ರೈಸ್ ಮಾಡಾಕೆ ಹತ್ತಿದ್ವಿ’ ಎಂದಿತು.

‘ಕೊರೊನಾಪೀಡಿತರಿಗೆ ಕೊಡಾಕೋ ಅಥವಾ ಬಡ ರೈತರಿಗೆ ಸಹಾಯ ಮಾಡಕ್ಕೋ’ ಕುತೂಹಲದಿಂದ ಕೇಳಿದೆ.

‘ಈ ಸಲ ಫಂಡ್ ರೈಸ್ ಮಾಡಿದ್ದು ಸ್ಟಾನ್ ಸ್ವಾಮಿಗೆ ಸಿಪ್ಪರ್, ಸ್ಟ್ರಾ ಕಳಿಸಾಕೆ. ಆ ಯಪ್ಪನ ಸಿಪ್ಪರ್, ಸ್ಟ್ರಾ ತಾವು ತಗಂಡಿಲ್ಲ, ಹೊಸಾದು ಕೊಡಿಸಾಕೆ ತಮ್ಮ ಹತ್ರ ರೊಕ್ಕ ಇಲ್ಲ ಅಂತ ವಿಶೇಷ ನ್ಯಾಯಾಲಯದವ್ರು ಹೇಳ್ಯಾರಂತಲ್ಲ. ಅದಕ್ಕ, ನಾವು ಮಾರ್ಜಾಲ ಸಂಘದ ವತಿಯಿಂದ ಫಂಡ್ ರೈಸ್ ಮಾಡಿ, ಸ್ಟಾನ್ ಮುತ್ಯಾಗೆ ಸಿಪ್ಪರ್, ಸ್ಟ್ರಾ ಕೊಡ್ರಪ್ಪ ಅಂತ ಕಳಿಸ್ತಿದೀವಿ. ಆದ್ರ ನಮ್ಮ ಸಂಘದ ಹೆಸರಿನ ಬದಲಿಗೆ ಶ್ವಾನಸಂಘದಿಂದ ಕಳಿಸ್ತೀವಿ’ ಎಂದು ಮುಗುಮ್ಮಾಗಿ ಹೇಳಿತು.

‘ಅಲ್ಲಲೇ... ಅಪರೂಪಕ್ಕೊಂದು ಛಲೋ ಕೆಲಸ ಮಾಡೀರಿ... ಮತ್ತ ನಿಮ್ಮ ಸಂಘದ ಹೆಸರಿನಾಗೆ ಕಳಿಸಬೇಕಿಲ್ಲೋ...’

‘ಯೆಡ್ಯೂರಜ್ಜ ಎಷ್ಟೊಂದು ನಿಗಮ ಮಾಡಿ, ಎಷ್ಟ್ ಮಂದಿಗಿ ಅಧ್ಯಕ್ಷಗಿರಿ ಘಮಾಘಮಾ ಮೂಗಿಗೆ ಸವರಿದಾರಲ್ಲ... ಹಂಗ ನಾವು ದೇಸೀ ಮಾರ್ಜಾಲ ಸಮುದಾಯದವ್ರೂ ಭಯಂಕರ ಹಿಂದುಳಿದೀವಿ. ನಮಗೂ ಒಂದು ನಿಗಮ ಮಾಡಿ, ನನ್ನನ್ನ ಅಧ್ಯಕ್ಷನ್ನ ಮಾಡ್ರಿ ಅಂತ ಯೆಡ್ಯೂರಜ್ಜಂಗ ನಾವೆಲ್ಲಾರೂ ಸೇರಿ ಅರ್ಜಿ ಕೊಟ್ಟೇವಿ. ಈ ಫಂಡ್ ರೈಸ್ ಮಾಡಿದ್ದು ಕೇಳಿ ಅಜ್ಜಾರು ಕಣ್ಣು ಕಿಸೀಬಾರ್ದು ಅಂತ ಶ್ವಾನಸಂಘದಿಂದ ಕಳಿಸೇವಿ...’ ಎಂದು ಬೆಕ್ಕಣ್ಣ ತಂತ್ರಗಾರಿಕೆ ಗುಟ್ಟನ್ನು ಉಸುರಿತು.

‘ಅಜ್ಜಾರ ಕುರ್ಚಿ ಮಕಾಡೆ ಬೀಳಾಕಹತ್ತೈತಿ, ಅಂತಾದ್ರಗೆ ನಿಮಗೇನು ನಿಗಮಾ ಮಾಡ್ತಾರ. ದೆಹಲಿವಳಗ ಪ್ರತಿಭಟನೆ ಮಾಡಾಕಹತ್ಯಾರಲ್ಲ, ಆ ರೈತರಿಗೊಂದು ನಿಗಮ ಮಾಡಿದ್ರ ಅಜ್ಜಾರ ಕುರ್ಚಿ ಉಳಿತಿತ್ತೇನೋ’ ನಾನು ಬೆಕ್ಕಣ್ಣನ ಕಾಲೆಳೆದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.