ಶುಕ್ರವಾರ, ಫೆಬ್ರವರಿ 26, 2021
23 °C

ತ್ರಿಶಂಕು ಸ್ವರ್ಗದಲ್ಲಿ!

ಪ್ರೊ. ಎಸ್.ಬಿ.ರಂಗನಾಥ್ Updated:

ಅಕ್ಷರ ಗಾತ್ರ : | |

Prajavani

ಪುರಾಣ ಕಾಲದಿಂದ ಅಂತರಿಕ್ಷದಲ್ಲಿದ್ದು ಬೇಸತ್ತಿದ್ದ ತ್ರಿಶಂಕುವಿಗೆ ಆ ಆಗಂತುಕರನ್ನು ಕಂಡು ಖುಷಿಯಾಗಿತ್ತು. ಆಸ್ಥೆಯಿಂದ ವಿಚಾರಿಸಿದ- ‘ನೀವೆಲ್ಲಾ ಯಾರು? ಎಲ್ಲಿಂದ ಬರ್ತಿದೀರಿ?’

‘ನಾವೆಲ್ಲಾ ನಿಮ್ಮ ಅಭಿಮಾನಿಗಳು. ಧರಣಿ ಮಂಡಲ ಮಧ್ಯದೊಳಗೆ ಮೆರೆಯುತಿಹ ದೇಶದವರು. ಮೂರು ಕುಟುಂಬಗಳಿಂದ ಬಂದಿದೀವಿ?’ ಎಂದರವರು.

‘ಗೊತ್ತಾಯ್ತು, ರೆಸಾರ್ಟ್ ರಾಜಕಾರಣ ಮಾಡಿ ರಾಷ್ಟ್ರದಾದ್ಯಂತ ಸುದ್ದಿ ಮಾಡಿದ ರಾಜ್ಯದವರಲ್ವೆ! ಸಾಂದರ್ಭಿಕ ಶಿಶುವಿನ ಅಧಿಕಾರ ಅಂತ್ಯಗೊಳಿಸಿ, ಜಗದೇಕವೀರನ ಪಟ್ಟಾಭಿಷೇಕಕ್ಕೆ ಕಾರಣರಾದ ಅತೃಪ್ತರು ನೀವಲ್ವೆ?’

‘ಅದೆಲ್ಲ ಸುಳ್ಳು, ಸಾಂದರ್ಭಿಕ ಶಿಶುವಿನ ಕುಟುಂಬದಿಂದ ಆದ ಸಮಸ್ಯೆ ಇದು. ನಾವು ಅತೃಪ್ತರಲ್ಲ. ಜನಸೇವೆಗಾಗಿ ಅನ್ಯಾಯದ ವಿರುದ್ಧ ದನಿ ಎತ್ತಿದ ಬಂಡಾಯಗಾರರು. ನಾನು ‘ಹಳ್ಳಿ ಹಕ್ಕಿಯ ಹಾಡು’ ಪುಸ್ತಕ ಬರೆದಿದೀನಿ. ಈಗ ಇನ್ನೊಂದು ಪುಸ್ತಕ ಬರೇಯೋಣಾಂತಿದೀನಿ’ ಎಂದರೊಬ್ಬರು. ಅದಕ್ಕೆ ಇಬ್ಬರು ದನಿಗೂಡಿಸಿದರು.

‘ನಿಮ್ಮ ಪರಿಚಯ? ಏಕೆ ಕುಂಟ್ತಿದೀರಿ?’

‘ನಾನು ಬಸತಿ ಭೈರವಪ್ಪ. ನಾವು 13 ಜನ ಸೋದರರು ಬಂದಿದೀವಿ. ಬಹುಸಂಖ್ಯಾತವಾಗಿದ್ದ ನಮ್ಮ ಕುಟುಂಬಕ್ಕೆ, ಮೇಲಿನ ಒತ್ತಡದಿಂದ, ಅಲ್ಪಸಂಖ್ಯಾತರಿಗೆ ಅಧಿಕಾರ ಕೊಟ್ಟರೂ ತೀವ್ರ ಅವಮಾನ ಆಗಿದ್ರಿಂದ ಈ ಪರಿಸ್ಥಿತಿ ಉಂಟಾಗಿದೆ. ಸುಪ್ರೀಂ ಕೋರ್ಟ್ ಕೊಟ್ಟಿದ್ದ ಗಡುವಿನೊಳಗೆ ನಿಧಾನಸೌಧಕ್ಕೆ ಜೋರಾಗಿ ಓಡಿದಾಗ ನನ್ನ ಕಾಲು ಉಳುಕಿತು?’ ಎಂದರು ಇನ್ನೊಬ್ಬರು.

ಕೊನೆಗೆ ಉಳಿದ ವ್ಯಕ್ತಿ ಹೇಳಿತು– ‘ನನ್ನ ಹೆಸರು ಆಯಾರಾಮ್, ಸ್ವತಂತ್ರನಾಗಿದ್ದ ನನ್ನನ್ನು, ಅಧಿಕಾರಕ್ಕಾಗಿ ಏಣಿಯಾಗಿ ಬಳಸಿಕೊಂಡು ಆನಂತರ ಕಾಲಿನಿಂದ ಒದ್ದರು.’

‘ಮನೆ ಯಜಮಾನರು ನಮ್ಮ ಅಹವಾಲು ಕೇಳದೆ ಮನೆಯಿಂದ ಹೊರಹಾಕಿದರು. ನಮ್ಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ಕೋರ್ಟ್ ತೀರ್ಪು ಏನಾಗುತ್ತೋ, ಅಲ್ಲೀವರೆಗೂ ನೀವೇ ನಮ್ಮ ಆಶ್ರಯದಾತರು. ಆವರೆಗೆ ನಾವು ಕ್ಷೇತ್ರಗಳಿಗೆ ಹೋಗುವಂತಿಲ್ಲ!’ ಎಂದರು ಎಲ್ಲರೂ ತಗ್ಗಿದ ದನಿಯಲ್ಲಿ.

‘ನಾವೆಲ್ಲಾ ಸಮಾನ ದುಃಖಿಗಳು, ಚಿಂತಿಸಬೇಡಿ ಬನ್ನಿ’ ಎಂದ ತ್ರಿಶಂಕು, ಅವರನ್ನು ತೆರೆದ ಬಾಹುಗಳಿಂದ ಸ್ವಾಗತಿಸಿದ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.