ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ತವ್ಯ ನಿರ್ವಹಿಸಿದ ಮಠಾಧೀಶರ ಮಹಾಸಭಾ

ಅಕ್ಷರ ಗಾತ್ರ

ಎಲ್ಲ ಕ್ಷೇತ್ರಗಳಲ್ಲೂ ಪ್ರತೀಕಾರ, ಅವಮಾನ, ಅನುಮಾನ, ಹಗರಣ, ಸ್ವಜನಪಕ್ಷಪಾತ, ಆಕ್ರಮಣ, ಅಕ್ರಮ, ಹತಾಶೆ, ನಿರಾಸೆ ಇದ್ದದ್ದೇ.

ಆದರೆ, ರಾಜಕೀಯ ಕ್ಷೇತ್ರದಲ್ಲಿ ಸುಳ್ಳು ಆಶ್ವಾಸನೆಗಳು, ಅಗ್ಗದ ಯೋಜನೆಗಳು, ಅಕ್ರಮ ಆಸ್ತಿ ಮತ್ತು ಹಣ ಸಂಪಾದನೆ ಮಾಮೂಲಿಯಾಗುತ್ತಿವೆ. ಚುನಾವಣೆಗಳು ದುಬಾರಿ ಆಗುತ್ತಿವೆ. ಜನಪ್ರತಿನಿಧಿಗಳು ಜನರನ್ನು ಭ್ರಷ್ಟರನ್ನಾಗಿಸಿದರೋ? ಜನರೇ ಜನಪ್ರತಿನಿಧಿಗಳನ್ನು ಭ್ರಷ್ಟಗೊಳಿಸಿದರೋ ಎಂಬುದು ಬೀಜ-ವೃಕ್ಷ ನ್ಯಾಯದಂತೆ. ‌ಅದಕ್ಕಾಗಿ ಜನಪ್ರತಿನಿಧಿಗಳು ಸಾರ್ವಜನಿಕರ ಕೆಲಸ ಮಾಡಿಕೊಡಲು ಲಂಚ ಸ್ವೀಕರಿಸುವುದು ಸಹಜವಾಗುತ್ತಿದ್ದು, ವ್ಯವಸ್ಥೆಯು ಭ್ರಷ್ಟಗೊಳ್ಳುತ್ತಿದೆ.

ಭಾರತದ ಮಟ್ಟಿಗೆ ಗಾಂಧೀಜಿ, ಜವಾಹರಲಾಲ್‌ ನೆಹರೂ, ಸರದಾರ್ ಪಟೇಲ್, ಲಾಲ್‍ಬಹಾದ್ದೂರ್ ಶಾಸ್ತ್ರಿ, ಬಿ.ಆರ್‌.ಅಂಬೇಡ್ಕರ್, ಅಟಲ್‌ ಬಿಹಾರಿ ವಾಜಪೇಯಿ ಮೊದಲಾದವರು ಮೌಲ್ಯಾಧಾರಿತ ರಾಜಕೀಯಕ್ಕೆ ಒತ್ತುಕೊಟ್ಟರು. ಅವರು ನೀಡಿದಂತಹ ಮೌಲ್ಯಗಳೇ ಇಂದು ಉಸಿರಾಡುತ್ತಿವೆ. ಅದನ್ನು ಬಿಟ್ಟರೆ ಸಂತರು, ಶರಣರು, ಸತ್ಪುರುಷರು ವ್ಯವಸ್ಥೆಯನ್ನು ಸುಧಾರಿಸಲು ನಡೆಸಿದ ಪ್ರಯತ್ನಗಳು ಇತಿಹಾಸವಾಗಿ ಉಳಿದಿದ್ದು, ಜನಜೀವನದಲ್ಲಿ ಅನುರಣನಗೊಳ್ಳುತ್ತಿವೆ.

ಈ ಹಂತಗಳನ್ನು ಹೊರತುಪಡಿಸಿದರೆ, ದಿನಬೆಳಗಾದರೆ ಹಗರಣಗಳು. ಹಗರಣರಹಿತ ರಾಜಕಾರಣ ಸಾಧ್ಯವಿಲ್ಲವೆಂಬ ವಾತಾವರಣ ಸೃಷ್ಟಿ ಆಗಿದೆ. ರಾಜಕಾರಣ ಅಂದರೆ ಹಗರಣ; ಹಗರಣವೆಂದರೆ ರಾಜಕಾರಣ. ರಾಜಕಾರಣದ ಉದ್ದೇಶವೇ ಲೋಕಕಲ್ಯಾಣ. ಲೋಕಕಲ್ಯಾಣ ನೇಪಥ್ಯಕ್ಕೆ ಸರಿದಾಗ ಹಗರಣಗಳು ಮುನ್ನೆಲೆಗೆ ಬಂದು ನಿಲ್ಲುತ್ತವೆ.

ಆದರೆ, ವ್ಯವಸ್ಥೆಯನ್ನು ಅಲ್ಲಗಳೆಯುವುದಕ್ಕಿಂತ ಅದನ್ನು ಸುಧಾರಿಸುವ ಪ್ರಯತ್ನಗಳು ನಡೆಯಬೇಕಿದೆ.

ಗೌತಮ ರಾಜಕುವರನಾಗಿದ್ದು, ಐಹಿಕ ಭೋಗದಿಂದ ಹೊರಬಂದು, ಬುದ್ಧನಾಗಿ ಪ್ರತಿಬದ್ಧನಾಗಿ ಮಾನವೀಯ ಗುಣಗಳನ್ನು ಬೋಧಿಸುತ್ತಾನೆ. ಮಹಾವೀರನು ಸರ್ವವನ್ನೂ ತೊರೆದು ಮಹಾತ್ಯಾಗಿ ಅನಿಸಿಕೊಳ್ಳುತ್ತಾನೆ. ಬಸವಣ್ಣ ಮತ್ತಿತರ ಶರಣರು ಸಂಸಾರದಲ್ಲಿದ್ದುಕೊಂಡು ಸಾತ್ವಿಕ ಜೀವನ ನಡೆಸುತ್ತ, ಸಮಾಜವನ್ನು ಸಂಸ್ಕಾರಗೊಳಿಸುತ್ತಾರೆ. ಈ ಕೆಳಗಿನಂತೆ ತಮ್ಮ ಬದ್ಧತೆಯನ್ನು ತೋರಿಸುತ್ತಾರೆ.

ಭಕ್ತಿ ಸುಭಾಷೆಯ ನುಡಿಯ ನುಡಿವೆ, ನುಡಿದಂತೆ ನಡೆವೆ

ನಡೆಯೊಳಗೆ ನುಡಿಯ ಪೂರೈಸುವೆ

ಮೇಲೆ ತೂಗುವ ತ್ರಾಸು ಕಟ್ಟಳೆ ನಿಮ್ಮ ಕೈಯಲ್ಲಿ

ಒಂದು ಜವೆ ಕೊರತೆಯಾದಡೆ

ಎನ್ನನದ್ದಿ ನೀನೆದ್ದು ಹೋಗು ಕೂಡಲಸಂಗಮದೇವಾ

ಭಂಡಾರದ ಹಣವನ್ನು ಲೋಕಕಲ್ಯಾಣಕ್ಕೆ ಬಳಸುತ್ತ ಹೋದಾಗ, ಬಸವಣ್ಣ ಜನರಿಗೆ ಹತ್ತಿರ ಆಗುತ್ತಾನೆ. ಜನಪ್ರಿಯತೆ ಬೆಳೆಯುತ್ತ ಹೋಗುತ್ತದೆ. ಇದನ್ನು ಸಹಿಸಲಾರದ ಕೊಂಡಿ ಮಂಚಣ್ಣಾದಿಗಳು, ರಾಜ ಬಿಜ್ಜಳ ಮತ್ತು ಬಸವಣ್ಣನ ನಡುವೆ ದ್ವೇಷ ಹುಟ್ಟುವಂತೆ ನೋಡಿಕೊಳ್ಳುತ್ತಾರೆ. ಸಂವೇದನಾಶೀಲ ಬಸವಣ್ಣ, ಇದರಿಂದ ಅಸಮಾಧಾನಗೊಂಡು ಪ್ರಧಾನಿ ಪಟ್ಟವನ್ನು ತ್ಯಜಿಸುತ್ತಾರೆ.

ರಾಜಕಾರಣದಲ್ಲಿದ್ದು ಹಿಂಸೆಯನ್ನು ತೊರೆದು ಇತಿಹಾಸವಾಗಿ ಉಳಿದಂತಹ ಅಶೋಕ ಚಕ್ರವರ್ತಿ ಉದಾಹರಣೆಯಾದರೆ; ಬುದ್ಧ-ಬಸವರು ಎಲ್ಲ ಕಾಲಕ್ಕೂ ಆದರ್ಶರಾಗಿ ನಿಲ್ಲುತ್ತಾರೆ. ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಮೊದಲಾದವರು ರಾಜಕಾರಣದಲ್ಲಿ ಧರ್ಮವನ್ನು ಬೆರೆಸಿದರು. ರಾಜಕಾರಣಕ್ಕೆ ತಾತ್ವಿಕ ತಳಹದಿ ಬೇಕೆಂದರು. ರಾಜಕಾರಣವನ್ನು ತತ್ವ ಪ್ರಸಾರಕ್ಕೆ ಬಳಸಿಕೊಂಡರು. ಸೈದ್ಧಾಂತಿಕ ನಿಲುವುಗಳನ್ನು ಪ್ರತಿಪಾದಿಸಿದವರು. ಬಸವಣ್ಣನವರು ಬಿಜ್ಜಳನ ಆಸ್ಥಾನದಲ್ಲಿ ಪ್ರಧಾನಮಂತ್ರಿ ಅಥವಾ ಅರ್ಥಸಚಿವರಾಗಿದ್ದರೆಂಬುದು ಇತಿಹಾಸ. ರಾಜಮನೆತನಗಳಿಗೆ ಗುರುಮನೆಗಳು ಮಾರ್ಗದರ್ಶನ ನೀಡಿದಂತಹ ಉದಾಹರಣೆಗಳಿವೆ.

ಮುರುಘಾ ಪರಂಪರೆಯ ಸಂಸ್ಥಾಪಕರಾದ ಮುರುಗಿ ಶಾಂತವೀರ ಸ್ವಾಮಿಗಳು ಅಂದು ದೊರೆ ಭರಮಣ್ಣ ನಾಯಕನಿಗೆ ಆಶೀರ್ವಾದ ಮತ್ತು ಮಾರ್ಗದರ್ಶನ ಮಾಡಿದ ಸಂದರ್ಭವದು. ಆಶೀರ್ವಾದ ಪಡೆದ ಭರಮಣ್ಣ, ಮುಂದೆ ದೊರೆ ಆಗುತ್ತಾನೆ. ಸ್ವಾಮಿಗಳನ್ನು ಆಸ್ಥಾನಕ್ಕೆ ಬರಮಾಡಿಕೊಂಡ ಭರಮಣ್ಣ, ‘ನನ್ನದು ನಿಂತ ಪಟ್ಟ, ನಿಮ್ಮದು ಕುಳಿತ ಪಟ್ಟ’ ಅನ್ನುತ್ತಾನೆ. ಆಗ ಗುರುಗಳು, ‘ಅರಿತರೆ ಆರು ಪಟ್ಟ; ಮರೆತರೆ ಮುಗಿದ ಪಟ್ಟ’ ಎನ್ನುತ್ತಾರೆ.ಹೀಗೆ, ಗುರುಮನೆಗಳು ಅರಮನೆಗಳಿಗೆ ಮಾರ್ಗದರ್ಶನ ಮಾಡುತ್ತ ಬಂದಿವೆ.

ಛತ್ರಪತಿ ಶಿವಾಜಿ ಅವರಿಗೂ ಅದೇ ಶ್ರೀಗಳಿಂದ ಆಶೀರ್ವಾದ ಸಿಕ್ಕಿತ್ತು. 8-10 ರಾಜಮನೆತನಗಳು ನಡೆದುಕೊಳ್ಳುತ್ತ ಭಕ್ತಿ-ಗೌರವ ಸಲ್ಲಿಸಿದಂತಹ ಅಪೂರ್ವ ಪರಂಪರೆ ಶ್ರೀಮಠಕ್ಕಿದೆ.

ಹಾವೇರಿಯಲ್ಲಿ 1934ರಲ್ಲಿ ಜಯದೇವ ಶ್ರೀಗಳು, ಭೇಟಿಯಾದ ಗಾಂಧೀಜಿಯವರೊಟ್ಟಿಗೆ ಅಸ್ಪೃಶ್ಯತಾ ನಿವಾರಣೆ ಮತ್ತು ಖಾದಿ ಪ್ರಚಾರ ಕುರಿತು ಚರ್ಚಿಸಿದ್ದಾರೆ. ಅಥಣಿ ಶಿವಯೋಗಿಗಳ ದರ್ಶನ ಪಡೆದ ಬಾಲಗಂಗಾಧರ ತಿಲಕರು, ಭಾರತ ಸ್ವಾತಂತ್ರ್ಯ ಪಡೆಯುವ ಬಗ್ಗೆ ಕೇಳಿದಾಗ ಅವರು ‘ಭಾರತ ಸ್ವಾತಂತ್ರ್ಯ ಪಡೆಯುತ್ತದೆ; ಅದನ್ನು ನೋಡಲು ನಾನೂ ಇರುವುದಿಲ್ಲ ನೀವೂ ಇರುವುದಿಲ್ಲ‌’ ಅನ್ನುತ್ತಾರೆ. ಭಾರತ ಸ್ವಾತಂತ್ರ್ಯ ಪಡೆಯುತ್ತದೆ. ಆಗ ಇಬ್ಬರೂ ಇರುವುದಿಲ್ಲ. ಇಂಥ ಉದಾಹರಣೆಗಳು ಬೇರೆ ಮಠಗಳಲ್ಲಿಯೂ ಘಟಿಸಿವೆ.

ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಪದಚ್ಯುತಗೊಳಿಸಲಾಗುತ್ತದೆಂಬ ಹಿನ್ನೆಲೆಯಲ್ಲಿ ಸರ್ವಧರ್ಮಕ್ಕೆ ಸೇರಿದ 350-400 ಮಠಾಧೀಶರು ಪ್ರತಿಭಟಿಸಿದರು. ಒಂದು ದೊಡ್ಡ ಸಮುದಾಯವನ್ನು ಎದುರು ಹಾಕಿಕೊಳ್ಳಬಾರದೆಂಬ ಸಂದೇಶ ರವಾನೆ ಆಯಿತು. ಲಿಂಗಾಯತ ಸಮುದಾಯಕ್ಕೆ ಸೇರಿದ ಬಸವರಾಜ ಬೊಮ್ಮಾಯಿ ಅವರನ್ನು ಹೈಕಮಾಂಡ್ ಮುಖ್ಯಮಂತ್ರಿ ಮಾಡುವುದರ ಮೂಲಕ, ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗಿದೆಯೆಂಬ ಅಭಿಪ್ರಾಯ ವ್ಯಕ್ತವಾಯಿತು.

ಬೊಮ್ಮಾಯಿ ಅವರು ಬಿ.ಎಸ್. ಯಡಿಯೂರಪ್ಪ ಅವರ ಆಪ್ತರಲ್ಲಿ ಒಬ್ಬರಾಗಿದ್ದು, ಅವರ ಯೋಜನೆಗಳನ್ನೆಲ್ಲ ಕಾರ್ಯಗತಗೊಳಿಸುವುದಾಗಿ ಹೇಳಿದ್ದಾರೆ. ಈ ನಿರ್ಧಾರದಲ್ಲಿ ಆರ್‌ಎಸ್‍ಎಸ್ ಪಾತ್ರವನ್ನು ಅಲ್ಲಗಳೆಯುವಂತಿಲ್ಲ. ಕಮಲ ಪಕ್ಷವು ಕೇಸರಿ ಪಕ್ಷ ಆಗಿರುವುದರಿಂದ ಮಠಾಧೀಶರ ಮಾತಿಗೆ ಮನ್ನಣೆ ದೊರೆಯಿತೆಂದು ಹೇಳಲಾಗುತ್ತದೆ.

ಲಿಂಗಾಯತೇತರರನ್ನು ಮುಖ್ಯಮಂತ್ರಿ ಮಾಡುವುದರಿಂದ ಗಣನೀಯವಾಗಿ ಹಿನ್ನಡೆ ಆಗುತ್ತದೆಂಬ ಲೆಕ್ಕಾಚಾರವು ಇಲ್ಲಿ ಕೆಲಸ ಮಾಡಿರಲೂ ಸಾಕು.

ಧರ್ಮದಲ್ಲಿ ರಾಜಕಾರಣ ಬೆರೆಯಬಾರದೆಂಬುದು ಸರಿಯಷ್ಟೆ. ಧಾರ್ಮಿಕ ಕೇಂದ್ರಗಳು ಜಾತ್ಯತೀತ ಮತ್ತು ಪಕ್ಷಾತೀತ ನಿಲುವನ್ನು ಹೊಂದಿರಬೇಕಾಗುತ್ತದೆ. ಈ ನಿಲುವಿನಿಂದಲೇ ಅಂದು ಅಹಿಂದ ಸಂಘಟನೆಯನ್ನು ನಾನು ಬೆಂಬಲಿಸಿದೆ. ಸರ್ವಜನಾಂಗದ ಮಠಾಧೀಶರು ಅಭಿವೃದ್ಧಿಪರ ನಿಲುವುಗಳನ್ನು ಸಾಂಕೇತಿಕವಾಗಿ ಬೆಂಬಲಿಸಿರಬಹುದು.

ಧಾರ್ಮಿಕ ಮುಖಂಡರಲ್ಲಿ ಕೆಲವರು ಈಗಾಗಲೇ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಂಪಾದಿಸಿ ಸಂಸತ್ತಿಗೂ ಹೋಗಿದ್ದಾರೆ. ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದ್ದಾರೆ. ಅವರ್‍ಯಾರೂ ಕಾವಿಬಟ್ಟೆ ತ್ಯಜಿಸಿಲ್ಲ. ಧರ್ಮ ಮತ್ತು ರಾಜಕಾರಣದ ನಡುವೆ ಅಂತರ ಇರಬೇಕು. ಇದರಲ್ಲಿ ಎರಡು ಮಾತಿಲ್ಲ. ಧರ್ಮ ಅರ್ಥಾತ್ ಮೌಲ್ಯಕೇಂದ್ರಿತ ರಾಜಕಾರಣ ಅಲಭ್ಯವಾದಾಗ, ವ್ಯವಸ್ಥೆಯನ್ನು ಸುಧಾರಿಸುವ ಪ್ರಯತ್ನಗಳು ನಡೆಯಬೇಕಾಗುತ್ತದೆ. ಹೊರಗಡೆ ಇದ್ದುಕೊಂಡು ಸುಧಾರಿಸಬೇಕೆನ್ನುವ ಮತ್ತು ಒಳಗಡೆ ಇದ್ದುಕೊಂಡು ಸುಧಾರಿಸಬೇಕೆನ್ನುವ ಎರಡು ವಾದ ಚಾಲ್ತಿಯಲ್ಲಿವೆ.

ಇನ್ನು, ಮಠಗಳು ರಾಜಕಾರಣ ಮಾಡಬಾರದೆಂಬ ವಾದ. ಮಠಗಳನ್ನು ಮತಗಳ ಬ್ಯಾಂಕ್ ಆಗಿ ಪರಿವರ್ತಿಸಿದವರಾರು? ಕೆಲ ರಾಜಕಾರಣಿಗಳಿಂದ ಚುನಾವಣಾ ವೇಳೆಯಲ್ಲಿ ಮಠಗಳನ್ನು ಓಲೈಸುವ ಪದ್ಧತಿ ಶುರು ಆಯಿತು. ಬಹುತೇಕ ರಾಜಕಾರಣಿಗಳು ಒಂದಿಲ್ಲೊಂದು ಮಠಕ್ಕೆ ನಡೆದುಕೊಳ್ಳುತ್ತಾರೆ. ಧರ್ಮವನ್ನು ಬಿಟ್ಟು ರಾಜಕಾರಣ ಸಾಧ್ಯವಿಲ್ಲವೆಂಬ ವಾತಾವರಣ ಸೃಷ್ಟಿ ಆಗಿದೆ. ಭಾಗಶಃ ಸರ್ವಧರ್ಮ ಧಾರ್ಮಿಕ ನೇತಾರರಲ್ಲಿ ಕೆಲವರು ನೇರವಾಗಿ, ಇನ್ನು ಕೆಲವರು ಅಪ್ರತ್ಯಕ್ಷವಾಗಿ ತಮಗೆ ಬೇಕಾದ ಪಕ್ಷದೊಂದಿಗೆ ಅಥವಾ ವ್ಯಕ್ತಿಯೊಂದಿಗೆ ಗುರುತಿಸಿಕೊಳ್ಳುತ್ತಾರೆ. ಯಾವ ಮಠ ಮತ್ತು ಧಾರ್ಮಿಕ ಕೇಂದ್ರವೂ ರಾಜಕಾರಣದಿಂದ ಹೊರತಾಗಿಲ್ಲ ಎನ್ನಬಹುದು. ನೋವಿನಲ್ಲಿರುವಾಗ ಸಾಂತ್ವನ ನೀಡುವುದು ಸಂತ-ಶರಣರ ಕರ್ತವ್ಯ. ಇದನ್ನು ಮಠಾಧೀಶರ ಮಹಾಸಭಾ ನಿರ್ವಹಿಸಿದೆ.

ಮಠಾಧೀಶರು ರಾಜಕಾರಣದ ಶುದ್ಧೀಕರಣಕ್ಕೂ ಮುಂದಾಗಬೇಕು. ತತ್ತ್ವ ರಾಜಕಾರಣ ಎಂದಿಗೂ ಉಪಾಯ; ಹಿತಾಸಕ್ತಿ ರಾಜಕಾರಣ ಎಂದೆಂದಿಗೂ ಅಪಾಯ. ಜಾತಿ ರಾಜಕಾರಣ ದೂರಾಗಬೇಕು; ಸಮಗ್ರತೆಯ ರಾಜಕಾರಣ ನಿರಂತರವಾಗಬೇಕು.

ಲೇಖಕ: ಜಗದ್ಗುರು, ಮುರುಘರಾಜೇಂದ್ರ ಬೃಹನ್ಮಠ, ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT