ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ರಪ್ಪ ಮತ್ತು ರಪ್ಪ!

Published 21 ಮಾರ್ಚ್ 2024, 23:26 IST
Last Updated 21 ಮಾರ್ಚ್ 2024, 23:26 IST
ಅಕ್ಷರ ಗಾತ್ರ

‘ಗುಡ್ಡೆ, ಶಿವಮೊಗ್ಗದ ರಪ್ಪ ಅಂಡ್ ರಪ್ಪ ಅವರ ಗದ್ಲ ಎಲ್ಲಿಗೆ ಬಂತಲೆ?’ ದುಬ್ಬೀರ ಕೇಳಿದ.

‘ಅದಾ... ಎದೆ ಬಗೆದು ತೋರ್ಸೋ ಲೆವೆಲ್ಲಿಗೆ ಬಂದು ನಿಂತೇತಪ. ಮುಂದೆ ಕಿಡ್ನಿ, ಲಿವರ್ ತಂಕ ಹೋಗಬಹುದು’ ಗುಡ್ಡೆ ನಕ್ಕ.

‘ಲೇಯ್, ಕಿಡ್ನಿ, ಲಿವರ್ ತೋರ್ಸಿದ್ರೆ ಪಕ್ಷನಿಷ್ಠೆ, ವ್ಯಕ್ತಿನಿಷ್ಠೆ ಗೊತ್ತಾಗ್ತತಾ?’

‘ಸುಮ್ನೆ ಹೇಳಿದೆ ಕಣಲೆ, ಆದ್ರೆ ಯಾರ್‍ಯಾರ ಎದೆ ಒಳಗೆ ಯಾರ್‍ಯಾರಿದಾರೆ ಅಂತ ಒಂದ್ ಲೆವೆಲ್‌ಗೆ ಗೊತ್ತಾಗ್ತಾ ಐತಿ’.

‘ಅಲ್ಲೋ... ರಪ್ಪ ಅಂಡ್ ರಪ್ಪಗಳು ಜೋಡೆತ್ತು ಅಂತಿದ್ರು. ಅದ್ಯಾಕೆ ಏರಿಗೊಬ್ರು, ನೀರಿಗೊಬ್ರು ಆದ್ರು ಅಂತ’ ತೆಪರೇಸಿ ಕೇಳಿದ.

‘ರಾಜಕೀಯ ಅಂದ್ರೆ ಅದೇ ಕಣಲೆ, ಪಕ್ಷ, ಸಿದ್ಧಾಂತ ಇವೆಲ್ಲ ಮಾತಿನ ಬದ್ನೇಕಾಯಿ. ಅವರವರ ಹೆಂಡ್ತಿಗೆ, ಮಕ್ಕಳಿಗೆ ಟಿಕೆಟ್ ಸಿಗದಿದ್ರೆ ಎಲ್ಲರೂ ರೆಬೆಲ್ ಸ್ಟಾರ್‌ಗಳೇ’.

‘ಹೋಗ್ಲಿ ಬಂಡಾಯದ ರಪ್ಪ ಅವ್ರನ್ನ ರಾಜ್ಯಪಾಲರಾಗಿ ಮಾಡಿ ರಪ್ ಅಂತ ಬಾಯಿ ಮುಚ್ಚಿಸ್ತಾರಾ?’ ಕೊಟ್ರೇಶಿ ಕೊಕ್ಕೆ.

‘ಇದ್ಕೆ ‘ಬೇರೆ ಪ್ರಶ್ನೆ ಇದ್ರೆ ಕೇಳಣ್ಣ’ ಅಂತ ಕಮಲಾಧ್ಯಕ್ಷರು ಹೇಳಿದ್ರಂತೆ. ನಿಂಗೂ ಅದೇ ಉತ್ತರ’ ಗುಡ್ಡೆ ನಕ್ಕ.

‘ಪಾಪ, ಬಂಡಾಯದ ರಪ್ಪ ಅವರಿಗೆ ಅನ್ಯಾಯ ಆಗಬಾರ್ದಿತ್ತು...’ ಮಂಜಮ್ಮ ಕನಿಕರ ತೋರಿದಳು.

‘ನಂ ಸಿಎಂ ತರ ಸ್ಟ್ರಾಂಗ್ ಆಗ್ಬೇಕು ಮಂಜಮ್ಮ, ಆಗ್ಲೇ ಎಲ್ರು ಮಾತು ಕೇಳೋದು...’

‘ಈ ಪಿಂಕ್ಲಿ ಮಾತೆಲ್ಲ ಬ್ಯಾಡ, ನಾವೂ ಸ್ಟ್ರಾಂಗೇ.. ನಮ್ ರಪ್ಪ ಟಿಕೆಟ್ ತಗಂಡೇ ತಗಾತಾರೆ ನೋಡ್ತಿರು’ ಮಂಜಮ್ಮ ತಿರುಗೇಟು ನೀಡಿದಳು.

‘ಈಗ ಈ ಟಿಕೆಟ್ ಗಲಾಟೆ ಬಿಡ್ರಪ್ಪ, ಇವತ್ತಿಂದ ವಿಕೆಟ್ ಗಲಾಟೆ ಶುರುವಾಗೇತಿ. ನಮ್ ಆರ್‌ಸಿಬಿ ಹುಡುಗ್ರು ಈ ಸಲನಾದ್ರು ಕಪ್ ಹೊಡೀತಾರಾ?’ ದುಬ್ಬೀರ ಮಾತು ಬದಲಿಸಿದ.

‘ಮತ್ತೆ ಬಿಡ್ತಾರಾ? ಇನ್ನೂ ನೂರು ಸಲ ಸೋತ್ರೂ ಕಪ್ ನಮ್ದೇ’ ಎಂದ ಗುಡ್ಡೆ. ಎಲ್ಲರೂ ಗೊಳ್ಳಂತ ನಕ್ಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT