ದೇಶದಲ್ಲಿ ಬಡತನಕ್ಕೆ ಸಂಬಂಧಿಸಿದ ಅಂಕಿ-ಅಂಶಗಳಲ್ಲಿನ ವೈರುಧ್ಯಗಳು ವಾಸ್ತವವನ್ನು ಬಿಚ್ಚಿಡುತ್ತಿರುವಾಗ ಮತ್ತು ದೈನಂದಿನ ಜೀವನದಲ್ಲಿ ಪ್ರತಿದಿನ ಆರ್ಥಿಕ ಸಂಕಟದ ಸುದ್ದಿಗಳನ್ನು ಎಲ್ಲೆಡೆ ಕಾಣುತ್ತಿರುವಾಗ ಏಕಾಏಕಿ ‘ಬಡತನ ನಿವಾರಣೆ ಆಗಿಬಿಟ್ಟಿದೆ’ ಎಂಬ ಪ್ರಕಟಣೆ ಸರ್ಕಾರದ ಕಡೆಯಿಂದಲೇ ಹೊರಟುಬಿಟ್ಟರೆ, ಆ ಪವಾಡ ಸಂಭವಿಸಿದ್ದಾದರೂ ಎಲ್ಲಿ ಎಂಬ ಪ್ರಶ್ನೆ ಮೂಡದಿರುತ್ತದೆಯೆ?

ಉದಾರೀಕರಣಕ್ಕೆ ಭಾರತದಲ್ಲಿ ಭದ್ರ ತಳಪಾಯ ಹಾಕಿಕೊಟ್ಟದ್ದು ಡಾ. ಮನಮೋಹನ್ ಸಿಂಗ್. ಈ ತಳಪಾಯದ ಮೇಲೆ, ಕಾರ್ಪೊರೇಟ್ ಜಗತ್ತಿನ ಮೂಗಿನ ನೇರಕ್ಕೆ ‘ಟ್ರಿಲಿಯನ್ಗಟ್ಟಲೆ’ ಮಹತ್ವಾಕಾಂಕ್ಷೆಯ ಬೃಹತ್ ಕಟ್ಟಡವನ್ನು ಕಟ್ಟುತ್ತಿರುವುದು ಈಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ. 11 ವರ್ಷಗಳಲ್ಲಿ ಈ ಸರ್ಕಾರ ಆರ್ಥಿಕ ರಂಗದಲ್ಲಿ ತೋರಿಸಿದ ಸಾಧನೆ ಏನೆಂದು ಕೇಳಿದರೆ, ಎತ್ತಿ ತೋರಿಸಬಹುದಾದದ್ದು ಮೂರು ಸಂಗತಿಗಳು. ಒಂದು ಜನಧನ್-ಆಧಾರ್-ಮೊಬೈಲ್ ತ್ರಿವಳಿಗಳ ಮೂಲಕ (JAM- Trinity) ಫಲಾನುಭವಿಗಳಿಗೆ ಸರ್ಕಾರಿ ಸಬ್ಸಿಡಿಗಳ ನೇರ ವರ್ಗಾವಣೆ (DBT)ಗೆ ಈ ಹಿಂದೆ ತೆರೆಯಲಾಗಿದ್ದ ಹಾದಿಯನ್ನು ಸುಗಮಗೊಳಿಸಿದ್ದು. ಎರಡನೆಯದು, ಡಿಜಿಟಲ್ ಮೂಲಸೌಕರ್ಯ ವ್ಯವಸ್ಥೆಯನ್ನು ರೂಪಿಸುವುದಕ್ಕೆ ನಾಂದಿ ಹಾಡಿದ್ದು. ಮೂರನೆಯದು, ಡಿಜಿಟಲ್ ಹಣಪಾವತಿಗಳನ್ನು ಜನಪ್ರಿಯಗೊಳಿಸಿದ್ದು.

ದೇಶದ ಜನಸಾಮಾನ್ಯರ ಆರ್ಥಿಕತೆ ಮೂಲಭೂತವಾಗಿ ಅಡುಗೆಮನೆಯ ಸಾಸಿವೆ ಡಬ್ಬಿಯನ್ನು ಆಧರಿಸಿದಂತಹದು. ಅಂದರೆ ಉಳಿತಾಯ ಕೇಂದ್ರಿತವಾದದ್ದು. ಹಾಗಾಗಿ, ಮ್ಯಾಕ್ರೋಮಟ್ಟದ ಆರ್ಥಿಕ ಶಾಕ್ಗಳನ್ನೆಲ್ಲ ಹೇಗೋ ನುಂಗಿಕೊಂಡು, ಏದುಸಿರಿನೊಂದಿಗೆ ದಿನದೂಡುತ್ತಿದ್ದ ಜನಸಾಮಾನ್ಯರಿಗೆ, 2016ರ ನೋಟು ರದ್ಧತಿ ನೀಡಿದ ಆಘಾತ ಊಹಿಸಲಾಗದ್ದು. ಅದರ ನೇರ ಹೊಡೆತ ಬಿದ್ದದ್ದು ಅಡುಗೆ ಮನೆಯ ಸಾಸಿವೆ ಡಬ್ಬಿ ಉಳಿತಾಯಗಳ ಮೇಲೆ. ಅಲ್ಲಿಂದೀಚೆಗೆ ದೇಶದ ಆರ್ಥಿಕತೆಯ ವೇಗ ತಗ್ಗುತ್ತಲೇ ಹೋದದ್ದು ಈಗ ಚರಿತ್ರೆಯ ಭಾಗ.

ಹೀಗೆ ಅನಾರೋಗ್ಯಕ್ಕೊಳಗಾದ ಆರ್ಥಿಕತೆಯ ವೇಗ ಇನ್ನೇನು ಸುಧಾರಿಸಿಕೊಳ್ಳಬಹುದು ಎಂಬ ಸ್ಥಿತಿ ತಲುಪಿದಾಗ, 2020ರಲ್ಲಿ ಕೋವಿಡ್ ಜಗನ್ಮಾರಿ ಬಂದು ಅಪ್ಪಳಿಸಿತು. ಈ ಹೊಡೆತಕ್ಕೆ ದೇಶದ ಆರ್ಥಿಕತೆಯ ಒಟ್ಟು ಗಾತ್ರವೇ ಕುಸಿಯಿತು. ಅದರಿಂದ ದೇಶದ ಆರ್ಥಿಕ ಬೆಳವಣಿಗೆಗೆ ಆಗಿರುವ ಹಾನಿ ಅಭೂತಪೂರ್ವ. ನಾವೀಗ ಅಲ್ಲಿಂದ ಚೇತರಿಕೆಯ ಹಾದಿಯಲ್ಲಿದ್ದೇವೆ. 2024-25ರ ಹೊತ್ತಿಗೆ ಆರ್ಥಿಕ ಚೇತರಿಕೆಯು ಇನ್ನೇನು, ಕೋವಿಡ್ ಪೂರ್ವ ಸ್ಥಿತಿಯನ್ನು ದಾಟುತ್ತಿದೆ.

ಈಗ ನರೇಂದ್ರ ಮೋದಿ ಅವರ ಸರ್ಕಾರ 11 ವರ್ಷ ಪೂರೈಸಿರುವ ಸಂದರ್ಭದಲ್ಲಿ ದೇಶವು ಬಡತನದ ವಿರುದ್ಧ ಹೋರಾಟದಲ್ಲಿ ಗೆದ್ದಿದೆ, ಸರ್ಕಾರದ ಸರ್ವಾಂಗೀಣ ಸಾಧನೆಗಳ ಕಾರಣದಿಂದಾಗಿ ಭಾರತ ಇಂದು ಜಗತ್ತಿನ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿ ಬಲಿತು ನಿಂತಿದೆ ಎಂಬ ಪ್ರಚಾರ ಸರ್ಕಾರದ ಕಡೆಯಿಂದ ನಡೆಯುತ್ತಿದೆ. ಈ ಪ್ರಚಾರದ ಭರದಲ್ಲಿ ಹಲವು ವಿರೋಧಾಭಾಸಗಳು ಕೂಡ ಮುನ್ನೆಲೆಗೆ ಬರುತ್ತಿವೆ. ಸತತ ಎಂಟು ವರ್ಷಗಳಿಂದ ಒಂದಿಲ್ಲೊಂದು ಆರ್ಥಿಕ ಸಂಕಟವನ್ನು ಎದುರಿಸುತ್ತಾ ಬರುತ್ತಿರುವ ದೇಶ ಈಗ ಏಕಾಏಕಿ ‘ಪವಾಡ’ ಸಾಧಿಸಿದೆ ಎಂದರೆ, ಅದನ್ನು ಸ್ವಸ್ಥ ಮನಸ್ಸೊಂದು ಜೀರ್ಣಿಸಿಕೊಳ್ಳುವುದು ಕಷ್ಟ. ‘ಸಾರ್ವಜನಿಕ ನೆನಪು ಕಿರಿದು’ ಎಂಬ ತತ್ವವನ್ನು ಆತುಕೊಂಡು ಸರ್ಕಾರ ತನ್ನ ಸಾಧನೆಯ ಪ್ರಚಾರದಲ್ಲಿ ನಿರತವಾಗಿರುವಂತೆ ಕಾಣಿಸುತ್ತಿದೆ.

ಬಡತನ ನಿವಾರಣೆಯ ಸಂಗತಿಯನ್ನೇ ತೆಗೆದುಕೊಳ್ಳಿ. ವಿಶ್ವಬ್ಯಾಂಕಿನ ವರದಿಯೊಂದನ್ನು ಉಲ್ಲೇಖಿಸಿರುವ ಸರ್ಕಾರವು ಪ್ರತಿದಿನ 2.15 ಡಾಲರ್ (ಅಂದಾಜು ₹184 ) ಆದಾಯದಲ್ಲಿ ಬದುಕುತ್ತಿರುವ ಕಡುಬಡವರ ಸಂಖ್ಯೆ 2011-12ರಲ್ಲಿ ಶೇ 16.2 ಇದ್ದುದು, ಈಗ 2022-23ರಲ್ಲಿ ಶೇ 2.3 ಇಳಿದಿದೆ ಎಂದು ಹೇಳಿಕೊಂಡಿದೆ. ಅಂದರೆ, ಅಂದಾಜು 17.10 ಕೋಟಿ ಭಾರತೀಯರು ಕಡುಬಡತನದಿಂದ ಮೇಲೆದ್ದಿದ್ದಾರೆ. ಇದಲ್ಲದೇ ಪ್ರತಿದಿನ 3.65 ಡಾಲರ್ (ಅಂದಾಜು ₹312) ಆದಾಯದಲ್ಲಿ ಬದುಕುತ್ತಿರುವ ಬಡವರ ಸಂಖ್ಯೆ 2011-12ರಲ್ಲಿ ಶೇ 61.8 ಇದ್ದುದು, ಈಗ 2022-23ರಲ್ಲಿ ಶೇ 28.1ಕ್ಕೆ ಇಳಿದಿದೆ. ಅಂದರೆ, ಅಂದಾಜು 37.10 ಕೋಟಿ ಭಾರತೀಯರು ಬಡತನದಿಂದ ಮೇಲೆದ್ದಿದ್ದಾರೆ ಎಂಬುದು ಸರ್ಕಾರದ ಕ್ಲೇಮು. ಇದಲ್ಲದೇ ಭಾರತದ್ದೇ ಬಹು ಆಯಾಮಗಳ ಬಡತನ ಇಂಡೆಕ್ಸ್ (ಎಂಪಿಐ) ಅಳವಡಿಸಿ ನೋಡಿದರೂ, 2005–06ರಲ್ಲಿ ಶೇ 53.8 ಇದ್ದ ದೇಶದ ಬಡವರ ಸಂಖ್ಯೆ, 2019-21ರಲ್ಲಿ
ಶೇ 16.4ಕ್ಕೆ ಇಳಿದಿದೆ ಎಂದು ಸರ್ಕಾರ ಹೇಳುತ್ತಿದೆ. ಅಂದರೆ, ಅಂದಾಜು 145 ಕೋಟಿ ಜನಸಂಖ್ಯೆಯ ದೇಶದಲ್ಲೀಗ ಇರುವ ಕಡುಬಡವರ ಸಂಖ್ಯೆ ಕೇವಲ ಮೂರೂವರೆ ಕೋಟಿ. ಒಟ್ಟು ಬಡವರ ಸಂಖ್ಯೆ 40 ಕೋಟಿ ಮೀರುವುದಿಲ್ಲ.

ಆದರೆ ಇದೇ ಸರ್ಕಾರ, ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅಂತ್ಯೋದಯ ಅನ್ನ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು 81 ಕೋಟಿಗೂ ಮಿಕ್ಕಿ ಕಡುಬಡವರಿಗೆ ಉಚಿತ ಪಡಿತರ ಒದಗಿಸುವ ಮೂಲಕ ಸಬ್ಸಿಡಿ ನೀಡುತ್ತಿದೆ. ಈ ವಿರೋಧಾಭಾಸವನ್ನು ಸರ್ಕಾರ ಹೇಗೆ ವಿವರಿಸುತ್ತದೆ ಎಂಬ ಬಗ್ಗೆ ಕುತೂಹಲ ಇದೆ.

ಉದಾರೀಕರಣದ ಫಲವಾದ ಆರ್ಥಿಕ ಚೇತರಿಕೆಯ ಕಾರಣಕ್ಕೆ ಭಾರತದಲ್ಲಿ 2006-2016ರ ನಡುವೆ 27 ಕೋಟಿ ಜನ ಬಡತನ ರೇಖೆಯಿಂದ ಮೇಲೆದ್ದು, ಮಧ್ಯಮ-ಕೆಳಮಧ್ಯಮ ವರ್ಗಕ್ಕೆ ತಲುಪಿದ್ದರು. ಆದರೆ, ಕೋವಿಡ್ ಲಾಕ್ಡೌನ್ ಪರಿಣಾಮವಾಗಿ, ಅಂದಾಜು 26 ಕೋಟಿ ಮಂದಿ ವಾಪಸ್ ಬಡತನ ರೇಖೆಯ ಕೆಳಗೆ ದೂಡಿಸಿಕೊಂಡರು ಎಂದು ಯುನ್ಡಿಪಿ (ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ) ಕೋವಿಡ್ ಕಾಲದಲ್ಲಿ ಅಂದಾಜು ಮಾಡಿತ್ತು. ಕೋವಿಡೋತ್ತರ ಅವಧಿಯಲ್ಲಿ ಸಣ್ಣಗಾತ್ರದ ಸಾಲಗಳು ಮತ್ತು ಚಿನ್ನ ಅಡಮಾನ ಸಾಲಗಳು ಆರ್ಬಿಐ ಆತಂಕಕ್ಕೆ ಕಾರಣ ಆಗುವಷ್ಟು ಪ್ರಮಾಣದಲ್ಲಿ ಸುಸ್ತಿ ಆಗಿರುವುದು ವಾಸ್ತವ. ಈ ರೀತಿಯ ಸಣ್ಣಗಾತ್ರದ ಸಾಲಗಳು ಸುಸ್ತಿಯಾಗುವುದಕ್ಕೆ ಅಡುಗೆ ಮನೆಯ ಸಾಸಿವೆ ಡಬ್ಬಿ (ಆಪತ್ಕಾಲಕ್ಕೆ ಉಳಿತಾಯ) ಖಾಲಿ ಆಗಿರುವುದು ಕೂಡ ಒಂದು ಮುಖ್ಯವಾದ ಕಾರಣ.

ದಶವಾರ್ಷಿಕ ಕಾನೇಶುಮಾರಿ ಬಿಡಿ, ದೇಶದ ಜನರ ಖರೀದಿ-ಖರ್ಚಿನ ಸಾಮರ್ಥ್ಯಗಳನ್ನು ಅಂದಾಜಿಸುವ ಕುಟುಂಬ ಬಳಕೆ ವೆಚ್ಚ ಸಮೀಕ್ಷೆಯನ್ನೇ (Household Consumption Expenditure Survey) ಸರ್ಕಾರ 2011-12ರ ಬಳಿಕ 11 ವರ್ಷ ನಡೆಸಲಿಲ್ಲ. 2017-18ರ ಸರ್ವೆಯನ್ನು ಸರ್ಕಾರ ಅದು ತನ್ನ ನಿರೀಕ್ಷೆಯಂತಿಲ್ಲ ಎಂಬ ಕಾರಣಕ್ಕೆ ತಿರಸ್ಕರಿಸಿತ್ತು. 2023-24ರ ಸಮೀಕ್ಷೆ ಫಲಿತಾಂಶಗಳು 2024ರ ಡಿಸೆಂಬರ್ನಲ್ಲಿ ಬಿಡುಗಡೆಗೊಂಡವು. ನಮ್ಮ ಬಡತನ ಅಂದಾಜಿಸಲು ಇರುವ ಬಹು ಆಯಾಮಗಳ ಇಂಡೆಕ್ಸ್ ಬಗ್ಗೆ, ಜಿಡಿಪಿ ಲೆಕ್ಕಾಚಾರ ವಿಧಾನದ ಬಗ್ಗೆ ವಿವಾದಗಳಿವೆ. ಡೇಟಾಯುಗದಲ್ಲೂ ಅಂಕಿಅಂಶಗಳಿಗೆ ಬರ ಇದೆ. ಆದರೂ ಏಕಾಏಕಿ ಬಡತನ ನಿವಾರಣೆಯನ್ನು ಮಾತ್ರ ಬಹಳ ನಿಖರವಾಗಿ ಅಂದಾಜಿಸಿ ಬಹಿರಂಗಪಡಿಸಲಾಗಿದೆ. ಇವಕ್ಕೆಲ್ಲ ತಾಳಿ-ತಂತಿ ಇದ್ದಂತಿಲ್ಲ.

ಉದಾರೀಕರಣದ ಅತಿದೊಡ್ಡ ಅಡ್ಡ ಪರಿಣಾಮ ಆರ್ಥಿಕ ಅಸಮಾನತೆ. 2022-23ರ ಲೆಕ್ಕಾಚಾರದಂತೆ, ದೇಶದ ಅತ್ಯಂತ ಶ್ರೀಮಂತ ಶೇ 10 ಮಂದಿ ದೇಶದ ಒಟ್ಟು ಸಂಪತ್ತಿನ ಶೇ 65 ಪಾಲನ್ನೂ, ಆದಾಯದ ಶೇ 57.7 ಪಾಲನ್ನೂ ಹೊಂದಿದ್ದರೆ, ಮಧ್ಯಮ ವರ್ಗದ ಶೇ 40ರಷ್ಟು ಜನ ದೇಶದ ಸಂಪತ್ತಿನ ಶೇ 28.6 ಪಾಲನ್ನೂ, ಆದಾಯದ ಶೇ 27.3 ಪಾಲನ್ನೂ ಹೊಂದಿದ್ದಾರೆ. ತಳ ಮಟ್ಟದ ಶೇ 50 ಮಂದಿ ದೇಶದ ಒಟ್ಟು ಸಂಪತ್ತಿನ ಶೇ 6.4 ಪಾಲನ್ನೂ ಆದಾಯದ ಶೇ 15 ಪಾಲನ್ನೂ ಹೊಂದಿದ್ದಾರೆ (ಆಧಾರ: World inequality lab working paper, March 2024). ಫೋಬ್ಸ್ ಶ್ರೀಮಂತರ ಪಟ್ಟಿಯ ಪ್ರಕಾರ, 2014-2022ರ ನಡುವೆ ದೇಶದ ಶತಕೋಟ್ಯಧಿಪತಿಗಳ ಆದಾಯವು ಒಟ್ಟು ಶೇ 280 ಹೆಚ್ಚಾಗಿದ್ದು, ಅದೇ ಅವಧಿಯ ರಾಷ್ಟ್ರೀಯ ಆದಾಯದಲ್ಲಿನ ಹೆಚ್ಚಳದ ದರಕ್ಕಿಂತ (ಶೇ 27.8) ಇದು 10 ಪಟ್ಟು ಹೆಚ್ಚಿನ ಬೆಳವಣಿಗೆ. ಈ ಅಸಮಾನತೆಗೂ ಬಡತನಕ್ಕೂ ನಡುವೆ ಸಂಬಂಧ ಇದೆ. ಶ್ರೀಮಂತರು ಮತ್ತಷ್ಟು ಶ್ರೀಮಂತರಾದಂತೆಲ್ಲ ಬಡವರು ಮತ್ತಷ್ಟು ಬಡವರಾಗುತ್ತಾ ಸಾಗಿದ್ದಾರೆ. ಸಾಲ, ಆದಾಯ, ಉಳಿತಾಯಗಳೆಲ್ಲದರ ಅಂಕಿಅಂಶಗಳು ಇದನ್ನೇ ಬೊಟ್ಟು ಮಾಡುತ್ತಿವೆ.

ಅಂಕಿ-ಅಂಶಗಳಲ್ಲಿನ ವೈರುಧ್ಯಗಳು ವಾಸ್ತವವನ್ನು ಹೀಗೆ ಬಿಚ್ಚಿಡುತ್ತಿರುವಾಗ ಮತ್ತು ದೈನಂದಿನ ಜೀವನದಲ್ಲಿ ಪ್ರತಿದಿನ ಆರ್ಥಿಕ ಸಂಕಟದ ಸುದ್ದಿಗಳನ್ನು ಎಲ್ಲೆಡೆ ಕಾಣುತ್ತಿರುವಾಗ ಏಕಾಏಕಿ ‘ಬಡತನ ನಿವಾರಣೆ ಆಗಿಬಿಟ್ಟಿದೆ’ ಎಂಬ ಪ್ರಕಟಣೆ ಸರ್ಕಾರದ ಕಡೆಯಿಂದಲೇ ಹೊರಟುಬಿಟ್ಟರೆ, ಆ ಪವಾಡ ಸಂಭವಿಸಿದ್ದಾದರೂ ಎಲ್ಲಿ ಎಂಬ ಪ್ರಶ್ನೆ ಮೂಡದಿರುತ್ತದೆಯೆ? ದೇಶದಲ್ಲಿ ಬಡತನ ನಿವಾರಣೆ ಆಗುವುದು ಪ್ರತೀ ಕುಟುಂಬದ ಅಡುಗೆಮನೆಯ ಸಾಸಿವೆ ಡಬ್ಬಿಯಲ್ಲಿ ಉಳಿತಾಯ ಚಿಗುರಿಕೊಂಡಾಗ ಮಾತ್ರ. ಅಲ್ಲಿಯ ತನಕ ಎಲ್ಲ ಕ್ಲೇಮುಗಳೂ ಹೊಣೆಗಾರಿಕೆಯ ಹಂಗಿಲ್ಲದ ರಾಜಕೀಯ ಘೋಷಣೆಗಳಾಗಿಯೇ ಉಳಿಯುತ್ತವೆ.

ಲೇಖಕ: ಸಾಮಾಜಿಕ ವಿಶ್ಲೇಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.