ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಬೆಕ್ಕಣ್ಣನ ಪ್ರಾಣಸಂಕಟ

Published 21 ಜನವರಿ 2024, 21:19 IST
Last Updated 21 ಜನವರಿ 2024, 21:19 IST
ಅಕ್ಷರ ಗಾತ್ರ

ನಡುರಾತ್ರಿ ಅಡುಗೆಮನೆಯಿಂದ ಏನೋ ಡಬಡಬ ಸದ್ದು ಕೇಳಿತು. ಎದ್ದು ಬಂದು ನೋಡಿದರೆ, ಪುಟಾಣಿ ಇಲಿಯೊಂದು ಅಕ್ಕಿ ಡಬ್ಬವನ್ನೇ ಉರುಳಿಸಿದೆ. ಇಲಿ ಬೆಕ್ಕಣ್ಣನ ಬಾಲವನ್ನೇ ತುಳಿದುಕೊಂಡು ಓಡಾಡುತ್ತಿದ್ದರೂ ಇದು ತೆಪ್ಪನೆ ಕುಳಿತಿತ್ತು. 

‘ಏನಾಗೈತಲೇ ನಿನಗೆ… ಅಷ್ಟ್‌ ಸಣ್ಣ ಇಲಿ ಇಷ್ಟೆಲ್ಲ ರಾದ್ದಾಂತ ಮಾಡಿದರೂ, ಹಿಡಿದು ತಿನ್ನೂದು ಬಿಟ್ಟು ನೋಡಿಕೋತ ಸುಮ್ಮನೇ ಕೂತೀಯಲ್ಲ’ ಎಂದೆ ಗಾಬರಿಯಿಂದ. 

ಬೆಕ್ಕಣ್ಣ ಪಕ್ಕದಲ್ಲಿದ್ದ ಪೇಪರು ತೆಗೆದು, ಸುದ್ದಿ ತೋರಿಸಿತು. ‘ಅಯೋಧ್ಯೆಯಿಂದ ಮಂತ್ರಾಕ್ಷತೆ ಬಂದೈತಿ ಅಂತ ಮಂಡ್ಯ ಹತ್ತಿರದ ಒಂದು ಹಳ್ಳಿವಳಗೆ ಮಂದಿ ಮಾಂಸಾಹಾರ ತಿನ್ನೂದನ್ನೇ ಬಿಟ್ಟಾರಂತೆ. ಮತ್ತ ನಾ ಹೆಂಗ ಇಲಿ ಬೇಟೆಯಾಡಿ ತಿನ್ನಲಿ?’ ವಿಷಣ್ಣವದನನಾಗಿ ಬೆಕ್ಕಣ್ಣ ಹೇಳಿತು. 

‘ಇನ್ನು ಮುಂದೆ ನೀ ಬರೀ ಹಾಲು, ಮೊಸರನ್ನದಾಗೆ ಜೀವನ ನಡೆಸತೀಯೇನು?!’

‘ಅದೇ… ಏನು ಮಾಡಲಿ ಅಂತ ಹೊಳಿವಲ್ದು’ ಬೆಕ್ಕಣ್ಣ ನಿಟ್ಟುಸಿರಿಟ್ಟಿತು.

‘ಸರಿ, ನೀ ತಿನ್ನಬೇಡ, ಇಲಿ ಬೇಟೆಯಾಡಿ, ಹೊರಗೆ ಹಾಕು ಸಾಕು’ ನಾನು ಉಪಾಯದಿಂದ  ಮನವೊಲಿಸಲು ನೋಡಿದೆ. ‘ಶಾಂತಂಪಾಪಂ…’ ಬೆಕ್ಕಣ್ಣ ಗಲ್ಲ ಗಲ್ಲ ಬಡಿದುಕೊಂಡಿತು. 

‘ನಮ್ಮ ಮಹಾಕಾವ್ಯಗಳೊಳಗೆ ಬೆಕ್ಕು ಇಲಿಯನ್ನು ತಿನ್ನಬಾರದು ಅಂತ ಯಾವುದಾರೆ ಶ್ಲೋಕದೊಳಗೆ ಉಲ್ಲೇಖ ಮಾಡಿದ್ದು ನನಗಂತೂ ಗೊತ್ತಿಲ್ಲ’ ಎಂದೆ.

‘ನೀ ಅವುಗಳನ್ನೇನು ಓದೀಯೇನ್?’ ಎಂದು ರೇಗಿತು. 

‘ಚಾಟ್‌ ಜಿಪಿಟಿಗೆ ಕೇಳೂಣೇನು?’ ಎಂದೆ. ಬೆಕ್ಕಣ್ಣ ಲಗುಬಗೆಯಿಂದ ಲ್ಯಾಪ್‌ಟಾಪಿನಲ್ಲಿ ಚಾಟ್‌ ಜಿಪಿಟಿ ತೆರೆದು ಪ್ರಶ್ನೆ ಟೈಪಿಸಿತು.

ಅರೆಕ್ಷಣದಲ್ಲಿ ಚಾಟ್‌ ಜಿಪಿಟಿ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಉತ್ತರಿಸಿತು- ‘ಬೆಕ್ಕು ಇಲಿಯನ್ನು ತಿನ್ನಬಾರದು ಅಂತ ಯಾವ ಶ್ಲೋಕದಲ್ಲಿಯೂ ಉಲ್ಲೇಖವಿಲ್ಲ. ಹಾಗೆಯೇ ಬೆಕ್ಕು ಇಲಿಯನ್ನು ತಿನ್ನಬಹುದು ಎಂಬ ಉಲ್ಲೇಖವೂ ಇಲ್ಲ’.

ಗಾದೆ ಮಾತು ಉಲ್ಟಾ ಆಗಿ, ಇಲಿ ಚಿನ್ನಾಟ ಆಡಿದಷ್ಟೂ ಬೆಕ್ಕಣ್ಣನ ಪ್ರಾಣಸಂಕಟ ಹೆಚ್ಚಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT