ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಸ್ವರ್ಗದ ಬಾಗಿಲು!

Last Updated 17 ಸೆಪ್ಟೆಂಬರ್ 2020, 19:31 IST
ಅಕ್ಷರ ಗಾತ್ರ

‘ಏನ್ರುಲ, ಪಿತೃಪಕ್ಷ ಎಲ್ಲ ಮುಗೀತಾ? ಬಾಡು ಬಳ್ಳೆ ಸಮಾರಾದ್ನೆ ಇವತ್ತಿಗು ಐತೆ ಅನ್ನಿ...’ ಹರಟೆಕಟ್ಟೆಯಲ್ಲಿ ದುಬ್ಬೀರ ಹೊಗೆಸೊಪ್ಪಿಗೆ ಸುಣ್ಣ ತಿಕ್ಕುತ್ತ ಕೇಳಿದ.

‘ಅಲ್ಲ ಅದಿರ‍್ಲಿ, ನೀನೇನು ಇವತ್ತು ಎಲೆಯಡಕೆ ಹೊಗೆಸೊಪ್ಪು ಮೋಜು ಮಾಡ್ತ ಕುಂತಿದಿ?’ ಗುಡ್ಡೆ ನಗಾಡಿದ.

‘ನಿನ್ನೆ ಪಿತೃಪಕ್ಷುಕೆ ಅಪ್ಪನ ಎಡೆಗೆ ಬೀಡಿ ಬೆಂಕಿಪಟ್ಣ, ಹೊಗೆಸೊಪ್ಪು ಮಡಗಿದ್ವಲ್ಲಲೆ, ವೇಸ್ಟ್ ಆಗಬಾರ್ದು ಅಂತ ಹಾಕ್ಕಂತಿದೀನಿ’.

‘ಓ... ನಿಮ್ಮಪ್ಪುಂಗೆ ಹೊಗೆಸೊಪ್ಪು ಚಟ ಇತ್ತು ಅನ್ನು. ಭಂಗಿ ಸೇದೋ ಚಟ ಇದ್ದಿದ್ರೆ?’

‘ಅದ್ನೂ ಮಡಗಬೇಕಾಗ್ತಿತ್ತು. ನಮ್ಮ ಹಿರೀಕ್ರು ಏನೇನು ಇಷ್ಟಪಡ್ತಿದ್ರು ಅದ್ನೆಲ್ಲ ಮಡಗಿ ಧೂಪ ಹಾಕಿದ್ರೆ ಅವರ ಆತ್ಮುಕ್ಕೆ ಶಾಂತಿ ಸಿಗುತ್ತಂತೆ’.

‘ಹೌದಾ? ಅದ್ಸರಿ, ಈ ಪಿತೃಪಕ್ಷವ ಮಾಲಯ ಅಮಾಸೆ ದಿಸವೇ ಯಾಕಿಟ್ರು?’ ತೆಪರೇಸಿ ಪ್ರಶ್ನೆ.

‘ಅವತ್ತು ಸ್ವರ್ಗದ ಬಾಗಿಲು ತೆಗೀತದಂತೆ ಕಣ್ರಲೆ, ನಮ್ಮ ಹಿರೀಕ್ರೆಲ್ಲ ಹೊರಿಕೆ ಬಂದು, ನಾವು ಎಡೆ ಇಕ್ಕಿದೀವೋ ಇಲ್ವೊ ನೋಡ್ತಾರಂತೆ’ ದುಬ್ಬೀರ ವಿವರಿಸಿದ.

‘ಓ ಹಂಗೋ... ಸರಿ, ಎಡೆಗೆ ನೀನೇನ್ ಮಡಗಿದ್ಲಾ ಸಣ್ಣೀರ?’ ಗುಡ್ಡೆ ಕೇಳಿದ.

‘ನಾನು ಅವ್ವುಂಗೆ ಎಲೆಯಡಕೆ ಕಡ್ಡಿಪುಡಿ, ಅಪ್ಪುಂಗೆ ಫುಲ್ ಬಾಟಲು ಎಣ್ಣೆ ಮಡಗಿದ್ದೆ’ ಸಣ್ಣೀರನಿಗೆ ಹೇಳೋಕೆ ಮುಜುಗರ.

‘ಅಲ್ಲ ಕಣ್ಲೆ, ನಿಮ್ಮಪ್ಪುಂಗೆ ಕುಡಿಯೋ ಚಟ ಇರಲಿಲ್ಲ. ಆದ್ರೂ ಎಣ್ಣೆ ಯಾಕೆ ಮಡಗಿದ್ದೆ, ಅದೂ ಫುಲ್ ಬಾಟ್ಲು?’ ಗುಡ್ಡೆ ಕೀಟಲೆ ಮಾಡಿದ.

‘ಯಾಕೇಂದ್ರೆ? ಸತ್ತಿರೋರಿಗೆ ಮಾತ್ರ ಸ್ವರ್ಗದ ಬಾಗಿಲು ತೆಗೆದ್ರೆ ಸಾಕೆ? ಬದುಕಿರೋ ನಮಗೂ ತೆಗೀಬೇಕಲ್ಲಪ್ಪ, ಅದ್ಕೇ ಇದು... ಕ್ವಾಟ್ರು, ಹಾಫು, ಫುಲ್ಲು... ಎಷ್ಟೆಷ್ಟ್ ತಗತೀರೋ ಅಷ್ಟಷ್ಟು ಬಾಗಿಲು ತೆಗೀತಾ ಹೋಗ್ತದೆ...!’ ತೆಪರೇಸಿ ತಮಾಸೆಗೆ ಎಲ್ಲರೂ ಗೊಳ್ಳಂತ ನಕ್ಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT