ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆ: ತೆರಿಗೆ ಆದಾಯ ಹಂಚಿಕೆ; ಆರ್ಥಿಕ ದಿವಾಳಿಯತ್ತ ರಾಜ್ಯ– ಬಸವರಾಜ ಬೊಮ್ಮಾಯಿ

ತೆರಿಗೆ ಆದಾಯ ಹಂಚಿಕೆ: ಕೇಂದ್ರದಿಂದ ರಾಜ್ಯಕ್ಕೆ ತಾರತಮ್ಯ ಆಗಿದೆಯೇ? ಬಸವರಾಜ ಬೊಮ್ಮಾಯಿ ಅವರ ಲೇಖನ
ಬಸವರಾಜ ಬೊಮ್ಮಾಯಿ
Published 12 ಜನವರಿ 2024, 19:19 IST
Last Updated 12 ಜನವರಿ 2024, 19:19 IST
ಅಕ್ಷರ ಗಾತ್ರ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅತಿ ಹೆಚ್ಚು ಬಜೆಟ್ ಮಂಡನೆ ಮಾಡಿರುವ ಖ್ಯಾತಿ ಹೊಂದಿದ್ದರೂ ಗ್ಯಾರಂಟಿಗಳ ಸುಳಿಯಲ್ಲಿ ಸಿಕ್ಕಿಕೊಂಡ ಅವರು ಆರ್ಥಿಕತೆಯನ್ನು ಸಬಲೀಕರಣ ಮಾಡುವ ಎಲ್ಲ ಅವಕಾಶಗಳನ್ನು ಗಾಳಿಗೆ ತೂರಿದ್ದಾರೆ. ಇದರಿಂದಾಗಿ ಆರ್ಥಿಕ ಸಂಕಷ್ಟ, ಅಭಿವೃದ್ಧಿಯ ಶೂನ್ಯತೆ ಮತ್ತು ಆರ್ಥಿಕ ನಿರ್ವಹಣೆಯಲ್ಲಿ ಪಾರದರ್ಶಕತೆಯ ಕೊರತೆ ಜತೆಗೆ ಖಜಾನೆ ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ. ಹೀಗಾಗಿ, ಸರ್ಕಾರದ ಖಜಾನೆ ಕೇವಲ ಏಳು ತಿಂಗಳಲ್ಲಿಯೇ ಖಾಲಿಯಾಗಿದ್ದು, ಮುಂದಿನ ಹಲವಾರು ವರ್ಷ ರಾಜ್ಯ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.

ತಮ್ಮ ಗ್ಯಾರಂಟಿಗಳ ನಿರ್ವಹಣೆಗೆ ಬೇಕಾಗಿರುವ ಹಣಕಾಸಿನ ವ್ಯವಸ್ಥೆ ಮಾಡದ ಮುಖ್ಯಮಂತ್ರಿ, ಬಜೆಟ್‌ನಲ್ಲಿ ವಿವಿಧ ಇಲಾಖೆಗಳಿಗೆ ನೀಡಲಾಗಿದ್ದ ಹಣ ನೀಡದೇ, ಅಭಿವೃದ್ಧಿ ಕೆಲಸಕ್ಕೆ ತಿಲಾಂಜಲಿ ಹಾಡಿದ್ದಾರೆ.  ಈಗ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನವನ್ನು ಯಥಾ ಪ್ರಕಾರ ಮುಂದುವರಿಸಿದ್ದಾರೆ. ಆದರೆ, ವಾಸ್ತವಾಂಶವನ್ನು ಕರ್ನಾಟಕದ ಜನರಿಗೆ ತಿಳಿಸಬೇಕಾದ ಜರೂರು ಇದೆ.  ಅದು ವಿರೋಧ ಪಕ್ಷವಾದ ನಮ್ಮ ಕರ್ತವ್ಯವೂ ಆಗಿದೆ.

ಸಿದ್ದರಾಮಯ್ಯ ಮಂಡಿಸಿರುವ ಜುಲೈ ತಿಂಗಳ ಬಜೆಟ್‌ನಲ್ಲಿ ಅಬಕಾರಿ ತೆರಿಗೆ, ವಾಹನ ತೆರಿಗೆ, ನೋಂದಣಿ ಮುದ್ರಾಂಕ ಶುಲ್ಕ ಹೆಚ್ಚಳದಿಂದಾಗಿ ಸಾಮಾನ್ಯ ಜನರ ಮೇಲೆ ಬಹಳ ದೊಡ್ಡ ಭಾರ ಬಿದ್ದಿದೆ. ಇದೇ ಸಂದರ್ಭದಲ್ಲಿ ವಿದ್ಯುತ್ ಶಕ್ತಿ ಬಳಕೆಯ ಶುಲ್ಕವನ್ನು ಎರಡರಿಂದ ಮೂರು ಪಟ್ಟು ಹೆಚ್ಚಿಸಿರುವುದು, ಹಾಲಿನ ದರ ಹೆಚ್ಚಳ ಇವೆಲ್ಲವೂ ಜನರಿಗೆ ಹೊರೆಯಾಗಿವೆ. ಇದಲ್ಲದೇ ಇವರು ಸುಮಾರು ₹85,818 ಕೋಟಿ ಸಾಲ ಮಾಡಿ ಅತಿ ಹೆಚ್ಚು ಸಾಲ ಮಾಡಿದ ಸರ್ಕಾರವೆಂಬ ‘ಕೀರ್ತಿ’ಯನ್ನೂ ಸಂಪಾದಿಸಿದ್ದಾರೆ.

15ನೇ ಹಣಕಾಸು ಆಯೋಗವು ಕಡಿಮೆ ಅನುದಾನ ನೀಡುವ ಮೂಲಕ ಕೇಂದ್ರ ಸರ್ಕಾರ ಅತ್ಯಂತ ಕಡಿಮೆ ಹಣವನ್ನು ಕೊಟ್ಟಿದೆ ಎಂದು ಮುಖ್ಯಮಂತ್ರಿ ಪದೇ ಪದೇ ಆಪಾದನೆ ಮಾಡುತ್ತಾರೆ. 15ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ಎನ್‌ಡಿಎ ಸರ್ಕಾರ ಈಗಾಗಲೇ ₹1,16,828 ಕೋಟಿ ಬಿಡುಗಡೆ ಮಾಡಿದೆ. ಈ ಆಯೋಗದ ಅವಧಿ 2026ರವರೆಗೆ ಇದ್ದು ಒಟ್ಟು ₹2.5 ಲಕ್ಷ ಕೋಟಿಗೂ ಮೀರಿ ತೆರಿಗೆಯ ಹಂಚಿಕೆ ಕರ್ನಾಟಕಕ್ಕೆ ಬರಲಿದೆ. ಈ ಮೊತ್ತವು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಇದ್ದಾಗ, 14ನೇ ಹಣಕಾಸಿನ ಶಿಫಾರಸ್ಸಿನಂತೆ ನೀಡಿದ್ದ ಮೊತ್ತದಕ್ಕಿಂತ ₹1,51,309 ಕೋಟಿಗಳಷ್ಟು ಅತ್ಯಧಿಕವಾಗಿದೆ.

15ನೇ ಹಣಕಾಸಿನ ಆಯೋಗದ ಅವಧಿಯಲ್ಲಿ ರಾಜ್ಯ ಸರ್ಕಾರದ ಪಾಲು ಶೇ3.6ಕ್ಕೆ ಇಳಿಯಲು ನೇರವಾಗಿ ಸಿದ್ದರಾಮಯ್ಯ ಸರ್ಕಾರವೇ ಕಾರಣ. ಏಕೆಂದರೆ 15ನೇ ಹಣಕಾಸು ಆಯೋಗದ ವರದಿ ತಯಾರಿ ಮಾಡುವಾಗ ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಇತ್ತು. ರಾಜ್ಯದ ವಾಸ್ತವ ಆರ್ಥಿಕ ಸ್ಥಿತಿಯನ್ನು ಬಿಂಬಿಸಲು ವಿಫಲವಾಗಿ ಹಣಕಾಸಿನ ಆಯೋಗಕ್ಕೆ ಮನವರಿಕೆ ಮಾಡಿಕೊಡಲು ಸೋತಿದ್ದರಿಂದ ರಾಜ್ಯಕ್ಕೆ ಹಿನ್ನಡೆಯಾಗಿದೆ. ಇದನ್ನು ಸಿದ್ದರಾಮಯ್ಯ ಮುಚ್ಚಿಡುತ್ತಿದ್ದಾರೆ.

ಜಿಎಸ್‌ಟಿ ಪರಿಹಾರ ಬಂದಿಲ್ಲ ಎಂದು ಸಿದ್ದರಾಮಯ್ಯ ಮತ್ತೊಂದು ಗುರುತರ ಆಪಾದನೆ ಮಾಡುತ್ತಿದ್ದಾರೆ. ಈ ಮೊತ್ತವನ್ನು ಕೇಂದ್ರ ಸರ್ಕಾರ ಕಾಲ ಕಾಲಕ್ಕೆ ಬಿಡುಗಡೆ ಮಾಡಿದೆ. 2023ರ ಅಕ್ಟೋಬರ್ 25ಕ್ಕೆ ಒಟ್ಟು ₹2,300 ಕೋಟಿ ಬಾಕಿ ಇದ್ದು, ₹1191.40 ಕೋಟಿಯನ್ನು ಕೇಂದ್ರ ಬಿಡುಗಡೆ ಮಾಡಿದೆ. ಇದಲ್ಲದೇ 2020-21, 21-22 ರಲ್ಲಿ ವಿಶೇಷ ₹23,000 ಕೋಟಿ ಸಾಲವನ್ನು ನೀಡಿದ್ದು, ಅದರ ಬಡ್ಡಿಯನ್ನು ಕೇಂದ್ರ ಸರ್ಕಾರವೇ ಭರಿಸಲಿದೆ  ಮತ್ತು ಕೇಂದ್ರದ ಸೆಸ್‌ನಲ್ಲಿಯೇ ಸಾಲ ಮರುಪಾವತಿಯಾಗಲಿದೆ. ಇದು ಕೋವಿಡ್‌ ಸಂದರ್ಭದಲ್ಲಿ ಕರ್ನಾಟಕದ ಆರ್ಥಿಕ ಪರಿಸ್ಥಿತಿ ಕುಸಿದು ಹೋಗುವುದನ್ನು ತಡೆಯಲು ಕೇಂದ್ರ ಸರ್ಕಾರ ಕೈಗೊಂಡ ಅತ್ಯಂತ ದೊಡ್ಡ ಉಪಕ್ರಮವಾಗಿದೆ.

ಇದಲ್ಲದೇ, ರಾಜ್ಯಕ್ಕೆ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ₹10,990 ಕೋಟಿ ಕಳೆದ ಮಾರ್ಚ್ ವರೆಗೂ ಬಂದಿದೆ. ರಾಷ್ಟ್ರೀಯ ಹೆದ್ದಾರಿ ಅನುದಾನದಡಿ ಕಳೆದ ಐದು ವರ್ಷಗಳಲ್ಲಿ ₹30 ಸಾವಿರ ಕೋಟಿ ಲಭಿಸಿದೆ. ಕಳೆದ 75 ವರ್ಷದಲ್ಲಿ ರಾಜ್ಯದ 25 ಲಕ್ಷ ಮನೆಗಳಿಗೆ ನೀರು ಕೊಡಲಾಗಿತ್ತು ಮೋದಿಯವರ ದೂರದೃಷ್ಟಿಯಿಂದಾಗಿ ಕಳೆದ ಮೂರು ವರ್ಷಗಳಲ್ಲಿ ಜಲ ಜೀವನ್ ಮಿಷನ್ ಯೋಜನೆ ಅಡಿಯಲ್ಲಿ 30 ಲಕ್ಷ ಮನೆಗಳಿಗೆ ಕುಡಿಯುವ ನೀರು ಒದಗಿಸಲಾಗಿದೆ. ಇದಲ್ಲದೇ ಭದ್ರಾ ಮೇಲ್ದಂಡೆ ಯೋಜನೆಗೆ ₹5,000 ಕೋಟಿ, ಸಬರ್ಬನ್‌ ರೈಲಿಗೆ ₹15 ಸಾವಿರ ಕೋಟಿ, ಮೆಟ್ರೊ ರೈಲು ಯೋಜನೆಗಳಿಗೆ ಭರಪೂರ ನೆರವು ಕೇಂದ್ರದಿಂದ ಬಂದಿದೆ.

ಒಟ್ಟಾರೆ 2019-20ರಿಂದ 2022-23ಕ್ಕೆ ₹1,57,218 ಕೋಟಿ, 105 ಕೇಂದ್ರ ಪುರಸ್ಕೃತ ಯೋಜನೆಗಳಾದ ಎನ್‌ಎಚ್ಎಂ, ಅಮೃತ ಯೋಜನೆ, ಎಂ ನರೇಗಾ, ಸ್ಮಾರ್ಟ್ ಸಿಟಿ ಇತ್ಯಾದಿಗಳಿಗೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದೆ. ಇಷ್ಟೆಲ್ಲ ಕೇಂದ್ರದಿಂದ ಹಣ ಬಂದರೂ ಕೂಡ ಮುಖ್ಯಮಂತ್ರಿಯವರು ಇದನ್ನು ಮರೆ ಮಾಚಿ ಕೇಂದ್ರದಿಂದ ಅನ್ಯಾಯವಾಗಿದೆ ಎಂದು ಬೊಬ್ಬೆ ಹಾಕುತ್ತಿದ್ದಾರೆ. ಇದು ಕನ್ನಡಿಗರನ್ನು ಕೇಂದ್ರದ ವಿರುದ್ಧ ಎತ್ತಿಕಟ್ಟುವ ಕೆಲಸವಲ್ಲದೇ ಬೇರೇನಲ್ಲ.

ಕರ್ನಾಟಕ ರಾಜ್ಯ ಆರ್ಥಿಕವಾಗಿ ಹಿನ್ನಡೆಯತ್ತ ಸಾಗಿರುವುದು ಬಹಳ ಸ್ಪಷ್ಟ. ರಾಜ್ಯದ ಆರ್ಥಿಕತೆಯು ಮುಖ್ಯಮಂತ್ರಿ ಹೇಳಿದಂತೆ ಸಧೃಡವಾಗಿದ್ದರೆ, ಅವರ ಬಜೆಟ್‌ನಲ್ಲಿ ಅನುಮೋದನೆ ಪಡೆದಿರುವ ₹3,27,747 ಕೋಟಿಗಳಲ್ಲಿ ಸರ್ಕಾರಿ ನೌಕರರ ಸಂಬಳ, ಪಿಂಚಣಿ ಮತ್ತು ಸಾಲ ಮರುಪಾವತಿ ಬಿಟ್ಟರೆ ಅಭಿವೃದ್ಧಿಗಾಗಿ ಎಷ್ಟು ಹಣ ಖರ್ಚು ಮಾಡಿದ್ದಾರೆ ಎನ್ನುವುದನ್ನು ಜನರಿಗೆ ಅವರು ತಿಳಿಸಲಿ. 

ಕರ್ನಾಟಕ ರಾಜ್ಯಕ್ಕೆ ಹರಿದು ಬರುತ್ತಿದ್ದ ವಿದೇಶಿ ನೇರ ಬಂಡವಾಳದಲ್ಲಿ ಶೇ 46ರಷ್ಟು ಕುಸಿದಿದೆ. ಡಾಲರ್‌ ಲೆಕ್ಕಾಚಾರದಲ್ಲಿ ನೋಡುವುದಾದರೆ, ಈ ಮೊತ್ತವು 5.3 ಬಿಲಿಯನ್ ಡಾಲರ್ ಇತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದು ಅರ್ಧವರ್ಷದಲ್ಲೇ ಇದು 2.8 ಬಿಲಿಯನ್ ಡಾಲರ್‌ಗೆ ಇಳಿದಿದೆ. ಕಳೆದ ಮೂರು ವರ್ಷದಲ್ಲಿ ರಾಜ್ಯದ ತೆರಿಗೆ ಸಂಗ್ರಹದಲ್ಲಿ ಶೇ 17 ಪ್ರತಿ ವರ್ಷ ಹೆಚ್ಚಳವಾಗಿತ್ತು. ಆದರೆ, ಈ ವರ್ಷ ಡಿಸೆಂಬರ್‌ವರೆಗೆ ಶೇ 14ರಷ್ಟು ಮಾತ್ರ ಸಂಗ್ರಹವಾಗಿರುವುದನ್ನು ನೋಡಿದರೆ, ತೆರಿಗೆ ಸಂಗ್ರಹದಲ್ಲಿ ರಾಜ್ಯ ಹಿಂದೆ ಬಿದ್ದಿರುವುದಕ್ಕೆ ಬೇರೆ ಸಾಕ್ಷ್ಯ ಬೇಕಿಲ್ಲ.

ನಮ್ಮ ಸರ್ಕಾರದ ಅವಧಿಯಲ್ಲಿ  ರಾಜ್ಯದ ಒಟ್ಟು ಸಾಲದ ಹೊರೆಯನ್ನು ಇಳಿಕೆ ಮಾಡಿದ್ದೆವು. ಈ ಸರ್ಕಾರ ಮತ್ತೆ ಅತಿ ಹೆಚ್ಚು ಸಾಲವನ್ನು ಮಾಡಿ ಜನರ ಮೇಲೆ ಸಾಲದ ಭಾರವನ್ನು ಹೆಚ್ಚಿಸಿದೆ. ಆರೇ ತಿಂಗಳಿನಲ್ಲಿ, ತಾವು ಸುಮಾರು ₹13,500 ಕೋಟಿ ಹೊಸ ತೆರಿಗೆ ಭಾರವನ್ನು ರಾಜ್ಯದ ಜನರ ಮೇಲೆ ಹಾಕಿದ್ದೀರಿ ಹಾಗೂ ₹8,000 ಕೋಟಿ ಸಾಲವನ್ನು ರಾಜ್ಯದ ಜನರ ಮೇಲೆ ಹೇರಿದ್ದೀರಿ. ಇದು ನಿಮ್ಮ ಆರ್ಥಿಕ ನಿರ್ವಹಣೆಗೆ ಹಿಡಿದ ಕನ್ನಡಿ.

ಮುಖ್ಯಮಂತ್ರಿಗಳೇ
* ಆರ್ಥಿಕ ದುಸ್ಥಿತಿಯನ್ನು ಒಪ್ಪಿಕೊಳ್ಳಿ ;ಇಲ್ಲದಿದ್ದರೆ ಎಲ್ಲ ಇಲಾಖೆಗಳ ಅಭಿವೃದ್ದಿ ಕಾಮಗಾರಿಗಳನ್ನು ಆರಂಭಿಸಿ.
* ಬರದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಕೂಡಲೇ ಎನ್‌ಡಿಆರ್‌ಎಫ್ ನಿಯಮದಂತೆ ಪರಿಹಾರ ಒದಗಿಸಿ.
* ತಮ್ಮ ಬಜೆಟ್‌ನಲ್ಲಿ ಒದಗಿಸಿರುವ ಬಂಡವಾಳ ವೆಚ್ಚವನ್ನು ಪೂರ್ಣ ಪ್ರಮಾಣದಲ್ಲಿ ಬಿಡುಗಡೆ ಮಾಡಿ.
* ಕಲ್ಯಾಣ ಕರ್ನಾಟಕಕ್ಕೆ ಈಗಾಗಲೇ ರಾಜ್ಯಪಾಲರಿಂದ ಅನುಮೋದನೆಗೊಂಡ ₹3000 ಕೋಟಿ ಅನುದಾನವನ್ನು ಕೂಡಲೆ ಬಿಡುಗಡೆ ಮಾಡಿ
*ಗ್ಯಾರಂಟಿಗೆ ಬಳಸಿರುವ ಎಸ್‌ಸಿಎಸ್‌ಪಿ ಹಾಗೂ ಟಿಎಸ್‌ಪಿ ₹ 11,000 ಕೋಟಿ ಹಣವನ್ನು ವಾಪಸ್‌ ಕೊಡಿ.
* ಕೃಷ್ಣಾ ಮೇಲ್ದಂಡೆ ಮತ್ತು ಇತರ ನೀರಾವರಿ ಯೋಜನೆಗಳಿಗೆ ಕೂಡಲೆ ಹಣ ಬಿಡುಗಡೆ ಮಾಡಿ.

*ಬಾಕಿ ಇರುವ ಎಲ್ಲ ಕಾಮಗಾರಿಗಳ ಬಿಲ್ಲನ್ನು ಕೂಡಲೆ ಬಿಡುಗಡೆ ಮಾಡಿ.

ಒಂದು ಕಡೆ ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿದ್ದು, ಇನ್ನೊಂದೆಡೆ ಅಭಿವೃದ್ಧಿ ಸಂಪೂರ್ಣ ನಿಂತುಹೋಗಿದೆ. ಗ್ಯಾರಂಟಿಗಳನ್ನು ಜಾರಿಗೊಳಿಸಲು ವಿಫಲವಾಗಿರುವುದರ ಜತೆಗೆ, ರಾಜ್ಯವನ್ನು ಆರ್ಥಿಕವಾಗಿ ತ್ರಿಶಂಕು ಸ್ಥಿತಿಯಲ್ಲಿ ಇಟ್ಟಿದ್ದೀರಿ. ಇದರಿಂದ ಕನ್ನಡ ನಾಡನ್ನು ಹೊರ ತರುವ ಜವಾಬ್ದಾರಿ ನಿಮ್ಮದಾಗಿದೆ.

ಒಂದು ಕಡೆ ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿದ್ದು, ಇನ್ನೊಂದೆಡೆ ಅಭಿವೃದ್ಧಿ ಸಂಪೂರ್ಣ ನಿಂತುಹೋಗಿದೆ. ಗ್ಯಾರಂಟಿಗಳನ್ನು ಜಾರಿಗೊಳಿಸಲು ವಿಫಲವಾಗಿರುವುದರ ಜತೆಗೆ, ರಾಜ್ಯವನ್ನು ಆರ್ಥಿಕವಾಗಿ ತ್ರಿಶಂಕು ಸ್ಥಿತಿಯಲ್ಲಿ ಇಟ್ಟಿದ್ದೀರಿ. ಇದರಿಂದ ಕನ್ನಡ ನಾಡನ್ನು ಹೊರ ತರುವ ಜವಾಬ್ದಾರಿ ನಿಮ್ಮದಾಗಿದೆ.

ಲೇಖಕ: ಮಾಜಿ ಮುಖ್ಯಮಂತ್ರಿ ಮತ್ತು ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT