ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆ | ಕಾಲದ ಅಗತ್ಯ, ಸವಾಲುಗಳಿಗೆ ಅನುಗುಣವಾಗಿ ಬೈಲಾ ತಿದ್ದುಪಡಿ

Last Updated 18 ಫೆಬ್ರುವರಿ 2022, 20:53 IST
ಅಕ್ಷರ ಗಾತ್ರ

ಶತಮಾನ ದಾಟಿದರೂ ತನ್ನ ಕ್ರಿಯಾಶೀಲತೆಯನ್ನು ನಿರಂತರವಾಗಿ ಪ್ರಕಟಿಸುತ್ತಿರುವ ಅಪರೂಪದ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು. ಭಾರತದ ಸಾಹಿತ್ಯಿಕ ಸಂಸ್ಥೆಗಳ ಪೈಕಿ ಎಂದೂ ವಿರಮಿಸದೆ ಇಷ್ಟು ದೂರ ಸಾಗಿದ, ಇಷ್ಟು ಎತ್ತರಕ್ಕೆ ಜಿಗಿದ ಮತ್ತೊಂದು ಸಂಸ್ಥೆಯಿಲ್ಲ. ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಪಾಲಿನ `ಜೀವಧ್ವನಿ'. ಇದು ಮೈಸೂರು ಸಂಸ್ಥಾನದ ಅಂದಿನ ಮಹಾರಾಜರಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಶಯದಂತೆ ಆರಂಭಗೊಂಡ ಸಂಸ್ಥೆ. ಸರ್ ಎಂ. ವಿಶ್ವೇಶ್ವರಯ್ಯ ಮತ್ತು ಸರ್ ಮಿರ್ಜಾ ಇಸ್ಮಾಯಿಲ್ ಅವರ ಒತ್ತಾಸೆ ಮತ್ತು ಸತತ ಪೋಷಣೆ ಇದರ ಪಾಲಿಗೆ ಲಭ್ಯವಾಯಿತು.

ರಾಜಪ್ರಭುತ್ವದಲ್ಲಿ ಮೈದಳೆದ ಪರಿಷತ್ತು ಅನಂತರ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಬೆಳೆದು ನಿಂತಿತು. ಪ್ರಭುತ್ವ ಮತ್ತು ಪ್ರಜೆಗಳ ಪ್ರೀತಿ ಮತ್ತು ಗೌರವಾದರಗಳಿಗೆ ಸಮಸಮನಾಗಿ ಪಾತ್ರವಾದ ಏಕಮಾತ್ರ ಸಂಸ್ಥೆ ಪರಿಷತ್ತು. ತನ್ನ ವಿಸ್ತೃತ ಶಾಖಾಜಾಲದಿಂದಾಗಿ ಅದರ ಚಟುವಟಿಕೆಗಳು ಜಿಲ್ಲೆ, ತಾಲ್ಲೂಕು ಮತ್ತು ಹೋಬಳಿಗಳವರೆಗೆ ಹರಡಿಕೊಂಡಿವೆ. ಶತಮಾನ ದಾಟಿದ ಹೆಗ್ಗಳಿಕೆ ಇರುವ ಪರಿಷತ್ತು ಅಂಗರಚನೆಯನ್ನು ಮೂಲಸ್ವರೂಪಕ್ಕೆ ಧಕ್ಕೆ ಬರದಂತೆ ಇದರ ಸಂಸ್ಥಾಪಕರಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನಪರ ಆಶಯಗಳಿಗೆ ಚ್ಯುತಿ ತಾರದಂತೆ ತಿದ್ದುಪಡಿ ಮಾಡುವ ಅಗತ್ಯವಿದೆ. ಆರಂಭದ ಕಾಲದಿಂದ ಇದುವರೆಗೆ 14 ಸಲ ಅದರ ತಿದ್ದುಪಡಿಯಾಗಿದೆ. ಆದರೆ ಈಗ ಜಾರಿಯಲ್ಲಿರುವ ನಿಬಂಧನೆಗಳನ್ನು ಸಹ ಈ ಕಾಲದ ಅಗತ್ಯಗಳಿಗೆ, ಸವಾಲುಗಳಿಗೆ, ತಂತ್ರಜ್ಞಾನದಲ್ಲಿ ಆಗಿರುವ ಅಗಾಧವಾದ ಬದಲಾವಣೆಗಳಿಗೆ ತಕ್ಕಂತೆ ತಿದ್ದಬೇಕಾದ ಅಗತ್ಯವಿದೆ.

ಕನ್ನಡ ಜನತೆಯು ಪರಿಷತ್ತಿನ ಬಗೆಗೆ ಇಟ್ಟಿರುವ ಭರವಸೆ ಮತ್ತು ನಂಬಿಕೆಯನ್ನು ಪುಷ್ಟೀಕರಿಸಲು ಅದನ್ನು ಕೂಲಂಕಷವಾಗಿ ಗಮನಿಸಬೇಕಾಗಿದೆ. ಇದು ಸೂಕ್ತ ಚಿಂತನ– ಮಂಥನದ ಮೂಲಕ ಅನುಷ್ಠಾನಗೊಳ್ಳಬೇಕಾಗಿದೆ. ಭಾರತದ ಸ್ವಾತಂತ್ರ್ಯ ಮತ್ತು ಕರ್ನಾಟಕದ ಏಕೀಕರಣದ ಪೂರ್ವದಲ್ಲಿ ಸಾಹಿತ್ಯ ಪರಿಷತ್ತಿನ ಸ್ಥಾಪನೆಯಾಯಿತು. ಸ್ವಾತಂತ್ರ್ಯ ಬಂದ ಒಂಬತ್ತು ವರ್ಷಗಳ ನಂತರ ಕನ್ನಡ ಮಾತನಾಡುವ ಪ್ರದೇಶಗಳ ಏಕೀಕರಣವಾಯಿತು. ನಾಡಿನ ಬೇರೆಬೇರೆ ಕಡೆಯಿಂದ ಭಿನ್ನಭಿನ್ನವಾದ ಭೌಗೋಳಿಕ ಭಾಷಾ ಪ್ರಭೇದಗಳು ಸಹ ಜನರನ್ನು ಭಾವನಾತ್ಮಕವಾಗಿ ಬಿಗಿಯಾಗಿ ಬೆಸೆಯುವಂತೆ ಮಾಡಿದವು.

1915ರಲ್ಲಿ ಪರಿಷತ್ತು ರಚನೆಯಾಗಿ ನಿಬಂಧನೆಗಳು ರೂಪುಗೊಂಡಾಗ ರಾಜ್ಯದಲ್ಲಿನ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ರಾಜಕೀಯ ಸಂದರ್ಭ ಮತ್ತು ಸನ್ನಿವೇಶಗಳು ಬೇರೆಯಾಗಿದ್ದವು. ಆಗ ರೂಪುಗೊಂಡ ನಿಯಮಗಳು ಕಾಲಧರ್ಮ ಮತ್ತು ಜೀವನಶೈಲಿಗೆ ಅನುಗುಣವಾಗಿದ್ದವು. 1915ರಿಂದ 2022ರ ನಡುವೆ ಅಗಾಧವಾದ ಅಂತರವಿದೆ. ತಂತ್ರಜ್ಞಾನ ದಾಪುಗಾಲಿಟ್ಟು ಊಹೆಗೂ ಮೀರಿ ಬೆಳೆದು ನಿಂತಿದೆ. ಕನ್ನಡವನ್ನೂ, ಪರಿಷತ್ತಿನ ಆಡಳಿತವನ್ನೂ ತಂತ್ರಜ್ಞಾನದ ಜೊತೆಜೊತೆಗೆ ಒಯ್ಯಬೇಕಾಗಿದೆ. ತಂತ್ರಜ್ಞಾನದಲ್ಲಿನ ಬೆಳವಣಿಗೆಯಿಂದಾಗಿ ನಮ್ಮ ಜೀವನಶೈಲಿ ಹಾಗೂ ಜೀವನಮೌಲ್ಯಗಳೂ ಬದಲಾಗಿವೆ. ಕಾಲಕ್ಕೆ ತಕ್ಕಂತೆ ಆಡಳಿತದಲ್ಲಿ ಪಾರದರ್ಶಕತೆ ಅಪೇಕ್ಷಣೀಯ. ಕಾರ್ಯಕ್ರಮದ ನಿರ್ವಹಣೆಯೂ ಬದಲಾಗಿದೆ. ದೃಕ್-ಶ್ರವ್ಯ ಮಾಧ್ಯಮಗಳ ಬಳಕೆ ಇಂದಿನ ಅಗತ್ಯ. ಈ ಎಲ್ಲ ಪರಿವರ್ತನೆಗಳನ್ನೂ ನಿಬಂಧನೆಗಳು ಒಳಗೊಳ್ಳಬೇಕು.

ಸಾಹಿತ್ಯ ಪರಿಷತ್ತು ಶ್ರೀಸಾಮಾನ್ಯರ ಪರಿಷತ್ತಾಗಬೇಕೆಂಬುದು ನನ್ನ ದೀರ್ಘಕಾಲದ ಬಯಕೆ ಮತ್ತು ಆಶಯ. ಪರಿಷತ್ತನ್ನು ಕರ್ನಾಟಕದ ಏಕಮಾತ್ರ ಪ್ರಾತಿನಿಧಿಕ ಸಂಸ್ಥೆ ಎಂದಾಗ ನಿಬಂಧನೆಗಳು ಅದನ್ನು ಪ್ರತಿಫಲಿಸುವಂತಿರಬೇಕು. ಇಲ್ಲದಿದ್ದರೆ ಸದ್ಯ ಸುಮಾರು ಮೂರೂವರೆ ಲಕ್ಷ ಸದಸ್ಯರಿರುವ ಪರಿಷತ್ತಿನ ಚುನಾವಣೆಗೆ ಸ್ಪರ್ಧಿಸಬೇಕೆಂದರೆ ಶ್ರೀಮಂತರಿಂದ ಮಾತ್ರ ಸಾಧ್ಯ. ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಬಯಸುವವರು 18 ವರ್ಷದ ವಯೋಮಾನದವರಾಗಿರಬೇಕು ಹಾಗೂ ಕನ್ನಡ ಓದು, ಬರಹ ಬಲ್ಲವರಾಗಿರಬೇಕು ಎಂಬುದನ್ನು ತನ್ನ ಸ್ಥಾಪನಾ ಕಾಲವಾದ 1915ರಲ್ಲೇ ನಿಬಂಧನೆಗಳು ಸ್ಪಷ್ಟಪಡಿಸಿದೆ. ಕನ್ನಡ ಅನ್ನದ ಭಾಷೆಯಾಗಲು, ಕನ್ನಡ ಶಾಲೆಗಳು ಉಳಿಯಲು ನಿಬಂಧನೆಗಳಿಗೆ ತಿದ್ದುಪಡಿ ಮಾಡಲೇಬೇಕು. ಇದೀಗ ಮಾಹಿತಿ ಹಕ್ಕು ಕಾಯ್ದೆಯು ಜಾರಿಯಾಗಿರುವುದರಿಂದ ನಮ್ಮ ನಿಬಂಧನೆಗಳಲ್ಲಿ ಅದನ್ನೂ ಅಳವಡಿಸಿಕೊಳ್ಳಬೇಕು.

ಸಾಕ್ಷರತೆಯ ಬಗ್ಗೆ ಪರಿಷತ್ತಿನ ಅಂಗರಚನೆ ಉಲ್ಲೇಖಿಸಿದೆ. ಇದುವರೆಗೂ ಕನ್ನಡ ಓದಲು ಬರೆಯಲು ಬಾರದವರಿಗೆ ಕನ್ನಡವನ್ನು ಕಲಿಸುವಿಕೆಯ ಬಗ್ಗೆ ಪರಿಷತ್ತು ಯಾವುದೇ ಕ್ರಮವನ್ನು ಕೈಗೊಂಡಿರಲಿಲ್ಲ. ಇದೀಗ ಪರಿಷತ್ತಿನ ನಿಯಮ ನಿಬಂಧನೆಗಳನ್ನು ಸ್ಪಷ್ಟಪಡಿಸಲು ಬೇರಿಗೆ ಕೈಹಾಕಲಾಗಿದೆ. ಪರಿಷತ್ತಿನ ಕಾರ್ಯವ್ಯಾಪ್ತಿಯನ್ನು ಕನ್ನಡ-ಕನ್ನಡಿಗ-ಕರ್ನಾಟಕ ಕೇಂದ್ರಿತವಾಗಿ ಮಾಡಲು ಪಣತೊಡಬೇಕಿದೆ. ಈ ಮೊದಲು ಅದು ಕೇವಲ ನುಡಿಕೇಂದ್ರಿತವಾಗಿತ್ತು.

ನಿಬಂಧನೆಗಳ ತಿದ್ದುಪಡಿಗಾಗಿ 11 ಜನ ಪ್ರಾಜ್ಞರ ಸಮಿತಿಯನ್ನು ರಚಿಸಲಾಗಿದೆ. ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯೊಬ್ಬರ ಅಧ್ಯಕ್ಷತೆಯಲ್ಲಿ ರಚಿತವಾಗಿರುವ ಈ ಸಮಿತಿಯಲ್ಲಿ ಸಹಕಾರಿ ಕ್ಷೇತ್ರದ ಧುರೀಣರು, ಸಾಂಸ್ಕೃತಿಕ ಕ್ಷೇತ್ರದ ಪ್ರಮುಖರು, ಕಲೆಯ ಬಗೆಗೆ ತುಡಿತವಿರುವವರು, ಜಾನಪದ ತಜ್ಞರು, ಸಂಘಟಕರು ಇದ್ದಾರೆ. ಪರಿಷತ್ತಿನ ಅಂಗರಚನೆಯನ್ನು ಬದಲಿಸಬೇಕೆಂಬುದು ಆತುರದ ಕ್ರಮವಲ್ಲ. ಅದು ಅತ್ಯಂತ ಅನಿವಾರ್ಯವಾದದ್ದು.

ನಾಡಿನ ಹೆಸರಾಂತ ವಿದ್ವಾಂಸರ ಜೊತೆಯಲ್ಲಿ ಇದೇ 17ರಂದು ನಡೆದ ಸಭೆಯುತಿದ್ದುಪಡಿಗೆ ಮಾಡಬೇಕು ಎಂಬುದಕ್ಕೆ ಸಮ್ಮತಿಯ ಮುದ್ರೆಯನ್ನು ಒತ್ತಿತು. ಈ ಸಭೆಯಲ್ಲಿ ಸಾಹಿತಿಗಳು, ಕಲಾವಿದರು, ಶಿಕ್ಷಣತಜ್ಞರು ಸೇರಿದಂತೆ ಬದುಕಿನ ವಿವಿಧ ಕ್ಷೇತ್ರಗಳಿಗೆ ಸಂಬಂಧ ಪಟ್ಟವರನ್ನು ಆಹ್ವಾನಿಸಿ ಅವರಿಗೆ ನಿಬಂಧನೆಗಳ ಕರಡು ಪ್ರತಿಯನ್ನು ನೀಡಿ, ಮಾಡಿರುವ ತಿದ್ದುಪಡಿಗಳು ಸಮಂಜಸವಾಗಿವೆಯೇ ಎಂದು ತಿಳಿಸಲು ಪರಿಷತ್ತು ಕೋರಿತ್ತು. ಇಡೀ ದಿನ ಅತ್ಯಂತ ಸೌಹಾರ್ದಯುತವಾದ ವಾತಾವರಣದಲ್ಲಿ ನಡೆದ ಸಮಾಲೋಚನಾ ಸಭೆ ಇವೆಲ್ಲ ಬದಲಾವಣೆಗಳಿಗೂ ಸರ್ವಸಮ್ಮತವಾದ ತನ್ನ ಒಪ್ಪಿಗೆಯನ್ನು ನೀಡಿತು. ಪರಿಷತ್ತಿನ ಸದಸ್ಯರಾಗಲು ನಿಗದಿಪಡಿಸಲಾದ ಶೈಕ್ಷಣಿಕ ಅರ್ಹತೆಯನ್ನು 45 ವರ್ಷಗಳಿಗಿಂತ ಕೆಳಗಿನವರು ಏಳನೆಯ ತರಗತಿಯವರೆಗೆ ಓದಿರಬೇಕೆಂದೂ, ಅದರ ಮೇಲ್ಪಟ್ಟ ವಯಸ್ಸಿನವರಿಗೆ ವಿನಾಯಿತಿಯನ್ನು ನೀಡಬಹುದೆಂದು ಅಭಿಪ್ರಾಯಪಟ್ಟಿತು. ಜಾನಪದ ಕಲಾವಿದರು, ರಂಗಭೂಮಿ ಕಲಾವಿದರು, ಚಿತ್ರ ಕಲಾವಿದರು, ಕುಶಲಕರ್ಮಿಗಳು, ರೈತರು, ಅಸಂಘಟಿತ ಕಾರ್ಮಿಕರಿಗೆ ಶೈಕ್ಷಣಿಕ ಅರ್ಹತೆಯಿಂದ ವಿನಾಯಿತಿ ನೀಡಬೇಕೆಂದು ಸಭೆ ಸೂಚಿಸಿತು.

ಆಡಳಿತದ ಸುಧಾರಣೆ ಮತ್ತು ಸರಳೀಕರಣಕ್ಕಾಗಿ ಮೊಬೈಲ್ ಆ್ಯಪ್ ಅನ್ನು ವಿಶೇಷವಾಗಿ ಅಭಿವೃದ್ಧಿಪಡಿಸುವ ಪ್ರಸ್ತಾವಕ್ಕೂ ಸಭೆ ಅನುಮೋದಿಸಿತು. ಈ ತಿದ್ದುಪಡಿಗಳನ್ನು ಆಮೂಲಾಗ್ರವಾಗಿ ಜಾರಿಗೆ ತಂದು ಕನ್ನಡ ಜನತೆಯ ಕಣ್ಮಣಿಯಾಗಿರುವ ಕಸಾಪದಲ್ಲಿ ಹೊಸಹೊಸ ಕಾರ್ಯಯೋಜನೆಗಳನ್ನು ಅನುಷ್ಠಾನಗೊಳಿಸುವ ಉದ್ದೇಶ ಯಶಸ್ವಿಯಾಗಲಿ ಎಂದು ಒಮ್ಮತದಿಂದ ಅಭಿಪ್ರಾಯಿಸಿತು. ಸದಸ್ಯತ್ವ ಶುಲ್ಕವನ್ನು ಈಗಿರುವ ಒಟ್ಟು ರೂ. 1,000/- ದಿಂದ ರೂ. 250/-ಕ್ಕೆ ಇಳಿಸುವುದು ಜನಪರವಾದ ಕ್ರಮವೆಂದು ಮೆಚ್ಚುಗೆಯನ್ನು ವ್ಯಕ್ತಪಡಿಸಿತು. ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಕಲಾವಿದರನ್ನು ಸದಸ್ಯರಾಗಿ ನೋಂದಾಯಿಸಿಕೊಳ್ಳಲು ಪರಿಷತ್ತು ಮುಂದಾಗಬೇಕೆಂದು ತಿಳಿಸಿತು.

ಕಸಾಪ ಚುನಾವಣೆ ಕುರಿತ ತಿದ್ದುಪಡಿಗಳನ್ನು ಈ ಹಂತದಲ್ಲಿ ತರುವ ಅಗತ್ಯವಿಲ್ಲ. ಚುನಾವಣೆಗೆ ಇನ್ನೂ ಐದು ವರ್ಷ ಇರುವುದರಿಂದ ಅದರ ಒಳಗೆ ತಂತ್ರಜ್ಞಾನ ಮತ್ತು ಕಾನೂನಾತ್ಮಕ ಬದಲಾವಣೆಗಳು ಆಗುವುದರಿಂದ ಹಾಗೂ ಚುನಾವಣಾ ಆಯೋಗ ಹೊಸ ಪ್ರಯೋಗಗಳನ್ನು ನಡೆಸುವ ಸಂಭವವಿರುವುದರಿಂದ ಈ ಕುರಿತ ತಿದ್ದುಪಡಿ ಕಾರ್ಯವನ್ನು 2025ರಲ್ಲಿ ಕೈಗೊಳ್ಳಲಾಗುವುದು. ಈ ಎಲ್ಲ ಉದ್ದೇಶಿತ ತಿದ್ದುಪಡಿಗಳನ್ನು ಇದೇ 24ರಂದು ನಡೆಯುವ ಪರಿಷತ್ತಿನ ಕಾರ್ಯಕಾರಿ ಸಮಿತಿಯಲ್ಲಿ ಮಂಡಿಸಲಾಗುವುದು. ಪರಿಷತ್ತಿನ ಅಂಗರಚನೆ ತಿದ್ದುಪಡಿಯ ಕರಡನ್ನು ಎರಡು ತಿಂಗಳ ಒಳಗೆ ಕಾರ್ಯಗತಗೊಳಿಸಿರುವುದು ಒಂದು ದಾಖಲೆ.

ಯಾವುದೇ ಬದಲಾವಣೆಯನ್ನು ಮಾಡಲು ಹೊರಟಾಗ ವಿರೋಧ ಸಹಜವಾದದ್ದು. ಪರಿವರ್ತನೆಯ ಸಂದರ್ಭದಲ್ಲಿ ಇಂತಹ ಅಡ್ಡಿ, ಆತಂಕಗಳನ್ನು ಮೆಟ್ಟಿ ನಿಲ್ಲಬೇಕಾಗಿದೆ. ಸ್ಥಿತ್ಯಂತರದ ಅವಧಿಯಲ್ಲಿ ಇಂತಹ ಪ್ರತಿರೋಧಗಳು ಸಹಜ ಎಂಬುದು ಕಸಾಪದ ಅರಿವಿನಲ್ಲಿದೆ. ಪರಿಷತ್ತಿನ ಉದ್ದೇಶಿತ ತಿದ್ದುಪಡಿಗೆ ಕರ್ನಾಟಕದ ಎಲ್ಲ ಭಾಗಗಳಿಂದ, ವರ್ಗಗಳಿಂದ ಅಭೂತಪೂರ್ವ ಬೆಂಬಲ ದೊರೆತಿರುವುದು ಸ್ಫೂರ್ತಿ ನೀಡಿದೆ. ಈ ಕ್ರಾಂತಿಕಾರಕ ಬದಲಾವಣೆಗಳಿಂದ ಪರಿಷತ್ತು ಹೊಸ ಆಯಾಮವನ್ನು ಪಡೆಯಲಿದೆ ಎಂಬ ದೃಢ ವಿಶ್ವಾಸವಿದೆ.

***

ಯಾವುದೇ ಬದಲಾವಣೆಯನ್ನು ಮಾಡಲು ಹೊರಟಾಗ ವಿರೋಧ ಸಹಜವಾದದ್ದು. ಪರಿವರ್ತನೆಯ ಸಂದರ್ಭದಲ್ಲಿ ಇಂತಹ ಅಡ್ಡಿ, ಆತಂಕಗಳನ್ನು ಮೆಟ್ಟಿ ನಿಲ್ಲಬೇಕಾಗಿದೆ. ಸ್ಥಿತ್ಯಂತರದ ಅವಧಿಯಲ್ಲಿ ಇಂತಹ ಪ್ರತಿರೋಧಗಳು ಸಹಜ ಎಂಬುದು ಕಸಾಪದ ಅರಿವಿನಲ್ಲಿದೆ. ಪರಿಷತ್ತಿನ ಉದ್ದೇಶಿತ ತಿದ್ದುಪಡಿಗೆ ಕರ್ನಾಟಕದ ಎಲ್ಲ ಭಾಗಗಳಿಂದ, ವರ್ಗಗಳಿಂದ ಅಭೂತಪೂರ್ವ ಬೆಂಬಲ ದೊರೆತಿರುವುದು ಸ್ಫೂರ್ತಿ ನೀಡಿದೆ.

ಲೇಖಕ: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT