ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆ | ದೇವಸ್ಥಾನ ಸಾರ್ವಜನಿಕ ಸಂಸ್ಥೆ: ಸಂವಿಧಾನ ಅದಕ್ಕೂ ಅನ್ವಯ

ದೇವಸ್ಥಾನಗಳ ಅರ್ಚಕ ವೃತ್ತಿಗೆ ಬ್ರಾಹ್ಮಣೇತರರನ್ನು ನೇಮಿಸಬೇಕೇ?
ಅಕ್ಷರ ಗಾತ್ರ

ನಿತ್ಯವೂ ಸಾವಿರ-ಲಕ್ಷ ಭಕ್ತರು ಭೇಟಿ ನೀಡುವ, ಅಪಾರ ಆದಾಯದ, ಸಾಂಸ್ಥಿಕ ರೂಪ ಪಡೆದು ಆ ಪ್ರದೇಶದ ಆರ್ಥಿಕತೆಯನ್ನು ರೂಪಿಸಿರುವ ಹಲವಾರು ದೇವಸ್ಥಾನಗಳು ದೇಶದಾದ್ಯಂತ ಇವೆ. ಕಲಾತ್ಮಕ ಸೌಂದರ್ಯ, ಪ್ರಭಾವದಿಂದಾಗಿ ಅಪಾರ ಜನಮನ್ನಣೆ ಗಳಿಸಿವೆ. ಜಗತ್ತಿನಲ್ಲಿ ಅತಿ ಹೆಚ್ಚು ವರಮಾನವಿರುವುದು ವ್ಯಾಟಿಕನ್ ಚರ್ಚ್‌ಗೆ, ಎರಡನೆಯದು ತಿರುಪತಿ. ಮುಜರಾಯಿ ಇಲಾಖೆಗೆ ಸೇರಿರುವ ದೇವಸ್ಥಾನಗಳು ಸಾರ್ವಜನಿಕ ಸಂಸ್ಥೆಗಳಾಗಿರುವುದರಿಂದ ಅವುಗಳಿಗೆ ನಾಡಿನ ಕಾನೂನು ಅನ್ವಯವಾಗುತ್ತದಲ್ಲದೆ ಅವು ಸಂವಿಧಾನಕ್ಕೆ ಬದ್ಧವಾಗಿರಬೇಕು.

ಸಂವಿಧಾನದ ಸರ್ವರ ಸಮಾನತೆಯ ಪ್ರಜಾಸತ್ತಾತ್ಮಕ ಮೌಲ್ಯಗಳು ಕುಟುಂಬ, ದೇವಸ್ಥಾನ ಮಾತ್ರವಲ್ಲದೆ ಸಾರ್ವಜನಿಕ ಸಂಸ್ಥೆಗಳೆಲ್ಲದರಲ್ಲಿಯೂ ಹರಡಿಕೊಂಡು ಬೇರು ಬಿಡುತ್ತ ಹೋಗಬೇಕು. ಯಾಕೆಂದರೆ ರಾಜಕೀಯ, ಆರ್ಥಿಕ, ಸಾಮಾಜಿಕ, ಧಾರ್ಮಿಕ ಮತ್ತು ಉಪಾಸನಾ ಸ್ವಾತಂತ್ರ್ಯವನ್ನು ಭಾರತವಾಸಿಗಳೆಲ್ಲರಿಗೂ ನೀಡಿರುವ ಸಂವಿಧಾನವನ್ನು ಭಾರತೀಯ ಜನತೆಯಾಗಿ ನಮಗೆ ನಾವೇ ಅರ್ಪಿಸಿಕೊಂಡಿದ್ದೇವೆ. ಹಾಗಾಗಿ ದೇವಸ್ಥಾನಗಳಲ್ಲಿ ದೇವರ ಪೂಜೆ ಮಾಡಬಯಸುವ ಅರ್ಹರಿಗೆ ಹೆಣ್ಣು-ಗಂಡು, ಜಾತಿ-ಜನಾಂಗ-ಧರ್ಮ ಬೇಧವಿಲ್ಲದೆ ಅವಕಾಶ ಸಿಗಬೇಕು. ಪೂಜಾಕಾರ್ಯಗಳು ಸಂಸ್ಕೃತದಲ್ಲಿ ಮಾತ್ರವೇ ಏಕೆ? ಭಾರತದ ರಾಷ್ಟ್ರಭಾಷೆಗಳಲ್ಲಿಯೂ ನಡೆಯಬೇಕು. ಆಗ ಯಾರು ಬೇಕಾದರೂ ದೇವಸ್ಥಾನಗಳಲ್ಲಿ ಪೂಜೆಯನ್ನು ಮಾಡಬಹುದು.

ಬ್ರಾಹ್ಮಣೇತರರನ್ನು ಅರ್ಚಕರ ಹುದ್ದೆಗೆ ಆಹ್ವಾನಿಸುವಂತಹ ಬಹುದೊಡ್ಡ ಸವಾಲನ್ನು ತಮಿಳುನಾಡಿನ ಆಳುವ ಸರ್ಕಾರ ತೆಗೆದುಕೊಂಡಿದೆ. ಇದು ಆಗಲೇಬೇಕಾದದ್ದು. ಆದರೆ, ಸುಲಭದ್ದಲ್ಲ. ಕಾರಣ ಬಾಬಾಸಾಹೇಬರು ಹೇಳಿರುವಂತೆ ಅಸಮಾನತೆ ಪ್ರತಿ ಹಂತದಲ್ಲೂ ಉಸಿರಾಡುತ್ತಿರುವ ಸಮಾಜದಲ್ಲಿ ಸ್ವಾತಂತ್ರ್ಯ, ಸಮಾನತೆ ಮತ್ತು ಸೋದರತೆಯನಾಧರಿಸಿದ ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡಿರುವಂತಹ ವೈರುಧ್ಯದಲ್ಲಿ ಬದುಕುತ್ತಿದ್ದೇವೆ. ಅಸಮಾನತೆ, ತಾರತಮ್ಯದ ಬೆಂಗಾಡಿನಲ್ಲಿ ಸಮಪಾಲು-ಸಮಬಾಳಿನ ಆಶಯಗಳು ಬೇರು ಬಿಡಬೇಕೆಂದರೆ ಅಗೆಯಬೇಕಾಗುತ್ತದೆ. ನೀರು, ಗೊಬ್ಬರ, ಸೂಕ್ಷ್ಮಾಣುಗಳು ನೆಲ ಹಸನು ಮಾಡಬೇಕಾಗುತ್ತದೆ. ಜನ ಹಿಡಿಯಷ್ಟು ಇರಲಿ, ಇಡಿ ಊರೇ ಇರಲಿ ಎಲ್ಲರಿಗೂ ಫಲ ಸಿಗಲಿ ಎಂಬ ಗುರಿಯಷ್ಟೆ ಮುಖ್ಯವಾದರೆ ನಮ್ಮ ಪ್ರಯತ್ನಗಳು ಅಗೆತ, ನೀರು, ಗೊಬ್ಬರ, ಸೂಕ್ಷ್ಮಾಣುಗಳಂತಾಗಬೇಕಾಗುತ್ತದೆ.

ದೇವ-ಭಕ್ತ ಸೇತುವಿನ ತಂತುಗಳು: ಅರ್ಚಕರ ಹುದ್ದೆಗೆ ಎಲ್ಲ ಜಾತಿಯವರು ಬೇಕೆ ಎಂಬ ವಿಷಯ ಕುರಿತು ಬರೆಯುವಾಗ ನನ್ನೊಳಗೆ ಮೂಡಿದ ವಿಚಾರಗಳ ತಿಳಿಸುವುದು ಸೂಕ್ತವೆನಿಸಿತು.

ಕೆಲವು ವರ್ಷಗಳ ಹಿಂದೆ ಒಡಿಶಾದ ಕುಯ್ಯಿ ಆದಿವಾಸಿಗಳ ಹಾಡಿಗೆ ಭೇಟಿ ಕೊಟ್ಟಿದ್ದೆ. ಏನೋ ಮಾತುಕತೆಯಲ್ಲಿ ಅಲ್ಲಿನ ಪುರೋಹಿತರು ಮಹಿಳೆ ಎಂದಾಗ ಆಶ್ಚರ್ಯವೆನಿಸಿತು. ಮರುದಿನವೇ ಆಕೆಯನ್ನು ಭೇಟಿಯಾಗುವ ಸಂದರ್ಭವೂ ಒದಗಿಬಂತು. ವಯಸ್ಸಾದ ಮುದುಕಿ. ಹೆಚ್ಚು ಮಾತನಾಡುವುದಿಲ್ಲ. ಆಡಿದರೂ ಆಳವಾದ ಮೌನದಿಂದ ಹೊರಟುಬಂದಂತೆ. ಮಾತನಾಡಿಸಬೇಕಾದವರು ಸಹ ತಮ್ಮ ತಲೆಹರಟೆ ಮಾತುಗಳನ್ನು ಕಟ್ಟಿಟ್ಟು ಮಾತನಾಡಿಸಬೇಕೆನಿಸುವಂತೆ.

ನಮ್ಮ ಅವ್ವನ ತೌರೂರಿನಲ್ಲಿ ಕಾಳ್ಗಟ್ಟಮ್ಮ-ಕರ್ಗಟ್ಟಮ್ಮನೆಂಬ ಊರು ಕಾಯುವ ದೇವತೆಗಳ ಪುಟ್ಟ ಗುಡಿಯಿದೆ. ಅಲ್ಲಿಗೆ ಯಾರು ಬೇಕಾದರೂ ಹೋಗಿ ಆ ದೇವತೆಗಳನ್ನು ತೊಳೆದು, ಸಿಂಗರಿಸಿ, ಕೋಳಿ ಕುಯ್ದು ಪೂಜೆಮಾಡಿ ಬರಬಹುದು. ಪೂಜಾರಿ ಇಲ್ಲ. ಹಟ್ಟಿಯಲ್ಲಿರುವ ವೆಂಕಟೇಶ್ವರನ ಗುಡಿಗೆ ಈಗೊಂದು ಕಾಂಕ್ರೀಟ್ ರೂಪವಿದೆ. ಅಲ್ಲಿನ ಪೂಜೆಯ ಜವಾಬ್ದಾರಿ ಒಬ್ಬರದೇ ಅಲ್ಲ. ಹುಂಡಿಯೂ ಇಲ್ಲದ ಅವುಗಳಿಂದ ಸಿಗುವ ಆದಾಯವು ಅಂತದ್ದೇನೂ ಇಲ್ಲ. ಮಂಗಳಾರತಿ ಸಮಯದಲ್ಲಿ ತಟ್ಟೆಗೆ ಯಾವಾಗಲೋ ಬೀಳುವ ಆರ್ಕಾಸು-ಮೂರ್ಕಾಸಿನಿಂದ ಪೂಜೆ ಮಾಡುವವರ ಬದುಕೇನೂ ನಡೆಯುವುದಿಲ್ಲ.

ಮಹಾನ್ ದೈವ ಭಕ್ತನಾಗಿದ್ದ ತಾತನ ಕುರಿತು ಅವ್ವ ಯಾವಾಗಲೂ ‘ದೇವ್ರೊಂದು ಭಾಗ, ಅಪ್ಪ ಒಂದು ಭಾಗ’ ಎನ್ನುತ್ತಿದ್ದಳು. ನನ್ನ ತಾಯಿಗೆ ಚಿಕ್ಕಪ್ಪನಾಗಬೇಕಿದ್ದ ಕರ್ಯಣ್ಣ ತಾತ ತಲ್ಲೀನನಾಗಿ ವಾರ ಮಾಡುವಾಗ ಮಕ್ಕಳೆಲ್ಲ ನಾಮ ಹಾಕಿಸ್ಕೊಳ್ಳೋಕೆ ಕಾಂಪೀಟ್ ಮಾಡ್ತಿದ್ವಿ. ಶಂಖ ಊದಿ, ಜಾಗ್ಟೆ ಬಡ್ದು ‘ಲಕ್ಷ್ಮಿನಾರಯಣ್ವರ ಗೋವಿಂದ’ ಎನ್ನುತ್ತಲೇ ಗೋ...ವಿಂದಾ ಅಂತ ಹುಮ್ಮಸ್ಸಿನಿಂದ ಅರುಚುತ್ತಿದ್ದೆವು. ಯಾರನ್ನು ಗಟ್ಟಿದನಿಯಲ್ಲೂ ಮಾತಾನಾಡಿಸದ ಇವರಿಬ್ಬರೂ ಎಲ್ಲರಿಗೂ ಒಳ್ಳೆಯದಾಗಲೆಂದು ಮನಸಾರೆ ಹರಸುತ್ತಿದ್ದವರು. ಇಂತಹ ಹಲವಾರು ದೇವಸ್ಥಾನಗಳು, ದೇವರೊಂದಿಗೆ ಬೆಸೆವ ತಂತುಗಳು ದೇಶದೆಲ್ಲೆಡೆ ಇವೆ.

ತಾನೆಂಬುದೆಲ್ಲವ ಕಳಚಿಹಾಕಿ ಲೀನವಾಗಲು ಮಧ್ಯಸ್ಥರಿರಬೇಕೆ?

ದೇವರಿಗೆ ಮುಡಿಸುವ ಹೂವ ತಾ ಮುಡಿದು ನೋಡಿಕೊಂಡು ಚೆಂದವೆನಿಸಿದರೆ ಮುಡಿಸುತ್ತಿದ್ದ ಆಂಡಾಳ್, ಕಣ್ಣನ್ನೇ ಕಿತ್ತು ಶಿವನಿಗರ್ಪಿಸಿದ ಕಣ್ಣಪ್ಪ, ಕೃಷ್ಣನ ಮೇಲಿನ ಭಕ್ತಿಗೆ ವಿಷ ಕುಡಿಯಲು ಹಿಂಜರಿಯದ ಮೀರಾ, ಚೆನ್ನಮಲ್ಲಿಕಾರ್ಜುನನ ಸಂಗಾತಿ ಮಾಡಿಕೊಂಡ ಅಕ್ಕ ಮಹಾದೇವಿ, ಇರುವೆಯ ಕಾಲ ಸದ್ದನ್ನೂ ಕೇಳಿಸಿಕೊಳ್ಳುವ ಅಲ್ಲಾನ ಕರೆಯಲ್ಯಾಕೆ ಅರಚುವಿರಿ ಎಂದ ಕಬೀರ... ದೇವ-ಭಕ್ತರ ನಡುವೆ ತಾನೆಂಬುದೆಲ್ಲವ ಕಳಚಿ ಹಾಕುವ ಭಕ್ತಿಯ ದಿವ್ಯ ಭಾವದಲ್ಲಿ ಮಧ್ಯಸ್ಥರ/ಮಧ್ಯಸ್ಥಿಕೆಯ ಅಗತ್ಯವನ್ನೆ ಕಾಣಲಿಲ್ಲ. ಇವರೆಲ್ಲರಿಗೆ ಒಲಿದ ದೇವರುಗಳಂತೂ ಅಪ್ಪಟ ಪ್ರಜಾತಂತ್ರಿಗಳು.

ಅಪ್ಪಟ ದೈವಭಕ್ತೆಯಾದ ಅವ್ವನಿಂದ ಪ್ರಭಾವಿತಳಾದ ನನಗೆ ತಂತಾನೆ ಹೊಮ್ಮುವ ಗಾಢಭಕ್ತಿಯಲ್ಲಿ ಯಾರೂ ನೆನಪಾಗುತ್ತಿರಲಿಲ್ಲ. ಇಷ್ಟಪಟ್ಟು ಮಾಡುತ್ತಿದ್ದ ಪೂಜೆಯಲ್ಲಿ ದೇವರಗಳನ್ನೆಲ್ಲ ಮುಟ್ಟಿ, ಉಜ್ಜಿ ತೊಳೆದು, ಇರಿಸಿದ ಗಂಧ, ಕುಂಕುಮ, ಮುಡಿಸಿದ ಹೂ, ಬೆಳಗಿದ ದೀಪದಲ್ಲಿ ದೇವರುಗಳು ಲಕಲಕಿಸುವುದ ಕಂಡು ಎಂತದೋ ಒಂದು ಆನಂದ ಮೈ-ಮನವನ್ನೆಲ್ಲ ಹೂವನಾವರಿಸಿದ ಘಮದಂತೆ ಆವರಿಸುತ್ತಿತ್ತು. ಬೆಳೆದಂತೆ ಪೂಜೆ ಇರಲಿ ದೇವಸ್ಥಾನಗಳಿಗೆ ಪ್ರವೇಶವನ್ನೂ ಪಡೆಯದ ಜಾತಿಗೆ ಸೇರಿದವಳೆಂಬುದು ತಿಳಿದಾಗ ಹತ್ತಿರ ಹೋಗಿ ನೋಡಲಾಗದ, ಮುಟ್ಟಲಾಗದ ದೇವರು ಅವರಿಗೇ ಇರಲಿ ನನಗ್ಯಾಕೆ ಅನಿಸಿತ್ತು. ಮುಂದೆ ಈ ಲೋಕವೆಂಬ ವಿಸ್ಮಯದೊಳಗೆ ಸಕಲ ಜೀವವೂ ವಿಸ್ಮಯದ ಪ್ರತಿಬಿಂಬವೇ, ಎಲ್ಲವನೂ ಹೆಣೆದ ಬೆಸುಗೆ ತಿಳಿಯಲು ಅರಿವು-ಅಂತಃಕರಣದ ಬೆಳಕಷ್ಟೆ ಸಾಕಲ್ಲ ಎನಿಸಿದಾಗ ಎಲ್ಲ ಬಿಟ್ಟೆ.ದೇವರು ಮತ್ತು ಆಲಯಗಳು ಸಂಸ್ಥೆಗಳಾಗಿ ‘ಅರ್ಥ’ ಪಡೆದುಕೊಂಡಾಗ ನಿಯಮಗಳಿಗೆ ಒಳಗಾಗಲೇ ಬೇಕು. ಅರ್ಥ ಕಳಚಿದಾಗ ಹಿಡಿದಿಟ್ಟುಕೊಳ್ಳಲೇನಿಲ್ಲ.

ಲೇಖಕಿ: ಸಾಮಾಜಿಕ ಕಾರ್ಯಕರ್ತೆ, ಬರಹಗಾರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT