ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದರ್ಶನ | ಸರ್ಕಾರ ‘ಪಾಪರ್’, ರೈತರಿಗೆ ಕೊಡಲು ಹಣವಿಲ್ಲ: ವಿರೋಧ ಪಕ್ಷದ ನಾಯಕ ಅಶೋಕ

ರಾಜ್ಯ ಸರ್ಕಾರವು ಬರ ಪರಿಸ್ಥಿತಿಯನ್ನು ಸಮರ್ಪಕವಾಗಿ ಎದುರಿಸುತ್ತಿದೆಯೇ?
Published 26 ಜನವರಿ 2024, 20:49 IST
Last Updated 26 ಜನವರಿ 2024, 20:49 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಈ ಬಾರಿ ಮುಂಗಾರು ಕೈಕೊಟ್ಟಿದೆ. ಪರಿಣಾಮವಾಗಿ ಬೆಳೆಗಳೆಲ್ಲ ನಷ್ಟವಾಗಿವೆ. ರೈತ ಕಂಗಾಲಾಗಿದ್ದಾನೆ ರಾಜ್ಯದ 236 ತಾಲ್ಲೂಕುಗಳ ಪೈಕಿ 223 ತಾಲ್ಲೂಕುಗಳು ಬರಪೀಡಿತ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಆದರೆ, ರೈತರ ಸಂಕಷ್ಟ ಪರಿಹಾರ ಕಾರ್ಯ ಗಂಭೀರವಾಗಿ ನಡೆದಿಲ್ಲ. ಕೇಂದ್ರವು ಪರಿಹಾರದ ಹಣ ಬಿಡುಗಡೆ ಮಾಡದೆ ಸತಾಯಿಸುತ್ತಿದೆ ಎಂದು ರಾಜ್ಯ ಸರ್ಕಾರ ವಾದಿಸುತ್ತಿದೆ. ಆದರೆ, ರೈತರಿಗೆ ಪರಿಹಾರ ನೀಡಲು ಸರ್ಕಾರದ ಬಳಿ ಹಣವೇ ಇಲ್ಲ, ಎಲ್ಲ ಹಣವನ್ನು ‘ಗ್ಯಾರಂಟಿ’ ಯೋಜನೆಗಳ ಜಾರಿಗೆ ವಿನಿಯೋಗಿಸಲಾಗಿದೆ ಎಂದು ವಿರೋಧ ಪಕ್ಷ ಬಿಜೆಪಿ ದೂರುತ್ತಿದೆ. ಈ ಕುರಿತು, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಅವರ ಮಾತುಗಳು ಇಲ್ಲಿವೆ

_______________________________

  • ರಾಜ್ಯ ಸರ್ಕಾರ ಬರ ಪರಿಹಾರ ಕಾರ್ಯವನ್ನು ಸರಿಯಾಗಿ ನಿಭಾಯಿಸುತ್ತಿದೆಯೇ?

ಬರದ ಪರಿಸ್ಥಿತಿ ಗಂಭೀರವಾಗಿದೆ. ಕುಡಿಯುವ ನೀರಿಗೆ ಹಾಹಾಕಾರ ಪಡುವ ಪರಿಸ್ಥಿತಿ ಇದೆ. ಜಲಾಶಯಗಳೂ ಬರಿದಾಗುತ್ತಿವೆ. ವಿರೋಧಪಕ್ಷದ ನಾಯಕನಾಗಿ ಆಯ್ಕೆ ಆದ ಮಾರನೇ ದಿನದಿಂದಲೇ ಬರಪೀಡಿತ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ರೈತರನ್ನು ಭೇಟಿ ಮಾಡಿದ್ದೇನೆ. ಆದರೆ, ಸರ್ಕಾರದ ಪರವಾಗಿ ಉಸ್ತುವಾರಿ ಸಚಿವರಾಗಲಿ, ಕೃಷಿ, ತೋಟಗಾರಿಕೆ ಸಚಿವರಾಗಲಿ ಪ್ರವಾಸ ಮಾಡಿಲ್ಲ. 800ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ನೋಡಿದರೆ ಪರಿಸ್ಥಿತಿ ಎಷ್ಟು ದಾರುಣವಾಗಿದೆ ಎಂಬುದು ಗೊತ್ತಾಗುತ್ತದೆ. ಸಾಲ–ಸೋಲ ಮಾಡಿ ಹಾಕಿದ ಬಂಡವಾಳ ಮಣ್ಣಲ್ಲಿ ಮಣ್ಣಾಗಿ ಹೋಗಿದೆ. ತ್ರೀಫೇಸ್‌ನಲ್ಲಿ ಏಳು ಗಂಟೆ ವಿದ್ಯುತ್‌ ನೀಡುವುದಾಗಿ ಭರವಸೆ ನೀಡಿದ್ದ ಸರ್ಕಾರ ಈಗ ಮೂರು ಗಂಟೆ ಮಾತ್ರ ಪೂರೈಕೆ ಮಾಡುತ್ತಿದೆ. ಐಪಿ ಸೆಟ್‌ ಸುಟ್ಟು ಹೋದರೂ ಅದರ ರಿಪೇರಿಗೆ ರೈತರೇ ಬಂಡವಾಳ ಹಾಕಬೇಕಾಗಿದೆ. ಟಿಸಿ ಹಾಕಲು ₹25 ಸಾವಿರ ಆಗುತ್ತಿದ್ದ ಕೆಲಸಕ್ಕೆ ಈಗ ₹2.50 ಲಕ್ಷ ಕೊಡಬೇಕಾಗಿದೆ. ಮೇವಿನ ಕೊರತೆ ವ್ಯಾಪಕವಾಗಿದೆ. ಮೇವು ಬ್ಯಾಂಕ್‌ ಇಲ್ಲ, ಗೋಶಾಲೆಗಳೂ ಸ್ಥಾಪನೆ ಆಗಿಲ್ಲ. ದೇವರ ಎತ್ತುಗಳಿಗೂ ಮೇವು ಸಿಗುತ್ತಿಲ್ಲ. ಬರಗಾಲದ ವೇಳೆ ಕಾಡುವ ರೋಗಗಳಿಗೆ ಲಸಿಕೆ ಹಾಕುವ ಕೆಲಸವನ್ನೂ ಮಾಡಿಲ್ಲ. ಕುಡಿಯುವ ನೀರಿಗೆ ಎಂದು ತಾಲ್ಲೂಕಿಗೆ ₹50 ಲಕ್ಷ ಬಿಡುಗಡೆ ಮಾಡಿದ್ದಾರೆ. ಇದರಿಂದ ಎಷ್ಟು ಗ್ರಾಮಗಳಿಗೆ ನೀರು ಒದಗಿಸಲು ಸಾಧ್ಯ? ಇವರು ಬಿಡುಗಡೆ ಮಾಡಿರುವ ಹಣ, ಒಂದು ಹಳ್ಳಿಗೆ ಕೊಳವೆಬಾವಿ ಹಾಕಿಸಿ, ನೀರು ಪೂರೈಕೆ ಮಾಡುವುದಕ್ಕೆ ಕೂಡ ಸಾಲದು.

  • ರಾಜ್ಯದಿಂದ ಜನರು ಗುಳೇ ಹೋಗುತ್ತಿದ್ದಾರೆ ಎಂದು ಆರೋಪಿಸಿದ್ದೀರಿ. ಅದಕ್ಕೆ ಅಂಕಿ–ಅಂಶಗಳಿವೆಯೇ?

ಸಾವಿರಾರು ರೈತರು ಗುಳೇ ಹೋಗುತ್ತಿದ್ದಾರೆ. ಬರಪೀಡಿತ ತಾಲ್ಲೂಕುಗಳಲ್ಲಿ ಹಳ್ಳಿಗಳು ವೃದ್ಧಾಶ್ರಮಗಳಾಗಿವೆ. ಗ್ರಾಮಗಳಿಂದ ಎಷ್ಟು ಜನ ಗುಳೇ ಹೋಗಿದ್ದಾರೆ ಎಂಬ ಮಾಹಿತಿ ಪಿಡಿಒಗಳಿಗೆ ಇರುತ್ತದೆ. ಆದರೆ, ಈ ಕುರಿತು ಸರ್ಕಾರ ಅಧ್ಯಯನ ಮಾಡಿ ಗುಳೇ ತಡೆಯಲು ಕ್ರಮ ತೆಗೆದುಕೊಳ್ಳಬೇಕು. ಅಧ್ಯಯನ ಮಾಡಿದರೆ ಸರ್ಕಾರದ ಮರ್ಯಾದೆ ಹರಾಜಾಗುತ್ತದೆ ಎಂಬ ಕಾರಣಕ್ಕೆ ಸರ್ಕಾರ ಬಾಯಿ ಮುಚ್ಚಿಕೊಂಡು ಕುಳಿತಿದೆ. ನಮ್ಮ ಸರ್ಕಾರ ಇದ್ದಾಗ ಗುಳೇ ತಡೆಯಲು ಕುಟುಂಬಗಳ ಅಗತ್ಯಕ್ಕೆ ಅನುಗುಣವಾಗಿ ಪಡಿತರ ಕಿಟ್‌ಗಳನ್ನು ವಿತರಿಸಿದ್ದೆವು. ಈ ಸರ್ಕಾರ ಚಿಕ್ಕಾಸೂ ನೀಡುತ್ತಿಲ್ಲ.

  • ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಹೋರಾಟ ಬಿಜೆಪಿಯಿಂದ ನಡೆಯುತ್ತಿಲ್ಲವಲ್ಲ?

ಈ ಹಿಂದೆಯೂ ಹೋರಾಟ ಮಾಡಿದ್ದೇವೆ. ಮುಂದಿನ ವಾರದಿಂದ ಮತ್ತೊಂದು ಸುತ್ತಿನ ಹೋರಾಟ ಆರಂಭಿಸುತ್ತೇವೆ. ಹಿಂದೆ ಭೇಟಿ ಕೊಟ್ಟ ಜಿಲ್ಲೆಗಳನ್ನು ಬಿಟ್ಟು ಬೇರೆ ಜಿಲ್ಲೆಗಳಿಗೆ ಭೇಟಿ ನೀಡುತ್ತೇವೆ.

  • ರಾಜ್ಯ ಸರ್ಕಾರ ಮನವಿ ಕೊಟ್ಟು ನಾಲ್ಕು ತಿಂಗಳು ಕಳೆದರೂ ಕೇಂದ್ರ ಪರಿಹಾರ ಕೊಟ್ಟಿಲ್ಲವಲ್ಲ?

ಮಾತೆತ್ತಿದರೆ ಕಾಂಗ್ರೆಸ್‌ನವರು ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುತ್ತಾರೆ. ಅಸಲಿಯತ್ತು ಏನೆಂದರೆ ಗ್ಯಾರಂಟಿಗಳಿಂದ ಖಜಾನೆ ಖಾಲಿ ಆಗಿದೆ. ಅಭಿವೃದ್ಧಿ ಕೆಲಸಗಳಿಗೆ ಹಣವಿಲ್ಲ. ಎಲ್ಲ ಅಭಿವೃದ್ಧಿ ಕಾಮಗಾರಿಗಳೂ ನಿಂತು ಹೋಗಿವೆ. ಇನ್ನು ಬರ ಪರಿಹಾರಕ್ಕೆ ಹಣ ಎಲ್ಲಿಂದ ಬರಬೇಕು? ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಎರಡು ಬಾರಿ ಪ್ರವಾಹ ಬಂದಿತ್ತು. ಮೊದಲ ಬಾರಿ ಪ್ರವಾಹ ಬಂದಿದ್ದಾಗ, ಕೇಂದ್ರದಲ್ಲಿ ಮನಮೋಹನ್ ಸಿಂಗ್‌ ಪ್ರಧಾನಿ ಆಗಿದ್ದರು. ಆಗ ನಾವು ಕೇಂದ್ರದ ನೆರವಿಗೆ ಕಾಯದೇ ಪರಿಹಾರ ಕಾರ್ಯ ಆರಂಭಿಸಿದ್ದೆವು. ಇವರ ಹಾಗೆ ಕೇಂದ್ರದ ಮೇಲೆ, ಮನಮೋಹನ್‌ ಸಿಂಗ್‌ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಲಿಲ್ಲ.

ಯಡಿಯೂರಪ್ಪ ಎರಡನೇ ಬಾರಿ ಮುಖ್ಯಮಂತ್ರಿ ಆದಾಗಲೂ ಶತಮಾನ ಕಂಡರಿಯದ ಮಳೆ, ಪ್ರವಾಹ ಮತ್ತು ಭೂಕುಸಿತಗಳು ಆಗಿ ಜನ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಆಗಲೂ ನಾವು ಕೇಂದ್ರದ ನೆರವಿಗೆ ಕಾಯದೇ ಒಂದೇ ತಿಂಗಳಲ್ಲಿ ಸಂತ್ರಸ್ತರ ಖಾತೆಗಳಿಗೆ ಹಣ ಹಾಕಿದ್ದೆವು. ಕೆಲವು ತಿಂಗಳ ಬಳಿಕ ಕೇಂದ್ರದಿಂದ ಹಣ ಬಂದಿತು. ಕೋವಿಡ್‌ ನಂತರ ಅತಿವೃಷ್ಟಿ ಆದಾಗಲೂ ನಮ್ಮ ಬಳಿ ಹಣ ಇಲ್ಲದಿದ್ದರೂ ಸಾಲ ತಂದು ರೈತರಿಗೆ ಪರಿಹಾರ ವಿತರಣೆ ಮಾಡಿದ್ದೆವು. ಈಗ ದೇಶದ 15ರಿಂದ 16 ರಾಜ್ಯಗಳು ಬರಪೀಡಿತವಾಗಿವೆ. ರಾಜ್ಯಗಳ ಸ್ಥಿತಿಗತಿ ನೋಡಿ ಎಲ್ಲ ರಾಜ್ಯಗಳಿಗೂ ಒಟ್ಟಿಗೆ ಪರಿಹಾರ ನೀಡುತ್ತದೆಯೇ ಹೊರತು ಯಾವುದೇ ಒಂದು ರಾಜ್ಯಕ್ಕೆ ಮಾತ್ರ ಪರಿಹಾರ ನೀಡುವುದಿಲ್ಲ. ಇದು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿ. ಕೆಲಸ ಮಾಡದ ಸಿದ್ದರಾಮಯ್ಯ ಸರ್ಕಾರವು ಮೋದಿ ಕರ್ನಾಟಕ ವಿರೋಧಿ, ಕನ್ನಡ ವಿರೋಧಿ ಎಂಬುದನ್ನು ಬಿಂಬಿಸುವ ಕುತ್ಸಿತ ಕೆಲಸ ಮಾಡುತ್ತಿದೆ.

ಮನಮೋಹನ್‌ ಸಿಂಗ್ ಅವಧಿಯಲ್ಲಿ 2006ರಿಂದ 2014ರವರೆಗೆ ಕೇಂದ್ರದಿಂದ (ಎಸ್‌ಡಿಆರ್‌ಎಫ್‌) ₹812 ಕೋಟಿ ಬಂದಿತ್ತು, ರಾಜ್ಯ ₹271 ಕೋಟಿ ತನ್ನ ಪಾಲು ನೀಡಿತ್ತು. ಎನ್‌ಡಿಆರ್‌ಎಫ್ ಅಡಿ ಕೇಂದ್ರ ₹3,233 ಕೋಟಿ ನೀಡಿತ್ತು. ಮೋದಿ ಅವಧಿಯಲ್ಲಿ 2014ರಿಂದ 2022ರವರೆಗೆ ಕೇಂದ್ರದಿಂದ (ಎಸ್‌ಡಿಆರ್‌ಎಫ್‌) ₹2,557 ಕೋಟಿ ಬಂದಿದ್ದು, ರಾಜ್ಯ ತನ್ನ ಪಾಲು ₹852 ಕೋಟಿ ನೀಡಿತ್ತು. ಎನ್‌ಡಿಆರ್‌ಎಫ್‌ನಿಂದ ₹11,603 ಕೋಟಿ ಬಂದಿದೆ. ಇದು ವಾಸ್ತವ ಸ್ಥಿತಿ. ಸಿದ್ದರಾಮಯ್ಯ ನಿತ್ಯವೂ ಸುಳ್ಳು ಹೇಳುವುದರಲ್ಲಿ ನಿರತವಾಗಿದ್ದಾರೆ.

  • ಗ್ಯಾರಂಟಿ ಯೋಜನೆಗಳಿಂದಾಗಿ ಬರ ನಿರ್ವಹಣೆಗೆ ಸಾಧ್ಯವಾಗುತ್ತಿಲ್ಲ, ಸರ್ಕಾರ ದಿವಾಳಿ ಆಗಿದೆ ಎಂಬ ನಿಮ್ಮ ಆರೋಪಕ್ಕೆ ಆಧಾರ ಏನಿದೆ?

ಕಾಂಗ್ರೆಸ್‌ ಗ್ಯಾರಂಟಿ ಅವೈಜ್ಞಾನಿಕ ಯೋಜನೆ. ಇದಕ್ಕೆ ಸರ್ಕಾರದ ಸಕಲ ಆದಾಯವೂ ಹರಿದು ಹೋಗುತ್ತಿದೆ. ಇವುಗಳನ್ನು ಜಾರಿ ಮಾಡಿ ಸಿಕ್ಕಿ ಹಾಕಿಕೊಂಡಿದ್ದಾರೆ. ಲೋಕಸಭೆ ಚುನಾವಣೆವರೆಗೆ ಮಾತ್ರ ಗ್ಯಾರಂಟಿಗಳು ಇರುತ್ತವೆ. ಆ ಬಳಿಕ ರದ್ದು ಆಗುತ್ತದೆ. ಮುಸ್ಲಿಂ ಸಮುದಾಯವನ್ನು ಓಲೈಸಲು ಮುಲ್ಲಾಗಳಿಗಾಗಿ ₹1,000 ಕೋಟಿ ಬಿಡುಗಡೆ ಮಾಡಿದ್ದಾರೆ. ರೈತರಿಗೆ ಬಿಡುಗಡೆ ಮಾಡಿರುವುದು ಕೇವಲ ₹105 ಕೋಟಿ. ಇದು ಈ ಸರ್ಕಾರದ ಆದ್ಯತೆ.

  • ಬರಪರಿಹಾರಕ್ಕೆ ರೈತರಿಗೆ ಏನೂ ಕೊಟ್ಟಿಲ್ಲ ಎಂದು ನೀವು (ವಿರೋಧ ಪಕ್ಷಗಳು) ದೂರುತ್ತಿದ್ದೀರಿ. ಆದರೆ, ಸರ್ಕಾರವು ಪ್ರತಿ ಎಕರೆಗೆ ₹2,000 ವರೆಗೆ ಪರಿಹಾರ ಘೋಷಿಸಿದೆಯಲ್ಲ?

ಪರಿಹಾರ ನೀಡುವುದಾಗಿ ಬೆಳಗಾವಿಯ ಅಧಿವೇಶನದಲ್ಲೇ ಘೋಷಿಸಿದ್ದರು. ಯಾರಿಗಾದರೂ ಒಂದು ಪೈಸೆ ತಲುಪಿದೆಯೇ? ಕಂದಾಯ ಸಚಿವರಂತೂ ಇನ್ನೊಂದು ವಾರದಲ್ಲಿ ಪರಿಹಾರ ಕೈಸೇರುತ್ತದೆ ಎಂದು ಹೇಳುತ್ತಲೇ ಹಲವು ವಾರಗಳು ಕಳೆದಿವೆ. ಪರಿಹಾರ ಕೊಡುವುದನ್ನು ತಡ ಮಾಡಲೆಂದೇ ಫ್ರೂಟ್ಸ್‌ ಎಂಬ ಹೊಸ ವಿಧಾನ ಜಾರಿ ತಂದಿದ್ದಾರೆ. ಎಷ್ಟು ಸಾಧ್ಯವೋ ಅಷ್ಟು ಮುಂದೂಡುವುದು ಇವರ ಉದ್ದೇಶ. ಶೇ 60ರಷ್ಟು ರೈತರು ಹೆಸರು ನೋಂದಾಯಿಸಲು ಸಾಧ್ಯವಾಗಿಲ್ಲ. ದಶಕದ ಹಿಂದೆ ನಾವು ಅಧಿಕಾರದಲ್ಲಿ ಇದ್ದಾಗ ಕೇಂದ್ರದಲ್ಲಿ ಯುಪಿಎ ಸರ್ಕಾರ ಇತ್ತು. ಕೇಂದ್ರ ಹಣ ಕೊಟ್ಟಿಲ್ಲ ಎಂದು ದೂರುತ್ತಾ ಕೂರಲಿಲ್ಲ. ಕೇಂದ್ರದ ನೆರವಿಗೆ ಕಾಯದೇ ಎಸ್‌ಡಿಆರ್‌ಎಫ್‌ ಮಾರ್ಗಸೂಚಿ ಪರಿಷ್ಕರಿಸಿ ದುಪ್ಪಟ್ಟು ಪರಿಹಾರ ಕೊಟ್ಟೆವು. 2022ನೇ ಸಾಲಿನಲ್ಲಿ 13,09,421 ಹೆಕ್ಟೇರ್‌ ಬೆಳೆ ನಾಶವಾಗಿತ್ತು. 14,62,841 ರೈತರ ಬ್ಯಾಂಕ್ ಖಾತೆಗಳಿಗೆ ₹2,031.15 ಕೋಟಿಯನ್ನು ಒಂದು ಬಟನ್‌ ಒತ್ತುವ ಮೂಲಕ ವರ್ಗಾವಣೆ ಮಾಡಿದೆವು. ನೀರಾವರಿ ಬೆಳೆಗೆ ಪ್ರತಿ ಎಕರೆಗೆ ತಲಾ ₹25 ಸಾವಿರ, ಬಹುವಾರ್ಷಿಕ ಬೆಳೆಗೆ ತಲಾ ₹28 ಸಾವಿರ ಕೊಟ್ಟಿದ್ದೇವೆ. ಇವೆಲ್ಲ ಸರ್ಕಾರಿ ದಾಖಲೆಗಳಲ್ಲಿ ಇವೆ. ಈ ಸರ್ಕಾರ ಪಾಪರ್‌ ಆಗಿರುವುದರಿಂದಲೇ ಪರಿಹಾರ ಕೊಡುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT