ಗುರುವಾರ , ಜೂನ್ 30, 2022
22 °C

ಚುರುಮುರಿ: ಶೇಪೆ ಚಿತ್ರಾನ್ನ

ಲಿಂಗರಾಜು ಡಿ.ಎಸ್. Updated:

ಅಕ್ಷರ ಗಾತ್ರ : | |

Prajavani

‘ಬಾರ‍್ಲಾ ಅಣ್ತಮ್ಮ, ಈವತ್ತು ನಿನಗೆ ಹೊಸಾ ಥರಾ ಚಿತ್ರಾನ್ನ ಮಾಡೋದು ಹೇಳಿಕೊಡ್ತೀನಿ. ಇದರ ಹೆಸರು ಶೇಪೆ ಚಿತ್ರಾನ್ನ ಅಂತ!’ ಅಂತ ವಿವರ ಕೊಟ್ಟರು.

‘ಅಲ್ಲಾ ಸಾ, ನಿಮಗೇನು ಮಲ್ಲಾಗರು ಬಂದದೆ! ಇದೇನು ಶೇಪಿಲ್ಲದ ಚಿತ್ರಾನ್ನ?’ ಅಂತ ಮೂತಿ ತಿವಿದೆ.

‘ಅಣ್ತಮ್ಮಾ ಇದು ಆಧ್ಯಾತ್ಮಿಕ ಶೇರುಪೇಟೆ ಚಿತ್ರಾನ್ನ ಕಲಾ! ಇದು ಕುರಿತೇಟಾಗಕೆ ಯೋಗಿಗಳ ಆಶೀರ್ವಾದ ಬೇಕು. ಮೊದಲು ಜೈರುಗ್‍ಯಜುರ್‍ಸಾಮ ಅಂತ ಧ್ಯಾನ ಮಾಡಿ ಡಿಮ್ಯಾಟ್ ಒಲೆ ಮೇಲೆ ಕಾವಲಿ ಇಟ್ಟು ಕೈತುಂಬಾ ಬಂಡವಾಳ, ರುಚಿಗೆ ತಕ್ಕಷ್ಟು ಫಂಡು ಹಾಕಿ ಬಿಸಿ ಮಾಡಿಕೊ. ನೀನು ಚಿತ್ರಾನ್ನ ಮಾಡುವಾಗ ತಂತ್ರಗಾರಿಕೆ ತಿಳಕಂಡು ಬಾಂಡು, ಡಿಬೆಂಚರು, ಎಫ್‌ಡಿಗೆ ಸ್ವಲ್ಪ ಫಂಡು ಹಾಕಿ ಇಂಡೆಕ್ಸ್ ನೋಡಿಕ್ಯಂಡು ಗಟ್ಟಿಯಾಗುವರೆಗೂ ತಿರುಗಿಸಿ ಆಮೇಲೆ ಈಕ್ವಿಟಿ ಹಾಕು. ಫಂಡು ಜಾಸ್ತಿ ಹಾಕಿದರೆ ಎಗ್ಸಿಟ್ ಲೋಡು ಜಾಸ್ತಿಯಾಗಿ ಚಿತ್ರಾನ್ನದ ರುಚಿ ಕೆಟ್ಟೋಯ್ತದೆ. ಪಕ್ಕದಮನಿಂದ ದ್ರಾಕ್ಷಿ-ಗೋಡಂಬಿ ಕಡ ತಂದು ಹಾಕಿದ್ರೆ ಅದು ಎಫ್‌ಡಿಐ ಆಗಿ ರುಚಿ ಜಾಸ್ತಿಯಾಯ್ತದೆ ಕಲಾ’ ಅಂತಂದ್ರು.

‘ಆಯ್ತು ಕನ ಬುಡಿ! ಶಾಸಕರು, ರಾಜಕಾರಣಿಗಳಿಗೆ ಈ ಚಿತ್ರಾನ್ನ ಇಷ್ಟಾಗಲ್ವರಾ ಸಾ?’ ಅಂತ ಕೇಳಿದೆ.

‘ಪಾಪದವು ಅವರ ತಾವು ದುಡ್ಡು-ದುಗ್ಗಣಿ ಎಲ್ಲದೋ! ಅವರೇ ರಾತ್ರಿಕೆಂಗೆ, ವತ್ತರಿಕೆಂಗೆ ಅನ್ನೋ ಪರಿಸ್ಥಿತೀಲವ್ರೆ. ಅವರ ಕತೆ ಇರ‍್ಲಿ, ಈಗ ಒಂದು ಸ್ವಲ್ಪ ಎಸ್‍ಐಪಿ ನೋಡಿಕ್ಯಂದು ಹಾಕ್ಬೇಕು. ಆಮೇಲೆ ಚಿತ್ರಾನ್ನಕ್ಕೆ ಸ್ವಲ್ಪ ಸಿದ್ಧಪುರುಷ ಯೋಗಿ ಮಸಾಲ ಸೇರಿಸಿ ಮಿಕ್ಸ್ ಮಾಡಿದ್ರೆ ಮಾತ್ರ ಚಿತ್ರಾನ್ನದ ಸ್ಟಾಕು ಎಕ್ಸ್‌ಚೇಂಜಿಗೆ ಲಿಸ್ಟಾಯ್ತದೆ ಅಂತ ತಿಳಿದೋರು ಹೇಳ್ತರೆ!’ ಅಂದರು.

ನಾನು ಚಿತ್ರಾನ್ನ ಬಾಯಿಗೆ ಇಟ್ಟೇಟ್ಗೆ ಯೋಗಿ ಮಸಾಲೆ ವಾಸನೆ ಗಪ್ಪಂತ ಮೂಗಿಗೆ ಬಡಿದು, ಕರಡಿ-ಗೂಳಿ ಒಟ್ಟಿಗೇ ಗುಮ್ಮಿದಂಗಾಗಿ ಬಿದ್ದೋದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.