ಮಂಗಳವಾರ, ಮೇ 11, 2021
28 °C

ಚುರುಮುರಿ: ನಾವೇನು ಕಡಿಮೆ?

ಸುಮಂಗಲಾ Updated:

ಅಕ್ಷರ ಗಾತ್ರ : | |

Prajavani

ರಾತ್ರಿ ಬೆಕ್ಕಣ್ಣ ಏನೇನೋ ಸರ್ಟಿಫಿಕೇಟು, ಪ್ರಶಸ್ತಿಪತ್ರಗಳ ಪ್ರತಿ ಎಲ್ಲವನ್ನೂ ಗುಡ್ಡೆ ಹಾಕಿಕೊಂಡು, ಜೋಡಿಸುತ್ತ ಕೂತಿತ್ತು.

‘ಏನ್ ಹೊಸ ಕಾರುಬಾರು ನಡಿಸೀಯಲೇ’ ಎಂದು ಕೇಳಿದೆ.

‘ಎಲ್ಲದಕ್ಕೆ ಅಡ್ಡಬಾಯಿ ಹಾಕಬ್ಯಾಡ. ಮಾರ್ಜಾಲ ಡಾಕ್ಟರೇಟ್ ನನಗೇ ಕೊಡಬಕು ಅಂತ ಯೆಡ್ಯೂರಜ್ಜಾರ ಕಡಿಂದ ವಿ.ವಿಯವರಿಗೆ ಹೇಳಿಸೀನಿ. ಮಾಡಕ್ಕೆ ದಗದ ಇಲ್ಲದೆ ಖಾಲಿಪೀಲಿ ಕುತ್ತ ಮಂದಿ ಆಮ್ಯಾಗ ಇಂವಂಗ ಎದಕ್ಕ ಕೊಟ್ಟರು ಅಂತ ಬಡಕೋತಾರಲ್ಲ... ಅದಕ್ಕೇ ನಾನೂ ಎಷ್ಟ್ ಸಾಧನೆ ಮಾಡೀನಿ ಅಂತ ತೋರಿಸಾಕ ಇವನ್ನೆಲ್ಲ ರೆಡಿ ಮಾಡಿಟ್ಟುಕೊಳ್ಳಾಕ ಹತ್ತೇನಿ’ ಎಂದು ಘನಗಂಭೀರವಾಗಿ ನುಡಿದು ಅವನ್ನೆಲ್ಲ ಕವರಿನೊಳಗೆ ಹಾಕಿಟ್ಟು, ಹೊರಹೋಗಲು ಅಣಿಯಾಯಿತು.

‘ಇನ್ ಮ್ಯಾಗ ರಾತ್ರಿ ಹತ್ತರ ಮ್ಯಾಗ ಹೊರಗ ಸರ್ಕೀಟು ಬ್ಯಾಡ, ನಿಮ್ಮ ಅಜ್ಜಾರು ಕರ್ಫ್ಯೂ ಹೇರಿದಾರ. ನೀ ಸುಮ್ ಸುಮ್ನೆ ಓಡಾಡ್ತಿದ್ದರೆ ವದ್ದು ವಳಗ ಹಾಕ್ತಾರ’ ಅಂದೆ.

‘ಅಜ್ಜಾರು ಭೇಷ್ ಮಾಡ್ಯಾರ ಮತ್ತೆ. ನಿನಗ್ಗೊತ್ತೈತಿಲ್ಲೋ... ಕೊರೊನಣ್ಣ ರಾತ್ರಿಯಿಂದ ಶುರು ಮಾಡಿ, ನಸುಕಿನ ತನಕ ತನ್ನ ದಂಡು ಕಟ್ಟಿಕೆಂಡು ಮಂದಿ ಮ್ಯಾಗ ದಾಳಿ ಮಾಡತಾನಂತ. ಅದಕ್ಕ ರಾತ್ರಿ ಕರ್ಫ್ಯೂ ಹಾಕಿ ಭೇಷ್ ಮಾಡ್ಯಾರ’ ಎಂದು ಗುಣಗಾನ ಮಾಡಿತು.

‘ನಾರ್ವೆವಳಗ ಕಾರ್ಯಕ್ರಮಕ್ಕೆ ಮನೆಯವರು 10 ಜನ ಮಾತ್ರ ಸೇರಬೌದಂತೆ. ಅಲ್ಲಿಯ ಪ್ರಧಾನಿ 13 ಜನರ ಮುಂದೆ ತಮ್ಮ ಹುಟ್ಟಿದಹಬ್ಬ ಆಚರಿಸಿದ್ದಕ್ಕೆ 1.75 ಲಕ್ಷ ರೂಪಾಯಿ ದಂಡ ಹಾಕ್ಯಾರಂತ. ನಮ್ಮಲ್ಲೂ ಹಂಗ ಸ್ಟ್ರಿಕ್ಟ್ ಮಾಡಬಕು’.

‘ಬೆಂಗಳೂರಿನಾಗ ಆರು ತಿಂಗಳು ಕಲ್ಯಾಣ ಮಂಟಪ ಬಂದ್ ಆಜ್ಞೆ ಮಾಡ್ಯಾರೆ. ಮುಂಬೈ ಮಹಾನಗರ ಪಾಲಿಕೆಯವರು ಹೋದ ವರ್ಷದಿಂದ 40 ಕೋಟಿ ರೂಪಾಯಿ ಮಾಸ್ಕ್ ದಂಡ ವಸೂಲು ಮಾಡ್ಯಾರೆ, ಬೆಂಗಳೂರಾಗೂ ಹತ್ತು ಕೋಟಿ ಮ್ಯಾಲೆ ದಂಡ ವಸೂಲು ಮಾಡ್ಯಾರ. ನಾವು ಕೊರೊನಾ ಕೇಸುಗಳು, ಸಾವು, ದಂಡ, ಲಾಕ್‌ಡೌನ್ ನಿಯಮಗಳು ಹಿಂಗ ಎದರಾಗೂ ಕಡಿಮಿ ಇಲ್ಲ ತಿಳಕೋ’ ಬೆಕ್ಕಣ್ಣ ಗುರುಗುಡುತ್ತ ವಾದಿಸಿತು!

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.