ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಇಡ್ಲಿ, ವಡೆ, ದೋಸೆ...

Last Updated 21 ಸೆಪ್ಟೆಂಬರ್ 2021, 20:13 IST
ಅಕ್ಷರ ಗಾತ್ರ

‘ನಮ್ಮ ಶಾಸಕರು ಅಸೆಂಬ್ಲಿಯಲ್ಲಿ ಮಾತನಾಡಿದ ವಿಚಾರ ಪತ್ರಿಕೆ, ಟೀವಿಗಳಲ್ಲಿ ಸುದ್ದಿನೇ ಆಗಿಲ್ಲವಲ್ರೀ...’ ಸುಮಿಗೆ ಬೇಸರ.

‘ಶಾಸಕರು ಮಾತನಾಡಿದ್ರೆ ತಾನೇ ಸುದ್ದಿಯಾಗೋದು’ ಅಂದ ಶಂಕ್ರಿ.

‘ಸಾರ್ವಜನಿಕ ವೇದಿಕೆಗಳಲ್ಲಿ ಸ್ಟೇಜ್ ಫಿಯರ್ ಇಲ್ಲದೆ ಮಾತನಾಡುವ ಶಾಸಕರಿಗೆ ಅಸೆಂಬ್ಲಿ ಫಿಯರ್ ಇದೆಯೇನೋ...’

‘ಇಲ್ಲ, ಅಸೆಂಬ್ಲಿಯಲ್ಲಿ ಸೀನಿಯರ್ ಶಾಸಕರೇ ಹೆಚ್ಚು ಮಾತನಾಡ್ತಾರಂತೆ, ನಮ್ಮ ಶಾಸಕರ ಮಾತಿಗೆ ಅವಕಾಶವೇ ಸಿಗುತ್ತಿಲ್ಲವಂತೆ’.

‘ಟೋಲ್‍ಗಳಲ್ಲಿ ಶಾಸಕರ ಕಾರುಗಳಿಗೆ ಅಡ್ಡಹಾಕಿ ಅವಮಾನ ಮಾಡ್ತಾರಂತೆ, ಇದು ಸರಿಯಲ್ಲಾರೀ...’

‘ಹೌದು, ಇದು ಶಾಸಕರಿಗೆ ಮಾತ್ರವಲ್ಲ, ಇಡೀ ಕ್ಷೇತ್ರದ ಜನರಿಗೆ ಮಾಡುವ ಅವಮಾನ. ಶಾಸಕರೇನು ಜೀರೊ ಟ್ರಾಫಿಕ್ ಬೇಕು ಅಂತ ಕೇಳಿಲ್ಲ. ಟೋಲ್‍ಗಳಲ್ಲಿ ಪ್ರತ್ಯೇಕ ಪಥದ ವ್ಯವಸ್ಥೆ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿ ಶಾಸಕರ ಬೆಲೆ-ಗೌರವ ಕಾಪಾಡಬೇಕು’.

‘ಹೌದೂರೀ. ದಿನಬಳಕೆ ಪದಾರ್ಥಗಳ ಬೆಲೆ ಏರಿಕೆ ಬಗ್ಗೆ ಅಷ್ಟೊಂದು ಮಾತನಾಡುವ ಸಿದ್ದರಾಮಯ್ಯರಿಗೆ ಹೋಟೆಲ್‍ಗಳ ಇಡ್ಲಿ, ವಡೆ, ಮಸಾಲೆದೋಸೆಗಳ ಬೆಲೆ ಗೊತ್ತಿಲ್ಲವಂತೆ’.

‘ಸಿದ್ದರಾಮಯ್ಯ ಹೋಟೆಲ್‍ಗೆ ಹೋಗೋದೇ ಅಪರೂಪವಂತೆ, ಹೋದ್ರೂ ಸ್ನೇಹಿತರು ಬಿಲ್ ಕೊಡ್ತಾರಂತೆ. ಅವರಿಗೆ ಬಿಲ್ ಬಿಸಿ ತಟ್ಟಿಲ್ಲ, ಹೋಟೆಲ್‍ಗಳಲ್ಲೂ ಇಂದಿರಾ ಕ್ಯಾಂಟೀನ್‍ನಂತೆ ರಿಯಾಯಿತಿ ದರದಲ್ಲಿ ಊಟ, ತಿಂಡಿ ಸಿಗುತ್ತದೆ ಅಂತ ಭಾವಿಸಿದ್ದರೇನೋ...’

‘ತಿಂಡಿ ಬೆಲೆಗಿಂತ ನನಗೆ ಅನ್ನದ ಬೆಲೆ ಚೆನ್ನಾಗಿ ಗೊತ್ತು. ಬೆಲೆ ಏರಿಕೆ ಪರಿಣಾಮದ ಅರಿವಿಲ್ಲದಿದ್ದರೆ ಗೃಹಿಣಿಯರನ್ನು ಕೇಳಿ ತಿಳಿದುಕೊಳ್ಳಿ ಅಂತ ಶಾಸಕರಿಗೆ ಸಿದ್ದರಾಮಯ್ಯ ತಿಳಿವಳಿಕೆ ನೀಡಿದರಂತೆ... ಹೋಗ್ಲಿಬಿಡಿ, ಅಸೆಂಬ್ಲಿಯ ಅಷ್ಟೆಲ್ಲಾ ಚರ್ಚೆಯ ಫಲದಿಂದ ಪದಾರ್ಥಗಳ ಬೆಲೆ ಇಳಿಯಬಹುದೇ?’

‘ಸದ್ಯದ ಸ್ಥಿತಿಯಲ್ಲಿ ಬೆಲೆ ಇಳಿಕೆ ಕಷ್ಟ ಆಗುವುದಂತೆ. ಇಳಿಸುವ ಬದಲು ಜನರ ಆದಾಯ ಮೂಲ ಹೆಚ್ಚಿಸಲು ಸರ್ಕಾರ ಪ್ರಯತ್ನ ಮಾಡಬಹುದೇನೊ, ಕಾದುನೋಡೋಣ ಬಿಡು...’ ಶಂಕ್ರಿ ಸಮಾಧಾನ ಹೇಳಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT