ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | ಬೆಂಗ್ಳೂರ್ ಕಂಬಳ

Published 29 ನವೆಂಬರ್ 2023, 0:15 IST
Last Updated 29 ನವೆಂಬರ್ 2023, 0:15 IST
ಅಕ್ಷರ ಗಾತ್ರ

‘ಪ್ರಪಂಚದ ಯಾವ ಮೂಲೆನಾಗ್ ಏನ್ ನಡುದ್ರೂ ಅದು ಬೆಂಗಳೂರಲ್ಲೂ ಆಗ್ಬೇಕು ನೋಡು’ ಎಂದ ಗುದ್ಲಿಂಗ ಹರಟೆಕಟ್ಟೇಲಿ! ‘ಯಾವುದ್ರ ಬಗ್ಗೆ ಯೋಳ್ತಿದೀಯ ನೀನು?’ ಕೇಳಿದ ಮಾಲಿಂಗ.

‘ಕಂಬಳದ ಬಗ್ಗೆ ಕಣ್ರೋ. ಅಲ್ಲೆಲ್ಲೋ ಕರಾವಳಿ ಅಟ್ಲುಗದ್ದೇಲಿ ಕಂಬಳ ಮಾಡೋರು, ಈಗ ಅದ್ನೂ ಬೆಂಗಳೂರಲ್ಲಿ ಮಾಡೋ ಅಂಗಾಯ್ತಲ್ಲ’.

‘ಯಾಕ್ ಮಾಡ್ಬಾರ್ದು? ಅಂಗ್ ನೋಡುದ್ರೆ ಕಂಬಳಕ್ಕೆ ಬೆಂಗಳೂರೇ ಲಾಯಕ್ಕಾದ ಜಾಗ?’

‘ಯಾವ ಆಧಾರದ್ ಮ್ಯಾಲೆ ಅಂಗ್ ಯೋಳ್ತಿಯ ನೀನು? ಬೆಂಗಳೂರಲ್ಲೇನು ಅಟ್ಲುಗದ್ದೆ ಅದಾವಾ?’ ಕೇಳಿದ ಕಲ್ಲೇಶಿ.

‘ಅಲ್ಲಲೇ, ಇದ್‍ಬದ್ ಕೆರೆ ಕಟ್ಟೆನೆಲ್ಲಾ ನುಂಗಿ ನೀರು ಕುಡಿದವ್ರೆ. ಮಳೆ ಬಂದಾಗ ಒಂದೊಂದು ಅಂಡರ್‌ಪಾಸಲ್ಲೂ ನೀರು ಉಕ್ಕಿ ಹರಿಯುತ್ತೆ. ಫ್ಲೈಓವರ್ ಮೇಲಿಂದ ನೀರು ಬಳ ಬಳ ಸುರಿದು ರಸ್ತೆ ರಸ್ತೆನೂ ರಾಡಿ ಆಗುತ್ವೆ. ಇದಕ್ಕಿಂತ ಅಟ್ಲುಗದ್ದೆ ಬೇಕಾ? ಇದರ ಮಧ್ಯೆ ವೆಹಿಕಲ್ಲೇ ಓಡ್ಸೋರಿಗೆ ಕೋಣ ಓಡ್ಸೋದು ಯಾವ ಮಹಾ ಅಲ್ವಾ?’

‘ನಿಜನೇ ಬಿಡು. ಮೊದ್ಲೇ ಡ್ಯಾಮ್ಗಳಲ್ಲಿ ನೀರಿಲ್ಲ ಅಂತ ಗೋಳಾಡ್ತಾವ್ರೆ. ಇಂಗೆ ಮೈದಾನಗಳನ್ನೆಲ್ಲಾ ಕೆಸರುಗದ್ದೆ ಮಾಡಿ ಕಂಬಳ ಶುರು ಹಚ್ಕಂಡ್ರೆ ಕುಡಿಯೋ ನೀರಿಗೂ ಬರ ಬತ್ತದೋ ಎಂಗೋ?’

‘ಅಂಗಾಗಕ್ಕೆ ನಮ್ ರಾಜಕೀಯದೋರು ಬುಟ್‌ಬುಡ್ತಾರಾ? ಎತ್ತಿನಹೊಳೆ ತರ ಕೋಣದಹೊಳೆ ಅಂತ ಒಂದು ತಿರುವು ಯೋಜನೆ ಮಾಡಿ ಕರಾವಳಿಯಿಂದ ಸಮುದ್ರದ್ ನೀರ್‌ನ ಬೆಂಗ್ಳೂರಿಗೆ ತತ್ತಾರೇಳು’.

‘ವೂ ಕಣ್ಲಾ, ಅಂಗ್ ಮಾಡುದ್ರೂ ಮಾಡಾರೇ. ಆದ್ರೆ ಅದಕ್ಕೆಲ್ಲಾ ದುಡ್ ಎಲ್ಲಿಂದ ತತ್ತಾರೆ?’

‘ಏನ್ ಸಲಸಲಕ್ಕೂ ಕಂಬಳ ನೋಡಕ್ಕೆ ಪುಕ್ಕಟೆ ಬುಟ್ ಬುಡ್ತಾರೆ ಅಂದ್ಕೊಂಡಿದೀಯಾ? ಒಳಕ್ಕೆ ಓಗಕ್ಕೆ ಟಿಕೀಟು ಮಾಡಿ ಕುದುರೆ ರೇಸ್ ತರ ಕೋಣನ್ ಬಾಲಕ್ಕೆ ದುಡ್ಡು ಕಟ್ಟೊ ಅಂಗ್ ಮಾಡ್ಬಿಟ್ರೆ ಸರ್ಕಾರಕ್ಕೆ ಒಳ್ಳೇ ಆದಾಯ ಬತ್ತದಲ್ಲ’.

‘ಹೌದೌದು, ವಿಧಾನಸೌಧದ ಮುಂದೆಯೇ ಒಂದು ಅಟ್ಲುಗದ್ದೆ ಮಾಡುಸ್ಕೊಂಡ್ಬುಟ್ರೆ ಜೋಡೆತ್ತಿನ ತರ ಜೋಡಿಕೋಣಗಳು ತಾಲೀಮ್ ಮಾಡಕ್ಕೆ, ರಾಜಕೀಯದೋರು ಪರಸ್ಪರ ಕೆಸರೆರಚಿಕೊಂಡು ಹೋಳಿ ಆಡಕ್ಕೆ ಅನುಕೂಲ ಆಗುತ್ತೆ’ ಅಂದ ಪರ್ಮೇಶಿ. ಎಲ್ಲಾ ತಲೆಯಾಡಿಸಿ ಹಲ್ಕಿರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT