ಸೋಮವಾರ, ಮಾರ್ಚ್ 30, 2020
19 °C
ತೆರೆದ ಪುಸ್ತಕ ಪರೀಕ್ಷೆಯು ವಿದ್ಯಾರ್ಥಿಯ ಆಲೋಚನಾಶಕ್ತಿಯನ್ನು ಪರೀಕ್ಷಿಸುತ್ತದೆ. ಈಗಿನಂತೆ ಬಾಯಿಪಾಠ ಮಾಡುವುದನ್ನಲ್ಲ. ಆದರೆ ನಮ್ಮ ಎಷ್ಟು ಜನ ಅಧ್ಯಾಪಕರು ಈ ನಮೂನೆಯಲ್ಲಿ ಹೇಳಿಕೊಡಲು ಮತ್ತು ಪರೀಕ್ಷಿಸಲು ಸಿದ್ಧರಾಗಿದ್ದಾರೆ?

ಮಕ್ಕಳ ಕಲಿಕೆಗೆ ಪೂರಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುಸ್ತಕ ನೋಡಿ ಪರೀಕ್ಷೆ (Open book exam) ಬರೆಯುವ ವ್ಯವಸ್ಥೆ ಬಗ್ಗೆ ಚಿಂತನೆ ನಡೆಸಿರುವುದಾಗಿ (ಪ್ರ.ವಾ., ಜೂನ್‌ 25) ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ಹೇಳಿದ್ದಾರೆ. ಈ ನಿಲುವು ಮೆಚ್ಚುವಂತಹದ್ದು. ಏಕೆಂದರೆ ಶಿಕ್ಷಣದ ಪ್ರಧಾನ ಆಶಯ ಕಲಿಕೆಯಾಗಿದೆ. ಅದರಲ್ಲೂ ಪಠ್ಯಪುಸ್ತಕದಲ್ಲಿರುವ ಅಂಶಗಳನ್ನು ತರಗತಿಯ ಪ್ರತಿಯೊಂದು ಮಗುವೂ ಕಲಿಯುವುದಾಗಿದೆ. ಆದರೆ ಈಗಿನ ಪರೀಕ್ಷಾ ವ್ಯವಸ್ಥೆಯು ತರಗತಿಯ ಎಲ್ಲಾ ಮಕ್ಕಳು ಕಲಿಯುವುದಕ್ಕಿಂತಲೂ ಯಾವುದೋ ಒಂದಿಬ್ಬರು ಮಕ್ಕಳು ಪ್ರತಿಭಾವಂತರು ಎಂದು ತೋರಿಸಿಕೊಡುವುದಾಗಿದೆ. ಮಕ್ಕಳ ಕಲಿಕೆಯನ್ನು ಪರೀಕ್ಷಿಸುವುದಕ್ಕಿಂತಲೂ ಅವರ ನೆನಪಿನ ಶಕ್ತಿಯನ್ನು ಪರೀಕ್ಷಿಸುವುದಾಗಿದೆ.

ನಿಜ, ಸಿಸಿಇ ಪದ್ಧತಿ ಬಂದ ನಂತರ ಒಂದಷ್ಟು ಯೋಜನಾ ಕಾರ್ಯಗಳನ್ನು ನೀಡಿ ಅಂಕ ನೀಡುತ್ತಿರಬಹುದು, ಪ್ರಾಯೋಗಿಕ ತರಗತಿಗಳನ್ನು ನಡೆಸುತ್ತಿರಬಹುದು. ಆದರೆ ಹೆಚ್ಚು ಆದ್ಯತೆ ನೆನಪಿನ ಶಕ್ತಿ ಪರೀಕ್ಷಿಸುವುದೇ ಆಗಿರುತ್ತದೆ. ಎಷ್ಟೋ ಮಕ್ಕಳು ಕಡಿಮೆ ನೆನಪಿನ ಶಕ್ತಿ ಹೊಂದಿಯೂ ಸಂಬಂಧಿಸಿದ ವಿಷಯಗಳನ್ನು ಚೆನ್ನಾಗಿ ಕಲಿತಿರುತ್ತಾರೆ. ತರಗತಿಯಲ್ಲಿ ಲೆಕ್ಕಗಳನ್ನು ಮಾಡುವುದರಲ್ಲಾಗಲೀ ಉತ್ತರ ಹೇಳುವುದರಲ್ಲಾಗಲೀ ಮುಂದಿರುತ್ತಾರೆ. ಆದರೆ ನೆನಪಿನ ಶಕ್ತಿ ಕೊರತೆಯಿಂದಾಗಿ ಮುಚ್ಚಿದ ಪುಸ್ತಕ ಪದ್ಧತಿಯಲ್ಲಿ ತಮ್ಮ ಪ್ರತಿಭೆ ತೋರಿಸಲಾಗುವುದಿಲ್ಲ.

ವಿಷಯಗಳನ್ನು ನೆನಪಿನಲ್ಲಿಟ್ಟುಕೊಂಡು ಅಂಕ ತೆಗೆಯುವವರನ್ನು ನೋಡಿ ಅಂಕ ತೆಗೆಯದವರು ನಾವು ದಡ್ಡರು ಎಂದು ತಮ್ಮನ್ನು ತಾವೇ ಪರಿಗಣಿಸಿಕೊಂಡುಬಿಡುವುದು ಮುಚ್ಚಿದ ಪುಸ್ತಕ ಪದ್ಧತಿಯ ದೊಡ್ಡ ಅಪಾಯ! ಮಕ್ಕಳಷ್ಟೆ ಅಲ್ಲ; ಪೋಷಕರು, ಶಿಕ್ಷಕರು ಎಲ್ಲರೂ ಅಂತಹ ವಿದ್ಯಾರ್ಥಿಗಳನ್ನು ದಡ್ಡರು ಎಂದು ಪರಿಗಣಿಸಲು ಪ್ರಾರಂಭಿಸುತ್ತಾರೆ. ಹೇಗೆಂದರೆ ಮಗುವನ್ನು ಎರಡನೇ ವರ್ಷಕ್ಕೆ ಬೇಬಿ ಸಿಟಿಂಗ್‌ಗೆ ಹಾಕುವ ಈಗಿನ ವ್ಯವಸ್ಥೆಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಮುದ್ದಿಸಲು ಕೂಡ ಆ ಮಗು ತೆಗೆಯುವ ಅಂಕ ನೋಡುತ್ತಾರೆ! ಆ ಮಟ್ಟಿಗೆ ಮಗು ಪೋಷಕರ ಪ್ರೀತಿಯಿಂದಲೂ ವಂಚನೆಗೊಳಗಾಗುತ್ತದೆ. ಕಡಿಮೆ ಅಂಕ ಪಡೆಯುವ ವಿದ್ಯಾರ್ಥಿಗಳನ್ನು ದಡ್ಡರು ಎಂದು ಪರಿಗಣಿಸುವ ಚಾಳಿ ಬೇಬಿ ಸಿಟಿಂಗ್‌ನಿಂದಲೇ ಪ್ರಾರಂಭವಾಗಿ ಒಂದು, ಎರಡು... ಹೀಗೆ ಹತ್ತನೇ ತರಗತಿವರೆಗೂ ಮುಂದುವರೆಯುತ್ತದೆ. ಯಾವ ಹಂತದಲ್ಲೂ ಆ ವಿದ್ಯಾರ್ಥಿಗೆ ಎಚ್ಚೆತ್ತುಕೊಳ್ಳಲು ಅವಕಾಶ ಸಿಗುವುದಿಲ್ಲ. ಈ ನಿಟ್ಟಿನಲ್ಲಿ ಈ ಇಷ್ಟೂ ವರ್ಷಗಳಲ್ಲಿ ಆ ಮಗುವಿನ ಮಾನಸಿಕ ಸ್ಥಿತಿಯ ಮೇಲೆ ಆಗುವ ಪರಿಣಾಮ? ಈ ಹಿನ್ನೆಲೆಯಲ್ಲಿ ಈಗಿನ ಪರೀಕ್ಷಾ ಪದ್ಧತಿ ಬಹುಸಂಖ್ಯಾತ ದಡ್ಡರನ್ನು ರೂಪಿಸುವ ಪರೀಕ್ಷಾ ಪದ್ಧತಿಯಾಗಿದೆ. ಹಾಗೆಯೇ ಇಂತಹ ‘ದಡ್ಡ ಮಾನವ ಸಂಪನ್ಮೂಲ’ ರೂಪಿಸುವ ಕಲಿಕೆಯ ವ್ಯವಸ್ಥೆಗೆ ಸರ್ಕಾರ ಏಕೆ ಅಷ್ಟೊಂದು ಹಣ ವ್ಯಯಿಸಬೇಕು ಎಂಬ ಪ್ರಶ್ನೆ ಕೂಡ ಇಲ್ಲಿ ಸಹಜವಾಗಿ ಹುಟ್ಟಿಕೊಳ್ಳುತ್ತದೆ.

ರಘೋತ್ತಮ ಹೊ.ಬ., ಮೈಸೂರು

 

ಸುಲಭದ ಕೆಲಸವಲ್ಲ

ತೆರೆದ ಪುಸ್ತಕ ಪರೀಕ್ಷೆ ಬಗ್ಗೆ ನನಗೆ ಚೆನ್ನಾಗಿಯೇ ತಿಳಿದಿದೆ. ಮುಂಬೈಯಲ್ಲಿದ್ದಾಗ ನಾನೇ ಇಂತಹ ಪರೀಕ್ಷೆಗಳನ್ನು ನಡೆಸಿದ್ದೇನೆ. ಮುಂಬೈಯಲ್ಲಿ ಭಾಭಾ ಪರಮಾಣು ಸಂಶೋಧನಾ ಕೇಂದ್ರದಲ್ಲಿ ವಿಜ್ಞಾನಿಯಾಗಿದ್ದಾಗ ಅಲ್ಲಿಯ ಅಧಿಕಾರಿಗಳ ಸಂಘದ ವತಿಯಿಂದ ಹತ್ತನೇ ತರಗತಿ ಪಾಸಾದ ಮಕ್ಕಳಿಗೆ ಕಂಪ್ಯೂಟರ್ ಪ್ರೋಗ್ರಾಮಿಂಗ್ (BASIC language) ಪಾಠ ಮಾಡುತ್ತಿದ್ದೆ. ಅದರ ಕೊನೆಯಲ್ಲಿ ನಾನೇ ತೆರೆದ ಪುಸ್ತಕ ಪರೀಕ್ಷೆ ನಡೆಸಿದ್ದೆ. ಬಿ.ಎ.ಆರ್‌.ಸಿ.ಯಲ್ಲಿ ಹೊಸದಾಗಿ ಸೇರಿದ ವಿಜ್ಞಾನಿಗಳಿಗೆ ನಡೆಸುವ ತರಬೇತಿಯಲ್ಲೂ ನಾನು ಪಾಠ ಮಾಡಿದ್ದೆ. ಅಲ್ಲೂ ತೆರೆದ ಪುಸ್ತಕ ಪರೀಕ್ಷೆ ನಡೆಸಿದ್ದೆ.

ತೆರೆದ ಪುಸ್ತಕ ಪರೀಕ್ಷೆಯು ಉತ್ತಮ ಆಲೋಚನೆ. ಆದರೆ ಇದನ್ನು ಪ್ರಾಥಮಿಕ ಹಾಗೂ ಮಾಧ್ಯಮಿಕ ಹಂತದಲ್ಲಿ ಎಲ್ಲ ವಿಷಯಗಳಿಗೆ ನಡೆಸಲು ಸಾಧ್ಯವಿಲ್ಲ. ಬೇಕಿದ್ದರೆ ಗಣಿತಕ್ಕೆ ಪ್ರಯೋಗಾತ್ಮಕವಾಗಿ ನಡೆಸಿ ನೋಡಬಹುದು. ವಿಜ್ಞಾನಕ್ಕೂ ನಡೆಸಬಹುದು. ಭಾಷೆ, ಸಮಾಜ, ಇತಿಹಾಸ ಇಂತಹ ವಿಷಯಗಳಿಗೆ ಸಾಧ್ಯವಿಲ್ಲ. ‘ಹಕ್ಕಿ ಹಾರುತಿದೆ ನೋಡಿದಿರಾ...’ ಪದ್ಯವನ್ನು ಯಾರು ಬರೆದದ್ದು ಎಂದು ಕೇಳಿದರೆ ಮಕ್ಕಳಿಗೆ ಆಲೋಚನಾ ಶಕ್ತಿಯನ್ನು ಕಲಿಸಿದಂತಾಗುತ್ತದೆಯೇ? ಅದರ ಬದಲಿಗೆ ‘ಹಕ್ಕಿ ಹಾರುತಿದೆ ನೋಡಿದಿರಾ ಹಾಡಿನಲ್ಲಿ ಬೇಂದ್ರೆಯವರು ಕರಿನರೆ ಬಣ್ಣದ ರೆಕ್ಕೆಗಳು ಎಂದು ಏನನ್ನು ಸೂಚಿಸಿದ್ದಾರೆ’ ಎಂದು ಕೇಳಿದರೆ ಸ್ವಲ್ಪಮಟ್ಟಿಗೆ ಆಲೋಚನೆಗೆ ಹಚ್ಚಿದಂತಾಗುತ್ತದೆ. ‘ಪಾಣಿಪತ್ ಯುದ್ಧ ಯಾವಾಗ ನಡೆಯಿತು’ ಎಂದು ಇಂತಹ ಪರೀಕ್ಷೆಯಲ್ಲಿ ಕೇಳುವಂತಿಲ್ಲ. ಶಿಕ್ಷಣ ತಜ್ಞರು ಕುಳಿತು ಚರ್ಚಿಸಿ ತೀರ್ಮಾನಿಸಬೇಕಾದ ವಿಷಯವಿದು.

ತೆರೆದ ಪುಸ್ತಕ ಪರೀಕ್ಷೆಯು ವಿದ್ಯಾರ್ಥಿಯ ಆಲೋಚನಾಶಕ್ತಿಯನ್ನು ಪರೀಕ್ಷಿಸುತ್ತದೆ. ಈಗಿನಂತೆ ಬಾಯಿಪಾಠ ಮಾಡುವುದನ್ನಲ್ಲ. ಆದರೆ ನಮ್ಮ ಎಷ್ಟು ಜನ ಅಧ್ಯಾಪಕರು ಈ ನಮೂನೆಯಲ್ಲಿ ಹೇಳಿಕೊಡಲು ಮತ್ತು ಪರೀಕ್ಷಿಸಲು ಸಿದ್ಧರಾಗಿದ್ದಾರೆ? ಶಾಲೆಯಲ್ಲಿ ಟೀಚರು ಕೊಟ್ಟ ನೋಟ್ಸಿನಲ್ಲಿರುವ ವಾಕ್ಯಗಳನ್ನು ಹಾಗೆಯೇ ಬರೆದರೆ ಮಾತ್ರ ಮಾರ್ಕು ನೀಡುವ ಟೀಚರುಗಳೇ ತುಂಬಿದ್ದಾರೆ. ಇದನ್ನು ನಾನು, ನನ್ನ ಮಕ್ಕಳು ಶಾಲೆಗೆ ಹೋಗುತ್ತಿದ್ದಾಗ ಪೇರೆಂಟ್ ಟೀಚರ್ಸ್ ಮೀಟಿಂಗ್‌ಗಳಲ್ಲಿ ಭಾಗವಹಿಸಿ ಆದ ಅನುಭವದಿಂದ ಹೇಳುತ್ತಿದ್ದೇನೆ. ನನ್ನ ಮಕ್ಕಳ ಮೇಲೆ ಟೀಚರುಗಳ ದೂರು ಏನಿತ್ತೆಂದರೆ ಅವರು ನೋಟ್ಸಿನಲ್ಲಿ ಕೊಟ್ಟಂತೆ ಬರೆಯುವುದಿಲ್ಲ ಎಂದು. ಸ್ವಂತ ವಾಕ್ಯದಲ್ಲಿ ಬರೆದರೇ ಸಹಿಸದ ಟೀಚರುಗಳು ಸ್ವಂತ ಅಭಿಪ್ರಾಯವನ್ನು ಮಾನ್ಯ ಮಾಡುತ್ತಾರೆಯೇ?

ತೆರೆದ ಪುಸ್ತಕ ಪರೀಕ್ಷೆಗೆ ಪ್ರಶ್ನೆಪತ್ರಿಕೆ ತಯಾರಿಸಲೂ ತುಂಬ ಕಷ್ಟವಿದೆ. ಪುಸ್ತಕದಲ್ಲಿ ನೀಡಿದ ಮಾಹಿತಿಯನ್ನೇ ನೇರವಾಗಿ ಕೇಳುವಂತಿಲ್ಲ. ಅದರ ಆಧಾರದಲ್ಲಿ ವಿದ್ಯಾರ್ಥಿ ಆಲೋಚಿಸಿ ಬರೆಯಲು ಪ್ರೇರೇಪಿಸುವಂತೆ ಪ್ರಶ್ನೆಪತ್ರಿಕೆ ರೂಪಿಸಬೇಕು. ಇದೇನೂ ಸುಲಭದ ಕೆಲಸವಲ್ಲ. ಒಂದು ಉದಾಹರಣೆ ನೋಡೋಣ- ಓಮ್ಸ್ ಲಾ ಎಲ್ಲರಿಗೂ ಗೊತ್ತು. V=IR & W=VI. ಆದರೆ ಇದನ್ನೇ ಆಧರಿಸಿ ಪ್ರಶ್ನೆ ಕೇಳಿ ನೋಡೋಣ. ಒಂದು ಇಸ್ತ್ರಿ ಪೆಟ್ಟಿಗೆಯ ವಾಟೇಜ್ 1000 ಇದೆ, ಅದಕ್ಕೆ ಎಷ್ಟು ಆಂಪಿಯರ್ನ್‌ ಫ್ಯೂಸ್ ಹಾಕಬೇಕು ಎಂದು ಪ್ರಶ್ನೆ ತಯಾರಿಸಿದರೆ ವಿದ್ಯಾರ್ಥಿ ಇರಲಿ ಅರ್ಧದಷ್ಟು ಅಧ್ಯಾಪಕರಿಗೂ ಉತ್ತರ ಗೊತ್ತಾಗಲಾರದು. ಈ ನಮೂನೆಯ ಪ್ರಶ್ನೆಪತ್ರಿಕೆ ತಯಾರಿಸಲು ಎಷ್ಟು ಜನ ಅಧ್ಯಾಪಕರಿಗೆ ಸಾಧ್ಯವಿದೆ?

ಆದುದರಿಂದ ನಮ್ಮ ಸದ್ಯದ ಪರಿಸ್ಥಿತಿಯಲ್ಲಿ ಎಲ್ಲ ವಿಷಯಗಳಿಗೂ ತೆರೆದ ಪುಸ್ತಕ ಪರೀಕ್ಷೆ ನಡೆಸುವಂತಿಲ್ಲ.

ಡಾ.ಯು.ಬಿ. ಪವನಜ, ತಂತ್ರಾಂಶ ತಜ್ಞ, ಬೆಂಗಳೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು