ಶನಿವಾರ, ಜೂನ್ 19, 2021
28 °C

ಚುರುಮುರಿ: ಬೆಡ್ ಬವಣೆ

ಸಿ.ಎನ್‌.ರಾಜು Updated:

ಅಕ್ಷರ ಗಾತ್ರ : | |

Prajavani

‘ಗಿರಿ, ನಮಗೊಂದು ಬೆಡ್ ಕೊಡಿಸೋ...’ ಎನ್ನುತ್ತಾ ಬಂದರು ಶಾರದಮ್ಮ.

‘ಲಾಕ್‍ಡೌನ್ ಮುಗಿದ ಮೇಲೆ ನನ್ನ ಫ್ರೆಂಡ್ ಅಂಗಡಿಯಲ್ಲಿ ಸುಖನಿದ್ರೆ ಬೆಡ್ ಕೊಡಿಸ್ತೀನಿ ಬಿಡಿ ಆಂಟಿ’ ಅಂದ ಗಿರಿ.

‘ರೀ, ಆಂಟಿ ಕೇಳ್ತಿರೋದು ಮನೆ ಬೆಡ್ ಅಲ್ಲ, ಮೆಡಿಕಲ್ ಬೆಡ್, ಯಾವುದಾದ್ರೂ ಆಸ್ಪತ್ರೆಯ ಬೆಡ್ ಕೊಡ್ಸಿ’ ಅಂದಳು ಅನು.

‘ನಿಮ್ಮನೇಲಿ ಯಾರಿಗಾದ್ರೂ ಕೊರೊನಾ ಅಟ್ಯಾಕ್ ಆಗಿದೆಯಾ?’

‘ಬಿಡ್ತು ಅನ್ನು, ಎಲ್ರೂ ಆರೋಗ್ಯವಾಗಿದ್ದೀವಿ. ಮುಂದೆ ಅಟ್ಯಾಕ್ ಆಗೊಲ್ಲ ಅಂತ ಏನ್ ಗ್ಯಾರಂಟಿ? ಕಾಯಿಲೆ ಬಂದಮೇಲೆ ಪರದಾಡುವ ಬದಲು ಈಗಲೇ ಬೆಡ್ಡು, ಆಕ್ಸಿಜನ್ ರಿಸರ್ವ್ ಮಾಡಿಕೊಳ್ಳೋದು ಒಳ್ಳೆಯದಲ್ವಾ?’

‘ನಿಜ ಆಂಟಿ, ಕುಟುಂಬಕ್ಕೊಂದು ರೇಷನ್ ಕಾರ್ಡ್ ಇರುವಂತೆ ಮನೆಗೆರಡು ಆಕ್ಸಿಜನ್ ಬೆಡ್ ಇಟ್ಟುಕೊಂಡಿರಬೇಕು. ಮೊನ್ನೆ ಮಗಳ ಮದುವೆ ಮಾಡಿದ ಸರೋಜಮ್ಮ, ಮಗಳು-ಅಳಿಯನಿಗೆ ಡಬಲ್ ಕಾಟಿನ ಆಕ್ಸಿಜನ್ ಬೆಡ್ ಕೊಟ್ಟರಂತೆ’.

‘ಆಕ್ಸಿಜನ್ ಬೆಡ್ ಮೇಲೆ ಮಲಗುವಂಥ ಯಾವ ರೋಗ ಇತ್ತಂತೆ ಅವರಿಗೆ?’

‘ಅವರ ಬೆಡ್ ರೂಮ್‌ನಲ್ಲಿ ಉಸಿರು ಕಟ್ಟುವ ವಾತಾವರಣವಂತೆ. ಕಿಟಕಿ, ಬಾಗಿಲು ತೆಗೆದರೂ ಫ್ಯಾನು ಹಾಕಿದ್ರೂ ಗಾಳಿ ಸುಳಿಯಲ್ಲವಂತೆ’.

‘ಆಕ್ಸಿಜನ್ ಸಿಲಿಂಡರ್‌ನ ಬೆನ್ನಿಗೆ ಕಟ್ಟಿಕೊಂಡು ಓಡಾಡುವ ಪರಿಸ್ಥಿತಿ ಬರ್ತದೆ... ನಮ್ಮ ಆರೋಗ್ಯ, ಸೌಕರ್ಯವನ್ನು ನಾವೇ ನೋಡಿಕೊಳ್ಳಬೇಕು, ಸರ್ಕಾರವನ್ನು ನಂಬಿಕೊಳ್ಳಲಾಗಲ್ಲ’ ಅಂದ ಗಿರಿ.

‘ಒಡವೆ, ಆಸ್ತಿ ಗಳಿಸಿದ್ರೆ ಸಾಲದು, ಆಕ್ಸಿಜನ್ ಬೆಡ್ ಸಂಪಾದಿಸಿಕೊಂಡ್ರೆ ಕೊರೊನಾ ಬಂದಾಗ ಅವರಿವರ ಬಳಿ ಅಂಗಲಾಚುವುದು ತಪ್ಪುತ್ತದೆ ಅಲ್ವಾ ಆಂಟಿ’ ಅಂದಳು ಅನು.

‘ಕೊರೊನಾ ನಮ್ಮನ್ನು ಬಿಟ್ಟುಹೋಗುವಂತೆ ಕಾಣಲ್ಲ. ನಿಮ್ಮ ಮಗನನ್ನ ಮೆಡಿಕಲ್ ಓದಿಸಿ, ಮನೇಲಿ ಆಕ್ಸಿಜನ್ ಬೆಡ್ ಇಟ್ಟುಕೊಂಡು ನಿಮ್ಮ ಆರೋಗ್ಯವನ್ನು ನೀವೇ ಕಾಪಾಡಿಕೊಳ್ಳಿ...’ ಎಂದು ಹೇಳಿ ಶಾರದಮ್ಮ ಹೊರಟರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು