ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆ: ತೆರಿಗೆ ಆದಾಯ ಹಂಚಿಕೆ; ರಾ‌ಜ್ಯಕ್ಕೆ ಪದೇ ಪದೇ ಅನ್ಯಾಯ– ಸಿದ್ದರಾಮಯ್ಯ

ತೆರಿಗೆ ಆದಾಯ ಹಂಚಿಕೆ: ಕೇಂದ್ರದಿಂದ ರಾಜ್ಯಕ್ಕೆ ತಾರತಮ್ಯ ಆಗಿದೆಯೇ? ಸಿದ್ದರಾಮಯ್ಯ ಅವರ ಲೇಖನ
ಸಿದ್ದರಾಮಯ್ಯ
Published 12 ಜನವರಿ 2024, 19:13 IST
Last Updated 12 ಜನವರಿ 2024, 19:13 IST
ಅಕ್ಷರ ಗಾತ್ರ

ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇಶ ಎಂದರೆ ರಾಜ್ಯಗಳ ಒಕ್ಕೂಟ. ಆಡಳಿತಾತ್ಮಕ ಅನುಕೂಲ ಮತ್ತು ದೇಶದ ಭದ್ರತೆಯ ದೃಷ್ಟಿಯಿಂದ ಕೇಂದ್ರ ಸರ್ಕಾರಕ್ಕೆ ಒಂದಷ್ಟು ಅಧಿಕಾರಗಳನ್ನು ಸಂವಿಧಾನ ಹೆಚ್ಚುವರಿಯಾಗಿ ನೀಡಿದ್ದರೂ ನಾವೇ ಒಪ್ಪಿಕೊಂಡಿರುವ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಮತ್ತು ರಾಜ್ಯಗಳು ಸಮಾನ ಪಾಲುದಾರರು. ಅಧಿಕಾರ ವಿಕೇಂದ್ರೀಕರಣ ಎನ್ನುವುದು ಒಕ್ಕೂಟ ವ್ಯವಸ್ಥೆಯ ನಿಯಮ, ಅಧಿಕಾರದ ಕೇಂದ್ರೀಕರಣ ನಿಯಮಗಳಿಗೆ ಅಪವಾದ ಅಷ್ಟೆ.

ಕಳೆದ 8-9 ವರ್ಷಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಸಂಬಂಧದಲ್ಲಿ ಒಂದಿಷ್ಟು ಬಿಗುವು ಮತ್ತು ಬಿಕ್ಕಟ್ಟುಗಳು ಕಾಣಿಸಿಕೊಂಡಿರವುದು ನಿಜ. ಬಹಳ ಮುಖ್ಯವಾಗಿ ಸಂಪನ್ಮೂಲ ಹಂಚಿಕೆಯಲ್ಲಿನ ವ್ಯತ್ಯಾಸಗಳು ಕರ್ನಾಟಕವೂ ಸೇರಿದಂತೆ ದಕ್ಷಿಣದ ರಾಜ್ಯಗಳನ್ನು ಕೆರಳಿಸಿದೆ. ಈ ರಾಜ್ಯಗಳು ತೆರಿಗೆ ಹಂಚಿಕೆಯಲ್ಲಿ ತಮಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿ ನ್ಯಾಯ ನೀಡಬೇಕೆಂದು ಆಗ್ರಹಿಸುತ್ತಿವೆ. ಇದರಲ್ಲಿ ಕರ್ನಾಟಕದ ದನಿಯೂ ಸೇರಿದೆ.

ಹಣಕಾಸು ಆಯೋಗವು ಸಾಂವಿಧಾನಿಕ ಸ್ವಾಯತ್ತೆ ಹೊಂದಿರುವ ಮತ್ತು ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಪನ್ಮೂಲ ಹಂಚಿಕೆಯನ್ನು ನಿಗದಿಪಡಿಸುವ ಸ್ವತಂತ್ರ ಸಂಸ್ಥೆ. ಈ ಆಯೋಗವೇ ಇತ್ತೀಚಿನ ವಿವಾದದ ಕೇಂದ್ರ ಬಿಂದು. ಸಂವಿಧಾನದ 7ನೇ ಶೆಡ್ಯೂಲಿನಲ್ಲಿ ನಿಗದಿಪಡಿಸಿರುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ವೆಚ್ಚಗಳ ಜವಾಬ್ದಾರಿಯನ್ನು ಪೂರೈಸಲು ಅನುವಾಗುವಂತೆ ಕೇಂದ್ರೀಯ ತೆರಿಗೆಗಳನ್ನು ಹಂಚಿಕೆ ಮಾಡಿಕೊಳ್ಳಬೇಕು. ಈ ಹಂಚಿಕೆ ಮಾಡಲು ಹಣಕಾಸು ಆಯೋಗ ಪ್ರತಿಯೊಂದು ರಾಜ್ಯದ ಜನಸಂಖ್ಯೆ, ವಿಸ್ತೀರ್ಣ, ವರಮಾನ ಅಂತರ, ಅರಣ್ಯಪ್ರದೇಶ, ತೆರಿಗೆ ಮತ್ತು ಹಣಕಾಸು ಪರಿಸ್ಥಿತಿ, ಸಮುದಾಯದ ಅಭಿವೃದ್ದಿಯ ಆರು ಮಾನದಂಡಗಳನ್ನು ನಿಗದಿ ಪಡಿಸಿದೆ. ಬಡರಾಜ್ಯಗಳಿಗೆ ಹೆಚ್ಚಿನ ಸಂಪನ್ಮೂಲವನ್ನು ಹಂಚಿಕೆ ಮಾಡುವ ಉದ್ದೇಶದ ಈ ಮಾನದಂಡಗಳು ಅಂತಿಮವಾಗಿ ಅಭಿವೃದ್ದಿ ಹೊಂದಿರುವ ರಾಜ್ಯಗಳಿಗೆ ಮಾರಕವಾದುದು ಎನ್ನುವುದು ದಕ್ಷಿಣದ ರಾಜ್ಯಗಳ ಆಕ್ಷೇಪ.

ದೇಶದ ವಿತ್ತೀಯ ವ್ಯವಸ್ಥೆಯ ಭಾಗವಾಗಿ ಒಂದು ಸ್ವತಂತ್ರ ಹಣಕಾಸು ಆಯೋಗವಿರುವುದು ಭಾರತದ ಒಕ್ಕೂಟ ವ್ಯವಸ್ಥೆಯ ಒಂದು ಶಕ್ತಿ. ಅದು ಒಕ್ಕೂಟ ರಚನೆಯ ತಳಹದಿಯನ್ನು ಮತ್ತಷ್ಟು ಗಟ್ಟಿಗೊಳಿಸುವ ಪಾತ್ರವನ್ನು ವಹಿಸುತ್ತಾ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಮೊದಲು ಯೋಜನಾ ಆಯೋಗವನ್ನು ರದ್ದುಗೊಳಿಸಿ ರಾಜ್ಯ ಸರ್ಕಾರಗಳಿಗೆ ದನಿಯೇ ಇಲ್ಲದ ರೀತಿಯಲ್ಲಿ ನೀತಿ ಆಯೋಗವನ್ನು ರಚಿಸಲಾಯಿತು. ಅದರ ಬೆನ್ನಲ್ಲಿಯೇ ಹದಿನೈದನೇ ಹಣಕಾಸು ಆಯೋಗವನ್ನು ರಚಿಸಿ ಅದರ ಕಾರ್ಯೋದ್ದೇಶಗಳನ್ನು ನಿಗದಿಗೊಳಿಸುವ ಮಾರ್ಗಸೂಚಿ ಅಂಶಗಳಲ್ಲಿ ಬದಲಾವಣೆ ಮಾಡಲಾಯಿತು. ಈ ಬದಲಾವಣೆಗಳು ಸಹಜವಾಗಿ ಕರ್ನಾಟಕವೂ ಸೇರಿದಂತೆ ಅಭಿವೃದ್ಧಿಯ ಪಥದಲ್ಲಿರುವ ದಕ್ಷಿಣದ ರಾಜ್ಯಗಳಲ್ಲಿ ಆತಂಕ ಹಾಗೂ ಅನುಮಾನಗಳನ್ನು ಹುಟ್ಟಿಸಿತ್ತು. ಅವೆಲ್ಲವೂ ನಿಧಾನವಾಗಿ ನಿಜವಾಗುತ್ತಿವೆ.

ಬಹುಮುಖ್ಯವಾಗಿ ತೆರಿಗೆ ಹಂಚಿಕೆಯ ಲೆಕ್ಕಾಚಾರಕ್ಕೆ 1971ರ ಜನಗಣತಿಯ ಬದಲಿಗೆ 2011ರ ಜನಗಣತಿಯನ್ನು ಆಧಾರವಾಗಿಟ್ಟುಕೊಳ್ಳಬೇಕೆಂಬ ನಿರ್ದೇಶನವನ್ನು 15ನೇ ಹಣಕಾಸು ಆಯೋಗಕ್ಕೆ ನೀಡಲಾಗಿತ್ತು. ಉತ್ತರದ ರಾಜ್ಯಗಳಿಗೆ ಹೋಲಿಸಿದರೆ ದಕ್ಷಿಣದ ರಾಜ್ಯಗಳು ಪರಿಣಾಮಕಾರಿಯಾಗಿ ಕುಟುಂಬ ನಿಯಂತ್ರಣವನ್ನು ಮಾಡಿಕೊಂಡು ಬಂದಿವೆ. ಇದರಿಂದಾಗಿ ದಕ್ಷಿಣದ ರಾಜ್ಯಗಳ ಒಟ್ಟು ಜನಸಂಖ್ಯೆ ಕಡಿಮೆಯಾಗುತ್ತಾ ಬರುತ್ತಿದೆ. ಅದೇ ರೀತಿ ರಾಷ್ಟ್ರೀಯ ತಲಾ ಆದಾಯಕ್ಕಿಂತ ದಕ್ಷಿಣದ ರಾಜ್ಯಗಳ ತಲಾವಾರು ಆದಾಯ ಹೆಚ್ಚಾಗಿದೆ. ಈ ತಪ್ಪು ಮಾನದಂಡಗಳನ್ನು ಕೇಂದ್ರ ಹಣಕಾಸು ಆಯೋಗ ಅನುಸರಿಸುತ್ತಿರುವ ಕಾರಣದಿಂದಾಗಿ ದಕ್ಷಿಣದ ರಾಜ್ಯಗಳು ನಿರಂತರವಾಗಿ ಅನ್ಯಾಯಕ್ಕೀಡಾಗಿವೆ. ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ವಿವರದಲ್ಲಿಯೇ ಇದಕ್ಕೆ ಸಾಕ್ಷ್ಯ ಇದೆ. ಹದಿನಾಲ್ಕನೇ ಹಣಕಾಸು ಆಯೋಗ ಕರ್ನಾಟಕದ ತೆರಿಗೆ ಪಾಲು ಶೇ 4.72 ಎಂದು ನಿಗದಿಪಡಿಸಿತ್ತು, ಈಗಿನ 15ನೇ ಹಣಕಾಸು ಆಯೋಗ ಈ ಪಾಲನ್ನು ಕಡಿಮೆಗೊಳಿಸಿ ಶೇ 3.64ಕ್ಕೆ ಇಳಿಸಿತ್ತು. ಇದರಿಂದ ಕಳೆದ ನಾಲ್ಕು ವರ್ಷಗಳಲ್ಲಿ ತೆರಿಗೆ ಪಾಲಿನಲ್ಲಿ ಅಂದಾಜು ರೂ₹45,000 ಕೋಟಿಯನ್ನು ಕರ್ನಾಟಕ ಕಳೆದುಕೊಂಡಿದೆ.

2021-22ರ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯವೊಂದರಿಂದಲೇ ಸುಮಾರು ₹4.75 ಲಕ್ಷ ಕೋಟಿಯನ್ನು ತೆರಿಗೆ ಮೂಲಕ ಸಂಗ್ರಹಿಸಿದೆ. ಇದರಲ್ಲಿ ನೇರ ತೆರಿಗೆ ₹2.40 ಲಕ್ಷ ಕೋಟಿ, ಜಿಎಸ್‌ಟಿ ₹1.30 ಲಕ್ಷ ಕೋಟಿ, ಮತ್ತು ಸೆಸ್ ₹30,000 ಕೋಟಿ ಸೇರಿದೆ. ಕೇಂದ್ರ ಸರ್ಕಾರವು ಕರ್ನಾಟಕದಿಂದ ಸಂಗ್ರಹಿಸಿದ ₹4.75 ಲಕ್ಷ ಕೋಟಿಯಲ್ಲಿ ರಾಜ್ಯಕ್ಕೆ ತನ್ನ ಪಾಲಿನ ರೂಪದಲ್ಲಿ ಸಿಕ್ಕಿರುವುದು ಅಂದಾಜು ₹50,000 ಕೋಟಿ ಮಾತ್ರ. ಇದರಲ್ಲಿ ತೆರಿಗೆ ಪಾಲು-₹37,000 ಕೋಟಿ ಮತ್ತು ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ನೀಡಿದ ಪಾಲಿನ ಹಣ ₹13,005 ಕೋಟಿ. ಇದರ ಜೊತೆಗೆ ರಾಜ್ಯದಲ್ಲಿ ಜಾರಿಯಲ್ಲಿರುವ ಕೇಂದ್ರ ಅನುದಾನಿತ ಯೋಜನೆಗಳಿಗೆ ನೀಡುವ ತನ್ನ ಪಾಲನ್ನು ಕೂಡಾ ನರೇಂದ್ರ ಮೋದಿ ಸರ್ಕಾರ ಕಡಿತಗೊಳಿಸಿದೆ. 2021-22ರಲ್ಲಿ ₹20,986 ಕೋಟಿಯ ತನ್ನ ಪಾಲನ್ನು ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ನೀಡಿದ್ದ ಬಿಜೆಪಿ ಸರ್ಕಾರವು 2022-23ರ ಅವಧಿಯಲ್ಲಿ ಅದನ್ನು ₹13,005 ಕೋಟಿಗೆ ಇಳಿಸಿದೆ.

ಅಂದ ಹಾಗೆ ಮಹಾರಾಷ್ಟ್ರದ ನಂತರ ಕೇಂದ್ರ ಸರ್ಕಾರಕ್ಕೆ ಅತ್ಯಧಿಕ ಪ್ರಮಾಣದ ತೆರಿಗೆ ನೀಡುವ ರಾಜ್ಯ ನಮ್ಮದು. ಒಂದು ಅಂದಾಜಿನ ಪ್ರಕಾರ ಕರ್ನಾಟಕದಿಂದ ಸಂಗ್ರಹವಾಗುವ ಒಂದು ರೂಪಾಯಿ ತೆರಿಗೆಯಲ್ಲಿ ಕೇವಲ 15 ಪೈಸೆ ಮಾತ್ರ ವಾಪಸು ಬರುತ್ತಿದೆ. ಉತ್ತರ ಪ್ರದೇಶಕ್ಕೆ ಒಂದು ರೂಪಾಯಿಗೆ ₹2.73ರಷ್ಟು ಹಣ ವಾಪಸು ಬರುತ್ತಿದೆ. ಇದು ಹಣಕಾಸು ಆಯೋಗದ ತಪ್ಪು ಮಾನದಂಡಗಳಿಂದಾಗಿ ದಕ್ಷಿಣದ ರಾಜ್ಯಗಳಿಗೆ ಆಗುತ್ತಿರುವ ಅನ್ಯಾಯ.

ಈ ಅನ್ಯಾಯದ ಮನವರಿಕೆಯಾದ ನಂತರ ಹದಿನೈದನೇ ಹಣಕಾಸು ಆಯೋಗ ಕರ್ನಾಟಕಕ್ಕೆ ವಿಶೇಷ ಅನುದಾನದ ರೂಪದಲ್ಲಿ ₹5,495 ಕೋಟಿ ನೀಡಬೇಕೆಂದು ಶಿಫಾರಸು ಮಾಡಿತ್ತು. ಕನ್ನಡಿಗರ ಜನಪ್ರತಿನಿಧಿಯಾಗಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೇ ಈ ಶಿಫಾರಸನ್ನು ನಿರಾಕರಿಸಿರುವ ಕಾರಣ ಆ ದುಡ್ಡು ಕೂಡಾ ಬರಲಿಲ್ಲ. ಕಳೆದ ಮೂರು ವರ್ಷಗಳಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರುತ್ತಿರುವ ಅನುದಾನದಲ್ಲಿಯೂ ಕಡಿತವಾಗಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಆರು ತಿಂಗಳಲ್ಲಿ 61 ಕೇಂದ್ರ ಪ್ರಾಯೋಜಿತ ಯೋಜನೆಗಳನ್ನು ಜಾರಿಗೆ ತರುತ್ತಿರುವ 23 ಇಲಾಖೆಗಳಿಗೆ ಅನುದಾನವನ್ನೇ ಬಿಡುಗಡೆ ಮಾಡಿಲ್ಲ.

ಇದು ಹಣಕಾಸು ಆಯೋಗದ ಕತೆಯಾದರೆ ಎನ್‌ಡಿಆರ್‌ಎಫ್‌ನದ್ದು ಇನ್ನೊಂದು ಕತೆ. ಪ್ರಕೃತಿ ವಿಕೋಪದಿಂದ ಆಗಿರುವ ಹಾನಿಗೆ ಪರಿಹಾರ ನೀಡಲು ರಚನೆಗೊಂಡಿರುವ ಸಂಸ್ಥೆ ಎನ್‌ಡಿಆರ್‌ಎಫ್‌. ಈ ವರ್ಷ ರಾಜ್ಯದ 216 ತಾಲೂಕುಗಳನ್ನು ಬರಪೀಡಿತ ಎಂದು ಅಧಿಕೃತವಾಗಿ ಘೋಷಿಸಲಾಗಿದೆ. ಪ್ರಸಕ್ತ ವರ್ಷ ಬರಗಾಲದಿಂದಾಗಿ ಅಂದಾಜು ₹33,770 ಕೋಟಿಯಷ್ಟು ನಷ್ಟವಾಗಿರಬಹುದೆಂದು ರಾಜ್ಯ ಸರ್ಕಾರ ಸಮೀಕ್ಷೆ ನಡೆಸಿ ಅಂದಾಜು ಮಾಡಿತ್ತು. ಇದರಲ್ಲಿ ಕನಿಷ್ಠ ₹17,901 ಕೋಟಿಯನ್ನು ನೀಡಬೇಕೆಂದು ಕೇಂದ್ರ ಸರ್ಕಾರವನ್ನು ಕೋರಲಾಗಿತ್ತು. ನಮ್ಮ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಸಚಿವರುಗಳು ದೆಹಲಿಗೆ ಹೋಗಿ ಮನವಿ ಸಲ್ಲಿಸಿದ್ದರು. ನಾನೇ ಖುದ್ದಾಗಿ ಹೋಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಮನವರಿಕೆ ಮಾಡಿಕೊಟ್ಟರೂ ಇಲ್ಲಿಯವರೆಗೆ ಹಣ ಬಿಡುಗಡೆಯಾಗಿಲ್ಲ.

ಈ ಅನ್ಯಾಯ ಇದೇ ಮೊದಲ ಸಲವೇನಲ್ಲ, 2017ರಲ್ಲಿಯೂ ಕರ್ನಾಟಕದಲ್ಲಿ ಬರಗಾಲ ಬಂದಿತ್ತು. ಇದರಿಂದಾಗಿ ಅಂದಾಜು ₹30,000 ಕೋಟಿಯಷ್ಟು ನಷ್ಟ ಉಂಟಾಗಿತ್ತು. ಕೇಂದ್ರ ಸರ್ಕಾರ ನೀಡಿದ್ದು ಕೇವಲ ₹1,435 ಕೋಟಿ ಪರಿಹಾರ. ಅದೇ ವರ್ಷ ಮಹಾರಾಷ್ಟ್ರಕ್ಕೆ ₹8,195 ಕೋಟಿ ಮತ್ತು ಗುಜರಾತ್‌ಗೆ ₹3,894 ಕೋಟಿ ಪರಿಹಾರ ನೀಡಲಾಗಿತ್ತು. 2019ರಲ್ಲಿ ರಾಜ್ಯದಲ್ಲಿ ಬಿಜೆಪಿಯದ್ದೇ ಸರ್ಕಾರವಿದ್ದಾಗಲೂ ಅತಿವೃಷ್ಟಿಯಿಂದಾಗಿರುವ ಹಾನಿಗೆ ಪರಿಹಾರ ನೀಡದೆ ಸತಾಯಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿಯವರ ಸಮ್ಮುಖದಲ್ಲಿಯೇ ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಅತಿವೃಷ್ಟಿ ಹಾನಿ ಪರಿಹಾರ ನೀಡುವಂತೆ ಕೇಳಿದರೂ ₹50,000 ಕೋಟಿ ನಷ್ಟಕ್ಕೆ ₹1,869 ಕೋಟಿಯಷ್ಟೇ ಪರಿಹಾರ ನೀಡಲಾಯಿತು.

ಕೇಂದ್ರ ಮತ್ತು ರಾಜ್ಯಗಳೆರಡರಲ್ಲಿಯೂ ಒಂದೇ ಪಕ್ಷ ಅಧಿಕಾರದಲ್ಲಿದ್ದರೆ ರಾಜ್ಯದಲ್ಲಿ ಅಭಿವೃದ್ದಿಯ ಪರ್ವ ಪ್ರಾರಂಭವಾಗಲಿದೆ ಎಂಬ ಕನಸನ್ನು ಕಳೆದ ಲೋಕಸಭಾ ಚುನಾವಣೆಯ ಕಾಲದಲ್ಲಿ ಕನ್ನಡಿಗರ ತಲೆಗೆ ತುಂಬಲಾಯಿತು. ಆಗಿದ್ದೇನು? ನೆಲ-ಜಲ-ಭಾಷೆಯ ವಿಚಾರದಲ್ಲಿ ಮಾತ್ರವಲ್ಲ ಸಂಪತ್ತಿನ ಹಂಚಿಕೆಯಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ದವೂ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ ಸೇರಿರುವ ಒಬ್ಬ ಸಂಸದನೂ ದನಿ ಎತ್ತುತ್ತಿಲ್ಲ ಮಾತ್ರವಲ್ಲ, ಪ್ರತ್ಯಕ್ಷವಾಗಿ ಕೇಂದ್ರ ಸರ್ಕಾರದ ನಡೆಯನ್ನು ಸಮರ್ಥಿಸುತ್ತಾ ಕನ್ನಡಿಗರ ಕೊರಳು ಹಿಚುಕುವ ಕೇಂದ್ರ ಸರ್ಕಾರದ ಕೈಗಳಿಗೆ ಬಲ ತುಂಬುತ್ತಿರುವುದು ವಿಷಾದನೀಯ ಬೆಳವಣಿಗೆ.

ಲೇಖಕ: ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT