ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆ | ದೇಗುಲಗಳ ಮುಕ್ತಗೊಳಿಸುವುದು ಹಣಕಾಸು ಅಕ್ರಮಕ್ಕೆ ಅವಕಾಶ ಕೊಡುವ ಹುನ್ನಾರ

ದೇವಾಲಯಗಳನ್ನು ಸರ್ಕಾರದ ಹಿಡಿತದಿಂದ ಮುಕ್ತಗೊಳಿಸುವುದು ಸರಿಯಾದ ಕ್ರಮವೇ?
Last Updated 7 ಜನವರಿ 2022, 19:30 IST
ಅಕ್ಷರ ಗಾತ್ರ

ದೇವಸ್ಥಾನಗಳನ್ನು ಸ್ವತಂತ್ರಗೊಳಿಸುವ ಪ್ರಸ್ತಾವವನ್ನು ಸರ್ಕಾರ ಮುಂದಿಟ್ಟಿದೆ. ಆಯಾ ದೇವಸ್ಥಾನಗಳಿಂದ ಬರುವ ಆದಾಯದಿಂದ ಆಯಾ ದೇವಸ್ಥಾನಗಳನ್ನೇ ಅಭಿವೃದ್ಧಿಪಡಿಸಬೇಕು ಎಂಬ ಪ್ರಸ್ತಾವವು ಇದರ ಭಾಗವಾಗಿದೆ. ಹಿಂದೂಯೇತರ ಪ್ರಾರ್ಥನಾ ಮಂದಿರಗಳಿಗೆ ಇರದ ಕಟ್ಟುಪಾಡು ಹಿಂದೂ ದೇವಸ್ಥಾನಗಳಿಗೆ ಮಾತ್ರ ಏಕೆ? ಹಿಂದೂ ದೇವಾಲಯಗಳ ಆದಾಯದಿಂದ ಹಿಂದೂಯೇತರ ಪ್ರಾರ್ಥನಾ ಮಂದಿರಗಳ ನಿರ್ವಹಣೆಗೆ ಅನುದಾನ ಒದಗಿಸಬಾರದು ಎಂಬ ಆಗ್ರಹಗಳನ್ನು ಬಲಪಂಥೀಯ ಸಂಘಟನೆಗಳು ಮುಂದಿಟ್ಟಿದ್ದವು. ಈ ಸಂಘಟನೆಗಳ ಬೇಡಿಕೆಯನ್ನು ಈಡೇರಿಸುವುದಕ್ಕೆ ಎಂಬಂತೆ ಆಡಳಿತಾರೂಢ ಬಿಜೆಪಿಯು ದೇವಸ್ಥಾನಗಳನ್ನು
ಸ್ವತಂತ್ರಗೊಳಿಸಲು ಮುಂದಾಗಿದೆ.

ದೇವಸ್ಥಾನಗಳ ಸ್ವಾತಂತ್ರ್ಯಕ್ಕೆ ಈವರೆಗೆ ಅಡ್ಡಿ ಆತಂಕಗಳಿದ್ದವು ಎಂಬ ರೀತಿಯಲ್ಲಿ ಪ್ರಚಾರ ಮಾಡಲಾಗುತ್ತಿದ್ದು ಅದು ವಾಸ್ತವವಲ್ಲ. ದೇವಸ್ಥಾನಗಳಲ್ಲಿ ನಡೆಯುವ ಪೂಜಾ ವಿಧಿಗಳ ಮೇಲೆ ಸರ್ಕಾರದ ನಿಯಂತ್ರಣವೇನೂ ಇಲ್ಲ. ಪಾರಂಪರಿಕವಾಗಿ ಆಯಾ ದೇವಸ್ಥಾನಗಳು ಈ ಹಿಂದಿನಿಂದ ನಡೆಸಿಕೊಂಡು ಬಂದ ಪೂಜಾಪದ್ಧತಿಗಳನ್ನು, ಆಚರಣೆಗಳನ್ನು ಮುಂದುವರಿಸಿಕೊಂಡು ಹೋಗಲು ಅಲ್ಲಿನ ಅರ್ಚಕರಿಗೆ ಸಂಪೂರ್ಣ ಅವಕಾಶವಿದೆ. ದೇವಸ್ಥಾನದ ಧರ್ಮದರ್ಶಿ ಮಂಡಳಿಯಾಗಲಿ, ಆಡಳಿತ ಮಂಡಳಿಯಾಗಲಿ ಈವರೆಗಿನ ಸಂಪ್ರದಾಯಕ್ಕೆ ವ್ಯತಿರಿಕ್ತವಾಗುವಂತೆ ಪೂಜಾಪದ್ಧತಿಗಳನ್ನು, ಉತ್ಸವ, ಜಾತ್ರೆ ಮುಂತಾದವುಗಳನ್ನು ಬದಲಿಸುವ ಅಧಿಕಾರವನ್ನು ಹೊಂದಿಲ್ಲ.

ಶೈವ, ವೈಷ್ಣವ, ಶಾಕ್ತ್ಯ ಇತ್ಯಾದಿ ಪಂಥದ ದೇವಸ್ಥಾನಗಳು ತಮ್ಮ ತಮ್ಮ ಆಗಮಶಾಸ್ತ್ರಗಳ ಅನುಸಾರ ಅರ್ಚನೆ, ಉತ್ಸವಗಳನ್ನು ನಡೆಸುತ್ತಿವೆ. ದೇವಾಲಯಗಳ ಸ್ವರೂಪ, ವಿಗ್ರಹಗಳ ಲಕ್ಷಣಗಳು ಇತ್ಯಾದಿಗಳನ್ನು ನಿರ್ಧರಿಸುವುದು ಶಾಸ್ತ್ರಾಚಾರ ಗ್ರಂಥಗಳು ಮತ್ತು ಅರ್ಚಕ ಮಂಡಳಿಯೇ ಹೊರತು ಅದನ್ನು ಸರ್ಕಾರದ ಯಾವ ಇಲಾಖೆಯೂ ನಿರ್ದೇಶಿಸುವುದಿಲ್ಲ. ಕೆಲವು ದೇವಾಲಯಗಳಲ್ಲಿ ಆಚರಣೆಯಲ್ಲಿದ್ದ ಪ್ರಾಣಿಬಲಿ ಮುಂತಾದ ಹಿಂಸಾಚಾರ ಸಂಬಂಧಿ ಆಚರಣೆಗಳನ್ನು ಒಟ್ಟಾರೆಯಾಗಿ ನಿಷೇಧಿಸಲಾಗಿದೆ. ಮಿಕ್ಕಂತೆ ದೇವಸ್ಥಾನಗಳ ಪಾರಂಪರಿಕ ಆಚರಣೆಗಳಿಗೆ ಯಾವ ಅಡ್ಡಿಯನ್ನೂ ಮಾಡಲಾಗುತ್ತಿಲ್ಲ.

ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧಾರ್ಮಿಕ ದತ್ತಿಗಳ ಇಲಾಖೆಯಡಿ ಸುಮಾರು ಮೂವತ್ತೈದು ಸಾವಿರ ದೇವಸ್ಥಾನ ಹಾಗೂ ಧಾರ್ಮಿಕ ಸಂಸ್ಥೆಗಳಿವೆ. ಇವುಗಳನ್ನು ಅವುಗಳ ಆದಾಯ ಪ್ರಮಾಣದ ಆಧಾರದಲ್ಲಿ ಎ, ಬಿ ಮತ್ತು ಸಿ ಕೇಂದ್ರಗಳೆಂದು ವರ್ಗೀಕರಿಸಲಾಗಿದೆ. ವಾರ್ಷಿಕವಾಗಿ ₹25 ಲಕ್ಷಕ್ಕೂ ಹೆಚ್ಚು ಆದಾಯವಿರುವ ದೇವಾಲಯಗಳು `ಎ’ ವಿಭಾಗದಲ್ಲೂ, ವಾರ್ಷಿಕವಾಗಿ ಹತ್ತು ಲಕ್ಷ ರೂಪಾಯಿ ಮೀರಿದ ಆದಾಯವುಳ್ಳವುಗಳು `ಬಿ’ ವಿಭಾಗದಲ್ಲೂ ಇದ್ದು, ಮೊದಲನೆಯ ವಿಭಾಗದವುಗಳು ತಮ್ಮ ಆದಾಯದ
ಶೇ 10ರಷ್ಟನ್ನು, ಎರಡನೆಯ ವಿಭಾಗದವುಗಳು ಶೇ 5ರಷ್ಟನ್ನು ದೇವಾಲಯ ಮತ್ತು ಧಾರ್ಮಿಕ ದತ್ತಿ ಇಲಾಖೆಗೆ ಸಲ್ಲಿಸುತ್ತವೆ. ಸಿ’ ವಿಭಾಗದ ದೇವಸ್ಥಾನಗಳಿಗೆ ವಾರ್ಷಿಕವಾಗಿ ₹12,000 ಅನುದಾನವನ್ನು ಅರ್ಚನೆಯ ನಿರ್ವಹಣೆಗಾಗಿ ಇಲಾಖೆಯೇ ಒದಗಿಸುತ್ತದೆ.

ಪ್ರಸ್ತುತ ಇಲಾಖೆಯ ಮುಖ್ಯ ಕಾರ್ಯಗಳು ದೇವಸ್ಥಾನಗಳ ನಿರ್ಮಾಣ, ದುರಸ್ತಿ ಹಾಗೂ ಪುನರುಜ್ಜೀವನ ಎಂಬವುಗಳಾಗಿವೆ. ದೇವಸ್ಥಾನಗಳ ವಾರ್ಷಿಕ ಆಯವ್ಯಯ ಪ್ರಸ್ತಾವಕ್ಕೆ ಅನುಮೋದನೆ ನೀಡುವುದು, ದೇವಸ್ಥಾನ ನಿರ್ವಹಣಾ ಮಂಡಳಿ ಅಥವಾ ಅಭಿವೃದ್ಧಿ ಮಂಡಳಿಗಳನ್ನು ನೇಮಿಸುವುದು ಕೂಡ ಇದರ ವ್ಯಾಪ್ತಿಗೆ ಬರುತ್ತದೆ. ದೇವಸ್ಥಾನದ ನಿರ್ವಹಣಾ ಮಂಡಳಿಯ ಸದಸ್ಯರಾಗಿ ನೇಮಕವಾಗುವವರು ಭಕ್ತಾದಿಗಳೇ ಆಗಬೇಕಿದ್ದು ಇದರಲ್ಲಿ ಯಾವುದೇ ರಾಜಕೀಯ ಪಕ್ಷದ ಪದಾಧಿಕಾರಿಯಾದ ವ್ಯಕ್ತಿ ಇರಬಾರದೆಂಬ ನಿಯಮವಿದೆ. ದೇವಸ್ಥಾನಗಳಲ್ಲಿ ನೇಮಕಗೊಂಡಿರುವ ಅರ್ಚಕರು ಮತ್ತು ಇತರೆ ಸಿಬ್ಬಂದಿಗೆ ವೇತನವನ್ನು ಇಲಾಖೆಯು ನಿಯಮಾನುಸಾರ
ಪಾವತಿಸುತ್ತದೆ. ಆಗಮಶಾಲೆಗಳನ್ನು ಆರಂಭಿಸಲು ಅನುಮತಿ ನೀಡುತ್ತದೆ. ಅರ್ಚಕರಿಗೆ ತರಬೇತಿ, ಅವರ ಯೋಗಕ್ಷೇಮ ಚರ್ಚೆಗಾಗಿ ಸಮ್ಮೇಳನ, ಸಮಾವೇಶಗಳನ್ನು ಇಲಾಖೆ ನಡೆಸುತ್ತದೆ. ಸಿಬ್ಬಂದಿಗೆ ವಿಮಾ ಸೌಲಭ್ಯ ದೊರೆಯುವಂತೆ ಮಾಡುವುದೂ ಕೂಡ ಇದರಲ್ಲಿ ಸೇರಿದೆ.

ಹೀಗಿರುವ ಪದ್ಧತಿಯಲ್ಲಿ ಸರ್ಕಾರ ಅಥವಾ ಇಲಾಖೆ ದೇವಸ್ಥಾನಗಳ ವಿಷಯಗಳಲ್ಲಿ ವಿನಾಕಾರಣ ಮೂಗು ತೂರಿಸುವ ಪ್ರಶ್ನೆಯೇ ಇಲ್ಲ. ಉತ್ಸವ, ಜಾತ್ರೆ ಸಂದರ್ಭಗಳಲ್ಲಿ ಭಕ್ತಾದಿಗಳ ಅನುಕೂಲಕ್ಕೆ ಬೇಕಾದ ಸಾರಿಗೆ, ಕುಡಿಯುವ ನೀರು, ವೈದ್ಯಕೀಯ ನೆರವು, ಶಾಂತಿ ಸುವ್ಯವಸ್ಥೆ ಪಾಲನೆಗೆ ಬಂದೋಬಸ್ತ್ ಮುಂತಾದ ಹೊಣೆಗಾರಿಕೆಗಳನ್ನು ಸರ್ಕಾರದ ವಿವಿಧ ಇಲಾಖೆಗಳು ನಿರ್ವಹಿಸುತ್ತವೆ.

ದೇವಾಲಯ ಮತ್ತು ಧಾರ್ಮಿಕ ಕೇಂದ್ರಗಳು ಸರ್ಕಾರದ ಬೊಕ್ಕಸಕ್ಕೆ ಆದಾಯ ಒದಗಿಸುವ ಮೂಲಗಳಾಗಿದ್ದಾಗಲೂ ಆ ಆದಾಯವನ್ನು ಸರ್ಕಾರವು ತನ್ನ ಆಯವ್ಯಯದಲ್ಲಿ ಬೇರೆ ಬೇರೆ ಇಲಾಖೆಗಳ ಖರ್ಚಿಗೆ ಒದಗಿಸುವಂತಿಲ್ಲ ಎಂಬ ನಿಯಮವಿದ್ದು ಆದಾಯದ ಹೆಚ್ಚುವರಿಯು ರಕ್ಷಿತಗೊಂಡಿರುತ್ತದೆ. ಈ ರೀತಿಯಾಗಿ ಹೆಚ್ಚುವರಿಯಾದ ಆದಾಯದಲ್ಲಿ ₹33 ಕೋಟಿಯನ್ನು 2014-15ರ ಸಾಲಿನವರೆಗೆ ನಿಶ್ಚಿತ ಠೇವಣಿಗಳಲ್ಲಿ ಇರಿಸಲಾಗಿತ್ತು. ಹೀಗಿರುವಾಗ ದೇವಸ್ಥಾನಗಳನ್ನು ಸ್ವತಂತ್ರಗೊಳಿಸಲಾಗುವುದು ಎನ್ನುವ ಸರ್ಕಾರದ ಪ್ರಸ್ತಾಪಕ್ಕೆ ಅರ್ಥವೇನು?

ಹಿಂದೂ ದೇವಾಲಯಗಳು ಹಾಗೂ ಧಾರ್ಮಿಕ ಕೇಂದ್ರಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸುವುದು ಎಂದರೆ ತಮ್ಮ ಆದಾಯ ಮತ್ತು ವೆಚ್ಚಗಳ ಬಗ್ಗೆ ಇವು ವಾರ್ಷಿಕವಾಗಿ ನಡೆಸಬೇಕಾಗಿರುವ ಲೆಕ್ಕಪತ್ರ ತಪಾಸಣೆಯಿಂದ ಮುಕ್ತಗೊಳ್ಳುವುದು ಎಂದರ್ಥ. ಭಕ್ತಾದಿಗಳೇ ಸ್ವತಂತ್ರವಾಗಿ ದೇವಸ್ಥಾನವನ್ನು ನಿರ್ವಹಿಸುವುದು ಎಂದರೆ ಸಾರ್ವಜನಿಕ ಆಸ್ತಿಗಳಾದ ದೇವಾಲಯಗಳು ಖಾಸಗಿ ವ್ಯಕ್ತಿಗಳ ಮರ್ಜಿಗಳ ನಿಯಂತ್ರಣಕ್ಕೊಳಪಡುವುದು ಎಂದರ್ಥ. ದೇವಸ್ಥಾನಕ್ಕೆ ಸೇರಿದ ಜಮೀನು ಹಾಗೂ ಇತರೆ ಆಸ್ತಿಪಾಸ್ತಿಗಳ ವಿಲೇವಾರಿ ಅಧಿಕಾರವನ್ನು ಖಾಸಗಿ ವ್ಯಕ್ತಿಗಳ ವಶಕ್ಕೆ ಕೊಡುವುದು ಎಂದರ್ಥ.

ಕರ್ನಾಟಕದ ದೇವಸ್ಥಾನಗಳಲ್ಲಿ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಯವು ಅತ್ಯಧಿಕ ಆದಾಯ ಗಳಿಸುತ್ತಿರುವವುಗಳಲ್ಲಿ ಮುಂಚೂಣಿಯಲ್ಲಿವೆ. ಇದರಲ್ಲಿನ ಹಲವಾರು ದೇವಸ್ಥಾನಗಳು ಕಳೆದ ಮೂರು ವರ್ಷಗಳಿಂದ ಲೆಕ್ಕಪತ್ರ ತಪಾಸಣೆ ಮಾಡಿಸಲಿಲ್ಲ, ಅನುದಾನ ಹಾಗೂ ಆದಾಯ ಯಾವ ಯಾವ ಬಾಬುಗಳಿಗೆ ಹೇಗೆ ಖರ್ಚಾಗಿದೆ ಎಂಬ ಬಗ್ಗೆ ಪಾರದರ್ಶಕತೆಯನ್ನು ಕಾಪಾಡಿಲ್ಲ ಎಂದು ಲೆಕ್ಕ ತಪಾಸಣಾ ಇಲಾಖೆಯ ವರದಿಗಳು ಆಕ್ಷೇಪಗಳನ್ನು ಎತ್ತಿವೆ. ಸರ್ಕಾರಿ ಕಾಯ್ದೆಯ ನಿಬಂಧನೆಗಳಿದ್ದಾಗಲೇ ಈ ಬಗೆಯ ಲೋಪಗಳು ಕಂಡುಬರುತ್ತಿವೆ.

ದೇವಸ್ಥಾನಗಳು ಸಂಪೂರ್ಣ ಸ್ವತಂತ್ರ ಎಂದು ಕಾನೂನು ಮಾಡಿದರೆ ಅಲ್ಲಿ ತಲೆದೋರುವ ಸ್ವಹಿತಾಸಕ್ತಿಯ ಅಕ್ರಮಗಳಿಗೆ ಕಡಿವಾಣ ಎಲ್ಲಿರುತ್ತದೆ. ದೇವಸ್ಥಾನಗಳ ಸಿಬ್ಬಂದಿ ಈಗ ಸರ್ಕಾರಿ ಇಲಾಖೆಯ ನಿಯಮಾನುಸಾರ ನೇಮಕಗೊಳ್ಳುತ್ತಿದ್ದು ಅದರಲ್ಲಿ ಅರ್ಚಕರನ್ನು ಹೊರತುಪಡಿಸಿ ಉಳಿದ ಸಿಬ್ಬಂದಿ ನೇಮಕಕ್ಕೆ ನೀತಿ ನಿಬಂಧನೆಗಳಿವೆ. ದೇವಸ್ಥಾನಗಳನ್ನು ಸ್ವತಂತ್ರಗೊಳಿಸುವುದೆಂದರೆ ಅವುಗಳ ನೇಮಕಾತಿಯ ನೀತಿ ನಿಬಂಧನೆಗಳು ಇಲ್ಲವಾಗುತ್ತವೆ. ಇದರಿಂದ ಕೆಲವೇ ಜಾತಿಗಳ ಜನ ದೇವಸ್ಥಾನದ ಸಿಬ್ಬಂದಿಯಾಗಿ ನೇಮಕಗೊಳ್ಳುವುದಕ್ಕೆ ಅವಕಾಶ ನಿರ್ಮಾಣವಾಗುತ್ತದೆ. ದೇವಸ್ಥಾನವೊಂದು ಸ್ವತಂತ್ರ ಎಂದಾದಾಗ ಅದು ಖಾಸಗಿ
ಗುಂಪಿನ ಆಸ್ತಿ ಎಂಬಂತಾಗಿ, ಸಂಪ್ರದಾಯ-ಕಟ್ಟುಪಾಡಿನ ಹೆಸರಿನಲ್ಲಿ ದೇವಸ್ಥಾನ ಪ್ರವೇಶಕ್ಕೆ ಸಾರ್ವಜನಿಕರಿಗಿರುವ ಮುಕ್ತ ಅವಕಾಶ ನಿರ್ಬಂಧಕ್ಕೊಳಗಾಗಬಹುದು. ಈಗಾಗಲೇ ದೇವಸ್ಥಾನಗಳ ವ್ಯವಹಾರಗಳು ವ್ಯಾಪಾರೀಕರಣಗೊಂಡಿವೆ. ಖಾಸಗಿ ಮಂಡಳಿಯ ನಿಯಂತ್ರಣಕ್ಕೊಳಪಟ್ಟಲ್ಲಿ ದೇವಾಲಯಕ್ಕೆ ಸೇರಿದ ಜಮೀನು, ಆವರಣ ಮತ್ತಷ್ಟು ವಾಣಿಜ್ಯ ಉದ್ದೇಶಗಳಿಗೆ ಬಳಕೆಯಾಗತೊಡಗುತ್ತದೆ. ಇದಕ್ಕೆ ಅಡತಡೆಗಳಿರುವುದಿಲ್ಲ.

ಹಿಂದೂ ದೇವಾಲಯಗಳ ಆದಾಯವನ್ನು ಹಿಂದೂಯೇತರ ಧಾರ್ಮಿಕ ಸ್ಥಳಗಳ ನಿರ್ವಹಣೆಗೆ ನೀಡಬಾರದೆಂಬ ನಿಯಮ 1997ರಲ್ಲಿ ತಂದಿರುವ ಕಾನೂನಿನಲ್ಲಿದೆ. ಹೀಗಿರುವಾಗ ಹಿಂದೂಯೇತರ ಧಾರ್ಮಿಕ ಸ್ಥಳಗಳಿಗೆ ಹಿಂದೂ ದೇವಾಲಯಗಳ ಆದಾಯ ಒದಗಿಸಲಾಗುತ್ತಿದೆ ಎಂಬ ವಾದವೇ ಆಧಾರರಹಿತ. 2020-21ರ ಆಯವ್ಯಯದಲ್ಲಿ 26,666 ದೇವಾಲಯಗಳು ಮತ್ತು ಧಾರ್ಮಿಕ ಕೇಂದ್ರಗಳಿಗೆ ₹133.62 ಕೋಟಿ ಅನುದಾನ ಮೀಸಲು ಇಡಲಾಗಿತ್ತು. ಇದರಲ್ಲಿ ಶೇ 3ರಷ್ಟಿರುವ ಹಿಂದೂಯೇತರ 764 ಧಾರ್ಮಿಕ ಕೇಂದ್ರಗಳಿಗೆ ಕೊಟ್ಟಿದ್ದು ₹3.67 ಕೋಟಿ ಮಾತ್ರ. ಈ ಹಿಂದೂಯೇತರ ಎಂಬವುಗಳು ಕೂಡ ಜೈನ ಮತ್ತು ಬೌದ್ಧ ಧಾರ್ಮಿಕ ಕೇಂದ್ರಗಳೇ ಹೊರತು ಮುಸ್ಲಿಂ ಅಥವಾ ಕ್ರಿಶ್ಚಿಯನ್ ಧರ್ಮದವುಗಳಲ್ಲ. ಮುಸ್ಲಿಂ ಅಥವಾ ಕ್ರಿಶ್ಚಿಯನ್ ಪ್ರಾರ್ಥನಾ ಸ್ಥಳಗಳಿಗೆ ತಸ್ತಿಕ್ (ಇನಾಂ ರದ್ಧತಿಗಳಿಗಾಗಿ ಕೊಡುವ ಪರಿಹಾರ ಧನ) ಮತ್ತು ವರ್ಷಾಸನವನ್ನು ಕಂದಾಯ ಇಲಾಖೆಯು ಒದಗಿಸುತ್ತಿದ್ದು ಅದನ್ನು ಮುಜರಾಯಿ ಇಲಾಖೆಯ ಮೂಲಕ ಬಿಡುಗಡೆ ಮಾಡಲಾಗುತ್ತಿತ್ತು. ಅದು ಹಿಂದೂ ದೇವಾಲಯಗಳ ಆದಾಯದಿಂದ ಒದಗಿಸಿದ ಮೊತ್ತವಲ್ಲ. ಈಗ ಮುಜರಾಯಿ ಇಲಾಖೆಯ ಬದಲು ವಕ್ಫ್ ಮಂಡಳಿ ಹಾಗೂ ಹಿಂದುಳಿದ ವರ್ಗ, ಧಾರ್ಮಿಕ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಮೂಲಕ ಕೊಡಲಾಗುತ್ತಿದೆ.

ಈ ವಾಸ್ತವಾಂಶಗಳ ಹಿನ್ನೆಲೆಯಲ್ಲಿ ದೇವಸ್ಥಾನಗಳನ್ನು ಸ್ವತಂತ್ರಗೊಳಿಸುವ ಸರಕಾರದ ಪ್ರಸ್ತಾವವು, ದೇವಾಲಯ ಹಾಗೂ ಧಾರ್ಮಿಕ ಕೇಂದ್ರಗಳ ಖಾಸಗೀಕರಣಕ್ಕೆ, ಆ ಮೂಲಕ ಆಯಾ ಪ್ರದೇಶದಲ್ಲಿ ಬಲಾಢ್ಯರಾಗಿರುವ ಮೇಲ್ಜಾತಿ ಕೋಮುಗಳ ನಿಯಂತ್ರಣ ಸ್ಥಾಪಿಸುವುದಕ್ಕೆ, ತಮ್ಮದೇ ರಾಜಕೀಯ ಪಕ್ಷದ ಬೆಂಬಲಿಗ ವ್ಯಕ್ತಿಗಳ ಅನಿಯಂತ್ರಿತ ಹಸ್ತಕ್ಷೇಪ ಮತ್ತು ಹಣಕಾಸು ಅಕ್ರಮಗಳಿಗೆ ಅನುವು ಮಾಡಿಕೊಡುವ ಹುನ್ನಾರ ಎಂಬಂತೆ ಕಾಣುತ್ತಿದೆ.

ಬಂಜಗೆರೆ ಜಯಪ್ರಕಾಶ

ಲೇಖಕ: ಬರಹಗಾರ, ಚಿಂತಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT