ಶುಕ್ರವಾರ, ಫೆಬ್ರವರಿ 3, 2023
23 °C

‘ವಾಪ್ಸಿ’ ಭರಾಟೆ

ಸುಮಂಗಲಾ Updated:

ಅಕ್ಷರ ಗಾತ್ರ : | |

Prajavani

‘ಉತ್ತರಪ್ರದೇಶದಾಗೆ ವರ ಒಬ್ಬಾಂವ ಮದುವೆವಳಗ ಕೊಟ್ಟ 11 ಲಕ್ಷ ರೂಪಾಯಿ ವರದಕ್ಷಿಣೆ, ಒಡವೆ ಎಲ್ಲಾನೂ ಮದುವೆ ಮಂಟಪಾದಾಗೇನೆ ಅತ್ತೆ, ಮಾವಂಗೆ ವಾಪಸು ಕೊಟ್ಟಾನಂತ. ಎಂಥಾ ಛಲೋ ಅಳಿಯ’ ಬೆಕ್ಕಣ್ಣ ಸುದ್ದಿ ತೋರಿಸಿತು.

‘ನಿಶ್ಚಿತಾರ್ಥ ಮಾಡೂವಾಗೇ ವರದಕ್ಷಿಣೆ ಬ್ಯಾಡ ಅಂದಿದ್ದರೆ ಬಡಪಾಯಿ ಅತ್ತೆ, ಮಾವ ಕಷ್ಟಬಿದ್ದು ರೊಕ್ಕ ಹೊಂದಿಸೂದಾದರ ತಪ್ಪತಿತ್ತು. ಪ್ರಚಾರದ ಆಸೆಗೆ ಮಂಟಪದಾಗೆ ವಾಪಸು ಮಾಡಿರಬೇಕು’ ಎಂದೆ.

‘ನೀ ಎಲ್ಲಾದ್ರಾಗೂ ಏನರ ಹುಳುಕು ಹುಡುಕತೀ. ವರನ ಅಪ್ಪ, ಅಮ್ಮ ರೇಟು ಫಿಕ್ಸ್ ಮಾಡಿ, ಮದುವಿ ವ್ಯವಹಾರ ಕುದುರಿಸಿರತಾರ. ಬಡಪಾಯಿ ವರನಿಗೆ ಮಂಟಪದಾಗೇನೆ ಗೊತ್ತಾಗತೈತಿ. ಅಂವಾ ವಾಪಸು ಕೊಟ್ಟಾನಲ್ಲ, ಅದು ಮುಖ್ಯ’ ಎಂದು ಬೆಕ್ಕಣ್ಣ ಹೊಗಳಿತು.

‘ಓ... ಹಂಗಾರೆ ಇದು ವರದಕ್ಷಿಣೆ ವಾಪ್ಸಿ! ಹಿಂಗ ಎಲ್ಲಾರೂ ಸುಖಾಸುಮ್ನೆ ತಗಳೂ ರೊಕ್ಕಾನ ವಾಪಸು ಕೊಡಬೇಕು. ಲಂಚ ತಗಂಡವರು ಸರ್ಕಾರದ ಕೆಲಸ ದೇವರ ಕೆಲಸ ಅಂತ ಮಾಡೀವಿ, ರೊಕ್ಕ ಬ್ಯಾಡ್ರಿ ಅಂತ ವಾಪಸು ಕೊಟ್ಟಿದ್ದರೆ ಎಷ್ಟ್ ಛಲೋ ಇರ್ತಿತ್ತು’ ಎಂದೆ.

‘ಲಂಚ ತಗಂಡು, ಸಿಕ್ಕಿಬಿದ್ದು ಜೈಲಿಗೆ ಹೋಗೂದಕ್ಕಿಂತ ಲಂಚ ವಾಪ್ಸಿ ಮಾಡಿ, ಪೇಪರಲ್ಲಿ ಫೋಟೊ ಬರೂದು ಛಲೋ ಅಲ್ಲೇನು. ಹಂಗೇ ಈ ರಾಜಕಾರಣಿಗಳು ಪರಸ್ಪರ ಬೇಕಾಬಿಟ್ಟಿ ಬೈಯ್ಕೋತಾರಲ್ಲ, ತಾವು ಬೈದಿದ್ದು ವಾಪಸು ತಂಗಡು, ಎದುರಿನವರು ಬೈದಿದ್ದು ಅವರಿಗೇ ಕೊಟ್ಟು, ಬೈಗುಳ ವಾಪ್ಸಿ ಚಳವಳಿ ಮಾಡಬೇಕು’ ಎಂದಿತು.

‘ಚುನಾವಣೆ ಮುಗಿದ ಮ್ಯಾಗೆ ಆಪರೇಷನ್ ಕಮಲ ಮಾಡಿ, ಶಾಸಕರನ್ನು ಖರೀದಿಸಿದ ನಂತರ, ನಿಮ್ಮ ಮತ ವಾಪಸು ತಗೋರಿ ಅಂತ ಕಮಲಕ್ಕನ ಮನಿಯವ್ರು ಮಂದಿಗೆ ಮತ ವಾಪ್ಸಿ ಮಾಡಬೌದು’ ವಾಪ್ಸಿ ಚಳವಳಿಯ ಇನ್ನೊಂದು ಸಾಧ್ಯತೆ ಹೇಳಿದೆ.

‘ಮಂದಿಗೆ ಮತ ವಾಪ್ಸಿ ಮಾಡಿ, ತಮ್ಮನ್ನು ಪ್ರಶ್ನೆ ಮಾಡೂ ಹಕ್ಕನ್ನೂ ವಾಪಸು ಕಸಿದುಕೊಳ್ಳೊ ಶಾಣೇರು ಅವರು’ ಎಂದು ಬೆಕ್ಕಣ್ಣ ಕಿಸಕ್ಕನೆ ನಕ್ಕಿತು!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.