ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆ | ಗಾಯ ಕೆರೆದು ವಿಷ ಹಚ್ಚುವ ವಿಕೃತಿ

Last Updated 20 ಆಗಸ್ಟ್ 2021, 20:15 IST
ಅಕ್ಷರ ಗಾತ್ರ

ಆಗಸ್ಟ್‌ 14ರಂದು ದೇಶ ವಿಭಜನೆಯ ಕರಾಳ ದಿನವನ್ನಾಗಿ ಆಚರಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಹುಕುಂ ಹೊರಡಿಸಿದ್ದಾರೆ. ಈ ಮೂಲಕ ಇತಿಹಾಸದ ನೋವಿನ ನೆನಪುಗಳನ್ನು ಕೆರೆದು ರಣ ಗಾಯ ಮಾಡಿ ಕೋಮು ಧ್ರುವೀಕರಣದ ಸುಳಿಗೆ ಮತ್ತೆ ದೇಶವನ್ನು ತಳ್ಳುವ ಕುಟಿಲ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಸೋಗೇ ಇಲ್ಲದ ಹವಣಿಕೆ ಇದು! ಸಂದ ಕಾಲದ ಕಲ್ಪಿತ ಮತ್ತು ನೈಜ ನೋವುಗಳನ್ನು ಕೆದಕಿ ವರ್ತಮಾನದಲ್ಲಿ ಸೇಡು ತೀರಿಸಿಕೊಳ್ಳುವ ಹವಣಿಕೆಯ ನಾಯಕತ್ವ
ಆಯಾ ದೇಶಗಳನ್ನು ಸರ್ವನಾಶ ಮಾಡಿದೆ.ಹಿಟ್ಲರ್‌ ಮಾಡಿದ್ದೂ ಇದನ್ನೇ.

ನಮ್ಮ ಹಳ್ಳಿಗಳಲ್ಲಿ ಆಸ್ತಿ, ಜಾತಿ ಕಾರಣಕ್ಕೆ ಜಗಳ ಬಡಿದಾಟಗಳು ನಡೆದಿವೆ, ನಡೆಯುತ್ತಲೇ ಇವೆ. ಆದರೆ ಬಹುತೇಕ ಸಂದರ್ಭಗಳಲ್ಲಿ ಊರ ಹಿರಿಯರು/ ಕುಟುಂಬದ ಹಿರೀಕರು ‘ಇವೆಲ್ಲಾ ಇಟ್ಕೋಬಾರದಪ್ಪಾ, ಆದದ್ದು ಆಗಿ ಹೋಯಿತು’ ಎಂದು ರಾಜಿ ಮಾಡಿಸಿ ಸೌಹಾರ್ದ ಬೆಸೆಯುವ ಕೆಲಸ ಮಾಡಿಯೇ ಇದ್ದಾರೆ. ಇದು ನಮ್ಮ ಪರಂಪರೆ. ಹಳೆಯದ್ದನ್ನು ನೆನಪಿಸಿ ಕಡ್ಡಿಯಾಡಿಸುವ ದುಷ್ಟ ಬುದ್ಧಿಗಳನ್ನು ನಮ್ಮ ಗ್ರಾಮಗಳಲ್ಲೇ ಹೇಯವಾಗಿ ನೋಡುತ್ತಾರೆ.

ಇಂಥಾ ಕಲಹ, ಹತ್ಯೆಗಳು ನಮಗೆ ಹೊಸತಲ್ಲ. ಮಹಾಭಾರತ ಇಲ್ಲವೇ? ಯಾದವೀ ಕಲಹವೆಂಬ ನುಡಿಗಟ್ಟೇ ಸೃಷ್ಟಿಯಾಯಿತಲ್ಲ?

ಅಷ್ಟೇಕೆ ಈ ವಿಭಜನೆ ಎನ್ನುವುದನ್ನು ಮತೀಯ ಕಾರಣದ ವಿಭಜನೆಗಷ್ಟೇ ಯಾಕೆ ಸೀಮಿತಗೊಳಿಸಬೇಕು? ‘1947ರ ವಿಭಜನೆಯ ಹೊರತಾಗಿಯೂ ಈ ದೇಶದಲ್ಲಿ ಪ್ರಾಂತೀಯ ವಿಭಜನೆಗಳಾಗಿವೆ. ಸ್ವತಃ ಮೋದಿಯವರ ಗುಜರಾತ್‌ ಹುಟ್ಟಿದ್ದೇ ಇಂಥಾ ಭಾಷಾ ಪ್ರಾಂತ್ಯದ ಬೇಡಿಕೆಯಿಂದ. ಐದು ಮಂದಿ ವಿದ್ಯಾರ್ಥಿಗಳು ಈ ಗುಜರಾತು ರಾಜ್ಯ ಬೇಡಿಕೆಯ ಚಳವಳಿಯಲ್ಲಿ ಹುತಾತ್ಮರಾದರು. ಪೊಟ್ಟಿ ಶ್ರೀರಾಮುಲು ಜೀವ ತ್ಯಾಗ ಮಾಡಿದ್ದು ಆಂಧ್ರಪ್ರದೇಶದ ಸೃಷ್ಟಿಗಾಗಿ. ಈಗಲೂ ಈ ಭಾಷಾವಾರು ವಿಭಜನೆಯ ಅತೃಪ್ತಿಯ ಕೆಂಡಗಳು ಹಾಗೇ ಉಳಿದಿವೆ. ಅವನ್ನೆಲ್ಲಾ ಏನು ಮಾಡುವುದು?

ದೇಶ ವಿಭಜನೆಯ ಘೋಷಣೆ ಆಗಿದ್ದು 1947ರ ಜೂನ್‌ನಲ್ಲಿ. ಆಗಸ್ಟ್‌ 14–15 ಬ್ರಿಟಿಷರಿಂದ ದೇಶವು ಸ್ವಾತಂತ್ರ್ಯ ಪಡೆದ ದಿನಗಳು. ಪಾಕಿಸ್ತಾನ ಆಗಸ್ಟ್‌ 14ಕ್ಕೆ ಇದನ್ನು ಆಚರಿಸುತ್ತಿದೆ. ಆಗಸ್ಟ್‌ 14–15ರಂದು ಭಾರತ-ಪಾಕಿಸ್ತಾನದ ಸೈನ್ಯದವರು ಗಡಿಯಲ್ಲಿ ಪರಸ್ಪರ ಸಿಹಿ ಹಂಚಿಕೊಳ್ಳುತ್ತಾರೆ. ಮೋದಿಯ ಹುನ್ನಾರ ಇನ್ನಷ್ಟು ವಿಷಕಾರಿಯಾಗುವುದು ಈ ಕಾರಣಕ್ಕೆ. ನಾಳೆ ಪಾಕಿಸ್ತಾನ ಆಗಸ್ಟ್‌ 15 ಅನ್ನು ಇದೇ ರೀತಿ ಆಚರಿಸಹೊರಟರೆ ಎರಡೂ ದೇಶಗಳು ಶಾಶ್ವತ ವೈಷಮ್ಯದ ಒಪ್ಪಂದಕ್ಕೆ ಸಹಿ ಹಾಕಿದವು ಎಂದೇ ಅರ್ಥ!

ದೇಶ ವಿಭಜನೆಯನ್ನೇ ನೆನಪಿಸುವುದಾದರೆ, ದೇಶ ವಿಭಜನೆಯೆಂಬುದು ಮತ ಭಿನ್ನತೆಯ ನೆಪದ ಕಾರಣಕ್ಕಾಯಿತು ನಿಜ. ಇದನ್ನು ಜಿನ್ನಾ, ಹುಸೇನ್‌ ಸುಹ್ರವರ್ದಿಯವರ ನಾಯಕತ್ವವನ್ನು ಅನುಮೋದಿಸಿದ ಮುಸ್ಲಿಮರಷ್ಟೇ ಒಪ್ಪಿಕೊಂಡರು. ದೇಶದ ಬಹುಸಂಖ್ಯಾತ ಮುಸ್ಲಿಮರು ಇದನ್ನು ಅನುಮೋದಿಸಲಿಲ್ಲ. ‘1947ರಲ್ಲೇ ಮುಸ್ಲಿಂ ನಾಯಕರು ಹಿಂದೂ ದಾಳಿಯ ಬಗ್ಗೆ, ಹಿಂದೂ ಮಹಾ ಸಭಾ ಮತ್ತಿತರ ಸಂಘಟನೆಗಳ ನಾಯಕರುಮುಸ್ಲಿಮರ ದಾಳಿಯ ಬಗ್ಗೆ ಅತಿರಂಜಿತ ಕತೆಗಳನ್ನು ಹಬ್ಬಿಸುತ್ತಾ ಸಮೂಹ ಸನ್ನಿಯೊಂದು ಅಡ್ಡಡ್ಡ ಹರಡಲು ಕಾರಣವಾದರು. ಖ್ಯಾತ ಬರಹಗಾರ ನೀರದ್‌ ಚೌಧರಿ ಇಂಥಾ ಮಾರಣ ಹೋಮವನ್ನು ಕಣ್ಣಾರೆ ಕಂಡಿದ್ದರು. ನೀರದ್‌ ಚೌಧರಿ ಅವರಬರಹದ ತುಣುಕು ನೋಡಿ: ‘ಒಬ್ಬ ವ್ಯಕ್ತಿಯನ್ನು ಕಂಬಕ್ಕೆ ಕಟ್ಟಿ ತಲೆಗೆ ಸಣ್ಣ ತೂತು ಮಾಡಿ ಆತ ನಿಧಾನಕ್ಕೆ ಸಾಯುವುದನ್ನು ಜನರ ಗುಂಪುನೋಡುತ್ತಾ ನಿಂತಿತ್ತು. ಇನ್ನೊಂದೆಡೆ ಹದಿನಾಲ್ಕರ ಹರೆಯದ ಹುಡುಗನನ್ನು ಬೆತ್ತಲೆ ನಿಲ್ಲಿಸಿ ಆತ ಮುಸ್ಲಿಂ ಎಂದು ಖಾತ್ರಿಮಾಡಿಕೊಂಡು, ಆತನನ್ನು ಕೆರೆಗೆ ತಳ್ಳಿ ಬಿದಿರು ಗಳದಲ್ಲಿ ಒತ್ತಿ ಹಿಡಿದು ಸಾಯಿಸಲಾಯಿತು. ಇಂಗ್ಲೆಂಡಿನಲ್ಲಿ ಓದಿ ಬಂದಿದ್ದ ಬಂಗಾಳಿ ಎಂಜಿನಿಯರ್‌ ಒಬ್ಬ ತನ್ನ ರೋಲೆಕ್ಸ್‌ ವಾಚಿನಲ್ಲಿ ಈ ಹುಡುಗ ಸಾಯಲು ಎಷ್ಟು ನಿಮಿಷ ತಗುಲಿತುಎಂದು ನೋಡಿದ್ದ!’

ಗಮನಿಸಿ: ಸಾಯಲು ಎಷ್ಟು ಸಮಯ ಹಿಡಿಯಿತು ಎಂದು ನೋಡಿದವನು ಪರಮ ಶಿಕ್ಷಿತ. ಇಂಗ್ಲೆಂಡಿನಲ್ಲಿ ಓದಿ ಬಂದವನು. ಈ ದೇಶ ವಿಭಜನೆಯ ಹಿಂಸಾಚಾರವನ್ನು ಸಾಬರು ಮಾಡಿದ ಹಿಂಸಾಚಾರ ಎಂದು ಬಿಂಬಿಸುವುದೂ ಲೆಕ್ಕಾಚಾರದ ಕುಯುಕ್ತಿ. ಮೂಲತಃ ಈ ಕಣ್ಣಿಗೆ ಕಣ್ಣು ಎಂಬುದನ್ನು ಎರಡೂ ಕೋಮಿನ ಕಾಮಾಲೆ ಗಣ್ಣಿನ ನಾಯಕರು ಪೋಷಿಸಿದರು ಎಂಬುದನ್ನು ಮರೆಯಕೂಡದು.

ಈ ಎರಡು ದೇಶಗಳ ಸಿದ್ಧಾಂತವನ್ನು ಮೊದಲು ಸೃಷ್ಟಿಸಿದ್ದೇ ಸಾವರ್ಕರ್.‌ ಆದರೆ ಅವರಿಗೆ ದೇಶ ವಿಭಜನೆ ಬೇಡ, ಅಖಂಡ ಭಾರತ ಇರಬೇಕು, ಅಲ್ಲಿ ಅಲ್ಪಸಂಖ್ಯಾತರು ಹಿಂದೂ ಆಡಳಿತದ ನಿರೀಕ್ಷೆಗೆ ತಕ್ಕಂತೆ ಬಾಳಬಹುದು ಎಂಬ ನಿಲುವು ಇತ್ತು!

ಅಮ್ಟಸ್‌ ಸಲಾಂ ಎಂಬ 23ರ ಯುವತಿಯು ಗಾಂಧಿಯ ಅನುಯಾಯಿಯಾಗಿ ಪ್ರಾಣ ಪಣಕ್ಕಿಟ್ಟು ನೌಖಾಲಿಯಲ್ಲಿ ಈ ಕೋಮು ದಳ್ಳುರಿಯನ್ನು ನಂದಿಸಲು 21 ದಿನಗಳ ಕಾಲ ಉಪವಾಸ ಹೂಡಿದ್ದರಿಂದ ನೌಖಾಲಿ ಮತ್ತು ಸುತ್ತ ಮುತ್ತಲಿನ ಮೂರು ಜಿಲ್ಲೆಗಳಲ್ಲಿ ಈ ಪಾಶವೀ ಹಿಂಸೆ, ಲೂಟಿ, ಅತ್ಯಾಚಾರಗಳು ನಿಂತು ಹೋದವಷ್ಟೇ ಅಲ್ಲ, ಇನ್ನೆಂದೂ ನಾವು ಇಂಥಾ ಬರ್ಬರ ಕೋಮು ದ್ವೇಷದ ಉನ್ಮಾದಕ್ಕೊಲಿಯುವುದಿಲ್ಲ ಎಂದು ಹಿಂದೂ-ಮುಸ್ಲಿಂ ನಾಯಕರು ವಚನವಿತ್ತರು. ಇಂಥಾ ಎಲ್ಲಾ ಹಿಂಸಾಚಾರಗಳಲ್ಲೂ ಇದರ ಆತ್ಯಂತಿಕ ಹಿಂಸೆ ಅನುಭವಿಸುವುದು ಮಹಿಳೆಯರೇ. ದೇಶ ವಿಭಜನೆಯ ಹಿಂಸಾಚಾರದಲ್ಲಿ ಅತ್ಯಂತ ಸೆಕ್ಯುಲರ್‌ ಆಗಿ ಮಹಿಳೆಯರ ಮೇಲೆ ಅತ್ಯಾಚಾರ ನಡೆದಿತ್ತು. ಕೋಮು ಪ್ರತೀಕಾರ ಎನ್ನುವುದು ನೆಪ. ಹೆಣ್ಣನ್ನು ಕಂಡ ತಕ್ಷಣ ಪಾಶವೀ ಕಾಮತೃಷೆ ನೀಗಿಸಿಕೊಳ್ಳುವುದು ಕೂಡಾ ಈ ಧರ್ಮದ ಸೇವೆಯ ಭಾಗವಾಗಿ ಹೋಯಿತು. ಇಂಥಾ ಮಹಿಳೆಯರಿಗೆ ಅಮ್ಟಸ್‌ ಸಲಾಂ ಪಟಿಯಾಲಾದ ಬಳಿ ಕಸ್ತೂರ್‌ ಬಾ ಮಂದಿರ್‌ ಎಂಬ ಪುನರ್ವಸತಿ ಕೇಂದ್ರ ಆರಂಭಿಸಿದ್ದರು. ಅವರಿಗೆ ಎಲ್ಲಾ ಧರ್ಮಗಳ ಹೆಂಗಸರು ಅತ್ಯಾಚಾರಕ್ಕೆ ಬಲಿಯಾಗುವ ಬಗೆ ಒಂದೇ ರೀತಿಯದ್ದು ಎಂದು ಗೊತ್ತಿತ್ತು.

ದೇಶ ವಿಭಜನೆಯ ಕಾಲದ ಕೋಮು ಹಿಂಸೆಯ ಕ್ರೌರ್ಯ ಹೇಗಿದ್ದಿರಬಹುದು ಎಂಬುದರ ಒಂದು ಝಲಕ್‌ ಗೋಧ್ರೋತ್ತರ ಹಿಂಸಾಚಾರದಲ್ಲಿ ನಮಗೆ ಕಂಡಿದೆ! ಮೋದಿ ತಮ್ಮ ಉದ್ದೇಶಪೂರ್ವಕ ನಿಷ್ಕ್ರಿಯತೆಯ ಮೂಲಕ ಈ ಹಿಂಸಾಚಾರವನ್ನು ವ್ಯಾಪಕಗೊಳಿಸಿದರು. ಸುಹ್ರವರ್ದಿ 1946ರಲ್ಲಿ ಕಲ್ಕತ್ತಾದಲ್ಲಿ ಇದೇ ರೀತಿಯ ಉದ್ದೇಶಪೂರ್ವಕ ನಿರ್ಲಕ್ಷ್ಯ ತೋರಿ ಸಾವಿರಾರು ಮಂದಿಯ ಮಾರಣ ಹೋಮಕ್ಕೆ ಕಾರಣರಾಗಿದ್ದರು. ಅಷ್ಟೇಕೆ, ‘ಒಂದು ದೊಡ್ಡ ಧ್ಯೇಯಕ್ಕೆ ಇಂಥಾ ಬಲಿ ಅನಿವಾರ್ಯ’ ಎಂದು ಹೇಳುವ ಭಂಡತನ ತೋರಿದ್ದರು. ಆದ್ದರಿಂದಲೇ ಮೋದಿಯವರು ಈ ಕೋಮು ಹಿಂಸೆಯ ದುರಂತವನ್ನು ಈಗಿನ ತಲೆಮಾರಿಗೆ ತಿಳಿಸಲು ದೇಶ ವಿಭಜನೆಯ ಕತೆಗಳನ್ನಷ್ಟೇ ಅಲ್ಲ, ಗೋಧ್ರೋತ್ತರ ಹಿಂಸಾಚಾರದ ಉದಾಹರಣೆಯನ್ನೂ ತಮ್ಮ ಸಿಲೆಬಸ್ಸಿನಲ್ಲಿ ಸೇರಿಸಿಕೊಳ್ಳಬೇಕು. ನೋವು ಮರೆತು ಬದುಕು ಕಟ್ಟಿಕೊಳ್ಳಲು ನೋಡುತ್ತಿರುವ ದೇಶದ ಮನಸ್ಸಿಗೆ ಮತ್ತೆ ಹುಳಿ ಹಿಂಡುವ ಕೆಲಸ ಮಾಡುವ ನಾಯಕ ನಾಯಕನೇ ಅಲ್ಲ, ಅಧಿಕಾರದ ವಿಕೃತ ಲಾಲಸಿ ಅಷ್ಟೇ.

ಲೇಖಕ: ಸಾಮಾಜಿಕ ವಿಶ್ಲೇಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT