ಚುರುಮುರಿ| ‘ಅಲೋಕಿಕ’ ಹರಕೆ!

‘ಮುಖ್ಯಮಂತ್ರಿ ಬೊಮ್ಮಾಯಿ ಎವಿಡೆನ್ಸ್ ಆ್ಯಕ್ಟ್ ಓದಿಲ್ಲವಂತೇ… ಮಾಜಿ ಲಾಯರ್ ಸಿದ್ದರಾಮಯ್ಯ ಬಯಲಿಗೆಳೆದಿದ್ದಾರೆ…’ ‘ಮಾಸ್ಟರ್ ಇನ್ ಲಾ’ ಮಾಡುತ್ತಿರುವ ತಿಂಗಳೇಶನ ಮಗ ರಾಗ ತೆಗೆದ.
‘ಲಾ ಪದವಿ ಮಾಡಿದ್ದು ಸೀನಿಯರ್ ಬೊಮ್ಮಾಯಿ. ಅವರ ಮಗ ಏಕೆ ಎವಿಡೆನ್ಸ್ ಆ್ಯಕ್ಟ್ ಓದಬೇಕಿತ್ತು? ಇದು ಸಿದ್ದರಾಮಯ್ಯನವರ ಹೆವಿ-ಡೆನ್ಸ್ ಹೇಳಿಕೆ!’
‘ಹೌದು, ರಾಯಿಸ್ಟ್ ಬೊಮ್ಮಾಯಿ ವಕೀಲರಾ ಗಿಯೂ ಖ್ಯಾತರಾಗಿದ್ದರು. ‘ಬೊಮ್ಮಾಯಿ ಪ್ರಕರಣ’ದ ತೀರ್ಪು ಕೂಡ ಪ್ರಸಿದ್ಧ’.
‘ಜೂನಿಯರ್ ಬೊಮ್ಮಾಯಿ ಓದಿದ್ದು ಮೆಕ್ಯಾನಿಕಲ್ ಎಂಜಿನಿಯರಿಂಗ್ ಅಲ್ಲವೇ?’ ತಿಂಗಳೇಶನ ‘ಸನ್ ಇನ್ ಲಾ’ ಸಹ ಸಂಭಾಷಣೆಯಲ್ಲಿ ಸೇರಿಕೊಂಡ.
‘ಅವರು ಅಧಿಕೃತವಾಗಿ ಬ್ಯಾಚುಲರ್ ಆಫ್ ಎಂಜಿನಿಯರಿಂಗ್. ಆದರೆ ಸೋಷಿಯಲ್ ಎಂಜಿನಿಯರಿಂಗ್‌ನಲ್ಲಿ ವಿಶೇಷ ಪರಿಣತಿ. ಡಿಪ್ಲೊಮಾ ಇನ್ ಸಂಘ ಪರಿವಾರ್, ಡಿಪ್ಲೊಮಾ ಇನ್ ಕ್ಯಾಬಿನೆಟ್ ಎಕ್ಸ್‌ಪ್ಯಾನ್ಶನ್ ಟ್ರಿಕ್ಸ್, ಸರ್ಟಿಫಿಕೇಟ್ ಕೋರ್ಸ್ ಇನ್ ರಿಸರ್ವೇಶನ್ ಮ್ಯಾನೇಜ್‌ಮೆಂಟ್’.
‘ಮುಖ್ಯಮಂತ್ರಿ ‘ಶಿಗ್ಗಾಂವಿ ಕ್ಷೇತ್ರದಲ್ಲಿ ಮುಸ್ಲಿಂ ಮತ್ತು ಪಂಚಮಸಾಲಿ ಮತ ಸಂಪಾದನೆಯ ನೆಲೆ- ಬೆಲೆ’ ಎಂಬ ವಿಷಯ ಕುರಿತು ಸಂಶೋಧನೆ ನಡೆಸಿರುವ ಸುದ್ದಿಯೂ ಹರಿದಾಡುತ್ತಿದೆ’.
‘ಸಾರ್ವಜನಿಕವಾಗಿ ತಾಕತ್ತು ಪ್ರದರ್ಶನ ಹಾಗೂ ಆರೋಪ-ಪ್ರತ್ಯಾರೋಪ ನಿರ್ವಹಣೆಯಲ್ಲಿ ತರಬೇತಿ ಕೂಡ ಪಡೆದಿದ್ದಾರಂತೆ. ಆದರೆ ಇವುಗಳಿಗೆಲ್ಲಾ ಎಲ್ಲಿಂದ ಎವಿಡೆನ್ಸ್ ತರುವುದು?’ ಮಾಸ್ಟರ್ ಇನ್ ಲಾ ತಲೆ ಕೆರೆದುಕೊಂಡ.
‘ಗುತ್ತಿಗೆದಾರರ ಫಾರ್ಟಿ ಪರ್ಸೆಂಟ್ ಆರೋಪಕ್ಕೆ ಪ್ರತಿಯಾಗಿ ಎವಿಡೆನ್ಸ್ ‘ಬೇಡಿಕೆ’ ಮುಂದಿಡಲಾಗಿದೆ! ಹಾಗಾದರೆ ತನಿಖೆ ಮೊದಲೋ ಎವಿಡೆನ್ಸ್ ಮೊದಲೋ?’
‘ಎಲ್ಲಾ ಆರೋಪಗಳ ಬಗ್ಗೆ ತನಿಖೆ ನಡೆಸಿ ‘ಬಿ’ ರಿಪೋರ್ಟ್ ಹಾಕಿಸುವ ಅವಕಾಶಕ್ಕೂ ಚಪ್ಪಡಿ ಎಳೆದಿದೆ ಕನಕಪುರ ಬಂಡೆ. ತಮ್ಮ ಸರ್ಕಾರ ಬಂದಮೇಲೆ ಅವೆಲ್ಲಾ ವಿಚಾರಣೆ ನಡೆಸುತ್ತಾರಂತೆ...’
‘ಎವಿಡೆನ್ಸ್ ಸಿಗದಿರಲಿ ಎಂದು ದೇವರಲ್ಲಿ ‘ಅಲೋಕಿಕ’ ಹರಕೆ ಹೊತ್ತರೆ ಹೇಗೆ?’ ಸುಲಭ ಪರಿಹಾರ!
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.