ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ| ನಗುನಗುತಾ ದ್ವೇಷಿಸು!

Last Updated 27 ಮಾರ್ಚ್ 2022, 19:30 IST
ಅಕ್ಷರ ಗಾತ್ರ

‘ಯೋಗಮಾಮಾನ ಸಿಂಹಾಸನಾರೋಹಣ ಕಣ್ಣು ತುಂಬಿಕೊಳ್ಳಾಕ ನಾನೂ ಹೋಗತೀನಿ ಅಂದ್ರ ನೀ ಕಳಿಸಲಿಲ್ಲ. ನಮ್ಮ ಕರುನಾಡಿನ ಉಡುಪಿ ಸ್ವಾಮಿಗಳು, ಇಸ್ಕಾನ್ ಸ್ವಾಮಿಗಳು, ಹಿಂಗ ಎಷ್ಟ್ ಮಂದಿ ಸ್ವಾಮಿಗೋಳ್ ಸಹಿತ ನೋಡಾಕೆ ಹೋಗಿದ್ರು. ಸ್ವಾಮಿಗಳಿಗೇ ಆಸೆ ಇರತೈತಿ ಅಂದ್ರ ನಾ ಆಸೆ ಪಡೂದು ತಪ್ಪೇನು’ ಅಂತ ಬೆಕ್ಕಣ್ಣ ಗುರುಗುರು ನಡೆಸಿತ್ತು.

‘ಲಕ್ನೋದಾಗೆ ಟ್ರಾಫಿಕ್ ಜಾಮ್ ಆಗಿ ಸ್ವಾಮೀಜಿನೂ 2 ಕಿ.ಮೀ. ನಡಕೊಂಡೇ ಹೋಗ್ಯಾರಂತ. ಆ ಉರಿಬಿಸಿಲಿನಾಗೆ ನೀ ಅಷ್ಟ್ ನಡೀತಿದ್ಯೇನು? ಡೀಸೆಲ್, ಪೆಟ್ರೋಲು ಇನ್ನಾ ದುಬಾರಿ ಆಗೈತಿ, ಮುಂದಿನ ತಿಂಗಳಿಂದ ಔಷಧಗಳೂ ದುಬಾರಿ ಆಗತಾವು. ಆರೋಗ್ಯ ಕೆಟ್ಟರ ಏನ್ ಮಾಡ್ತೀ? ಸಿಂಹಾಸನಾರೋಹಣದ ವಿಡಿಯೊ ಹಾಕಿ ತೋರಿಸ್ತೇನೇಳು’ ಎಂದು ಸಮಾಧಾನಿಸಿದೆ.

‘ನೀ ಎಲ್ಲದಕ್ಕ ನಮ್ಮ ನಿರ್ಮಲಕ್ಕನ್ನ ದೂರಬ್ಯಾಡ. ಅವೆಲ್ಲ ದುಬಾರಿ ಆದರೇನಾತು... ಬಾಯಿಗಿ ಬಂದಂಗ ಒದರೂ ನಾಲಗಿ ಅಗ್ಗ ಆಗೈತಲ್ಲ, ಸಾಕೇಳು’ ಎಂದು ಉಡಾಫೆ ಹೊಡೆದು ಪೇಪರು ಜಾಲಾಡತೊಡಗಿತು.

ಐದೇ ನಿಮಿಷದಲ್ಲಿ ಕನ್ನಡಿ ಮುಂದೆ ನಿಂತು ‘ಆ ಸಾದಿಕಣ್ಣಂಗೆ ಮೂಲಿ ಅಂಗಡಿ ಮೊದ್ಲು ಖಾಲಿ ಮಾಡು ಅನ್ನಬಕು. ಇಲ್ಲಾಂದ್ರ ನಾವ್ ಒಂದ್ ಕೈ ನೋಡತೀವಿ. ನಮ್ಮ ಹಿಂದೂ ಬೆಕ್ಕುಗಳೆಲ್ಲ ಅಲ್ಲಿ ಹೊಕ್ಕಂಡು ಹೆಗ್ಗಣ, ಇಲಿ ಹಿಡಿತಾವು. ನಾಳೆವಳಗ ಅಂಗಡಿ ಖಾಲಿ ಮಾಡದಿದ್ರ ಒಂದೂ ಮೂಳೆ ನೆಟ್ಟಗಿರಂಗಿಲ್ಲ. ಗೋಲಿ ಮಾರೋ ಅವ್ರಿಗಿ’ ಎಂದು ಭಾರಿ ನಗುಮೊಗದಿಂದ ಹಲ್ಲು ಕಿಸಿಯುತ್ತ ಭಾಷಣ ಪ್ರಾಕ್ಟೀಸ್ ಮಾಡುತ್ತಿತ್ತು.

‘ಹಂಗೆಲ್ಲ ದ್ವೇಷಭಾಷಣ ಮಾಡ ಬಾರದಲೇ... ಜೈಲಿಗಿ ಹಾಕತಾರ’ ಎಂದೆ ಗಾಬರಿಯಾಗಿ.

‘ನಾ ನಕ್ಕೋತ ದ್ವೇಷಭಾಷಣ ಮಾಡತೀನಿ. ಹಂಗೇ ಆರ್ಡರು ಆಗೈತಿ. ನಕ್ಕೋತ ಹೊಡೀರಿ ಅಂದ್ರೂನೂ ಅಪರಾಧ ಅಲ್ಲಂತ. ನೀ ಅಷ್ಟ್ ಗಂಭೀರ ಮಾರಿ ಮಾಡಿಕೊಂಡು ಶಾಂತಿ ಕಾಪಾಡೂಣು ಅಂದ್ರ ನಿನ್ನೇ ಒದ್ದು ಜೈಲಿಗಿ ಹಾಕತಾರಷ್ಟೇ’ ಎಂದು ಕಿಸಿಕಿಸಿ ನಕ್ಕಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT