ಭಾನುವಾರ, ಸೆಪ್ಟೆಂಬರ್ 19, 2021
30 °C

ಚುರುಮುರಿ: ಝೀರೊ ಟ್ರಾಫಿಕ್

ಬಿ.ಎನ್.ಮಲ್ಲೇಶ್ Updated:

ಅಕ್ಷರ ಗಾತ್ರ : | |

Prajavani

ಬ್ರೇಕಿಂಗ್ ನ್ಯೂಸ್ ಟಿ.ವಿ ಪತ್ರಕರ್ತ ತೆಪರೇಸಿಗೆ ಅವನ ಹೆಂಡತಿ ಪಮ್ಮಿ ಕಾಫಿ ತಂದು ಕೊಡುತ್ತ ಕೇಳಿದಳು ‘ರೀ... ನಿಮಗೆ ಮಿನಿಸ್ಟ್ರು,
ಹೋಂ ಮಿನಿಸ್ಟ್ರು ಎಲ್ಲ ಕ್ಲೋಸಾ?’

‘ಹ್ಞೂಂ, ಕ್ಲೋಸೇ... ಯಾಕೆ?’

‘ಚೀಫ್‌ ಮಿನಿಸ್ಟ್ರೂ ಕ್ಲೋಸಾ?’

‘ಕ್ಲೋಸಿದಾರೆ... ಮೊದ್ಲು ಹೋಂ ಮಿನಿಸ್ಟ್ರಾಗಿ ದ್ರಲ್ಲ, ಈಗ ಅವರೇ ಚೀಫ್‌ ಮಿನಿಸ್ಟ್ರಾಗಿದಾರೆ, ಯಾಕೆ?’

‘ಹೇಳ್ತೀನಿ, ನಿಮಗೆ ಪೊಲೀಸ್ ಡಿಜಿಪಿ, ಐಜಿಪಿ ಎಲ್ಲ ಹೆಂಗೆ?’

‘ಟಿ.ವಿ ರಿಪೋಟ್ರು ಅಂದ್ರೆ ಎಲ್ರೂ ಪರಿಚಯ ಇರ್ತಾರೆ, ಕ್ಲೋಸಾಗಿರ್ತಾರೆ. ಇದೆಲ್ಲ ಯಾಕೆ ಕೇಳ್ತಿದಿಯಾ?’

‘ಏನಿಲ್ಲರಿ, ನಂಗೊಂದು ಆಸೆ...’

‘ಆಸೆನಾ? ಏನು? ಚೀಫ್‌ ಮಿನಿಸ್ಟ್ರು ಜೊತೆ ಒಂದು ಸೆಲ್ಫಿ ತಗೊಬೇಕಾ?’ ‘ಅದಲ್ಲರೀ ಬೇರೆ...’

‘ಡಿಜಿಪಿ ಅವರ ಜೊತೆ ಕಾಫಿ ಕುಡಿಬೇಕಾ?’

‘ಥೂ, ಅದೆಲ್ಲ ಅಲ್ಲರಿ, ನೀವು ಬೈಯಲ್ಲ ಅಂದ್ರೆ ಹೇಳ್ತೀನಿ...’ ‘ಸರಿ ಅದೇನು ಹೇಳು’.

‘ನಂಗೆ ಬೆಂಗಳೂರಲ್ಲಿ ನಿಮ್ ಬೈಕ್ ಮೇಲೆ ಕೂತ್ಕೊಂಡು ಝೀರೊ ಟ್ರಾಫಿಕ್ಕಲ್ಲಿ ಜುಂಯ್... ಅಂತ ಹೋಗಬೇಕು ಅಂತ ಆಸೆ. ರಸ್ತೆ ಫುಲ್ ಖಾಲಿ ಇರ‍್ಬೇಕು, ಸಿಗ್ನಲ್ಲು ಪಗ್ನಲ್ಲು ಏನೂ ಇರಬಾರ್ದು’.

‘ಆಹಾ... ಎಂಥ ಆಸೇನೆ ನಿಂದು, ಅದೆಲ್ಲ ವಿಐಪಿಗಳಿಗೆ ಮಾತ್ರ ಇರೋದು. ಚೀಫ್‌ ಮಿನಿಸ್ಟ್ರು, ಹೋಂ ಮಿನಿಸ್ಟ್ರು ಮಾತ್ರ ಝೀರೊ ಟ್ರಾಫಿಕ್ಕಲ್ಲಿ ಹೋಗಬಹುದು...’

‘ಸುಳ್ಳು, ಮೊನ್ನೆ ಸಂಪುಟ ವಿಸ್ತರಣೆ ಟೈಮಲ್ಲಿ ಯಾರೋ ಒಬ್ರು ಲೇಡಿ ಎಮ್ಮೆಲ್ಲೆ ಝೀರೊ ಟ್ರಾಫಿಕ್ಕಲ್ಲಿ ಹೋದ್ರು ಅಂತ ನೀವೇ ನಿಮ್ ಟೀವಿಯಲ್ಲಿ ತೋರ‍್ಸಿದ್ರಿ?’

‘ಅದೂ... ಅದು ಹಂಗಲ್ಲ ಕಣೆ, ನಿಂಗೆ ಹೆಂಗೆ ಹೇಳ್ಬೇಕು ಗೊತ್ತಾಗ್ತಿಲ್ಲ...’ ತೆಪರೇಸಿ ತಡವರಿಸಿದ.

‘ಹಂಗೂ ಇಲ್ಲ ಹಿಂಗೂ ಇಲ್ಲ, ನಿಮ್ ಕೈಲಿ ಆಗುತ್ತೋ ಇಲ್ವೋ ಅಷ್ಟು ಹೇಳಿ...’ ಪಮ್ಮಿ
ಪಟ್ಟು ಹಿಡಿದಳು. ‘ಆಯ್ತು, ಒಂದ್ ಕೆಲ್ಸ ಮಾಡು, ನಿಂಗೆ ಮೊಟ್ಟೆ ಆಮ್ಲೆಟ್ ಮಾಡೋಕೆ ಬರುತ್ತಾ?’

‘ಥೂ... ಮೊಟ್ಟೇನಾ? ನಾನ್ಯಾವತ್ತು ತಿಂದಿದೀನ್ರೀ? ವಾಂತಿ ಬರುತ್ತೆ’.

‘ಸರಿ ಮತ್ತೆ ‘ತಿನ್ನೋಕೆ’ ಬರದಿದ್ರೆ ಝೀರೊ ಟ್ರಾಫಿಕ್ ಕಷ್ಟ...’ ತೆಪರೇಸಿ ಕಪ್ ಇಟ್ಟು ಮೇಲಕ್ಕೆದ್ದ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.