ಚುರುಮುರಿ | ಸಂಕ್ರಾಂತಿ ಫಲಗಳು

ಸಂಕ್ರಾಂತಿ ಪುರುಷನು ಈ ಚುನಾವಣಾ ವರ್ಷದಲ್ಲಿ ಭೂತವಿಜಯ, ಪ್ರಜಾನಿಧಿ ಮತ್ತು ಪಂಚ್ ರತ್ನ ಎಂಬ ಹೆಸರಿನಲ್ಲಿ ಮತದಾರರ ಬಕರ ರಾಶಿಗೆ ಪ್ರವೇಶಿಸುವನು. ಆತನು ಕೇಸರಿ ರುಮಾಲು ಧರಿಸಿ, ಹಸ್ತ ಪ್ರದರ್ಶನ ಮಾಡುತ್ತಾ, ತೆನೆಯನ್ನು ಹೊತ್ತು ದಕ್ಷಿಣ ದಿಕ್ಕಿಗೆ ಪ್ರಯಾಣ ಬೆಳೆಸುವನು. ಆತನ ಪ್ರಭಾವದಿಂದ ರಾಜ್ಯದಲ್ಲಿ ಪ್ರಧಾನ ಪಕ್ಷಗಳಲ್ಲಿ ವೇಷದ್ರೋಹಿಗಳ ಸಂಖ್ಯೆ ಉಲ್ಬಣಿಸಿ ಒಳಜಗಳ, ಕಚ್ಚಾಟ, ಹುಚ್ಚಾಟ, ಬೈಸರ್ಗಿಕ ಪ್ರಕೋಪಗಳು ಹೆಚ್ಚುವುವು. ತ್ರಿಪಕ್ಷಗಳು ನಿರುದ್ಯೋಗ ಭೀತಿಯ ನಿವಾರಣೆಗಾಗಿ ಮತ್ತು ಅಧಿಕಾರ ಪ್ರಾಪ್ತಿಗಾಗಿ ಜನತಾ ಜನಾರ್ದನನ ಭಜನೆ ಮಾಡುವುದು ಸೂಕ್ತವು.
ಪಕ್ಷಗಳು ಉಚಿತ ಕೊಡುಗೆಗಳ ಆಶ್ವಾಸನೆಯ ಮಹಾಪೂರ ಹರಿಸುವುದರಿಂದ ಮತದಾರರಿಗೆ ಕುಂದುಮತಿ ಆವರಿಸಲಿದೆ. ಆರ್ಥಿಕ ಶೀತದಿಂದಾಗಿ ಮಧ್ಯಮ ವರ್ಗದ ಮೂಗು ಕಟ್ಟಿ ಉಸಿರಾಟ ಕಷ್ಟವು. ರೈತರು ನುಡಿಮದ್ದುಗಳನ್ನು ನಂಬುವುದರಿಂದ ಧನವ್ಯಯವು. ಅಕಾರಣವಾಗಿ ಬೆಲೆಗಳು ಗಗನಕ್ಕೇರಲಿವೆ. ಬಿಪಿಎಲ್ಲುಗಳಿಗೆ ಧನ-ಧಾನ್ಯ ಭಾಗ್ಯ ಹೆಚ್ಚಳವು. ಗುಂಡೋದರರು ತೀರ್ಥಪಾನದ ಮಹತ್ವ ಅರಿತು ಸರ್ಕಾರದ ವರಮಾನ ಹೆಚ್ಚಿಸುವರು. ಜನ ತಮ್ಮನ್ನು ಗುಂಡಿಗಳು, ಟೋಲುಗಳು ಮತ್ತು ಮೆಟ್ರೊ ಪಿಲ್ಲರುಗಳು ಕಾಡದಿರಲಿ ಎಂದು ಕಷ್ಟದೇವತೆಗಳನ್ನು ಬೇಡಿಕೊಳ್ಳುವುದು. ಬಿಡಿಎ, ಬಿಬಿಎಂಪಿಯ ಬೀಸ್ಟ್ ಇಂಡಿಯಾ ಆಳ್ವಿಕೆಯಿಂದ ಜನ ಹೈರಾಣ.
ರಾಜ್ಯದ ಹಗರಣಗಳು ಕನ್ನಡ ಸಾಹಿತ್ಯ ಸಮ್ಮೇಳನದ ನಿರ್ಣಯಗಳಂತೆ ದೀರ್ಘನಿದ್ರೆಯನ್ನು ಹೊಂದುವುವು. ಮೀಸಲಾತಿ ಬಿರುಸಿನಿಂದ ಸರ್ಕಾರಕ್ಕೆ ಇಬ್ಬಂದಿತನವು. ನಿರಂತರ ಪ್ರತಿಭಟನೆ, ರಸ್ತೆತಡೆಗಳಿಂದ ಸಾಮಾನ್ಯರ ಬದುಕಿನಲ್ಲಿ ನೆಮ್ಮದಿ ನಾಶ. ಸ್ಯಾಂಟ್ರೋವರಿ ಇಲ್ಲದಿದ್ದರೂ ವರ್ಗಾವಣೆ ದಂಧೆ ಮುಂದುವರಿಯಲಿದೆ. ಅಪರಾಧಿಗಳನ್ನು ಹಿಡಿದುಕೊಡುವಂತೆ ದೇವರಿಗೆ ಹರಕೆ ಹೊರುವ ಸಲುವಾಗಿ ಪೊಲೀಸು ಇಲಾಖೆಗೆ ಸರ್ಕಾರದಿಂದ ವಿಶೇಷ ಅನುದಾನ ಸಾಧ್ಯತೆ.
ಇಡೀ ವರ್ಷದಲ್ಲಿ ರಾಜಕೀಯಕ್ಕೆ ಚಾಟುದೋಷದ ತೊಂದರೆ. ಮೇಲ್ವರ್ಗದ ಪುಟ್ಟ ಮಕ್ಕಳಿಗೆ ಸಿಂಥೆಟಿಕ್ ಡ್ರಗ್ಸ್ ಕಾಟ. ಮಧ್ಯಮ ವರ್ಗಕ್ಕೆ ಕ್ಯಾಶಿಲ್ಲದೆ ನೆಮ್ಮದಿ ನಾಸ್ತಿ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.