ಶನಿವಾರ, ಮೇ 28, 2022
31 °C

ಚುರುಮುರಿ: ಪರಾಗ್‍ನ ಸಂಬಳ

ಆನಂದ Updated:

ಅಕ್ಷರ ಗಾತ್ರ : | |

ಚುರುಮುರಿ

‘ರೀ, ನಿಮಗೆ ಎಷ್ಟು ಸಂಬಳ ಬರ್ತಿತ್ತು?’ ಎಂದು ಹೆಂಡತಿ ಕೇಳಿದಾಗ ನಾನು ‘ಸೇರಿಕೊಂಡಾಗ 175 ರೂಪಾಯಿ, ನಿವೃತ್ತಿ ಆದಾಗ 28,000 ರೂಪಾಯಿ’ ಎಂದು ನಿಜವನ್ನೇ ಘೋಷಿಸಿದೆ.

‘ನಿಮ್ಮ 40 ವರ್ಷ ಸರ್ವೀಸ್‍ನಲ್ಲಿ ಎಷ್ಟು ಸಂಪಾದಿಸಿರಬಹುದು?’

‘ಬಂದಿದ್ದೆಲ್ಲ ಖರ್ಚಾಗುತ್ತಿತ್ತು. ನಿವೃತ್ತಿ ಆದಾಗ ಪಿಎಫ್ ಹಣ 15 ಲಕ್ಷ ಬಂತು. ಅದನ್ನೇ ಪೋಸ್ಟ್ ಆಫೀಸಿನಲ್ಲಿ ಈಗ ಇಟ್ಟಿರೋದು’ ಎಂದು ಕ್ಲಿಯರ್‌ ಮಾಡಿದೆ.

‘ಮೇಲು ಸಂಪಾದನೆ?’

‘ಮೇಲೂ ಇಲ್ಲ, ಕೆಳಗೂ ಇಲ್ಲ. ಒಂದನೇ ತಾರೀಖು ಬ್ಯಾಂಕ್‍ಗೆ ಜಮಾ ಆಗ್ತಿದ್ದಷ್ಟೇ ಕಮಾಯಿ. ವೆರಿ ಕ್ಲೀನ್ ರೆಕಾರ್ಡ್. ಅದ್ಸರಿ, ಈಗೇಕೆ ಅದನ್ನೆಲ್ಲಾ ಕೆದಕ್ತಾ ಇದೀಯ?’

‘ಅದ್ಯಾರೊ ಪರಾಗ್ ಅಗರವಾಲ್ ಅಂತೆ. ಟ್ವಿಟರ್ ಸಿಇಒ. ಅವರ ಸಂಬಳ ವರ್ಷಕ್ಕೆ 10 ಲಕ್ಷ ಡಾಲರ್. ಅಂದರೆ 7.5 ಕೋಟಿ ರೂಪಾಯಿ. ತಿಂಗಳಿಗೆ 70 ಲಕ್ಷ...’

‘ಅವರಿಗೀಗ ಎಷ್ಟು ವರ್ಷ?’

‘ಇನ್ನೂ 37 ವರ್ಷ. ನೀವು 40 ವರ್ಷದಲ್ಲಿ ಉಳಿಸಿದ್ದು 15 ಲಕ್ಷ. ಪರಾಗ್‍ಗೆ ತಿಂಗಳಿಗೆ ಸಂಬಳಾನೇ 70 ಲಕ್ಷ. ನಿಮಗೂ ತಿಂಗಳಿಗೆ ಒಂದು ಲಕ್ಷಾನಾದರೂ ಸಂಬಳ ಇರಬೇಕಿತ್ತಲ್ವೇ?’

‘ಕೆಲಸಕ್ಕೆ ಸೇರಿಕೊಂಡಾಗಲೋ ಅಥವಾ ರಿಟೈರ್ ಆಗೋವಾಗಲೋ?’

‘ಸದ್ಯ ಕೊನೆಕೊನೇಲಾದರೂ ಅಷ್ಟು ಬಂದಿದ್ದರೆ ನನ್ನ ಗಂಡನಿಗೆ ಒಂದು ಲಕ್ಷ ಸಂಬಳ ಅಂತ ಹೆಮ್ಮೆ ಪಟ್ಟುಕೊಳ್ಳಬಹುದಿತ್ತು’ ಎಂದು ಪರಿತಪಿಸಿದ್ದಲ್ಲದೆ ‘ತಿಂಗಳಿಗೆ 70 ಲಕ್ಷ ಹೇಗೆ ಖರ್ಚು ಮಾಡ್ತಾರೆ?’ ಎಂದು ಕೇಳಿದಳು.

‘ಅದು ಅವರ ಸಮಸ್ಯೆ, ನಾವ್ಯಾಕೆ ತಲೆಕೆಡಿಸ್ಕೋಬೇಕು? ನನಗೆ ಒಂದು ಲಕ್ಷ ಸಂಬಳ ಬಂದಿದ್ದರೆ ಹೇಗೆ ಖರ್ಚು ಮಾಡ್ತಿದ್ದೆ?’

‘ಈಗ ಕನಸು ಕಂಡರೆ ಏನು ಪ್ರಯೋಜನ?’

‘ಮತ್ತೆ ನನಗೂ ತಿಂಗಳಿಗೆ ಒಂದು ಲಕ್ಷಾನಾದರೂ ಸಂಬಳ ಇರಬೇಕಿತ್ತಲ್ವೇ ಅಂತ ಕೇಳಿದೆ?’

‘ಕೇಳಿದೆ ಸರಿ, ಬೇರೆಯವರ ಸಂಬಳ ಕೇಳಿದರೆ ಹಾಗನ್ನಿಸೊಲ್ವೆ? ಅದೂ ನಾನು ನಿಮಗೆ ಬರಲಿ ಅಂತ ಕೇಳಿದ್ದಷ್ಟೇ, ನನಗಲ್ಲ...’ ಎಂದು ಮಾತು ಮುಗಿಸಿದಳು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.