ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚರ್ಚೆ | ಕಲಾವಿದರಿಗೆ ಸ್ಪರ್ಶದ ಅರಿವು ಬೇಕು: ನಟಿ ಭಾವನ

ಕನ್ನಡ ಚಿತ್ರೋದ್ಯಮದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆಗೆ ಸಮಿತಿ ಬೇಕಿದೆಯೇ?
ಭಾವನಾ
Published : 20 ಸೆಪ್ಟೆಂಬರ್ 2024, 23:13 IST
Last Updated : 20 ಸೆಪ್ಟೆಂಬರ್ 2024, 23:13 IST
ಫಾಲೋ ಮಾಡಿ
Comments
ಸಿನಿಮಾವು ದೇಹ ಮತ್ತು ಮನಸ್ಸಿನ ದ್ವಂದ್ವಗಳನ್ನು ಎತ್ತಿ ಹಿಡಿಯುವ ಮಾಧ್ಯಮ. ಇದೊಂದು ವೃತ್ತಿ, ತಾನು ಪಾತ್ರ ಮಾತ್ರ ಮಾಡುತ್ತಿದ್ದೇನೆ ಎಂಬ ಅರಿವು  ಚಿತ್ರರಂಗದಲ್ಲಿ ತೊಡಗಿರುವ ಮಹಿಳೆಗೆ ಇರಬೇಕು. ಚಿತ್ರರಂಗಕ್ಕೆ ಬರುವ ಪ್ರತಿ ಹೆಣ್ಣಿಗೂ ಸ್ಪರ್ಶದ ಬಗ್ಗೆ ಸ್ಪಷ್ಟ ಅರಿವಿದೆ. ಮಹಿಳೆಯು ಚಿತ್ರರಂಗದಲ್ಲಿ ವೃತ್ತಿಪರತೆಯಿಂದ ತೊಡಗಿಕೊಂಡು, ತನ್ನ ಜವಾಬ್ದಾರಿಯನ್ನು ಸಮರ್ಪಕವಾಗಿ ಗ್ರಹಿಸಿ ಸಹಕಲಾವಿದರ ಘನತೆಯನ್ನು ಉಳಿಸಿದರೆ ಮಾತ್ರ ವೃತ್ತಿಪರತೆ ಎಂಬ ಪದಕ್ಕೆ ಅರ್ಥ ಬರುತ್ತದೆ

‘ಕನ್ನಡ ಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳು, ಲೈಂಗಿಕ ಕಿರುಕುಳದ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲು ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ಸಮಿತಿ ರಚಿಸಬೇಕು’ ಎಂದು ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಆ್ಯಂಡ್‌ ಇಕ್ವಾಲಿಟಿ (ಫೈರ್) ಆಗ್ರಹಿಸಿದೆ. ಇದೇ ವಿಚಾರವಾಗಿ ಒಂದು ಸಭೆಯೂ ನಡೆದಿದೆ. ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ನಮ್ಮಲ್ಲಿ ಕನ್ನಡ ಚಿತ್ರೋದ್ಯಮ ಎನ್ನುವುದೇ ಇಲ್ಲ. ಇದು ದಾಖಲೆಯಾಗಿ ಕಾಗದದ ಮೇಲೆ ಎಲ್ಲೂ ದಾಖಲಾಗಿಲ್ಲ. ನಿರ್ಮಾಪಕರು, ಪ್ರದರ್ಶಕರು ಮತ್ತು ವಿತರಕರು ಸೇರಿಕೊಂಡು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್‌ಸಿಸಿ) ರಚಿಸಿಕೊಂಡಿದ್ದಾರೆ.  ಚಿತ್ರರಂಗದಲ್ಲಿ ತೊಡಗಿಕೊಂಡಿರುವ ನಾವು ಬೇರೆಯೇ ಕಾಯ್ದೆಯಡಿ ಬರುತ್ತೇವೆ. ಹೀಗಿರುವಾಗ ಕೆಎಫ್‌ಸಿಸಿಗೂ, ಸಿನಿಮಾ ಕ್ಷೇತ್ರದಲ್ಲಿನ ಮಹಿಳೆಯರಿಗೂ ಏನು ಸಂಬಂಧ? ಹಾಗಾಗಿ, ಮಂಡಳಿಯಲ್ಲಿ ಲೈಂಗಿಕ ದೌರ್ಜನ್ಯ ತಡೆ (ಪಾಶ್‌) ಸಮಿತಿ ರಚಿಸಲು ಸಾಧ್ಯವೇ ಇಲ್ಲ.

ಭಾವನಾ

ಭಾವನಾ

ಇದೇ 16ರಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ನೇತೃತ್ವದಲ್ಲಿ ನಡೆದ ಸಭೆಯ ಬಗ್ಗೆ ನನಗೆ ತಕರಾರಿದೆ. ಯಾವುದೋ ಒಂದು ಸಂಸ್ಥೆ ಹೋಗಿ ಪಾಶ್‌ ಸಮಿತಿ ರಚನೆ ಬಗ್ಗೆ ಆಗ್ರಹಿಸಿದಾಗ ಆಯೋಗವು ಯಾವ ಆಧಾರದ ಮೇಲೆ ವಾಣಿಜ್ಯ ಮಂಡಳಿಗೆ ಬಂದು ಸಭೆ ನಡೆಸಿತ್ತು? ‘ಕೇರಳದಲ್ಲಿ ‘ವಿಮೆನ್‌ ಇನ್‌ ಸಿನಿಮಾ ಕಲೆಕ್ಟಿವ್‌’ ಎಂಬ ಸಂಸ್ಥೆ ಕೊಟ್ಟ ದೂರಿನ ಆಧಾರದಲ್ಲಿ ಅಲ್ಲಿನ ಸರ್ಕಾರ ನಿವೃತ್ತ ಮಹಿಳಾ ನ್ಯಾಯಮೂರ್ತಿಯವರ ನೇತೃತ್ವದಲ್ಲಿ ರಚಿಸಿದ ಸಮಿತಿಯಂತೆ ನಮ್ಮ ರಾಜ್ಯದಲ್ಲೂ ಸಮಿತಿ ರಚನೆ ಮಾಡಲೇಬೇಕು, ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯ ತಡೆ (ಪಾಶ್‌) ಕಾಯ್ದೆಯನ್ನು ಕಡ್ಡಾಯವಾಗಿ ಜಾರಿ ಮಾಡಲೇಬೇಕು’ ಎಂಬ ರೀತಿಯಲ್ಲಿ ಮಾತನಾಡಿದರು. ಆಯೋಗದ ಅಧ್ಯಕ್ಷರು ಕನ್ನಡ ಚಲನಚಿತ್ರರಂಗದ ಬಗ್ಗೆ ಮಾಹಿತಿಯನ್ನು ಪಡೆಯದೇ ಸಭೆಗೆ ಬಂದಂತೆ ನನಗೆ ಭಾಸವಾಯಿತು. 

ಏಕೆಂದರೆ, ನಮ್ಮ ದೇಶದಲ್ಲಿ ಪ್ರತಿ ಕಾಯ್ದೆಗೂ ಅದರದೇ ಆದ ಮಾನದಂಡಗಳಿವೆ. ಕಾಯ್ದೆ ಜಾರಿಯಾದ ಬಳಿಕ ಅದನ್ನೇ ಮುಂದಿಟ್ಟುಕೊಂಡು ಸಹಕಲಾವಿದರು ಅದರಲ್ಲೂ ಪುರುಷ ಕಲಾವಿದರ ಮೇಲೆ ಸುಳ್ಳು ಆಪಾದನೆಗಳು ಬಂದಲ್ಲಿ ಆ ಕಲಾವಿದರ ಹೆಂಡತಿ, ತಾಯಿ, ಮಗಳು ಹೀಗೆ ಕುಟುಂಬದ ಎಲ್ಲ ಮಹಿಳೆಯರೂ ಸಮಾಜದ ದೃಷ್ಟಿಯಲ್ಲಿ ಆರೋಪಿಗಳೇ ಎಂಬಂತಹ ಸ್ಥಿತಿ ನಿರ್ಮಾಣವಾಗಬಹುದು. ಅದು ಆ ಕಲಾವಿದನ ಇಡೀ ಕುಟುಂಬದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಸಾಮಾಜಿಕ ಮಾಧ್ಯಮಗಳು ಉತ್ತುಂಗದಲ್ಲಿರುವ ಇಂದಿನ ಈ ಜಗತ್ತಿನಲ್ಲಿ ಯಾವುದೇ ಸುದ್ದಿ ಕಾಳ್ಗಿಚ್ಚಿನಂತೆ ಹತ್ತಿ ಉರಿಯುತ್ತದೆ. ಚಿತ್ರರಂಗದಲ್ಲಿ ಹಲವು ನಿರ್ಮಾಪಕರು, ಕಲಾವಿದರಿಗೆ ಇಂತಹ ಅನುಭವಗಳು ಈಗಾಗಲೇ ಆಗಿವೆ. ಹಾಗಾಗಿ, ಯಾವುದೇ ಕಾಯ್ದೆ, ಸಮಿತಿಯ ಸ್ಥಾಪನೆ ಅಥವಾ ನಿಯಮಗಳನ್ನು ಜಾರಿಗೊಳಿಸುವಾಗ ಎಲ್ಲ ಆಯಾಮಗಳಲ್ಲೂ ಯೋಚಿಸಬೇಕಾಗುತ್ತದೆ. 

‘ಫೈರ್‌’ ಸಂಸ್ಥೆಯು ಮುಖ್ಯಮಂತ್ರಿಯವರಿಗೆ ನೀಡಿದ ಮನವಿ ಪತ್ರದಲ್ಲಿ ಹಲವು ಖ್ಯಾತ ನಟ, ನಟಿಯರ ಹೆಸರಿದೆ. ಚಿತ್ರರಂಗದಲ್ಲಿ ಮಹಿಳೆಯರಿಗೆ ಸಮಸ್ಯೆಗಳಿವೆ, ಅವರ ಮೇಲೆ ಲೈಂಗಿಕ ಕಿರುಕುಳ, ಶೋಷಣೆ ನಡೆಯುತ್ತಿದೆ ಎಂದಾಗಿದ್ದರೆ ಅವರೆಲ್ಲ ಇಲ್ಲಿಯವರೆಗೆ ಏಕೆ ಧ್ವನಿ ಎತ್ತಿಲ್ಲ? ಮೊನ್ನೆ ನಡೆದ ಸಭೆಗೆ ಅವರು ಏಕೆ ಬರಲಿಲ್ಲ? ಸಂತ್ರಸ್ತ ಮಹಿಳೆಯರಿಗೆ ನ್ಯಾಯ ಕೊಡಿಸುವ ಪ್ರಯತ್ನ ಏಕೆ ಮಾಡಿಲ್ಲ? ಮೂಕವೇದನೆ ಅನುಭವಿಸುವ ಸ್ಥಿತಿ ಏಕೆ ಬಂತು? ಯಾವ ಆಧಾರದ ಮೇಲೆ ಈ ರೀತಿ ಸಮಿತಿ ಆಗಬೇಕು ಎಂದು ಅವರು ಈ ಪ್ರಸ್ತಾವಕ್ಕೆ ಬೆಂಬಲ ಸೂಚಿಸಿದ್ದಾರೆ? ಮಾಧ್ಯಮಗಳ ಎದುರು ಕಳೆದ ಹಲವು ವರ್ಷಗಳಿಂದಲೂ ಮಾತನಾಡುತ್ತಾ ಬಂದಿರುವ ನಿರ್ದೇಶಕಿ ಕವಿತಾ ಲಂಕೇಶ್‌ ಅವರು ಈಗ, ‘ನಮ್ಮ ಧ್ವನಿಯನ್ನು ಯಾರೂ ಕೇಳುತ್ತಿಲ್ಲ’ ಎಂದು ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಮನವಿ ಮಾಡಿರುವುದು ಅಚ್ಚರಿ ಉಂಟು ಮಾಡಿದೆ.  

ಶಿವರಾಮ ಕಾರಂತರ ಜನಪ್ರಿಯ ಕೃತಿಯಾಗಿರುವ ‘ಮೈಮನಗಳ ಸುಳಿಯಲ್ಲಿ’  ಶೀರ್ಷಿಕೆ ನನಗೆ ನೆನಪಿಗೆ ಬರುತ್ತಿದೆ.  ಸಿನಿಮಾವು ದೇಹ ಮತ್ತು ಮನಸ್ಸಿನ ದ್ವಂದ್ವಗಳನ್ನು ಎತ್ತಿ ಹಿಡಿಯುವ ಮಾಧ್ಯಮ. ಈ ರಂಗದಲ್ಲಿ ತೊಡಗಿರುವ ಹೆಣ್ಣು, ಚಿತ್ರೀಕರಣಕ್ಕೆ ಯಾವ ರೂಪದಲ್ಲಿ ಬರುತ್ತಾಳೆ ಎಂಬುದು ಬಹಳ ಮುಖ್ಯ. ಅಂದರೆ, ಅವಳು ಮಗಳಾಗಿ ಬರುತ್ತಿದ್ದಾಳೆಯೇ, ಹೆಂಡತಿಯಾಗಿ ಬರುತ್ತಿದ್ದಾಳೆಯೇ, ಪ್ರೇಯಸಿಯಾಗಿ ಬರುತ್ತಿದ್ದಳೆಯೇ ಎಂಬುದು ಮುಖ್ಯವಾಗುತ್ತದೆ. ಇದೊಂದು ವೃತ್ತಿ, ತಾನು ಪಾತ್ರ ಮಾತ್ರ ಮಾಡುತ್ತಿದ್ದೇನೆ ಎಂಬ ಅರಿವು ಅವಳಿಗೆ ಇದೆಯೇ ಎಂಬುದೂ ಬಹು ಮುಖ್ಯ. ಮಾನಸಿಕವಾಗಿ ಒಂದು ಪಾತ್ರವಾಗಿ ಸಜ್ಜುಗೊಂಡು ಚಿತ್ರೀಕರಣಕ್ಕೆ ಬರದೇ ಇದ್ದಲ್ಲಿ ಯಾವುದೋ ಗಂಡಸಿನ, ಅಂದರೆ ಆ ಚಿತ್ರೀಕರಣದಲ್ಲಿ ಪಾಲ್ಗೊಂಡಿರುವ ಪುರುಷನ ಸ್ಪರ್ಶ ಆಕೆಗೆ ಕಿರುಕುಳದಂತಾಗಬಹುದು. ಆ ಪ್ರತಿಕ್ರಿಯೆಯಿಂದ ಅದೇ ದೃಶ್ಯದಲ್ಲಿರುವ ಪುರುಷನಿಗೂ ಮುಜುಗರವಾಗುವ ಸಾಧ್ಯತೆ ಇದೆ. ಇದರ ಪರಿಣಾಮ ಆ ಪುರುಷ ಕಲಾವಿದನ ಮೇಲೂ ಆಗುತ್ತದೆ. ಸ್ಪರ್ಶವು ಕಲಾವಿದೆ ಅಥವಾ ಕಲಾವಿದನಿಗೆ ಬಹಳ ಮುಖ್ಯ. ಈ ರಂಗಕ್ಕೆ ಬರುವ ಪ್ರತಿ ಹೆಣ್ಣಿಗೂ ಸ್ಪರ್ಶದ ಬಗ್ಗೆ ಸ್ಪಷ್ಟವಾದ ಅರಿವಿದೆ. ಮಹಿಳೆಯು ಚಿತ್ರರಂಗದಲ್ಲಿ ವೃತ್ತಿಪರತೆಯಿಂದ ತೊಡಗಿಕೊಂಡು, ತನ್ನ ಜವಾಬ್ದಾರಿಯನ್ನು ಸಮರ್ಪಕವಾಗಿ ಗ್ರಹಿಸಿ ಸಹಕಲಾವಿದರ ಘನತೆಯನ್ನು ಉಳಿಸಿದರೆ ಮಾತ್ರ ವೃತ್ತಿಪರತೆ ಎಂಬ ಪದಕ್ಕೆ ಅರ್ಥ ಬರುತ್ತದೆ. 

ಒಂದು ವೇಳೆ ಚಿತ್ರರಂಗದಲ್ಲಿ ಶೋಷಣೆ, ದೌರ್ಜನ್ಯ, ಕಿರುಕುಳ ನಡೆಯುತ್ತಿದೆ ಎಂದಾದರೆ, ಈ ಶೋಷಣೆ, ದೌರ್ಜನ್ಯ, ಕಿರುಕುಳ ಎಂದರೇನು ಎಂಬ ಬಗ್ಗೆ ಸೂಕ್ತ ವಿವರಣೆ ಬೇಕು. ‘ನೀರು ಕುಡಿಯಲು ಬಿಟ್ಟಿಲ್ಲ’, ‘ಶೌಚಾಲಯಕ್ಕೆ ಹೋಗಲು ಬಿಟ್ಟಿಲ್ಲ’, ‘ಮೂಲಸೌಕರ್ಯವಿಲ್ಲ’ ಎಂದು ದೂರುವ ಮೊದಲು ಇರುವ ಸ್ಥಳ ಹಾಗೂ ಪರಿಸ್ಥಿತಿಯನ್ನು ನಾವು ಅರಿತುಕೊಳ್ಳುವುದು ಮುಖ್ಯ. ಕೆಲವು ಸಿನಿಮಾಗಳು ₹25 ಲಕ್ಷದಲ್ಲಿ ಮುಗಿದರೆ, ಇನ್ನೂ ಕೆಲ ಸಿನಿಮಾಗಳು ₹200 ಕೋಟಿಯಲ್ಲಿ ಆಗುತ್ತವೆ. ಹೀಗಿರುವಾಗ ₹25 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುವ ಸಿನಿಮಾ ಸೆಟ್‌ನಲ್ಲಿ ಬಾಟಲಿ ನೀರು ಕೊಟ್ಟಿಲ್ಲ ಎಂದು ದೂರಲು ಆಗುವುದಿಲ್ಲ.     

ಮಾಫಿಯಾ, ಹೊಂದಾಣಿಕೆ, ರಾಜಿ... ಹೀಗೆ ಎಲ್ಲರ ಕಣ್ಣು, ಕಿವಿ ಎದ್ದು ನಿಲ್ಲುವಂತೆ ಸೆಳೆಯುವ ಪದಗಳು, ಭಾಷೆಯ ಬಳಕೆಯಿಂದ ಮತ್ತು ಟಿಆರ್‌ಪಿ ಹೆಸರಿನಲ್ಲಿ ಇದನ್ನು ಸಮರ್ಥಿಸಿಕೊಳ್ಳುತ್ತಿರುವ ಕೆಲವರಿಂದ ಈ ಇಡೀ ವಿಷಯವೇ ಬೇರೆ ಬೇರೆ ರೂಪಗಳನ್ನು ಪಡೆಯುತ್ತಿರುವುದು ಖಂಡನೀಯ ಮತ್ತು ಸರ್ವತಾ ಒಪ್ಪುವಂತಹದ್ದಲ್ಲ.    

ಲೇಖಕಿ: ಚಿತ್ರ ನಟಿ

ನಿರೂಪಣೆ: ಅಭಿಲಾಷ್‌ ಪಿ.ಎಸ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT