ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಕಿದೆ ಸಮಾನ ಕಲಿಕಾ ಚೌಕಟ್ಟು

ತರತಮವಿಲ್ಲದ ಕಲಿಕೆಯ ಅವಕಾಶಗಳನ್ನು ಸೃಷ್ಟಿಸುವುದು ನಮ್ಮೆಲ್ಲರ ಹೊಣೆ
Last Updated 16 ಜೂನ್ 2020, 19:30 IST
ಅಕ್ಷರ ಗಾತ್ರ

ಕರ್ನಾಟಕದಲ್ಲಿ ಪ್ರಸ್ತುತ ಡೀಮ್ಡ್ ವಿಶ್ವವಿದ್ಯಾಲಯಗಳು, ಸ್ವಾಯತ್ತ ಕಾಲೇಜುಗಳು, ಯೂನಿಟರಿ ಮತ್ತು ಕ್ಲಸ್ಟರ್ ವಿಶ್ವವಿದ್ಯಾಲಯಗಳು ಸೇರಿದಂತೆ ಹಲವು ವಿಶ್ವವಿದ್ಯಾಲಯಗಳಿವೆ. ಎಲ್ಲ ಕಡೆಗಳಲ್ಲಿಯೂ ಪ್ರತ್ಯೇಕ ಪಠ್ಯಕ್ರಮಗಳಿವೆ. ಇವಲ್ಲದೆ, ಸ್ನಾತಕ ಪದವಿಗಳಿಗೆ ಆಯಾ ವಿಶ್ವವಿದ್ಯಾಲಯದ ಅಧ್ಯಯನ ಮಂಡಳಿ ನಿಗದಿಪಡಿಸಿದ ಪಠ್ಯಕ್ರಮಗಳು ಚಾಲ್ತಿಯಲ್ಲಿ ಇವೆ. ಇದು ಏಕಕಾಲದಲ್ಲಿ ವೈವಿಧ್ಯ, ಸ್ಥಳೀಯತೆ, ಸ್ವಾಯತ್ತೆ, ವೈಶ್ವಿಕತೆಯ ಕಾಲ. ಆದರೂ ರಾಜ್ಯಕ್ಕೆ ಒಂದು ಸಮಾನವಾದ ಕಲಿಕಾ ಚೌಕಟ್ಟಿನ ಅಗತ್ಯವಿದೆ. ಮೊದಲಿಗೆ ಇಂತಹ ಚೌಕಟ್ಟು ಏಕರೂಪಿ ಪಠ್ಯಗಳನ್ನು ನೀಡುವ ಉದ್ದೇಶದ್ದಲ್ಲ ಎಂದು ನಾವು ಭಾವಿಸಿದ್ದೇವೆ.

ಸರ್ಕಾರವು ಉನ್ನತ ಶಿಕ್ಷಣ ಕೌನ್ಸಿಲ್ ಮೂಲಕ ಮೇ 5ರಂದು ನೀಡಿರುವ ಆದೇಶವು ಸಮಾನಪಠ್ಯಕ್ರಮವನ್ನು ರೂಪಿಸುವ ಉದ್ದೇಶವನ್ನು ಸೂಚಿಸು ತ್ತದೆ. ಇಲ್ಲಿನ ಒಂದೊಂದು ವಿಶ್ವವಿದ್ಯಾಲಯದ ಪದವಿ ಪಠ್ಯಚೌಕಟ್ಟು, ಕಾರ್ಯಭಾರ, ಅಂಕಪದ್ಧತಿ, ಪರೀಕ್ಷೆ, ಮೌಲ್ಯಮಾಪನ, ಪ್ರಮಾಣಪತ್ರದ ಸ್ವರೂಪ, ತರಗತಿಯ ಗರಿಷ್ಠ ಸಾಮರ್ಥ್ಯ ಮೊದಲಾದ ವಿಚಾರ ಗಳು ಸಮಾನವಾಗಿಲ್ಲ. ಇಂತಹ ಹಲ ಬಗೆಯ
ವ್ಯತ್ಯಾಸಗಳಿಂದ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆಗಳನ್ನು ಸರಿಪಡಿಸುವ ಹಲವು ಸಾಧ್ಯತೆಗಳಲ್ಲಿ ಸಮಾನ ಕಲಿಕಾ ಚೌಕಟ್ಟನ್ನು ರೂಪಿಸುವುದೂ ಒಂದು.

ಯುಜಿಸಿಯು ರಾಷ್ಟ್ರಕ್ಕೆ ಅನ್ವಯಿಸುವಂತೆ ಒಂದು ಸಾಮಾನ್ಯ ಪದವಿ ಸಿಬಿಸಿಎಸ್ (Choice Based Credit System) ರೆಗ್ಯುಲೇಷನ್ ಅನ್ನು ಜಾರಿ ಮಾಡಿದೆ. ಅದರ ಅನುಸಾರ ಸ್ಥಳೀಯತೆ, ಸ್ವಾಯತ್ತೆ, ವೈವಿಧ್ಯವನ್ನು ಗಮನದಲ್ಲಿರಿಸಿ ಶೇ 70:30ರ ಅನುಪಾತದಲ್ಲಿ ಸಾಮಾನ್ಯ ಮತ್ತು ಸ್ಥಳೀಯ ಸ್ವಾಯತ್ತೆ ಯುಳ್ಳ ರೆಗ್ಯುಲೇಷನ್ ರಚಿಸಿಕೊಳ್ಳಲು ಎಲ್ಲ ವಿಶ್ವವಿದ್ಯಾಲಯಗಳಿಗೆ ಅವಕಾಶ ಕಲ್ಪಿಸಿದೆ. ಈ ಸಾಮಾನ್ಯ ನಿಯಮಗಳ ಹಿಂದಿರುವ ಉದ್ದೇಶಗಳೆಂದರೆ:

ವಿವಿಧ ಪ್ರದೇಶಗಳ ವಿಶ್ವವಿದ್ಯಾಲಯಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಲ್ಲಿ ಜ್ಞಾನ ತಾರತಮ್ಯಕ್ಕೆ ಅವಕಾಶವಾಗದೆ ಸಮಾನ ಸಾಮರ್ಥ್ಯ, ಕೌಶಲ ವೃದ್ಧಿಯಾಗುವಂತೆ ಚೌಕಟ್ಟನ್ನು ರೂಪಿಸಬೇಕು. ಒಂದು ವಿಶ್ವವಿದ್ಯಾಲಯದಿಂದ ಮತ್ತೊಂದಕ್ಕೆ, ರಾಜ್ಯದಿಂದ ರಾಜ್ಯಕ್ಕೆ, ವಿದೇಶಕ್ಕೆ ಕೂಡ ಪದವಿ ಅಧ್ಯಯನದ ನಡುವೆ ಚಲನೆಗೆ ಅವಕಾಶವಿರಬೇಕು. ಒಂದೇ ಧಾರೆಯಲ್ಲಿ ಹಲವು ಹಂತಗಳ ಆಯ್ಕೆಗೆ, ಉದಾಹರಣೆಗೆ ಡಿಪ್ಲೊಮಾ, ಪದವಿ, ದ್ವಿಪದವಿ, ಇಂಟಿಗ್ರೇಟೆಡ್ ಕಲಿಕೆಗೆ ಅವಕಾಶವಿರಬೇಕು.

ಕೆಲವು ಜ್ಞಾನ, ಕೌಶಲಗಳು ಎಲ್ಲರಿಗೂ ಕಡ್ಡಾಯ ವಾಗಿ ಲಭ್ಯ ಆಗಬೇಕು. ಒಟ್ಟಾರೆ, ಗರಿಷ್ಠ ಅಂಕಗಳ ಮೊತ್ತ, ಕಲಿಕಾ ಅವಧಿ, ಮೌಲ್ಯಾಂಕನ ವ್ಯವಸ್ಥೆ, ಪರೀಕ್ಷಾ ಪದ್ಧತಿ, ಪ್ರಮಾಣಪತ್ರದ ಸ್ವರೂಪಗಳಲ್ಲಿ ಸಮಾನತೆ ಇರಬೇಕು. ಅಂಕ ನೀಡಿಕೆ, ರ‍್ಯಾಂಕ್‌ ಪದ್ಧತಿಗಿಂತ ಗುಣಾಂಕ ನೀಡಿಕೆ, ಗ್ರೇಡ್ ನೀಡಿಕೆ ಜಾರಿ ಆಗಬೇಕು. ಹೀಗೆ ಹಲವು ಉದ್ದೇಶಗಳಿಂದ ಜಾರಿಯಾಗಿರುವ ನಿಯಮಾವಳಿಗಳಲ್ಲಿ ಎಲ್ಲಿಯೂ ಏಕರೂಪದ ಪಠ್ಯಗಳಿರಬೇಕೆಂದು ಹೇಳಿಲ್ಲ. ಈಗ ರಚನೆಯಾಗಿರುವ ಪಠ್ಯಸಮಿತಿ ಕೂಡ ಸಮಾನ ಕಲಿಕಾ ಚೌಕಟ್ಟೊಂದನ್ನು ನೀಡುವ ಉದ್ದೇಶದ್ದಾಗಿದೆ.

ಪಠ್ಯರಚನೆಯ ಪ್ರಕ್ರಿಯೆಯನ್ನು ನಿಯಂತ್ರಿಸುವ ಕಾನೂನಾತ್ಮಕ ವ್ಯವಸ್ಥೆಯೊಂದು ಈಗ ಜಾರಿಯಲ್ಲಿದೆ. ಆಯಾ ವಿಶ್ವವಿದ್ಯಾಲಯದ ಅಧ್ಯಯನ ಮಂಡಳಿ ಮಾತ್ರ ಈಗ ಪಠ್ಯಗಳನ್ನು ಸಿದ್ಧಪಡಿಸಬಹುದಾಗಿದ್ದು, ಅವು ಕುಲಾಧಿಪತಿಯಾದ ರಾಜ್ಯಪಾಲರ ಅನುಮತಿ ಪಡೆಯಬೇಕಿದೆ. ಬೇರೆ ಯಾವ ಸಮಿತಿಗೂ ಪಠ್ಯ ರಚಿಸಿ ನೀಡುವ ಕಾನೂನಾತ್ಮಕವಾದ ಸ್ಥಾನವಿಲ್ಲ. ಅಲ್ಲದೆ, ಪ್ರಸ್ತುತ ಒಂದೊಂದು ವಿಶ್ವವಿದ್ಯಾಲಯಕ್ಕೂ ಅದರದ್ದೇ ಆದ ಸಿಬಿಸಿಎಸ್ ಯು.ಜಿ ರೆಗ್ಯುಲೇಷನ್‌ ಇದೆ.

ಅವುಗಳಲ್ಲಿ ಹಲವು ಬಗೆಯ ವೈವಿಧ್ಯಗಳೂ ಸ್ಥಳೀಯತೆಗಳೂ ವ್ಯತ್ಯಾಸ ಮತ್ತು ಗೊಂದಲಗಳೂ ಇವೆ. ಇವುಗಳನ್ನು ಸರಿಪಡಿಸಿಕೊಳ್ಳುವುದರ ಜೊತೆಗೆ ಸ್ಥಳೀಯತೆ, ಸ್ವಾಯತ್ತೆಯನ್ನು ಉಳಿಸಿಕೊಳ್ಳಬೇಕಾಗಿದೆ. ಹಾಗಾಗಿ ಸದ್ಯಕ್ಕೆ ರಾಜ್ಯಕ್ಕೆ ಅನ್ವಯವಾಗುವ ಯು.ಜಿ. ಸಿಬಿಸಿಎಸ್ ಮಾರ್ಗಸೂಚಿಯೊಂದನ್ನು ಉನ್ನತ ಶಿಕ್ಷಣ ಇಲಾಖೆಯು ರೂಪಿಸಬೇಕಾಗಿದೆ. ಸಮಾನ ಕಲಿಕಾ ಚೌಕಟ್ಟನ್ನು, ಪಠ್ಯ ಚೌಕಟ್ಟನ್ನು ರೂಪಿಸಲು ಒಂದು ಸಮಾನ ನೀತಿ ಬೇಡವೇ? ಅಂತಹ ಒಂದು ನೀತಿಯನ್ನು ಸಲಹಾರೂಪದಲ್ಲಿ ನೀಡಲು ಮಾತ್ರ ಪ್ರಸ್ತುತ ಸಮಿತಿಗೆ ಸಾಧ್ಯವಾಗಬಹುದು.

ಎಲ್ಲ ಪ್ರದೇಶ ಮತ್ತು ವಿವಿಧ ಕೋರ್ಸುಗಳಲ್ಲಿ ಕಲಿಯುವವರಿಗೆ ತರತಮವಿಲ್ಲದ ಕಲಿಕೆಯ ಅವಕಾಶ ಗಳನ್ನು ಸೃಷ್ಟಿಸುವುದು ನಮ್ಮೆಲ್ಲರ ಹೊಣೆ. ಅದಕ್ಕಾಗಿ ಒಂದು ಸಮಾನ ಕಲಿಕಾ ಚೌಕಟ್ಟನ್ನು ರೂಪಿಸಿಕೊಳ್ಳಬೇಕಿದೆ. ಇಂತಹ ಕಲಿಕಾ ಚೌಕಟ್ಟನ್ನು ನಾವು ಏಕರೂಪ ಪಠ್ಯಕ್ರಮ ಎಂದು ತಿಳಿಯಬೇಕಾದ ಅಗತ್ಯವಿಲ್ಲ.

ಈಗ ಕನ್ನಡ ವಿಷಯಕ್ಕೆ ರೂಪಿಸಿರುವ ಕಲಿಕಾ ಚೌಕಟ್ಟು/ಪಠ್ಯಕ್ರಮ ರಚನಾ ಸಮಿತಿಗೆ ವಿವಿಧ ವಲಯಗಳ ತಜ್ಞರು, ಕೈಗಾರಿಕೋದ್ಯಮಿಗಳು, ಶಿಕ್ಷಣ ತಜ್ಞರನ್ನು ಒಳಗೊಂಡ ಸಲಹಾ ಮಂಡಳಿ ಇರಬೇಕಾದ ಅಗತ್ಯವಿದೆ. ಅಲ್ಲದೆ ಪಠ್ಯಚೌಕಟ್ಟನ್ನು ಕಾಲಕಾಲಕ್ಕೆ ನಿರ್ವಹಿಸಲು ಒಂದು ಕ್ರಿಯಾ ಸಂಶೋಧನಾ ಘಟಕದ ಅವಶ್ಯಕತೆ ಕೂಡ ಇದೆ. ಆಯಾ ವಿ.ವಿಗಳ ಅಧ್ಯಯನ ಮಂಡಳಿಗಳನ್ನು ಮುಂದೆ ಇಂತಹ ಘಟಕಗಳನ್ನಾಗಿ ಬಳಸಬಹುದು. ನಮ್ಮಲ್ಲಿ ಯಾವತ್ತೂ ನೀತಿ ರೂಪಿಸುವವರು, ಜಾರಿಗೆ ತರುವವರು ಹಾಗೂ ಫಲಾನುಭವಿಗಳ ನಡುವೆ ಕಂದಕ ಇದ್ದೇ ಇದೆ. ಹಾಗಾಗಿ ಫಲಾನುಭವಿಗಳ ಪ್ರತಿಕ್ರಿಯೆ ಪಡೆದು ಸಾಧಕ– ಬಾಧಕಗಳನ್ನು ಚಿಂತಿಸಿಯೇ ನಾಳೆ ಮುಂದಿನ ಹೆಜ್ಜೆಗಳನ್ನು ಇಡಬೇಕಿದೆ.

ಲೇಖಕರು: ಕನ್ನಡ ಭಾಷಾ ಮತ್ತು ಐಚ್ಛಿಕ ಪಠ್ಯಕ್ರಮರಚನಾ ಸಮಿತಿ ಸದಸ್ಯರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT