ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ‘ಓ ಮೈ ಗಾಡ್’

Last Updated 8 ಮೇ 2022, 22:00 IST
ಅಕ್ಷರ ಗಾತ್ರ

‘ನಾ ಪೇಮೆಂಟ್ ಸೀಟ್ ತಗೊತೀನಿ, ರೊಕ್ಕ ಹೊಂದಿಸಿ ಇಡು. ಈ ಸಲ ನಾ ಬಿಡಂಗಿಲ್ಲ’ ಬೆಕ್ಕಣ್ಣ ಬಲು ಗಂಭೀರವಾಗಿ ಹೇಳಿತು.

‘ನೀ ಪೇಮೆಂಟ್ ಸೀಟ್ ಅಂತ ಸುಮ್ನೇ ವರಾತ ಹಚ್ಚಬ್ಯಾಡ. ಸಿಇಟಿ, ನೀಟ್ ಅಂತೆಲ್ಲ ಎಂಟ್ರೆನ್ಸ್ ಎಕ್ಸಾಂ ಇರತಾವಲ್ಲ, ಅವನ್ನು ಓದಿ ಛಲೋ ರ್‍ಯಾಂಕ್ ತಗಂಡು ಗೌರ್ಮೆಂಟ್ ಕಾಲೇಜಿನಾಗೆ ಸೀಟ್ ತಗೊ. ಫೀ ಬೇಕಿದ್ರೆ ತುಂಬತೀನಿ’ ಎಂದೆ.

ಬೆಕ್ಕಣ್ಣ ಪಕ್ಕೆ ಹಿಡಿದುಕೊಂಡು ಪಕಪಕನೆ ನಕ್ಕಿತು.

‘ಆ ಪೇಮೆಂಟ್ ಸೀಟಲ್ಲ. ಯತ್ನಾಳ ಮಾಮಾ ಹೇಳ್ಯಾನ... 2,500 ಕೋಟಿ ರೊಕ್ಕಕ್ಕೆ ಸಿಎಂ ಸೀಟು, 100 ಕೋಟಿಗೆ ಮಂತ್ರಿ ಸೀಟು ಸಿಗತೈತಿ ಅಂತ’ ಮೆತ್ತಗೆ ಉಲಿಯಿತು.

‘2500 ಕೋಟಿ ಅಂದರೆ ಇಪ್ಪತ್ತೈದರ ಮುಂದೆ ಎಷ್ಟ್ ಸೊನ್ನೆ ಬರತಾವು ಅಂತ ಮೊದ್ಲು ಲೆಕ್ಕ ಮಾಡೂದು ಕಲಿ’ ಎಂದು ನಾನು ಬೈದರೆ ಈ ಕಿವಿಯಲ್ಲಿ ಕೇಳಿ ಆ ಕಿವಿಯಲ್ಲಿ ಬಿಟ್ಟು, ‘ಹೋಗ್ಲಿ... ಪಿಎಸ್ಐ ಹುದ್ದೆ ಅಥವಾ ಸಹಪ್ರಾಧ್ಯಾಪಕರ ಹುದ್ದೆ, ಹಿಂಗೆ ಯಾವ್ದಾರ ಪೇಮೆಂಟ್ ಸೀಟಾರೂ ತಗತೀನಿ. ಇವಕ್ಕೆ ಅಷ್ಟು ಕೋಟಿಗಟ್ಟಲೆ ಬ್ಯಾಡ, ಲಕ್ಷಗಟ್ಟಲೆ ರೊಕ್ಕ ಸಾಕು’ ಎಂದು ವಿವಿಧ ಸರ್ಕಾರಿ ಹುದ್ದೆಗಳ ಲಂಚದ ದರಪಟ್ಟಿ ತೋರಿಸಿತು.

‘ನಿಮ್ಮ ಮೋದಿಮಾಮಾರು ನಾ ಖಾವೂಂಗಾ, ನಾ ಖಾನೆದೂಂಗ ಅಂದಿದ್ದರು. ಇಲ್ಲಿ ನೋಡಿದರೆ ಪೇಮೆಂಟು ಸೀಟು, ನಲ್ವತ್ತು ಪರ್ಸೆಂಟು ಹರಾಜು ಆಟ ನಡದೈತಿ. ಮೋದಿಮಾಮಾಗೆ ಕೇಳೋಗು’.

‘ಮೋದಿಮಾಮಾ ಬೆಳಗ್ಗೆ ಯೋಗ ಮುಗಿಸಿ ಬರಾಕೆ ಹತ್ತಿದ್ದರು, ಸಟಕ್ಕನೆ ಅವರ ಗಾರ್ಡುಗಳ ಕಣ್ಣು ತಪ್ಪಿಸಿ, ಎದುರು ನಿಂತು ಕೇಳೇಬಿಟ್ಟೆ’.

‘ಏನಂದ್ರು ಮೋದಿಮಾಮಾರು?’

‘ನಾ ಹಂಗ ಥಟ್ ಅಂತ ಎದುರು ನಿಂತು, ಕರುನಾಡಿನ ಸರ್ಕಾರಿ ಹುದ್ದೆಗಳ ಹರಾಜು ದರಪಟ್ಟಿ ತೋರಿಸಿ, ಫಟಾಫಟ್ ಪ್ರಶ್ನೆ ಕೇಳಿದ್ದೇ ಮೋದಿಮಾಮಾ ಗಾಬರಿಯಾಗಿ ‘ಓ ಮೈ ಗಾಡ್!’ ಅಂದ್ರು’ ಬೆಕ್ಕಣ್ಣ ಕಿಸಕ್ಕನೆ ನಕ್ಕಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT