ಸೋಮವಾರ, ಜೂನ್ 21, 2021
30 °C
ತಾರತಮ್ಯ ನೀತಿಯನ್ನು ಸರ್ಕಾರವು ತೊಡೆದು ಹಾಕದೆ ಹೋದರೆ ಮಾತೃಭಾಷಾ ಶಿಕ್ಷಣ ಕುರಿತಾದ ಆಶಯಗಳು ಅಪೂರ್ಣವಾಗುತ್ತವೆ

ಪೋಷಕರ ಭ್ರಮೆ ದೂರವಾಗಬೇಕು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೋಷಕರ ಭ್ರಮೆ ದೂರವಾಗಬೇಕು!

‘ಸರ್ಕಾರಿ ಶಾಲೆ ಉಳಿಸಬಲ್ಲದೇ ಎಲ್‍ಕೆಜಿ?’ (ಸಂಗತ, ಜುಲೈ 13) ಲೇಖನವು ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಕಲಿಕೆಯ ಸಾಧಕ- ಬಾಧಕಗಳನ್ನು ಸಕಾಲಿಕವಾಗಿ ಮಂಡಿಸಿದೆ.

ಹೊಸ ಹೊಸ ಯೋಜನೆ, ಸವಲತ್ತುಗಳಿಂದ ಶಾಲೆಗೆ ಮಕ್ಕಳನ್ನು ಸೆಳೆಯಬಹುದು ಎಂಬ ಕಲ್ಪನೆ ಸರ್ಕಾರಕ್ಕಿದ್ದರೆ ಅದೆಲ್ಲಾ ಸುಳ್ಳು. ಅದು ಗೊತ್ತಿದ್ದರೂ ಸರ್ಕಾರ ಯಾಕೆ ಹೀಗೆ ವಿವೇಚನಾರಹಿತವಾಗಿ ಯೋಜನೆಗಳನ್ನು ಕೈಗೊಳ್ಳುತ್ತಿದೆ ಎಂಬುದು ಇವತ್ತಿನ ಪ್ರಶ್ನೆ. ದೇಶದಲ್ಲಿ ಬ್ರಿಟಿಷ್ ಆಳ್ವಿಕೆ ಇದ್ದಾಗ ಐದನೆಯ ತರಗತಿಯಿಂದ ಇಂಗ್ಲಿಷ್‌ ಅನ್ನು ಒಂದು ಭಾಷೆಯಾಗಿ ಕಲಿಸಲಾಗುತ್ತಿತ್ತು. ಅಂದು ಕನ್ನಡ ಮಾಧ್ಯಮದಲ್ಲೇ ಕಲಿತವರು ಎತ್ತರಕ್ಕೆ ಬೆಳೆದು, ಅನೇಕ ಸಾಧನೆಗಳನ್ನು ಮಾಡಿಲ್ಲವೇ? ಅಂದಿನ ಶಿಕ್ಷಣದ ಗುಣಮಟ್ಟ ಹಾಗಿತ್ತು. ಹಳ್ಳಿಗಾಡಿನ ಅನಕ್ಷರಸ್ಥ ಪೋಷಕರ ಮಕ್ಕಳು ಸಹ ಕಲಿತು ಸರ್ಕಾರಿ ಸೇವೆ ಮಾಡಲು ಸಮರ್ಥರಾಗುತ್ತಿದ್ದರು. ಬಡವ- ಶ್ರೀಮಂತರ ಮಕ್ಕಳೆಂಬ ತಾರತಮ್ಯ
ವನ್ನು ಅವರು ಮಾಡಿರಲಿಲ್ಲ.

ಕುವೆಂಪು ಅವರ ಆತ್ಮಚರಿತ್ರೆ ‘ನೆನಪಿನ ದೋಣಿ’ಯಲ್ಲಿ ಒಂದು ಪ್ರಸಂಗದ ಉಲ್ಲೇಖವಿದೆ. ‘ಅರಮನೆಗೆ ಬಂದು, ರಾಜಕುಮಾರ ಜಯಚಾಮರಾಜೇಂದ್ರನಿಗೆ ಕನ್ನಡ ಪಾಠ ಬೋಧಿಸಿ’ ಎಂಬ ಆಹ್ವಾನ ಕುವೆಂಪು ಅವರಿಗೆ ಬರುತ್ತದೆ. ಮಹಾರಾಜ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದ ಕುವೆಂಪು, ‘ರಾಜಕುಮಾರನೂ ಕಾಲೇಜಿಗೆ ಬಂದು ಎಲ್ಲರ ಜತೆ ಕುಳಿತು ಪಾಠ ಕೇಳಲಿ; ಮನೆಪಾಠಕ್ಕೆ ನನ್ನ ಒಪ್ಪಿಗೆ ಇಲ್ಲ’ ಎಂದು ನಯವಾಗಿಯೇ ನಿರಾಕರಿಸುತ್ತಾರೆ. ಸಾಮಾಜಿಕ ನ್ಯಾಯದ ಬದ್ಧತೆಯ ಮಾತಾಡುವ ಇಂದಿನ ಸರ್ಕಾರ ಇದನ್ನು ಗಮನಿಸಬೇಕು.

ಆದರೆ, ಸ್ವಾತಂತ್ರ್ಯ ಬಂದ ಮೇಲೆ ಏನಾಯಿತು ನೋಡಿ; ಬಡವ-ಶ್ರೀಮಂತ ಎಂಬ ಭೇದಭಾವ ಹೆಚ್ಚಾಯಿತು. ಎಲ್ಲರೂ ಒಂದೇ ಶಾಲೆಯಲ್ಲಿ ಕಲಿಯುವ, ಒಂದೇ ಪಠ್ಯಕ್ರಮವನ್ನು ಬೋಧಿಸುವ, ಒಂದೇ ಮಾಧ್ಯಮದಲ್ಲಿ ಕಲಿಯುವ, ಒಂದೇ ರೀತಿ ಪರೀಕ್ಷೆ ನಡೆಸುವ ಬ್ರಿಟಿಷ್ ಶಿಕ್ಷಣ ಕ್ರಮ ತಪ್ಪಿಹೋಯಿತು. ಬದಲಾಗಿ ಶ್ರೀಮಂತ ಮಕ್ಕಳಿಗೆ ಖಾಸಗಿ ಶಾಲೆಗಳು ಆರಂಭಗೊಂಡವು. ಅಲ್ಲಿ ಇಂಗ್ಲಿಷ್ ಬೋಧನೆಗೆ ಹೆಚ್ಚು ಪ್ರಾಶಸ್ತ್ಯ ಬಂತು. ‘ವಿದ್ಯಾದಾನ ಮಹಾದಾನ’ ಎಂಬ ಮೌಲ್ಯವನ್ನರಿಯದೆ ದುಡ್ಡು ಮಾಡುವ ದಂಧೆಯ ಶಿಕ್ಷಣ ಸಂಸ್ಥೆಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡವು. ನಂತರ ಏನೇನಾಗಿದೆ ಎಂಬುದು ಕಣ್ಮುಂದೆ ಇದೆ.

ಯಥಾ ರಾಜಾ ತಥಾ ಪ್ರಜಾ ಎಂಬ ನಾಣ್ಣುಡಿ ಇಂದು ತಿರುಗುಮುರುಗಾಗಿ, ಯಥಾ ಪ್ರಜಾ ತಥಾ ರಾಜಾ ಎಂಬಂತೆ ಮಣ್ಣಿನ ಮಕ್ಕಳಾದ ನಮ್ಮ ಜನಪ್ರತಿನಿಧಿಗಳು ಇಂಗ್ಲಿಷ್ ಮಾಧ್ಯಮದ ಖಾಸಗಿ ಶಾಲೆಗಳಿಗೆ ಅನುಮತಿ ನೀಡುತ್ತಾ ಬಂದರು. ಇದರಿಂದಾಗಿ ‘ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಅನಿವಾರ್ಯ’ ಎಂಬ ಭಾವನೆ ಪೋಷಕರಲ್ಲಿ ಮೂಡಿತು. ಇಲ್ಲದಿದ್ದರೆ ಅವರೇಕೆ ಸಾಲ ಸೋಲ ಮಾಡಿ ಇಂಗ್ಲಿಷ್ ಮಾಧ್ಯಮ ಖಾಸಗಿ ಶಾಲೆಗಳತ್ತ ಮಕ್ಕಳನ್ನು ಕಳುಹಿಸುತ್ತಿದ್ದರು? ಇದೊಂದು ವಿಷವರ್ತುಲ. ಎಲ್ಲೋ ಲೆಕ್ಕಾಚಾರ ತಪ್ಪುತ್ತಿದೆ.

ಇದಕ್ಕೆ ಪರಿಹಾರವೆಂದರೆ ಲೇಖಕರು ಹೇಳಿರುವಂತೆ, ಬಡವ- ಶ್ರೀಮಂತ ಎಂಬ ಭೇದಭಾವವಿಲ್ಲದೆ ಎಲ್ಲರಿಗೂ ಒಂದೇ ರೀತಿಯ ಶಿಕ್ಷಣ ಲಭಿಸುವಂತಾಗಬೇಕು.ಇಂಗ್ಲಿಷ್ ಮತ್ತು ಕನ್ನಡ ಎರಡೂ ಭಾಷೆಗೆ ಸಮಾನ ಆದ್ಯತೆ ದೊರೆಯಬೇಕು. ಒಂದೇ ರೀತಿಯ ಪಠ್ಯ, ಒಂದೇ ರೀತಿಯ ಪರೀಕ್ಷೆ ಆಗಬೇಕು. ಇದಕ್ಕೂ ಮುಖ್ಯವಾಗಿ ‘ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಕೆ ಅನಿವಾರ್ಯ’ ಎಂಬಭ್ರಮೆಯನ್ನು ಪೋಷಕರು ತ್ಯಜಿಸಬೇಕು. ಸರ್ಕಾರ, ಚಿಂತಕರು ಹಾಗೂ ಪೋಷಕರು ಅತ್ಯಂತ ಜವಾಬ್ದಾರಿಯಿಂದ ಈ ನಿಟ್ಟಿನಲ್ಲಿ ಪರ್ಯಾಲೋಚಿಸಿ ಸಮಾನ ಶಿಕ್ಷಣ ವ್ಯವಸ್ಥೆಗೆ ಮುಂದಾಗಬೇಕು. ಕಾಲ ಮಿಂಚಿ ಹೋದ ಮೇಲೆ ಚಿಂತಿಸಿ ಫಲವಿಲ್ಲ.

ಪ್ರೊ. ಶಿವರಾಮಯ್ಯ, ಬೆಂಗಳೂರು

***

ತಾರತಮ್ಯ ನೀಗಬೇಕು

ಸರ್ಕಾರಿ ಶಾಲೆಗಳ ಕುರಿತಾಗಿ ಉದಯ ಯು. ಅವರು ವ್ಯಕ್ತಪಡಿಸಿದ ಕೆಲವು ಅಭಿಪ್ರಾಯಗಳು ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಆಶಯಗಳಿಗೆ ವಿರುದ್ಧವಾಗಿವೆ ಎಂದೆನಿಸುತ್ತದೆ.

ಎಲ್‍ಕೆಜಿ, ಯುಕೆಜಿ ಆರಂಭಿಸುವುದರ ಮೂಲಕ ಸರ್ಕಾರಿ ಶಾಲೆಗಳತ್ತ ಮಕ್ಕಳನ್ನು ಸೆಳೆಯಲು ಸಾಧ್ಯವಿಲ್ಲ ಎನ್ನುವ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ. ಅದಕ್ಕೆ ಅವರು ಅಲ್ಲಿನ ಕಲಿಕೆಯ ಕಳಪೆ ಗುಣಮಟ್ಟ, ಶಿಕ್ಷಕರ ಬೋಧನೆಯ ಮಿತಿ, ಸೌಲಭ್ಯಗಳ ಕೊರತೆ ಮುಂತಾದ ಕಾರಣ ನೀಡಿದ್ದಾರೆ. ಇದು ಅರ್ಧಸತ್ಯ. ಎಲ್‍ಕೆಜಿ, ಯುಕೆಜಿಗಳನ್ನು ಸರ್ಕಾರಿ ಶಾಲೆಗಳಲ್ಲಿ ಆರಂಭಿಸುವ ಉದ್ದೇಶ ಪೋಷಕರನ್ನು ಸೆಳೆಯುವುದು ಮಾತ್ರವಲ್ಲ. ಅದು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಒಂದೇ ಹೆಣಿಗೆಯಲ್ಲಿ ಬೆಸೆಯುವ ಉದ್ದೇಶವನ್ನು ಸಹ ಒಳಗೊಂಡಿರುತ್ತದೆ.

ಕನ್ನಡ ಮತ್ತು ಇಂಗ್ಲಿಷ್‌ ಭಾಷೆಗಳಿಗೆ ಸಮಾನ ಆದ್ಯತೆಯನ್ನು ಕೊಡುವುದು ಸಮಾನ ಶಿಕ್ಷಣ ನೀತಿ ಎಂದು ತಪ್ಪಾಗಿ ಲೇಖಕರು ಭಾವಿಸಿದ್ದಾರೆ. ಸಮಾನ ಶಿಕ್ಷಣ ನೀತಿಯೆಂದರೆ ನೆರೆಹೊರೆ ಶಾಲಾ ವ್ಯವಸ್ಥೆಯನ್ನು
ರೂಪಿಸುವುದು. ಭೇದಭಾವಗಳಿಲ್ಲದೆ ಮಕ್ಕಳು ಕಡ್ಡಾಯ, ಉಚಿತವಾದ ಅತ್ಯುತ್ತಮ ಗುಣಮಟ್ಟದ ಸಮಾನ ಶಿಕ್ಷಣ ಪಡೆಯಬೇಕು ಎನ್ನುವುದು.

ಒಂದೇ ರೀತಿಯ ಪಠ್ಯವೆನ್ನುವುದು ಬಹುತ್ವದ ಆಶಯವನ್ನೇ ಧಿಕ್ಕರಿಸಬಲ್ಲದು. ಸಮಾನ ಶಿಕ್ಷಣದಲ್ಲಿ ಕಲಿಕೆಯು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುತ್ತದೆ. ವಿವಿಧತೆಯಿಂದ ಕೂಡಿರುತ್ತದೆಯೇ ಹೊರತು ಏಕರೂಪಿಯಲ್ಲ. ಕಲಿಕೆ ಮತ್ತು ಬೋಧನೆ ತಾಯ್ನುಡಿಯಲ್ಲಿರಬೇಕು ಎನ್ನುವುದು ಸಮಾನ ಶಿಕ್ಷಣದ ಮತ್ತೊಂದು ಆಶಯ.

ಇಂದು ಶಿಕ್ಷಣ ವ್ಯವಸ್ಥೆ ವ್ಯಾಪಾರೀಕರಣಗೊಂಡುಅಸಮಾನತೆಯನ್ನು ಸೃಷ್ಟಿಸಿದೆ. ಬಡವರ, ತಳಸಮುದಾಯದ ಮಕ್ಕಳು ಸರ್ಕಾರಿ ಶಾಲೆಯ ಕನ್ನಡ ಮಾಧ್ಯಮದಲ್ಲಿ ಓದಬೇಕು ಮತ್ತು ಮೇಲ್ವರ್ಗ, ಮಧ್ಯಮವರ್ಗಗಳ ಮಕ್ಕಳು ಖಾಸಗಿ ಇಂಗ್ಲಿಷ್‌ ಮಾಧ್ಯಮದಲ್ಲಿ ಓದಬೇಕೆನ್ನುವ ಒಂದು ಅಸಮಾನ ವ್ಯವಸ್ಥೆ ಸೃಷ್ಟಿಯಾಗಿದೆ. ಇದು ಅಮಾನವೀಯ ಮತ್ತು ಪ್ರಜಾಪ್ರಭುತ್ವ ವಿರೋಧಿಯಾದುದು. ತಳಸಮುದಾಯಗಳು ಇಂಗ್ಲಿಷ್‌ ಮಾಧ್ಯಮದ ಪರವಾಗಿ ಹಕ್ಕೊತ್ತಾಯ ಮಂಡಿಸುತ್ತಿರುವುದರ ಹಿಂದಿನ ವಾಸ್ತವ ಸ್ಥಿತಿ ಮತ್ತು ಅನಿವಾರ್ಯವನ್ನು ಅರ್ಥ ಮಾಡಿಕೊಳ್ಳದಿದ್ದರೆ, ಶಿಕ್ಷಣ ‘ಮಾಧ್ಯಮ’ ಕುರಿತಾದ ತಾರತಮ್ಯವನ್ನು ಸರ್ಕಾರವು ತೊಡೆದು ಹಾಕದೆ ಹೋದರೆ ಮಾತೃಭಾಷಾ ಶಿಕ್ಷಣದ ಕುರಿತಾದ ಆಶಯಗಳು ಅಪೂರ್ಣವಾಗುತ್ತವೆ.

ಬಿ. ಶ್ರೀಪಾದ ಭಟ್, ಬೆಂಗಳೂರು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು