ಶನಿವಾರ, ಜುಲೈ 31, 2021
25 °C

ಚುರುಮುರಿ | ಚಿನ್ನದ ಮಾಸ್ಕ್‌

ಸುಮಂಗಲಾ Updated:

ಅಕ್ಷರ ಗಾತ್ರ : | |

prajavani

‘ನಂಗೂ ಒಂದು ಚಿನ್ನದ್ ಮಾಸ್ಕ್ ಕೊಡ್ಸು’ ಎಂದು ಬೆಕ್ಕಣ್ಣ ದುಂಬಾಲು ಬಿದ್ದಿತ್ತು.

‘ಚಿನ್ನದ್ ಮಾಸ್ಕ್ ಹಾಕ್ಕಂಡ್ರ ಕೊರೊನಾ ವೈರಸ್ ಓಡೋಗ್ತದಂತೇನು’ ಎಂದು ನಕ್ಕೆ.

‘ಎಲ್ಲದಕ್ಕೆ ನಗಬ್ಯಾಡ... ನಾಳೆನೇ ಕೊಡಿಸು’ ಎಂದು ಹಟ ಮಾಡಿತು.

‘ಚಿನ್ನದ್ದು ಹಾಕ್ಕಂಡು ನೀ ಹೆಂಗ್ ಉಸಿರಾಡ್ತೀಯಲೇ. ಚಿನ್ನದ ರೇಟು ಭೂಮಿ ಮ್ಯಾಗಿಲ್ಲ. ನೀಯೇನ್ ದೊಡ್ಡ ತಿರುಪತಿ ತಿಮ್ಮಪ್ಪ ಆಗೀಯೇನ್, ಎಲ್ಲಾನೂ ಚಿನ್ನದ್ದೇ ಹಾಕಿಕೊಳ್ಳಾಕ’ ಎಂದು ಬೆದರಿಸಿದೆ.

‘ಮಂದಿ ಎಲ್ಡು ಮೂರು ಲಕ್ಷದ ಚಿನ್ನದ ಮಾಸ್ಕ್ ಹಾಕ್ಕೋತಾರ. ನನಗೊಂದು ಕೊಡಸಾಕ ನೀ ಎಷ್ಟರ ಜಿಪುಣತನ ಮಾಡ್ತೀ’ ಎಂದು ಅಳುಮೋರೆ ಮಾಡಿಕೊಂಡು ಮರಾಠಿ ಸುದ್ದಿ ತೋರಿಸಿತು. ಪುಣೆಯ ಮಹಾಶಯರೊಬ್ಬರು ಬರೋಬ್ಬರಿ ಎರಡೂ ಮುಕ್ಕಾಲು ಲಕ್ಷ ರೂಪಾಯಿಯ ಮಾಸ್ಕ್ ಹಾಕಿದ್ದ ಸುದ್ದಿಯದು.

‘ಕೊರೊನಾ ಕಾಟದಾಗೆ ಒಪ್ಪತ್ತು ಊಟಕ್ಕೂ ಒದ್ದಾಡೂ ಮಂದಿ ಮುಂದ ಹೀಂಗ ಚಿನ್ನದ ಮಾಸ್ಕ್ ಹಾಕ್ಯಂಡು ಓಡಾಡಿದ್ರ ಏನ್ ಶಾಣ್ಯಾ ಅಂತಾರೇನು... ಕೊರೊನಾಪೀಡಿತರಿಗೆ ಕೈಲಾದ ಸಹಾಯ ಮಾಡೂದ್ ಬಿಟ್ ಹೀಂಗ ಮೆರಿಯೂದು ಇರ್ತದೇನು’ ಜಬರಿಸಿದೆ. ಬಾಲ ಮುದುರಿ ಕೂತಿತು.‌

‘ಅದ್ಸರಿ, ಚಿನ್ನದ್ ಮಾಸ್ಕ್ ಹಾಕ್ಕಂಡು ನೀ ಎಲ್ಲಿಗ್ ಹೋಗಾಂವ?’ ನನಗೆ ಕುತೂಹಲ.

‘ಡಿಕೇಶಣ್ಣನ ಪಟ್ಟಾಭಿಷೇಕ ಅಂತ ಟಿವಿವಳಗ ಒಂದೇ ಸಮನೆ ವದರತಿದ್ದರಲ್ಲ, ನೋಡಕ್ಕೆ ಹೋಕ್ಕೀನಿ’. ‘ಮನ್ಯಾಗೆ ಕುಂತು ನೋಡಾಕಂತಿ ಬಿಡು’ ಎಂದು ಸಮಾಧಾನಿಸಿದೆ.

‘ನನಗ ಲಡಾಕ್ಕಿಗಾದ್ರೂ ಕಳಿಸು. ಮೋದಿಮಾಮಾನ ಜೋಡಿ ಹೋಗಿ, ಸೈನಿಕರಿಗೆ ಧೈರ್ಯ ತುಂಬ್ತೀನಿ’ ಮತ್ತೆ ಗಂಟು ಬಿದ್ದಿತು. ‘ತೆಲಿಗಿಲಿ ಕೆಟ್ಟೈತೇನಲೇ...ತೆಪ್ಪಗೆ ಮೊದ್ಲು ಇಲಿ ಹಿಡಿ’ ಎಂದೆ. ಪಟ್ಟಾಭಿಷೇಕ ಮತ್ತು ಲಡಾಕ್ ಭೇಟಿಯನ್ನು ಮನೆಯಲ್ಲಿಯೇ ನೋಡಿದ ಬೆಕ್ಕಣ್ಣ ಮೆತ್ತಗೆ ಉಸುರಿತು, ‘ಹೋಗಲಾರದ್ದ ವಳ್ಳೇದ್ ಆತು. ಪಟ್ಟಾಭಿಷೇಕದಾಗ ಡಿಕೇಶಣ್ಣನೇ ಮಾಸ್ಕ್ ಹಾಕ್ಕಂಡಿರಲಿಲ್ಲ, ಎಲ್ಲ ಎಷ್ಟ್ ಹತ್ರ ನಿಂತಿದ್ರು. ಅತ್ತಾಗೆ ಲಡಾಕಿನಾಗೂ ಮೋದಿಮಾಮ ಎಲ್ಲಾರ ಹತ್ರಕ್ಕೇ ನಿಂತಿದ್ರು. ಹೊರಗ ಸುಳ್ಳೇ ಭಾಷಣ ಕುಟ್ಟೂ ಬದ್ಲಿಗಿ ಒಳಗಿದ್ದು ದಗದ ಏನದಂತ ನೋಡಬೇಕು, ಹೌದಿಲ್ಲೋ’.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು