ಗುರುವಾರ , ಅಕ್ಟೋಬರ್ 1, 2020
25 °C

ಚುರುಮುರಿ | ಮಂತ್ರಿಗಿರಿ ಕಿರಿಕಿರಿ

ಸಿ.ಎನ್.ರಾಜು Updated:

ಅಕ್ಷರ ಗಾತ್ರ : | |

ಚುರುಮುರಿ

‘ಮೂರು ತಿಂಗಳ ಹಿಂದೆ ಮಾಸ್ಕ್ ವಿತರಣೆ ಮಾಡಿ ಹೋದ ನಿಮ್ಮ ಎಮ್ಮೆಲ್ಯೆ ಈ ಕಡೆ ತಲೆನೇ ಹಾಕಿಲ್ಲವಲ್ಲೋ ಗಿರಿ...’ ಚಟ್ನಿಹಳ್ಳಿ ಸಿದ್ಧಮ್ಮನ ಹೋಟೆಲ್‍ನಲ್ಲಿ ತಿಮ್ಮಜ್ಜ ಕ್ಯಾತೆ ತೆಗೆದ.

ಶಾಸಕರ ಅನುಯಾಯಿ ಗಿರಿಗೆ ಬಿಸಿ ಟೀ ನಾಲಿಗೆ ಸುಟ್ಟಿತು. ‘ಮಂತ್ರಿ ಆಗಿ ಗೂಟದ ಕಾರಲ್ಲಿ ಬರ್ತಾರೆ ನೋಡ್ತಿರು...’ ತಿರುಗಿಸಿ ಹೇಳಿದ.

‘ನಿಮ್ಮ ಶಾಸಕರು ವಿರೋಧ ಪಕ್ಷದ ನಾಯಕರ ಕಾಲಿಗೆ ಬಿದ್ದಿದ್ದನ್ನು ಮೊನ್ನೆ ಟೀವಿಯಲ್ಲಿ ನೋಡಿದೆ’.

‘ನೀನು ಕುರುಡುಗಣ್ಣಲ್ಲಿ ಟೀವಿ ನೋಡಬೇಡ, ಅದು ಹೋದ ವಾರದ ನ್ಯೂಸ್. ಈ ವಾರ ನಮ್ಮ ಎಮ್ಮೆಲ್ಯೆ ಸಿಎಂ ಕಾಲಿಗೆ ಬಿದ್ದದ್ದನ್ನು ನೋಡಲಿಲ್ವಾ?’

‘ನೋಡಿದೆ, ಸಿಎಂ ಕಾಲನ್ನು ಹಿಡಿದರೊ, ಎಳೆದರೊ ಗೊತ್ತಾಗಲಿಲ್ಲ’.

‘ಕಾಲೆಳೆಯುವ ಕೆಟ್ಟ ಗುಣ ನಮ್ಮ ಎಮ್ಮೆಲ್ಯೆಗೆ ಇಲ್ಲ, ಮನಸ್ಸಿಗೆ ಬೇಜಾರಾಗಿ ನಾಯಕತ್ವ ಬದಲಾವಣೆ ಬಣ ಸೇರಿಕೊಂಡಿದ್ದರು. ಮಂತ್ರಿ ಮಾಡ್ತೀನಿ ಬಾ ಅಂತ ಸಿಎಂ ಕರೆದು ಸಮಾಧಾನ ಮಾಡಿದರು. ನಮ್ಮ ಎಮ್ಮೆಲ್ಯೆ ಮಂತ್ರಿ ಆಗಿ ಊರಿಗೆ ಬಂದಾಗ ಮಾರಮ್ಮನ ಉತ್ಸವ ಏರ್ಪಡಿಸಿ, ದೇವರ ಜೊತೆ ಅವರನ್ನೂ ಮೆರವಣಿಗೆ ಮಾಡ್ತೀವಿ’ ಗಿರಿ ಕೊಚ್ಚಿಕೊಂಡ.

‘ನಿಮ್ಮ ಶಾಸಕರಿಗೆ ಮಂತ್ರಿಗಿರಿ ಇರಲಿ, ಮುಂದಿನ ಎಲೆಕ್ಷನ್ನಿಗೆ ಟಿಕೆಟ್ಟೇ ಗ್ಯಾರಂಟಿ ಇಲ್ವಂತೆ...’

‘ದೇವರು ಕೈಬಿಡೋಲ್ಲ, ಶಾಸಕರು ಮಂತ್ರಿಯಾದರೆ ಮುಡಿ ಕೊಡ್ತೀನಿ ಅಂತ ತಿಮ್ಮಪ್ಪನಿಗೆ ಹರಕೆ ಹೊತ್ತಿದ್ದೀನಿ’.

‘ಸಿಎಂಗೆ ಮುಡಿ ಕೊಟ್ಟಿದ್ದರೆ ನಿನ್ನ ಹರಕೆ ಈಡೇರುತ್ತಿತ್ತು ಹಹ್ಹಹ್ಹಾ...’ ತಿಮ್ಮಜ್ಜ ಕಿಚಾಯಿಸಿದ.

‘ಶಾಸಕರು ಮಂತ್ರಿ ಆಗದಿದ್ದರೆ ಅರ್ಧ ತಲೆ, ಅರ್ಧ ಮೀಸೆಯನ್ನು ನಿನಗೆ ಮುಡಿ ಕೊಡ್ತೀನಿ...’ ಗಿರಿ ಸಿಟ್ಟಿನಿಂದ ಹೆಗಲ ಮೇಲಿದ್ದ ಟವೆಲ್ ಎಸೆದು ಹೋದ.

ಸಿದ್ಧಮ್ಮ ಟವೆಲ್ ಎತ್ತಿಟ್ಟುಕೊಂಡಳು, ಟೀ ದುಡ್ಡು ಕೊಟ್ಟು ತಗೊಂಡು ಹೋಗಲಿ ಅಂತ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು