ಶನಿವಾರ, ಜುಲೈ 2, 2022
20 °C
ಮಹಾಪುರುಷರ ಜಯಂತಿ

ಇನ್ನೊಂದು ಜಯಂತಿ, ಮತ್ತೊಂದು ವಿವಾದ

ಎಂ.ಅಬ್ದುಲ್ ರೆಹಮಾನ್ ಪಾಷ Updated:

ಅಕ್ಷರ ಗಾತ್ರ : | |

‘ಇರಲಾರದೇ ಇರುವೆ ಬಿಟ್ಕೊಂಡ್ರು’ ಎಂಬ ಗಾದೆಯಿದೆ. ಟಿಪ್ಪು ಜಯಂತಿ ಅಚರಣೆಯ ವಿಚಾರಕ್ಕೇ ಎರಡು–ಮೂರು ವರ್ಷಗಳಿಂದ ಇಡೀ ನಾಡು ವಾದ–ವಿವಾದದಲ್ಲಿ ತೊಡಗಿದೆ. ಕೆಲವು ಜೀವ, ಆಸ್ತಿ–ಪಾಸ್ತಿಗೆ ಹಾನಿಯಾಗಿದೆ. ಟಿಪ್ಪುವಿನ ಹೆಸರನ್ನು ಹಜ್ ಭವನಕ್ಕೆ ಇಡಬೇಕೇ ಬೇಡವೇ ಎಂಬ ಹೇಳಿಕೆಯಿಂದ ರಾಜ್ಯದಲ್ಲಿ ಮತ್ತೆ ಟಿಪ್ಪು ಪ್ರತಿಧ್ವನಿ ಉಂಟಾಗಿದೆ. ಸಮ್ಮಿಶ್ರ ಸರ್ಕಾರವು ತುರ್ತಾಗಿ ಮಾಡಬೇಕಾದ ಕೆಲಸಗಳನ್ನು ತೂಗಿಸಲೂ ಶಕ್ತಿ ಸಾಲದೆ ಟಾನಿಕ್ ಕುಡಿಯುತ್ತಿರುವಾಗ, ನಮಗೆ ಇನ್ನೊಂದು ಕ್ಷುಲ್ಲಕ ಸಮಸ್ಯೆ ಬೇಕಿತ್ತೇ? ಕುಮಾರಸ್ವಾಮಿ ಅವರು ‘ನಿಮ್ಮದೂ ಒಂದಿರಲಿ’ ಎಂದು ‘ಶಂಕರಾಚಾರ್ಯ ಜಯಂತಿ’ಯನ್ನು ಸರ್ಕಾರದ ವತಿಯಿಂದ ಮಾಡುವುದಾಗಿ ಘೋಷಿಸಿದ್ದಾರೆ.

‘ಸೋಶಿಯಲ್ ಆಡಿಟ್’ ಎಂಬ ಒಂದು ಪರಿಕಲ್ಪನೆಯಿದೆ. ಇದರಲ್ಲಿ ಯಾವುದೇ ಸಾರ್ವಜನಿಕ ಯೋಜನೆಗೆ ಎಷ್ಟು ಹಣ ಖರ್ಚಾಯಿತು; ಮತ್ತು ಅದರಿಂದ ಸಾರ್ವಜನಿಕ ಲಾಭ ಎಷ್ಟಾಯಿತು ಎಂಬುದರ ಲೆಕ್ಕಪರಿಶೋಧನೆ ಇರುತ್ತದೆ. ಇಂಥ ಯೋಜನೆಗಳಿಗೆ ಸಾರ್ವಜನಿಕರ ಹಣ ಖರ್ಚಾಗುವುದರಿಂದ ಕೆಲವು ಪ್ರಶ್ನೆಗಳನ್ನು ಗಂಭೀರವಾಗಿ ಕೇಳಿಕೊಳ್ಳಬೇಕಾಗುತ್ತದೆ. ಇಲ್ಲವಾದರೆ ‘ಅತ್ತೆ ಆಸ್ತಿಯನ್ನು ಅಳಿಯ ದಾನ ಮಾಡಿದ’ ಎನ್ನುವ ಕತೆಯಾಗುತ್ತದೆ. ಒಂದು ಯೋಜನೆಯ ನಿರ್ದಿಷ್ಟ ಗುರಿಯೇನು? ಅದನ್ನು ಸಾಧಿಸಲು ಅಳವಡಿಸಿಕೊಂಡ ಕಾರ್ಯವಿಧಾನವೇನು? ಅದರಲ್ಲಿ ಎಷ್ಟು ಸಾರ್ವಜನಿಕರು ಒಳಗೊಳ್ಳುತ್ತಾರೆ, ಎಷ್ಟು ಜನರಿಗೆ ಪ್ರಯೋಜನವಾಗುತ್ತದೆ? ಎಷ್ಟು ಹಣ ಖರ್ಚಾಗುತ್ತದೆ? ಗುರಿ ಸಾಧನೆ ಆಯಿತೇ? ಆಗಿರದಿದ್ದರೆ ದೋಷ ಎಲ್ಲಿತ್ತು? ಇತ್ಯಾದಿಗಳ ತಪಾಸಣೆಯೇ ಸಾಮಾಜಿಕ ಆಡಿಟ್. ಸಾರ್ವಜನಿಕರ ಒಂದೊಂದು ರೂಪಾಯಿಯನ್ನು ಖರ್ಚು ಮಾಡುವಾಗಲೂ ಈ ಪ್ರಶ್ನೆಗಳನ್ನು ಕೇಳಿಕೊಳ್ಳುವುದು ಸರ್ಕಾರ ನಡೆಸುವವರ ನೈತಿಕ ಕರ್ತವ್ಯ.

ಕಳೆದ ಐದು ವರ್ಷಗಳಲ್ಲಿ ಜಾರಿಗೆ ಬಂದಿರುವ ಜಯಂತಿಗಳನ್ನು ಈ ಚೌಕಟ್ಟಿನಲ್ಲಿ ನೋಡಿದಾಗ ಏನು ತಿಳಿಯುತ್ತದೆ? ಇದನ್ನು ಘೋಷಿಸುವವರು, ಅದ್ಧೂರಿಯಾಗಿ ಆಚರಿಸುವವರು ಇದನ್ನು ಹೇಗೆ ಪ್ರತಿಪಾದಿಸಿಕೊಳ್ಳುತ್ತಾರೋ ಗೊತ್ತಿಲ್ಲ! ಆದರೆ, ಈ ಮಾದರಿಯ ಆಚರಣೆಗಳಿಂದ ಆಯಾ ವ್ಯಕ್ತಿಯ ಜೀವನ– ಸಾಧನೆಗಳು ಇಂದಿನ ಬದುಕಿಗೆ ಹೇಗೆ ಸಂಗತ, ಅವರ ಬೋಧನೆಗಳಲ್ಲಿದ್ದ ನಿತ್ಯಕಾಲಿಕವಾದ ಮೌಲ್ಯಗಳೇನು? ಅವು, ನಾವು ಸಾಂವಿಧಾನಿಕವಾಗಿ ಒಪ್ಪಿಕೊಂಡಿರುವ ಸಾರ್ವಭೌಮ, ಜಾತ್ಯತೀತ, ಸಮಾಜವಾದಿ, ಪ್ರಜಾಸತ್ತಾತ್ಮಕ ಗಣರಾಜ್ಯದ ನೇಯ್ಗೆಯಲ್ಲಿ ಹೇಗೆ ಮೇಳೈಸುತ್ತವೆ ಎಂಬುದರ ಕುರಿತು ಮಕ್ಕಳು ಮತ್ತು ಯುವಜನರಲ್ಲಿ, ಬೆಳೆದು ಬಲಿತ ದೊಡ್ದವರಲ್ಲಿ ಅರಿವು ಮೂಡುತ್ತದೆ ಎಂದು ಯಾರಾದರೂ ಭಾವಿಸಿದ್ದರೆ, ದಯವಿಟ್ಟು ಕ್ಷಮಿಸಿ. ನಾವೂ ಇಂಥ ಅಚರಣೆಗಳಲ್ಲಿ ಭಾಗವಹಿಸಿದ್ದೇವೆ. ಇವು ಕೆಲವರ ಹಿತವನ್ನು ಕಾಪಾಡಿ, ಕೀರ್ತಿಯನ್ನು ಹೆಚ್ಚಿಸುತ್ತವೆ, ಹಲವರ ಜೇಬುಗಳು ತುಂಬುತ್ತವೆ. ಇಲ್ಲವೆನ್ನುತ್ತೀರಾ?

ಸಾರ್ವಜನಿಕ ಹಣದಿಂದ ಆಚರಿಸಲಾಗುತ್ತಿರುವ ಜಯಂತಿಗಳಲ್ಲಿ ಆಚರಣೆಯ ವಸ್ತುವಾಗಿರುವ ವ್ಯಕ್ತಿಯ ಧರ್ಮ, ಜಾತಿ, ಉಪಜಾತಿ, ಪಂಗಡ ಇತ್ಯಾದಿಗಳ ಆಧಾರದ ಮೇಲೆಯೇ ಅತಿಥಿಗಳನ್ನು ಕರೆಯಬೇಕು, ಇಲ್ಲವಾದರೆ ಕರೆಯುವವರ ತಿಥಿಯೇ ಸರಿ. ಸಭಿಕರು ಕೂಡ ಅದೇ ವರ್ಗಕ್ಕೆ ಸೇರಿದವರು. ಅಂಥಲ್ಲಿ, ಜಯಂತಿಗೆ ವಸ್ತುವಾಗಿರುವ ವ್ಯಕ್ತಿಯ ಬದುಕಿನ ಕುರಿತು ಕಲಿಕೆ, ವಿಮರ್ಶೆ ಆಗಲು ಸಾಧ್ಯವೇ? ಇದ್ದದ್ದು, ಇಲ್ಲದ್ದು ಸೇರಿಸಿ ಅವರು ಒಬ್ಬ ಪವಾಡ ಪುರುಷರೆಂದು ಬಿಂಬಿಸಿ, ಅವರ ಫೋಟೊ ಅಥವಾ ಮೂರ್ತಿಗೆ ಪೂಜೆ ಸಲ್ಲಿಸಿ ಅವರನ್ನು ದೇವರ ಪಟ್ಟಕ್ಕೇರಿಸಿ ಜೀವನ ಸಾರ್ಥಕ ಮಾಡಿಸಿಕೊಳ್ಳಲಾಗುತ್ತದೆ. ಈ ವೈಭವ ಕಣ್ಣು ಕುಕ್ಕುವುದರಿಂದಲೇ ವಿವಿಧ ಧರ್ಮ–ಮತಗಳಲ್ಲಿಯೇ ನಮ್ಮದು ಬೇರೆಯಲ್ಲವೇ ಎಂದು ರಾಜಕೀಯ ಗುಂಪುಗಳು ತಮ್ಮ ಸಮುದಾಯದ ಯಾರಾದರೊಬ್ಬ ಮಹಾವ್ಯಕ್ತಿಯನ್ನು ಇತಿಹಾಸ ಅಥವಾ ಪುರಾಣ ಅಥವಾ ಪುಣ್ಯಕಥೆಯಾದರೂ ಆದೀತು, ಸಂಶೋಧಿಸಿ ಬಯಲಿಗೆ ತಂದು, ಇವರ ಹೆಸರಿನಲ್ಲಿಯೂ ಒಂದು ಜಯಂತಿ ಆಗೇ ಬಿಡಲಿ ಎಂಬ ಬೇಡಿಕೆಯನ್ನಿಟ್ಟರೆ, ಸರ್ಕಾರ ಇಲ್ಲವೆನ್ನಲಾಗುತ್ತದೆಯೇ? ಈಗಾಗಲೇ ಹಗ್ಗ ಕೊಟ್ಟು ಕೈಕಟ್ಟಿಸಿಕೊಂಡವರು ಕಟ್ಟುವ ಇನ್ನೊಂದು ಹಗ್ಗದಿಂದ ತಪ್ಪಿಸಿಕೊಳ್ಳಲು ಹೇಗೆ ಸಾಧ್ಯ?

ಜಯಂತಿಗಳನ್ನು ಆಚರಿಸಬಾರದು ಎಂದಿಲ್ಲ. ಗಾಂಧಿ ಜಯಂತಿಯನ್ನು ಅಂತರರಾಷ್ಟ್ರೀಯ ಅಹಿಂಸಾ ದಿನವನ್ನಾಗಿ, ನೆಹರೂ ಜಯಂತಿಯನ್ನು ಮಕ್ಕಳ ದಿನವಾಗಿ, ಡಾ. ರಾಧಾಕೃಷ್ಣನ್ ಜಯಂತಿಯನ್ನು ಶಿಕ್ಷಕರ ದಿನವಾಗಿ ಆಚರಣೆ ಮಾಡುತ್ತೇವೆ. ಹೀಗೆ, ಒಬ್ಬರ ಹೆಸರಿನಲ್ಲಿ ಮಾಡಿದರೂ ಅದನ್ನು ಒಂದು ಸಾಮಾಜಿಕ ಸಮಸ್ಯೆಯ ಕಡೆಗೆ ಗಮನ ಹರಿಸುವ ವಾರ್ಷಿಕ ಪರಿಶ್ರಮವಾಗಿ ಆಚರಿಸುತ್ತೇವೆ. ಅದು ಬಿಟ್ಟು ಒಂದು ನಿರ್ದಿಷ್ಟ ಜಾತಿ, ಮತ, ಧರ್ಮದೊಂದಿಗೆ ಬಿಡಿಸಲಾರದ ನಂಟನ್ನು ಹೊಂದಿರುವ ಸತ್ಪುರುಷ–ಮಹಿಳೆಯರ ಜನ್ಮ ಜಯಂತಿಗಳನ್ನು ಆಚರಿಸುವುದರಲ್ಲಿ ಏನಿದೆ ಪ್ರಯೋಜನ? ಸರಿ, ಆಯಾ ವ್ಯಕ್ತಿ ಇಡೀ ಮಾನವ ಜನಾಂಗಕ್ಕೆ ಹಿತವನ್ನು ತಂದ ಮೌಲ್ಯಗಳನ್ನು ಪ್ರತಿಪಾದಿಸಿದವರು. ಅವರನ್ನು ಒಂದು ಜಾತಿ, ಮತಕ್ಕೆ ಮಿತಗೊಳಿಸುವುದು ಹುಂಬತನ ಎಂಬುದು ಇದನ್ನು ಪ್ರತಿಪಾದಿಸುವವರ ವಾದ. ಇವತ್ತಿನ ಕಲುಷಿತ ರಾಜಕೀಯ, ಸಾಮಾಜಿಕ ವಾತಾವರಣದಲ್ಲಿ ಈ ತರಹದ ಮಾತುಗಳು ಕೇವಲ ನೆಪವಾಗಿಬಿಡುತ್ತವೆ ಎಂಬುದು ಯಾರಿಗೆ ಗೊತ್ತಿಲ್ಲ?

ಇತ್ತೀಚೆಗೆ ಇನ್ನೊಂದಾಗುತ್ತಿದೆ. ಯಾವುದೇ ಮಹಾಪುರುಷ ಅಥವಾ ಮಹಿಳೆಯ ಜಯಂತಿ ಆಚರಿಸುವುದಾಗಿ ಸರ್ಕಾರ ಘೋಷಿಸಿದ ಕೂಡಲೇ ಅವರ ಪರ-ವಿರೋಧ ವಾಗ್ವಾದಗಳು ಹತ್ತಿ ಉರಿಯಲಾರಂಭಿಸುತ್ತವೆ. ಹೆಚ್ಚಿನವರು ಇತಿಹಾಸಕ್ಕಿಂತ ಹೆಚ್ಚಾಗಿ ಪೂರ್ವಗ್ರಹ, ಕಡಿಮೆ ಮಾಹಿತಿ ಅಥವಾ ಸುಳ್ಳು ಮಾಹಿತಿಗಳನ್ನು ಇಟ್ಟುಕೊಂಡೇ ವಾದವನ್ನು ಮಂಡಿಸುತ್ತಾರೆ, ಎಲ್ಲರೂ ಇತಿಹಾಸಕಾರರಾಗುತ್ತಾರೆ, ವಿಮರ್ಶಕರಾಗುತ್ತಾರೆ. ತಮ್ಮ ತಮ್ಮ ಧರ್ಮ ರಕ್ಷಣೆಗಾಗಿ ಯೋಧರು ವಾಟ್ಸ್‌ ಆ್ಯಪ್‌, ಫೇಸ್‌ಬುಕ್‌ಗಳಲ್ಲಿ ಕತ್ತಿ ಝಳಪಿಸುತ್ತಾರೆ. ಸಮಾಜ ಒಡೆಯುತ್ತದೆ. ಸಂವಿಧಾನದ ರಕ್ಷಣೆಗಾಗಿ ಪಣ ತೊಟ್ಟಿರುವ ಸಚಿವರು ‘ಧರ್ಮ, ಜಾತಿಗಳಿಗೆ ಸಂಬಂಧಿಸಿದ ಆಚರಣೆಗಳನ್ನು ಆಯಾ ಸಮುದಾಯಕ್ಕೆ ಬಿಡಬೇಕು. ಸರ್ಕಾರ ಕೇವಲ ಸಾರ್ವತ್ರಿಕವಾದ ಯೋಜನೆಗಳನ್ನಷ್ಟೆ ಜಾರಿಗೆ ತರಬೇಕು’ ಎಂಬ ಮೂಲಭೂತ ಧರ್ಮನಿರಪೇಕ್ಷತೆಯ ಅರಿವನ್ನೂ ಹೊಂದಿರದೇ ಇರುವುದು ದುರಂತ. ವಿಧಾನಸಭೆಯ ಕಾರ್ಯಕಲಾಪಗಳೇ ರಾಹುಕಾಲ ನೋಡಿ, ಸರ್ಕಾರಿ ಬಂಗಲೆಗಳ ಆಯ್ಕೆಗೆ ಸಂಖ್ಯೆ ನೋಡಿ, ಕಚೇರಿಗಳಲ್ಲಿ ಹೋಮ ಹವನ ಮಾಡಿ, ಪದಗ್ರಹಣಕ್ಕೆ ಮುಹೂರ್ತ ನೋಡುವ ಜನಪ್ರತಿನಿಧಿಗಳಿಗೆ ಸಂವಿಧಾನದ ಪಾಠ ಹೇಳುವುದು ಗೋರ್ಕಲ್ಲ ಮೇಲೆ ಮಳೆ ಸುರಿದಂತೆ, ಅಲ್ಲವೇ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು