ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ: ಸೆಲ್ಫಿ ಪಾಯಿಂಟ್‌

Published 3 ಡಿಸೆಂಬರ್ 2023, 23:44 IST
Last Updated 3 ಡಿಸೆಂಬರ್ 2023, 23:44 IST
ಅಕ್ಷರ ಗಾತ್ರ

ಬೆಕ್ಕಣ್ಣ ಪೇಪರು ಓದುತ್ತ, ‘ಈ ದುನಿಯಾವಳಗೆ ಎಂತೆಂಥ ಮಂಗ್ಯಾಗಳು ಇರತಾರ’ ಎನ್ನುತ್ತ ಗಹಗಹಿಸಿ ನಕ್ಕಿತು.

‘ಪೆರುಗ್ವೆ ದೇಶದ ಹಿರಿಯ ಕೃಷಿ ಅಧಿಕಾರಿ, ನಿತ್ಯಾನಂದನ ಕೈಲಾಸ ದೇಶದ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕ್ಯಾನಂತೆ. ಮಸ್ತ್ ಪೆಂಗ
ನಾಮ ಹಾಕಿಸಿಕೊಂಡೀಯಪಾ ಅಂತ ಅಂವನ್ನ ತೆಗೆದು ಹಾಕ್ಯಾರಂತ’ ಬೆಕ್ಕಣ್ಣ ವಿವರಿಸಿತು.

‘ನಿತ್ಯಾನಂದ ಎಲ್ಲಿ ಅದಾನಂತೇ ಗೊತ್ತಿಲ್ಲ ಅಂತ ನಮ್‌ ಪೊಲೀಸರು ಹೇಳತಾರೆ. ಅಂತಾದ್ರಾಗೆ ಅಂವಾ ಪೆರುಗ್ವೆ ಮಂದಿಗೆ ಎಲ್ಲಿ ಸಿಕ್ಕನಂತೆ’ ಅಚ್ಚರಿಯಾಯಿತು ನನಗೆ.

‘ಅಂವ ಖುದ್ದು ಬಂದಿಲ್ಲ. ನಿತ್ಯಾನಂದನ ಕೈಲಾಸ ದೇಶದ ಪ್ರತಿನಿಧಿಗಳು ನಾಕಾರು ಜನ ಬಂದು ಆ ಅಧಿಕಾರಿಗೆ ಭೆಟ್ಟಿಯಾಗಿ, ನಿಮ್ಮ ಕೃಷಿ ಉದ್ಧಾರ ಮಾಡತೀವಿ ಅಂತ್ಹೇಳಿ ಒಪ್ಪಂದ ಪತ್ರ ಮಾಡಿಕೊಂಡಾರಂತೆ…’

‘ನಿತ್ಯಾನಂದ ಎಷ್ಟರ ಬೆರಕಿ ಅದಾನ! ಕೈಲಾಸ ದೇಶದವರ ಜೊತಿಗಿ ಆ ಅಧಿಕಾರಿ ಸೆಲ್ಫಿನೂ ತೆಕ್ಕೊಂಡನೇನು ಮತ್ತ? ಈಗ ಎಲ್ಲಾ ಕಡಿಗಿ ಸೆಲ್ಫಿ ಮೇನಿಯಾ! ಇಟಲಿ ಪ್ರಧಾನಿ ಮೆಲೊನಿ ಮೋದಿಮಾಮನ ಜೊತಿಗೆ ಸೆಲ್ಫಿ ತೆಕ್ಕೊಂಡು, ಮೆಲೊಡಿ ಸೆಲ್ಫಿ ಅಂತ ಸೋಶಿಯಲ್‌ ಮೀಡಯಾವಳಗೆ ಹಾಕ್ಯಾರೆ, ನೋಡೀಯೇನ್?’

ಮೋದಿಮಾಮನ ಜೊತೆಗೆ ಸೆಲ್ಫಿ ತೆಕ್ಕೋಳಾಕೆ ‌ಬ್ಯಾರೆ ದೇಶದ ಪ್ರಧಾನಿಗಳೂ ತುದಿಗಾಲಿನ ಮ್ಯಾಗೆ ನಿಂತಿರತಾರೆ! ಕಾಲೇಜುವಳಗೆ ಸೆಲ್ಫಿ ಪಾಯಿಂಟ್‌ ಮಾಡಿ, ಅಲ್ಲಿ ಫೋಟೊ ತೆಗೆದು ಕಳಿಸ್ರಿ ಅಂತ ಯುಜಿಸಿ ಆರ್ಡರು ಮಾಡೈತಲ್ಲ… ಹಂಗೇ ಮನ್ಯಾಗೂ ಮಾಡ್ರಿ ಅಂತ ಆರ್ಡರ್‌ ಬರತೈತಿ. ಈಗಲೇ ಮನ್ಯಾಗೆ ಒಂದ್‌ ಸೆಲ್ಫಿ ಪಾಯಿಂಟ್‌ ರೆಡಿ ಮಾಡು’.

‘ಗೃಹಲಕ್ಷ್ಮಿಯರು ಎರಡು ಸಾವಿರ ರೊಕ್ಕ ಬಂದಿದ್ದನ್ನು, ಕರೆಂಟು ಬಿಲ್ಲು ಸೊನ್ನೆ ಬಂದಿದ್ದನ್ನು ತೋರಿಸಿ, ಮನೆಯೊಳಗಿನ ಸೆಲ್ಫಿ ಮೂಲೆವಳಗೆ ಫೋಟೊ ತೆಕ್ಕಂಡು ಕಳಿಸಿದರೆ?’

‘ಮನೆಯಾಗಿನ ಸೆಲ್ಫಿ ಮೂಲೆವಳಗೆ ರಾಜ್ಯದ ಬಗ್ಗೆ ಮಾತಾಡಂಗಿಲ್ಲ, ಬರೇ ದೇಶದ ಪ್ರಗತಿ ಬಗ್ಗೆ ಮಾತಾಡಿ ಫೋಟೊ ತಗಬೇಕಂತ ಆರ್ಡರ್‌ವಳಗೆ ಕಟ್ಟಪ್ಪಣೆ ಕೊಡ್ತಾರೇಳು’ ಬೆಕ್ಕಣ್ಣ ಉಪಾಯ ಹೇಳಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT