ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ: ಕಿಂಗ್‌ಮೇಕರ್!

Published 7 ಜೂನ್ 2024, 23:33 IST
Last Updated 7 ಜೂನ್ 2024, 23:33 IST
ಅಕ್ಷರ ಗಾತ್ರ

ಮನೆಯಲ್ಲಿನ ಫೋನ್‌ಗಳೆಲ್ಲ ಒಂದೇ ಸಮನೆ ರಿಂಗಣಿಸತೊಡಗಿದವು. ಪಿ.ಎ. ಓಡಿ ಬಂದು ಒಂದೇ ಉಸಿರಲ್ಲಿ ಹೇಳತೊಡಗಿದ, ‘ಸರ್, ಎರಡೂ ಪಾರ್ಟಿಯವರು ಕಾಲ್ ಮಾಡ್ತಿದಾರೆ’ 

‘ಯಾಕಂತೆ?’ 

‘ನಿಮ್ಮ ಸಪೋರ್ಟ್ ಬೇಕಂತೆ ಸರ್, ನೀವೀಗ ಕಿಂಗ್‌ಮೇಕರ್?’ 

‘ಹೌದಾ?!’ ಖುಷಿಯಲ್ಲಿ ಎದ್ದು ನಿಂತೆ. 

‘ಹೌದು ಸರ್, ನಿಮ್ಮ ಸಪೋರ್ಟ್ ಯಾರಿಗೆ ಸಿಗುತ್ತೋ ಅವರೇ ಸರ್ಕಾರ ರಚಿಸೋದು?’

‘ಹೌದಾ?! ಯಾರಿಗೆ ಬೆಂಬಲ ಕೊಡಲಿ?’ 

‘ಸಿಂಪಲ್ ಸರ್, ಯಾರಿಂದ ಜಾಸ್ತಿ ಲಾಭ ಸಿಗುತ್ತೋ ಅವರಿಗೆ ಕೊಡಿ’. 

‘ಕರೆಕ್ಟ್, ಈ ಪಾರ್ಟಿಯವರಿಗೆ ಕಾಲ್ ಮಾಡಿಕೊಡು, ಮಾತಾಡ್ತೀನಿ’. 

ಪಿ.ಎ. ಫೋನ್ ಕೊಟ್ಟ. ‘ನಮ್ಮ ಪಾರ್ಟಿಯವರು ನಾಲ್ಕು ಜನ ಕ್ಯಾಬಿನೆಟ್ ಮಿನಿಸ್ಟರ್, ಆರು ಜನ ಸ್ಟೇಟ್ ಮಿನಿಸ್ಟರ್ ಆಗಬೇಕು, ಒಬ್ಬರನ್ನ ಸ್ಪೀಕರ್ ಮಾಡಬೇಕು’ ಎನ್ನುತ್ತಿದ್ದಂತೆ, ಎಲ್ಲ ಕಂಡೀಷನ್‌ಗಳಿಗೂ ಗ್ರೀನ್ ಸಿಗ್ನಲ್ ಸಿಕ್ತು. ‘ಇಷ್ಟು ಬೇಗ ಓಕೆ ಆಯ್ತಲ್ಲ’ ಅಂದ್ಕೊಂಡು, ‘ನನ್ನವು ಇನ್ನೊಂದೆರಡು ಕಂಡೀಷನ್‌ಗಳಿವೆ’ ಎಂದೆ.

‘ಬೋಲೋ ಜೀ’ ಎಂದಿತು ಆ ಕಡೆಯ ಧ್ವನಿ. 

‘ನೀವು ದಿನಕ್ಕೆ ಒಂದೇ ಡ್ರೆಸ್ ಹಾಕಬೇಕು, ಮನ್ ಕಿ ಬಾತ್‌ನಲ್ಲಿ ನಾನೂ ಮಾತನಾಡಬೇಕು...’  ಕಷ್ಟದಲ್ಲೇ ಒಪ್ಪಿದರು ಅತ್ತಲಿನ ವ್ಯಕ್ತಿ. 

ಮತ್ತೊಂದು ಕಂಡೀಷನ್, ‘ಕ್ಯಾಮೆರಾದಲ್ಲಿ ನೀವೊಬ್ಬರೇ ಕಾಣೋ ಹಾಗಿಲ್ಲ, ನಾನೂ ಇರಲೇಬೇಕು’ ಎನ್ನುತ್ತಿದ್ದಂತೆ ಕರೆ ಕಟ್ ಆಯ್ತು!

‘ಇವರು ಒಪ್ಪಲಿಲ್ಲ ಅಂದ್ರೆ ಏನಾಯ್ತು, ಇನ್ನೊಂದು ಪಾರ್ಟಿಯವರು ಲೈನ್‌ನಲ್ಲಿದ್ದಾರೆ ಸರ್’ ಎಂದು ಫೋನ್ ಕೈಗಿತ್ತ ಪಿ.ಎ. 

‘ನೋಡಿ ಸರ್, ನಿಮ್ಮ ಪಾರ್ಟಿಗೆ ಸಪೋರ್ಟ್‌ ಮಾಡಬೇಕೆಂದರೆ ನನ್ನನ್ನೇ ಪ್ರೈಮ್ ಮಿನಿಸ್ಟರ್ ಮಾಡಬೇಕು’.

‘ಓಕೆ, ಡನ್’. 

‘ಹ್ಞಾಂ! ಓಕೆ ಅಂದುಬಿಟ್ರು’ ಎಂದು ಕುಣಿಯುತ್ತಿದ್ದಂತೆ ಮುಖದ ಮೇಲೆ ನೀರು ಬಿತ್ತು. 

‘ಸಾಕು ಮೇಲೇಳ್ರೀ, ನಿದ್ದೆಯಲ್ಲಿ ಅದೇನ್ ಬಡಬಡಿಸ್ತಿರ್ತೀರ ಯಾವಾಗ್ಲೂ’ ಎಂದು ಎದ್ದೇಳಿಸಿದಳು ಹೆಂಡತಿ! 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT