ಮಂಗಳವಾರ, ಫೆಬ್ರವರಿ 7, 2023
27 °C

ಚುರುಮುರಿ: ಅರ್ಥ- ಅನರ್ಥ!

ಬಿ.ಎನ್.ಮಲ್ಲೇಶ್ Updated:

ಅಕ್ಷರ ಗಾತ್ರ : | |

Prajavani

‘ಲೇ ಗುಡ್ಡೆ, ನಿಂಗೆ ಗುಡ್ಡೆ ಅಂತ ಯಾರು ಹೆಸರಿಟ್ರಲೆ?’ ದುಬ್ಬೀರ ಕೇಳಿದ.

‘ಯಾಕೆ? ಅದನ್ ತಗಂಡು ನೀನೇನ್ ಮಾಡ್ತಿ?’

‘ಲೇಯ್, ರಾಜ್ಯದಾಗೀಗ ಹೆಸರುಗಳ ಅರ್ಥ, ಅನರ್ಥದ ಬಗ್ಗೆ ವಿವಾದ ಶುರುವಾಗೇತಿ, ಅದ್ಕೆ ಕೇಳಿದೆ’.

‘ಹಂಗಾದ್ರೆ ನಿಂಗೆ ದುಬ್ಬೀರ ಅಂತ ಯಾರು ಹೆಸರಿಟ್ರು? ಹಂಗಂದ್ರೆ ಏನು?’ ಗುಡ್ಡೆ ತಿರುಗೇಟು ಕೊಟ್ಟ.

‘ದುಬ್ಬೀರ ಅಂದ್ರೆ ದೊಡ್ಡ ಈರ ಅಂತ. ಸಣ್ಣೀರಂಗೆ ವಿರುದ್ಧ ಪದ’.

‘ಸರಿ, ಈರ ಅಂದ್ರೆ?’

‘ಅದು ವೀರ ಅಂತ. ಆಡುಮಾತಲ್ಲಿ ಈರ ಆಗೇತಿ. ಈಗೇಳು ನಿನ್ನೆಸರು ಗುಡ್ಡೆ ಯಾಕೆ?’

‘ಅದನ್ನ ನಾನೇಳ್ತೀನಿ... ಇವ್ನು ಮೊದ್ಲು ಭಾನ್ ಭಾನುವಾರ ಕುರಿ ಕುಯ್ದು ಪಾಲಾಕಿ ಗುಡ್ಡೆ ಮಾಂಸ ಮಾರ್ತಿದ್ದ. ಅದ್ಕೆ ಎಲ್ರೂ ಗುಡ್ಡೆ ಅಂತ ಹೆಸರಿಟ್ಟಿದಾರೆ’ ತೆಪರೇಸಿ ನಕ್ಕ.

ಗುಡ್ಡೆಗೆ ಸಿಟ್ಟು ಬಂತು ‘ಲೇಯ್, ನಂದಿರ್‍ಲಿ, ನಿಂಗೆ ತೆಪರ ಅಂತ ಯಾವನು ಹೆಸರಿಟ್ಟ, ಅದಕ್ಕೆ ಪಿಕಿಪೀಡಿಯಾದಲ್ಲಿ ಏನರ್ಥ ಹೇಳಲೆ’ ಎಂದ.

‘ಲೇ ಅದು ಪಿಕಿಪೀಡಿಯ ಅಲ್ಲ, ವಿಕಿಪೀಡಿಯ...’ ದುಬ್ಬೀರ ತಿದ್ದಿದ.

‘ಎಂಥದೋ ಒಂದು ಪೀಡಿಯ. ಹೋಗ್ಲಿ, ತೆಪರ ಅಂದ್ರೆ ಪರ್ಷಿಯನ್ ಭಾಷೇಲಿ ಏನರ್ಥ ಹೇಳಲೆ’ ಗುಡ್ಡೆ ಪಟ್ಟು ಬಿಡಲಿಲ್ಲ.

‘ತೆಪರ ಅಂದ್ರೆ ಕನ್ನಡದಲ್ಲಿ ದಡ್ಡ ಅಂತ ಅರ್ಥ. ಈ ಪರ್ಷಿಯನ್ನು, ರಷಿಯನ್ನು ನಮಗೇನ್ ಗೊತ್ತಲೆ?’ ಕೊಟ್ರೇಶಿ ಆಕ್ಷೇಪಿಸಿದ.

‘ಲೇ ಗುಡ್ಡೆ, ಎಲ್ಲದಕ್ಕೂ ಅರ್ಥ ಹುಡುಕಬಾರ್ದು. ಈಗ ಫಾರಿನ್ನಲ್ಲಿ ಬಟ್ಲರು ಹಿಟ್ಲರು, ಟೇಲರು ಮಿಲ್ಲರು, ನಟ್ಟು ಬೋಲ್ಟು ಅಂತೆಲ್ಲ ಹೆಸರಿಟ್ಕಂಡಿರ್ತಾರಪ, ಅದಕ್ಕೆಲ್ಲ ಏನರ್ಥ? ಅರ್ಥ ಮುಖ್ಯ ಅಲ್ಲಲೆ, ಆಕೃತಿ ಮುಖ್ಯ’ ದುಬ್ಬೀರ ಸಮಾಧಾನ ಮಾಡಿದ.

‘ವ್ಹಾವ್! ಎಂಥಾ ಮಾತಾಡಿದ್ಯೋ ವೀರಾ... ವೀರಾಧಿವೀರಾ, ದುಬ್ಬೀರಾ...’ ಎಂದ ಗುಡ್ಡೆ. ಎಲ್ಲರೂ ಗೊಳ್ಳಂತ ನಕ್ಕರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು