ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | ರಾಜದಂಡ!

Published 28 ಮೇ 2023, 22:34 IST
Last Updated 28 ಮೇ 2023, 22:34 IST
ಅಕ್ಷರ ಗಾತ್ರ

‘ಲೇ ತೆಪರ, ನಿನ್ನಿ ಹೊಸ ಸಂಸತ್ ಭವನ ಉದ್ಘಾಟನಿ ಆತಲ್ಲ, ಸ್ಪೀಕರ್ ಕುರ್ಚಿ ಪಕ್ಕ ರಾಜದಂಡ ಅಂತ ಅದೇನೋ ಇಟ್ರಲ್ಲ, ಏನಲೆ ಅದು?’ ಗುಡ್ಡೆ ಕೇಳಿದ.

‘ಅದಾ? ಸೆಂಗೋಲ್ ಅಂತ. ರಾಜದಂಡ, ನ್ಯಾಯದಂಡ ಅಂತಾನೂ ಕರೀತಾರೆ. ಅಧಿಕಾರ ಹಸ್ತಾಂತರ ಮಾಡೋವಾಗ ಕೊಡ್ತಾರಂತಪ...’ ತೆಪರೇಸಿ ವಿವರಿಸಿದ.

‘ಮತ್ತೆ ಅದನ್ಯಾಕೆ ಸ್ಪೀಕರ್ ಕುರ್ಚಿ ಪಕ್ಕ ಇಟ್ರು?’

‘ಸ್ಪೀಕರ್ ಕುರ್ಚಿ ಅಂದ್ರೆ ನ್ಯಾಯಪೀಠ ಇದ್ದಂಗೆ. ರಾಜದಂಡ ಪಕ್ಕದಾಗೇ ಇದ್ರೆ ಎಲ್ರಿಗೂ ನ್ಯಾಯ ಸಿಗ್ತತಿ, ಯಾರ್ಗೂ ಅನ್ಯಾಯ ಆಗಲ್ಲ ಅಂತ ಇಟ್ಟಿರಬೋದು...’

‘ಅದಕ್ಕೆ ಅಷ್ಟ್ ಪವರ್ ಐತಾ?’ ಕೊಟ್ರೇಶಿ ಕೊಕ್ಕೆ.

‘ಮತ್ತೆ? ಏನಂತ ತಿಳಿದಿದಿ? ಬೆಂಕಿ ಇದ್ದಂಗೆ. ದೇವರ ಕೈಯಾಗೂ ಅಂಥದು ಐತಿ ಅಂತ ಮೊನ್ನಿ ಯಾರೋ ವಾಟ್ಸಪ್‌ನಾಗೆ ಹಾಕಿದ್ರಪ...’

‘ಹೌದಾ? ಹಂಗಿದ್ರೆ ಅಂಥ ರಾಜದಂಡಗಳನ್ನ ಎಲ್ಲ ಕೋರ್ಟು, ಪೊಲೀಸ್ ಸ್ಟೇಷನ್ ಒಳಗೂ ಒಂದೊಂದು ಇಟ್ರೆ ಒಳ್ಳೇದಲ್ವ? ಎಲ್ರಿಗೂ ನ್ಯಾಯ ಕೊಡುಸ್ಬೋದು...’

‘ನಿನ್ತೆಲಿ, ಅವು ಹಂಗೆ ಎಲ್ಲ ಕಡಿ ಸಿಗಲ್ಲ, ದೇವರ ಕೈಯಾಗಿರೋದು ಅಂದ್ರೆ ಏನಂತ ತಿಳಿದಿದಿ?’ ತೆಪರೇಸಿ ರೇಗಿದ.

‘ನೀನೊಬ್ಬ, ಅಂಥ ರಾಜದಂಡ ನಮ್ ದುಬ್ಬೀರನ ಮನ್ಯಾಗೂ ಐತಿ ಗೊತ್ತಾ?’ ಕೊಟ್ರೇಶಿ ನಕ್ಕ.

‘ಹೌದಾ? ದೇವರ ಫೋಟೊದಾಗ?’

‘ಅಲ್ಲ...’

‘ಮತ್ತೆ ನಿಜವಾಗ್ಲುನಾ? ಚಿನ್ನದ್ದಾ?’

‘ಅಲ್ಲ ಮರದ್ದು, ಹಳೇ ಕಾಲದ್ದು... ದುಬ್ಬೀರ ಮದುವಿ ಆದಾಗ ಮನಿ ಅಧಿಕಾರ ಹಸ್ತಾಂತರ ಆತಲ್ಲ, ಅವಾಗಿಂದ ಅವನ ಹೆಂಡ್ತಿ ಕೈಯಾಗೈತಿ. ಅದನ್ನ ಕಂಡ್ರೆ ದುಬ್ಬೀರಂಗೆ ಈಗ್ಲೂ ಭಯ, ಭಕ್ತಿ... ಬೇಕಿದ್ರೆ ಕೇಳಿ ನೋಡು...’

‘ಹೌದಾ? ಅದೆಂಥದಲೆ ಅದು...?’ ತೆಪರೇಸಿಗೆ ಅರ್ಥವಾಗಲಿಲ್ಲ.

‘ಅರ್ಥ ಆಗ್ಲಿಲ್ವಾ? ಲಟ್ಟಣಗಿ ಕಣಲೆ... ರಾಜದಂಡ ಅಲ್ಲ, ರಾಣಿದಂಡ...’

ಕೊಟ್ರೇಶಿ ಕೀಟಲೆಗೆ ‘ಥೂ ನಿನ್ನ’ ಎಂದ ದುಬ್ಬೀರನಿಗೂ ನಗು ತಡೆಯಲಾಗಲಿಲ್ಲ.
       

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT