ಶುಕ್ರವಾರ, ಮಾರ್ಚ್ 31, 2023
22 °C

ಚುರುಮುರಿ| ರೌಡಿ ಗಣತಿ

ಆನಂದ Updated:

ಅಕ್ಷರ ಗಾತ್ರ : | |

Prajavani

‘ಬೆಂಗಳೂರಿನಲ್ಲಿ 7,526 ರೌಡಿಗಳು ಇದ್ದಾರಂತೆ’ ಮಡದಿ ಹೇಳಿದಳು.

‘ಜನಗಣತಿ ತರಹ ರೌಡಿ ಗಣತಿ ನಡೀತೇನು?’ ಎಂದು ಕೇಳಿದೆ.

‘ಗೊತ್ತಿಲ್ಲ. ಇದು ಅಧಿಕೃತ ಮಾಹಿತಿ. ಸಾಕ್ಷಾತ್ ಗೃಹ ಸಚಿವರು ಸದನಕ್ಕೆ ನೀಡಿರುವ ಫಿಗರ್’ ಎಂದಳು.

‘ಅಂದಮೇಲೆ ತಪ್ಪಿರಲಿಕ್ಕೆ ಸಾಧ್ಯವೇ ಇಲ್ಲ. ಈಗ ಅದು ಹೆಚ್ಚಾಗಿರಲಿಕ್ಕೆ ಸಾಕು. ಏಕೆಂದರೆ ಹೊಸ ಹೊಸ ರೌಡಿಗಳು ಹುಟ್ಟಿಕೊಂಡಿರಬಹುದಲ್ಲವೇ?’ ನನಗೆ ಅನುಮಾನ.

‘ಕಡಿಮೆ ಆಗಿದೆಯಂತೇರಿ’ ಎಂದಾಗ ನನಗೆ ಆಶ್ಚರ್ಯ. ‘ಹಿಂದಿನ ಮೂರು ವರ್ಷಗಳಲ್ಲಿ ಸುಮಾರು 800 ರೌಡಿಗಳನ್ನು ಪ್ರಮೋಟ್ ಮಾಡಿದ್ದಾರಂತೆ’.

‘ಪ್ರಮೋಟ್?’

‘ಅವರನ್ನು ರೌಡಿಶೀಟರ್ ಲಿಸ್ಟ್‌ನಿಂದ ತೆಗೆದುಹಾಕಿದ್ದಾರಂತೆ ಪೊಲೀಸರು...’

‘ತೆಗೆಯೋದಕ್ಕೆ ಮುಂಚೆ ರೌಡಿಗಳೇನು ಪರೀಕ್ಷೆಗೆ ಕೂಡ್ತಾರೇನು?’

‘ಛೆ ಛೇ! ಬೇರೆ ಬೇರೆ ಮಾನದಂಡ
ಗಳಿವೆಯಂತೆ. ಸೀನಿಯರ್ ಸಿಟಿಜನ್ ಆಗಿರೋ ರೌಡಿಗಳು, ಹುಷಾರಿಲ್ಲದೆ ಇರೋರು, ಯಾವುದೇ ಕೇಸ್ ಇಲ್ಲದೇ ಇರೋರು... ಹೀಗೆ ಹಲವಾರು ರಿಯಾಯಿತಿಗಳು ಇವೆಯಂತೆ. ಅವುಗಳ ಆಧಾರದ ಮೇಲೆ ರೌಡಿಗಳು ಮಾಜಿ ರೌಡಿಗಳಾಗ್ತಾರಂತೆ. ಅದೇ ಪ್ರಮೋಷನ್’.

ನನಗೆ ಈಗ ಕುತೂಹಲ ಉಂಟಾಯಿತು. ‘ಈ ಎಕ್ಸ್ ರೌಡಿಗಳು ಮುಂದೇನು ಮಾಡ್ತಾರೆ?’

‘ಅಯ್ಯೋ! ಅದೇನು ದೊಡ್ಡ ವಿಷಯ. ಈಗಾಗಲೇ ಆ್ಯಕ್ಟಿವ್ ರೌಡಿಗಳು ಕಾರ್ಪೊರೇಟರ್, ಶಾಸಕ, ಮಂತ್ರಿಗಳಿಗೆ ತೋಳ್ಬಲ ಕೊಡ್ತಿಲ್ಲವೆ? ಹಾಗೇ ರಾಜಕಾರಣದ ಟ್ರಿಕ್ಸ್ ಒಂದಿಷ್ಟು ಕಲೀತಾರೆ. ಪಕ್ಷಗಳ ಯೂತ್ ಬ್ರಿಗೇಡ್‍ಗಳಲ್ಲಿ ತರಬೇತಿ ಸಿಗುತ್ತೆ...’

‘ಅಂದರೆ, ಇಂದಿನ ರೌಡಿಯೇ ನಾಳಿನ ರಾಜಕಾರಣಿ?’

‘ಶಾಂತಂ ಪಾಪಂ. ಎಲ್ಲರೂ ಹಾಗಲ್ಲ. ಸಭ್ಯಸ್ಥರೂ ಇದ್ದಾರೆ. ಕೆಲವು ಮಾಜಿ ರೌಡಿಗಳು ಮೊದಲು ಪುಡಿ ರಾಜಕಾರಣಿಗಳಾಗಿ ಹಂತ ಹಂತವಾಗಿ ಮೇಲೇರಿದ್ದಾರೆ. ಅವರೇ ಈಗಿನ ಮಾಜಿ ರೌಡಿಗಳಿಗೆ ರೋಲ್ ಮಾಡೆಲ್. ಸಾಕು ಏಳಿ ಊಟದ ಟೈಮ್‌ ಆಯ್ತು’.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.