‘ಲೇ ತೆಪರ, ಈ ಹನಿಟ್ರ್ಯಾಪ್ ಅಂದ್ರೆ ಏನ್ಲೆ?’ ಹರಟೆಕಟ್ಟೆಯಲ್ಲಿ ದುಬ್ಬೀರ ಕೇಳಿದ.
‘ಅದಾ... ಸುಂದರ ಹುಡುಗೀರು ನಿಮ್ಮಂಥ ದುಬ್ಬರನ್ನ ಖೆಡ್ಡಾಕ್ಕೆ ಬೀಳಿಸ್ಕಳಾದು’.
‘ಮತ್ತೆ ಈ ಮನಿಟ್ರ್ಯಾಪ್ ಅಂದ್ರೆ?’
‘ಹನಿಟ್ರ್ಯಾಪ್ ಖೆಡ್ಡಾಕ್ಕೆ ಬೀಳಿಸ್ಕಂಡ ಮೇಲೆ ದುಡ್ಡು ಕಿತ್ಕಂತಾರಲ್ಲ, ಅದು ಮನಿಟ್ರ್ಯಾಪ್’.
‘ಓಕೆ... ಆಮೇಲೆ ಈ ಟಿಂಗ್ ಆಪರೇಷನ್ ಅಂದ್ರೇನು?’
‘ಅದು ಟಿಂಗ್ ಅಲ್ಲ, ಸ್ಟಿಂಗ್ ಆಪರೇಷನ್ನು. ಸೀಕ್ರೆಟ್ ಕ್ಯಾಮೆರಾ ಇಟ್ಟು ಭ್ರಷ್ಟ ರಾಜಕಾರಣಿಗಳನ್ನ ಖೆಡ್ಡಾಕ್ಕೆ ಕೆಡವೋದು. ಅಲ್ಲ, ಇದ್ನೆಲ್ಲ ಯಾಕ್ ಕೇಳ್ತಿದೀಯ?’
‘ತಿಳ್ಕಾಬೇಕು ಕಣಲೆ, ಜನರಲ್ ನಾಲೆಡ್ಜ್ ಇಂಪ್ರೂ ಮಾಡ್ಕಾಬೇಕು’.
‘ಓ... ಏನು ಐಎಎಸ್ ಪರೀಕ್ಷೆ ಕಟ್ಟಿದೀಯ? ಅದ್ಯಾರೋ ಒಬ್ಳು ಹನಿಟ್ರ್ಯಾಪ್ ಮಾಡಿ ಹತ್ತು ಜನರನ್ನ ಮದುವೆ ಆಗಿದಾಳಂತೆ. ನೀನು ಹೂಂ ಅಂದ್ರೆ ಹನ್ನೊಂದನೇನು ಆಗಬೋದು ನೋಡು’ ತೆಪರೇಸಿ ನಕ್ಕ.
‘ಲೇಯ್ ದುಬ್ಬೀರನತ್ರ ಏನೈತಲೆ ಕಿತ್ಕಳಾಕೆ? ಎದ್ರೆ ಹೆಗಲ ಮೇಲೆ ಟವೆಲ್ಲು’ ಗುಡ್ಡೆ ಕಿಸಕ್ಕೆಂದ.
‘ಗುಡ್ಡೆ ಬ್ಯಾಡ ನೋಡು’ ಎಂದ ದುಬ್ಬೀರ, ‘ಆ ಗುಡ್ಡೇದು ಹಂಗಿರ್‍ಲಿ, ಈಗ ಈ ಹೈಪರ್‌ಲೂಪ್ ಅಂದ್ರೆ ಏನು? ನೀ ಹೇಳೋ ತೆಪರ’ ಕೇಳಿದ.
‘ಹೈಪರ್‌ಲೂಪ್ ಅಂದ್ರೆ ರಾಕೆಟ್ ಸ್ಪೀಡಲ್ಲಿ ಹೋಗೋದು. ಚಿಟಕಿ ಹೊಡೆಯೋದ್ರಲ್ಲಿ ಸುಂಯ್ ಟಪಕ್ ಅಂತ ಎಲ್ಲಿಗೆ ಬೇಕು ಅಲ್ಲಿಗೆ ಹೋಗಿಬಿಡಬೋದು. ಭಾರೀ ಸ್ಪೀಡು...’ ತೆಪರೇಸಿ ವಿವರಿಸಿದ.
‘ಅಲ್ಲೋ ದುಬ್ಬೀರ, ಇಷ್ಟೆಲ್ಲ ಕೇಳ್ತೀಯಲ್ಲ, ನಿಂಗೆ ‘ಡುಂ ಟಕ’ ಅಂದ್ರೇನು ಗೊತ್ತಾ? ಹೇಳಲೆ ನೋಡಾಣ’ ಗುಡ್ಡೆ ಕೇಳಿದ.
‘ಅದು ಮದುವೆ ಆಗುವಾಗ ಬಾರಿಸ್ತಾರಲ್ಲ ವಾದ್ಯ... ಅದೇ ತಾನೆ?’
‘ಕರೆಕ್ಟ್, ಮತ್ತೆ ‘ಟಕ ಡುಂ’ ಅಂದ್ರೆ?
‘ಅದು ಗೊತ್ತಿಲ್ಲಪ್ಪ’.
‘ಅದು ಮದುವೆ ಮುರ್ಕಂಡಾಗ ಬಾರ್ಸೋದು ಕಣಲೆ ದಡ್ಡ’ ಎಂದ ಗುಡ್ಡೆ.
ಎಲ್ಲರೂ ಗೊಳ್ಳಂತ ನಕ್ಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.