ಶುಕ್ರವಾರ, ಫೆಬ್ರವರಿ 21, 2020
17 °C

ನಾನೂ ಸಿ.ಎಂ ಆಗ್ತೀನಿ!

ಗುರು ಪಿ.ಎಸ್. Updated:

ಅಕ್ಷರ ಗಾತ್ರ : | |

Prajavani

‘ಇದೇನ್ರೀ ನಿಮ್ ಅವತಾರ! ಗಾಂಧಿ ಟೋಪಿ ಹಾಕ್ಕೊಂಡು, ಮಫ್ಲರ್ ಸುತ್ಕೊಂಡು, ಒಂದು ಕೈಯಲ್ಲಿ ಪುಸ್ತಕ ಮತ್ತೊಂದು  ಕೈಯಲ್ಲಿ ಕಸಬರಗಿ ಹಿಡ್ಕೊಂಡು,‌ ಕೆಮ್ಕೊಂಡು ಎಲ್ಲಿಗ್ ಹೊರಟ್ರಿ’ ಕೇಳಿದಳು ಅರ್ಧಾಂಗಿ.

‘ಕಸಬರಗಿ ಅನ್ಬೇಡ್ವೆ, ಪೊರಕೆ ಅನ್ನು, ಪೊರಕೆ... ನಾನೂ ಕೇಜ್ರಿವಾಲ್ನಂಗೆ ಸಿ.ಎಂ ಆಗೋಕೆ ಹೊಂಟೀನಿ’.

‘ಕೈಯಲ್ಲಿ ಪೊರಕೆ ಹಿಡ್ಕೊಂಡ್ ಮಾತ್ರಕ್ಕೆ ಸಿ.ಎಂ ಆಗೋಕಾಗಲ್ರೀ.‌ ಅದಕ್ಕೆ ಟ್ರೈನಿಂಗ್ ತಗೋಬೇಕು. ಎಲ್ಲ ಪಾರ್ಟಿ ಲೀಡರ್ಸ್ ಸಲಹೆ ಪಡ್ಕೊಂಡು ಮುಂದುವರೀರಿ’.

‘ನೋಡಪ್ಪ ವಿಜಿ, ಕರ್ನಾಟಕದಲ್ಲಿ ನೀ ಹೀಗೆ ಮಫ್ಲರ್ ಸುತ್ಕೊಂಡು ತಿರುಗಿದ್ರೆ ಸಿ.ಎಂ ಆಗಲ್ಲ... ಅದನ್ನ ತೆಗೆದು ಬೇರೆ ಏನಾದ್ರೂ ಹಾಕ್ಕೊಬೇಕಾಗುತ್ತೆ’ ಎಂದು ಕಮಲ ಪಕ್ಷದ ನಾಯಕ ಹೇಳ್ತಿದ್ದಂತೆ, ವಿಜಿ ‘ನೀರು’ ಕುಡಿಯಲು ಮುಂದಾದ. ಆ ‘ನೀರಿನ ಲೋಟ’ ಕಸಿದುಕೊಂಡ ಲೀಡರ್, ‘ನಾ ಹೇಳಿದ್ದು ಅರ್ಥ ಆಯ್ತು ತಾನೇ’ ಎನ್ನುತ್ತಿದ್ದಂತೆ, ಇದ್ಯಾಕೋ ಸರಿ ಬರಲ್ಲ ಅಂದುಕೊಂಡು ಮುಂದೆ ಹೋದ ವಿಜಿ.

‘ನೋಡು ಬ್ರದರ್... ನೀನು ಜನರನ್ನ ಫ್ಯಾಮಿಲಿ ಅಂದ್ಕೊಳ್ಳದಿದ್ರೂ ಪರವಾಗಿಲ್ಲ. ಫ್ಯಾಮಿಲಿನೇ ಜನ ಅನ್ಕೋಬೇಕು’ ಅಂದ ತೆನೆ ಪಕ್ಷದ ನಾಯಕ, ರೂಮಿನ ‘ಕರೆಂಟ್’ ತೆಗೆದು ಮೆಲ್ಲಗೆ ಹೇಳ್ದ, ‘ನಿಮ್ಮ ಅಪ್ಪ, ಅಣ್ಣ, ಮಗ, ಹೆಂಡ್ತಿ ಎಲ್ಲರನ್ನ ಎಲೆಕ್ಷನ್‌ಗೆ ನಿಲ್ಲಿಸಿ, ಗೆಲ್ಲಿಸಿದ್ರೆ ಸಿ.ಎಂ ಆಗಬಹುದು!’

ತೊಟ್ಟಿದ್ದ ಗಾಂಧಿ ಟೋಪಿ ಅಲ್ಲೇ ಬಿಸಾಕಿ ಮುಂದೆ ಹೊರಟ ವಿಜಿಗೆ ಎದುರಾದ ಕೈ ನಾಯಕ, ‘ಮೊದಲು ಜಾತಿಗೊಂದು ಜಯಂತಿ ಮಾಡು, ಅಕ್ಕಪಕ್ಕದವರು ಭ್ರಷ್ಟರಾದರೂ ನೋಡ್ಕೊಂಡು ಸುಮ್ನಿರು... ಆಗ ನೀ ಸಿ.ಎಂ ಆಗಬಹುದು’ ಎಂದು ಹೇಳ್ತಿದ್ದಂಗೆ, ಕೈಯಲ್ಲಿದ್ದ ‘ಪುಸ್ತಕ’ವನ್ನೂ ಬಿಸಾಕಿ ಮುಂದೆ ಹೊರಟ.

ಎದುರಿಗೆ ಬಂದ ಹಿರಿಯ ಸಾಹಿತಿಯನ್ನೂ ಸಲಹೆ ಕೇಳಿದಾಗ, ‘ಕನ್ನಡದಿಂದ ಮೊದಲು ಸಂಸ್ಕೃತಕ್ಕೆ ‘ಭಾಷಾಂತರ’ ಮಾಡು. ಸಿ.ಎಂ ಆಗದಿದ್ರೂ ಯಾವುದಕ್ಕಾದ್ರೂ ಅಧ್ಯಕ್ಷನಾದರೂ ಆಗ್ತೀಯ’ ಎಂದಾಗ, ಕೆಮ್ಮುವುದನ್ನೇ ನಿಲ್ಲಿಸಿದ ವಿಜಿ. ‘ಗೊತ್ತಿತ್ತು ರೀ ನಂಗೆ. ಕೊನೆಗೆ ನಿಮ್ ಕೈಲಿ ಉಳಿಯೋದು ಪೊರಕೆ ಮಾತ್ರ ಅಂತಾ... ಕರ್ನಾಟಕವು ದೆಹಲಿ ಆಗಲ್ಲ... ಹೇಗೂ ಪೊರಕೆ ಕೈಯಲ್ಲಿ ಹಿಡ್ಕೊಂಡಿದೀರಲ್ಲ. ಕಸ ಹೊಡೆದು ಹೋಗಿ ಬಿದ್ಕೊಳ್ಳಿ’ ಮುಖಕ್ಕೆ ಹೊಡೆದಂತೆ ಹೇಳಿದಳು ಹೆಂಡತಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು