ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆ | ಯೋಗಿ ಮಾದರಿ: ಶಾಂತಿಯ ತೋಟಕ್ಕೆ ಅಶಾಂತಿಯ ಮಾದರಿ ಏಕೆ? -ಪ್ರಿಯಾಂಕ್ ಖರ್ಗೆ

ಕರ್ನಾಟಕಕ್ಕೆ ‘ಯೋಗಿ ಮಾದರಿ’ಯ ಅಗತ್ಯ ಇದೆಯೇ?
ಅಕ್ಷರ ಗಾತ್ರ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರ್ನಾಟಕದಲ್ಲಿ ಉತ್ತರ ಪ್ರದೇಶ ಮಾದರಿಯನ್ನು ಜಾರಿಗೆ ತರುವ ಬಗ್ಗೆ ಮಾತನಾಡಿದ್ದು ಇದೀಗ ಚರ್ಚೆಯ ವಸ್ತುವಾಗಿದೆ. ಆದರೆ, ಉತ್ತರ ಪ್ರದೇಶದಲ್ಲಿ ಮಾನವೀಯತೆ ಹಾಗೂ ಸಾಮಾಜಿಕ ನ್ಯಾಯವನ್ನು ಗಾಳಿಗೆ ತೂರಿದ ಅಂಧಾ ಕಾನೂನಿನ ಮಾದರಿಯು ದೇಶದಾದ್ಯಂತ ಭೀತಿಯನ್ನುಂಟು ಮಾಡಿದ್ದು ಅವರ ಗಮನದಲ್ಲಿ ಇಲ್ಲ ಎನಿಸುತ್ತದೆ.

ಬಿಜೆಪಿಯವರು ಮೊದಲು ಗುಜರಾತ್‌ ಮಾದರಿಯನ್ನು ಬಿಂಬಿಸಿದ್ದರು. ಇದೀಗ ಆ ಮಾದರಿ ಇಡೀ ದೇಶದಲ್ಲಿ ಕೆಲಸ ಮಾಡುತ್ತಿರುವುದರಿಂದಾಗಿ ನಿರುದ್ಯೋಗ ಹೆಚ್ಚಳವಾಗಿದೆ, ಇತಿಹಾಸದಲ್ಲಿ ಎಂದೂ ನಿರುದ್ಯೋಗ ಪ್ರಮಾಣ ಇಷ್ಟೊಂದು ಹೆಚ್ಚು ಇರಲಿಲ್ಲ. ಜೊತೆಗೆ ಆರ್ಥಿಕ ಸ್ಥಿತಿಯೂ ಹದಗೆಟ್ಟಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ₹80ಕ್ಕೆ ಕುಸಿದಿದೆ.

ಗುಜರಾತ್ ಮಾದರಿ, ಬಿ.ಎಸ್‌. ಯಡಿಯೂರಪ್ಪ ಮಾದರಿ ಹಾಗೂ ಬಸವರಾಜ ಬೊಮ್ಮಾಯಿ ಮಾದರಿಗಳೆಲ್ಲವೂ ವಿಫಲವಾದ ಬಳಿಕ ಇದೀಗ ಉತ್ತರ ಪ್ರದೇಶದ ಯೋಗಿ ಮಾದರಿಯ ಬಗ್ಗೆ ಬಿಜೆಪಿಯವರು ಮಾತನಾಡುತ್ತಿದ್ದಾರೆ. ಉತ್ತರ ಪ್ರದೇಶ ಮಾದರಿ ಎಂದರೆ, ಪೊಲೀಸ್‌ ಮತ್ತು ಸರ್ಕಾರದ ಇತರ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡು ಬಿಜೆಪಿ ವಿರೋಧಿಗಳಿಗೆ ಹಿಂಸೆ ಕೊಡುವುದು, ಅಲ್ಪಸಂಖ್ಯಾತರು, ದಲಿತರ ಮನೆಗಳ ಮೇಲೆ ಬುಲ್ಡೋಜರ್ ಹರಿಸಿ ಮನೆಗಳನ್ನು ನೆಲಸಮಗೊಳಿಸಿ ಭೀತಿಯುಂಟು ಮಾಡುವುದೇ ಆಗಿದೆ.

ಇಂತಹ ಕೆಟ್ಟ ಮಾದರಿಯನ್ನು ಕರ್ನಾಟಕದಲ್ಲಿ ಜಾರಿಗೆ ತರಲು ಹೊರಟರೆ, ಇಲ್ಲಿ ಉದ್ಯಮಗಳಲ್ಲಿ ಬಂಡವಾಳ ಹೂಡಲು ಯಾರು ತಾನೇ ಮುಂದೆ ಬರುತ್ತಾರೆ?

ಯಾವ ಮಾನದಂಡದಲ್ಲಿ ನೋಡಿದರೂ ಕರ್ನಾಟಕವು ಉತ್ತರ ಪ್ರದೇಶಕ್ಕಿಂತ ಎಷ್ಟೋ ಮೇಲೆ ಇರುವ ರಾಜ್ಯ. ಆರೋಗ್ಯ, ಶಿಕ್ಷಣ, ಆಡಳಿತ ಸುವ್ಯವಸ್ಥೆ... ಹೀಗೆ ಯಾವುದರಲ್ಲಿಯೂ ಕರ್ನಾಟಕಕ್ಕೆ ಉತ್ತರ ಪ್ರದೇಶವು ಸರಿಸಾಟಿ ಅಲ್ಲ. ಉತ್ತರ ಪ್ರದೇಶದ ಯುವಕರು ಕೆಲಸ ಹುಡುಕಿಕೊಂಡು ಕರ್ನಾಟಕಕ್ಕೆ ಬರುತ್ತಿದ್ದಾರೆಯೇ ಹೊರತು ಕರ್ನಾಟಕದವರು ಉತ್ತರ ಪ್ರದೇಶಕ್ಕೆ ಹೋಗುತ್ತಿಲ್ಲ. ಹೀಗಿದ್ದರೂ ರಾಜ್ಯಕ್ಕೆ ಒಗ್ಗುವುದು ಸಾಧ್ಯವೇ ಇಲ್ಲದ ಮಾದರಿಯನ್ನು ಜನರ ಮೇಲೆ ಹೇರಲು ಹೊರಟಿರುವುದು ಹುಂಬತನದ ಪರಮಾವಧಿ, ಅಷ್ಟೇ ಅಲ್ಲ ಸರ್ಕಾರದ ಅಸಾಮರ್ಥ್ಯದ ತಪ್ಪೊಪ್ಪಿಗೆಯಂತಿದೆ.

ಉತ್ತರ ಪ್ರದೇಶದ ಸಮಾಜ ಕಲ್ಯಾಣ ಇಲಾಖೆಯಲ್ಲಿ ಅಡುಗೆ ಮಾಡುವ ಕೆಲಸಕ್ಕೆ ಅಧಿಸೂಚನೆ ಹೊರಡಿಸಿದರೆ ಲಕ್ಷಾಂತರ ಪದವೀಧರರು ಅರ್ಜಿ ಹಾಕುತ್ತಾರೆ. ಕಾಂಗ್ರೆಸ್ ಆಡಳಿತವು ಹಿಂದೆ ‘ಕರ್ನಾಟಕ ಮಾದರಿ’ ಹಾಕಿಕೊಟ್ಟಿದೆ. ಅದನ್ನು ಉಪಯೋಗಿಸಲು ಬಿಜೆಪಿ ಸರ್ಕಾರ ತಯಾರಿದ್ದಂತಿಲ್ಲ.

15ನೇ ಹಣಕಾಸು ಆಯೋಗದ ಒಪ್ಪಂದದ ಪ್ರಕಾರ, ಕರ್ನಾಟಕದಲ್ಲಿ ಸಂಗ್ರಹವಾದ ತೆರಿಗೆಯ ಪಾಲನ್ನು ಅಭಿವೃದ್ಧಿಯಲ್ಲಿ ಹಿಂದುಳಿದಿರುವ ಉತ್ತರ ಪ್ರದೇಶಕ್ಕೆ ನೀಡುತ್ತಿರುವುದು ಇವರಿಗೆ ಗೊತ್ತಿದೆಯೇ? ನಮ್ಮ ಹಣದಲ್ಲಿ ಅವರು ರಸ್ತೆ, ಸೇತುವೆಗಳನ್ನು ಕಟ್ಟುತ್ತಿದ್ದಾರೆ. ನಮ್ಮಲ್ಲಿಗಿಂತ ಐದು ಪಟ್ಟು ಅಧಿಕ ಅಪರಾಧ ಕೃತ್ಯಗಳು ಅಲ್ಲಿ ನಡೆಯುತ್ತಿವೆ.

ಕೃಷಿ, ಶಿಕ್ಷಣ, ಆರೋಗ್ಯ, ಉದ್ಯೋಗ ಸೃಷ್ಟಿ, ಉದ್ಯಮಶೀಲತೆ, ನವೋದ್ಯಮಗಳಿಗೆ ಪೂರಕ ವಾತಾವರಣ, ಆರ್ಥಿಕ ಚಟುವಟಿಕೆ, ಬಂಡವಾಳ ಹೂಡಿಕೆ, ತೆರಿಗೆ ಸಂಗ್ರಹ ಸೇರಿದಂತೆ ಎಲ್ಲಾ ವಿಷಯಗಳಲ್ಲಿ ಕರ್ನಾಟಕದ ಸಾಧನೆಗಳ ಹತ್ತಿರಕ್ಕೂ ಸುಳಿಯಲಾಗದ ಉತ್ತರ ಪ್ರದೇಶವನ್ನು ಮಾದರಿ ಎನ್ನುವುದು ನಾಚಿಕೆಗೇಡಿನ ಮಾತೇ ಸರಿ.

ಸಂವಿಧಾನದ ಮೌಲ್ಯಗಳನ್ನು ಉತ್ತರ ಪ್ರದೇಶದಲ್ಲಿ ಹತ್ಯೆ ಮಾಡಲಾಗುತ್ತಿದೆ. ಹಾಥರಸ್‌ನಲ್ಲಿ ಯುವತಿಯ ಮೇಲೆ ಅತ್ಯಾಚಾರ ಮಾಡಿ ಹತ್ಯೆ ಮಾಡಿದ್ದು ಇವರಿಗೆ ಗೊತ್ತಿದೆಯೇ? ಬಿಜೆಪಿ ಮುಖಂಡರು ತಮ್ಮ ಮನೆಯ ಹೆಣ್ಣುಮಕ್ಕಳನ್ನು ವಿದ್ಯಾಭ್ಯಾಸಕ್ಕೆ, ಉದ್ಯೋಗಕ್ಕೆ ಉತ್ತರ ಪ್ರದೇಶಕ್ಕೆ ಕಳಿಸಲು ಸಿದ್ಧರಿದ್ದಾರೆಯೇ? ಪ್ರಸ್ತುತ ವಾತಾವರಣದಲ್ಲಿ ಉತ್ತರ ಪ್ರದೇಶದಲ್ಲಿ ಮಹಿಳಾ ಸುರಕ್ಷತೆ, ಆರ್ಥಿಕತೆ, ಸಾಮಾಜಿಕ ನ್ಯಾಯವೆಂಬುದೇ ಇಲ್ಲದಂತಾಗಿದೆ.

ರಾಷ್ಟ್ರಕವಿ ಕುವೆಂಪು ಅವರು ರಚಿಸಿದ ನಾಡಗೀತೆಯಲ್ಲಿಯೇ ‘ಹಿಂದೂ, ಕ್ರೈಸ್ತ, ಮುಸಲ್ಮಾನ, ಪಾರಸಿಕ ಜೈನರುದ್ಯಾನ’ ಎಂಬ ಸರ್ವರಿಗೂ ಸಮಬಾಳಿನ ಆಶಯವಿದೆ. ಸರ್ವಜನಾಂಗದ ಶಾಂತಿಯ ತೋಟ ಎಂಬ ಉದಾತ್ತ ಪರಿಕಲ್ಪನೆ ಇದೆ. ಆದರೆ, ಉತ್ತರ ಪ್ರದೇಶದಲ್ಲಿ ಸರ್ವರನ್ನು ಒಳಗೊಳ್ಳುವ ಒಂದಾದರೂ ಯೋಜನೆಯನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ರೂಪಿಸಿದ್ದಿದೆಯೇ?

ಮಾತೆತ್ತಿದರೆ ಬುಲ್ಡೋಜರ್, ಶೂಟೌಟ್ ಎನ್ನುವ ಉತ್ತರ ಪ್ರದೇಶದಲ್ಲಿ ದಲಿತರು, ಹಿಂದುಳಿದವರ ಮೇಲೆ ಹಿಂಸೆ ನಡೆಸಿ ಗರ್ಜಿಸುತ್ತಿರುವುದು ಭಯದ ವಾತಾವರಣವನ್ನು ಉಂಟು ಮಾಡಿದೆ.ಅಲ್ಪಸಂಖ್ಯಾತರು ಎಂಬ ಒಂದೇ ಕಾರಣಕ್ಕೆ ಅಂಥವರ ಮನೆಗಳನ್ನು ಹುಡುಕಿ ಬುಲ್ಡೋಜರ್ ಬಳಸಿ ದಾಳಿ ಮಾಡಿದ್ದನ್ನು ಸಮರ್ಥಿಸುವುದಾದರೂ ಹೇಗೆ? ಭಾರತದ ಸಂವಿಧಾನದ ಆಶಯಗಳನ್ನು ಅರಿತಿರುವ ಯಾವುದೇ ಮುಖ್ಯಮಂತ್ರಿ ತನ್ನದೇ ರಾಜ್ಯದ ಪ್ರಜೆಗಳನ್ನು ಹೀಗೆ ಹಿಂಸೆಗೊಳಪಡಿಸುವುದನ್ನು ಒಪ್ಪುವುದಾದರೂ ಹೇಗೆ ಸಾಧ್ಯ? ಇದು ‘ಮಾದರಿ’ ಅಲ್ಲ, ಸಂವಿಧಾನದ ದಮನ. ಯಾವುದೋ ಒಂದು ರಾಜ್ಯದಲ್ಲಿ ಸಂವಿಧಾನವನ್ನು ದಮನ ಮಾಡುತ್ತಿದ್ದಾರೆ ಎಂದರೆ, ಅದನ್ನು ಮಾದರಿ ಎನ್ನಲು ಸಾಧ್ಯವೇ? ಕರ್ನಾಟಕದಂತಹ ವಿವೇಕವಂತ ಜನರಿರುವ ರಾಜ್ಯದಲ್ಲಿ ಅದರ ಅನುಷ್ಠಾನ ಮಾಡುವುದು ಬುದ್ಧಿಗೇಡಿ ವರ್ತನೆ ಅಲ್ಲವೇ?

ಉತ್ತರ ಪ್ರದೇಶದಲ್ಲಿ ಯಾವ ಕಾನೂನು, ಕಟ್ಟಳೆಗಳ ಭಯವೂ ಇಲ್ಲದಂತಾಗಿರುವುದನ್ನು ಇತ್ತೀಚಿನ ದಿನಗಳಲ್ಲಿ ಕಾಣುತ್ತಿದ್ದೇವೆ. ಹಾಥರಸ್‌ನಲ್ಲಿ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆಯ ಬಗ್ಗೆ ಮಾಹಿತಿ ಪಡೆಯಲು ತೆರಳುತ್ತಿದ್ದ ಕಾಂಗ್ರೆಸ್ ಮುಖಂಡರಾದ ಪ್ರಿಯಾಂಕಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರನ್ನು ಮಧ್ಯದಲ್ಲಿಯೇ ತಡೆದು ವಶಕ್ಕೆ ಪಡೆಯಲಾಯಿತು. ಕಾಂಗ್ರೆಸ್ ಕಾರ್ಯಕರ್ತರನ್ನು ಉತ್ತರ ಪ್ರದೇಶ ಪೊಲೀಸರು ಮನಬಂದಂತೆ ಥಳಿಸಿದರು. ಒಂದು ಕೊಲೆ, ಅತ್ಯಾಚಾರದ ಪ್ರಕರಣದಲ್ಲಿ ಸಂತ್ರಸ್ತ ಕುಟುಂಬದವರನ್ನು ಭೇಟಿ ಮಾಡಲು ವಿರೋಧ ಪಕ್ಷದ ನಾಯಕರು ಇಷ್ಟೊಂದು ಹರಸಾಹಸ ಪಡಬೇಕೇ? ತಮ್ಮ ವಿರೋಧಿಗಳನ್ನು ನಕಲಿ ಎನ್‌ಕೌಂಟರ್ ಹೆಸರಿನಲ್ಲಿ ಆದಿತ್ಯನಾಥ ಅವರು ಶೂಟೌಟ್ ಮಾಡಿಸಿ ಬೀಗುತ್ತಿದ್ದಾರೆ. ಕಾನೂನು ಕಟ್ಟಳೆಗಳ ಭಯವೇ ಇಲ್ಲದೇ ತಮಗೆ ತೋಚಿದಂತೆ ಆಡಳಿತ ನಡೆಸುತ್ತಿರುವ ವ್ಯವಸ್ಥೆಯನ್ನು ಕರ್ನಾಟಕಕ್ಕೆ ತಂದರೆ ಶಾಂತಿಪ್ರಿಯ ರಾಜ್ಯದ ಜನರ ಗತಿಯೇನಾಗಬಹುದು?

ಕರ್ನಾಟಕದವರು ಯಾವಾಗಲೂ ಕಾನೂನು, ಸಂವಿಧಾನವನ್ನು ನಂಬಿದವರು. ಕೋಮು ಸೌಹಾರ್ದ ಕುರಿತಂತೆ ಐತಿಹಾಸಿಕ ತೀರ್ಪುಗಳು ಕರ್ನಾಟಕದಲ್ಲಿ ಹೊರಬಂದಿವೆ. ಉತ್ತರ ಪ್ರದೇಶ ಮಾದರಿಯಿಂದ ಭೀತಿಗೊಳಗಾಗಿ ಕಳೆದ ಮೂರು ವರ್ಷಗಳಲ್ಲಿ 10 ಲಕ್ಷ ಜನರು ತಮ್ಮ ಭಾರತೀಯ ‍ಪೌರತ್ವವನ್ನು ತ್ಯಜಿಸಿದ್ದಾರೆ. ಈ ಮಾದರಿ ಬೇಕೆ ನಮಗೆ?

ಬುದ್ಧ, ಬಸವ, ಅಂಬೇಡ್ಕರ್ ಎಂದು ನಾವು ಒಂದೇ ಉಸಿರಿನಲ್ಲಿ ಹೇಳುತ್ತೇವೆ. ಬಸವ ತತ್ವದಲ್ಲಿ ಸಮಬಾಳು, ಸಮಪಾಲಿನ ಆಶಯವಿದೆ. ಆದರೆ, ಬಿಜೆಪಿಯವರ ಕೇಸರಿ ಶಾಲಿನಲ್ಲಿ ಒಂದೇ ಧರ್ಮದ ಶ್ರೇಷ್ಠತೆಯನ್ನು ಎತ್ತಿ ಹಿಡಿಲಾಗುತ್ತಿದೆ. ಆದರೆ, ಈ ಕೇಸರಿ ಶಾಲು ಬರೀ ಬಡವರು, ಹಿಂದುಳಿದವರ ಮಕ್ಕಳ ಬಳಿ ಮಾತ್ರ ಏಕಿರಬೇಕು? ಬಿಜೆಪಿ ನಾಯಕರ ಮಕ್ಕಳು ಕೇಸರಿ ಶಾಲು ಹಾಕಿಕೊಂಡು ಧರ್ಮ ರಕ್ಷಣೆ, ಗೋರಕ್ಷಣೆ ಮಾಡುತ್ತಿದ್ದಾರೆಯೇ? ಇಲ್ಲ. ಅವರೆಲ್ಲ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ ಪಡೆದು ಸ್ವಂತ ಉದ್ಯಮಗಳನ್ನು ನಡೆಸುತ್ತಿದ್ದಾರೆ.

ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ

ನಮಗಿಂತ ಕಳಪೆಯಾಗಿರುವುದನ್ನು ನಾವು ಮಾದರಿ ಎಂದು ಭಾವಿಸುತ್ತೇವೆ ಎಂದಾದರೆ, ನಾವು ಅಧಃಪತನದತ್ತ ಸಾಗುತ್ತಿದ್ದೇವೆ ಎಂದರ್ಥ.

ಸಮಾಜದ ಕಟ್ಟಕಡೆಯ ಮನುಷ್ಯನಿಗೆ ಸ್ವಾಭಿಮಾನದ ಬದುಕು ಕೊಡುವುದು, ಬಡತನದ ರೇಖೆಯಿಂದ ಮೇಲೆತ್ತುವುದು, ಸಂವಿಧಾನದ ಆಶಯಗಳನ್ನು ಮೇಲೆತ್ತುವುದು ಬಹಳ ಉತ್ತಮವಾದ ಮಾದರಿ, ಉತ್ತರ ಪ್ರದೇಶದ ಮಾದರಿ ಅನುಸರಿಸಿದರೆ ಇಲ್ಲಿನ ಜನರಿಗೆ ಶಿಕ್ಷಣ, ಉದ್ಯೋಗವಷ್ಟೇ ಅಲ್ಲ ಕೊನೆಗೆ ನೆಮ್ಮದಿಯೂ ಸಿಗುವುದಿಲ್ಲ. ಕರ್ನಾಟಕಕ್ಕೆ ಅದರದ್ದೇ ಆದ ಗೌರವಯುತ ಮಾದರಿ ಇದೆ, ಕೋಮು ಸೌಹಾರ್ದದ ಉದಾರವಾದಿ ಮಾದರಿ ಇದೆ. ಅದನ್ನು ಉಳಿಸಿಕೊಂಡರೆ ಅಷ್ಟೇ ಸಾಕು.

ಲೇಖಕ:ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ

ನಿರೂಪಣೆ: ಮನೋಜಕುಮಾರ್ ಗುದ್ದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT