ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುತ್ವ ಭಾರತದ ಅಭಿವೃದ್ಧಿ ರಥಕ್ಕೆ ಪ್ರೇರಣೆಯಾಗಲಿ ಸ್ವಾತಂತ್ರ್ಯದ ಅಮೃತಪಥ

Last Updated 9 ಆಗಸ್ಟ್ 2022, 7:17 IST
ಅಕ್ಷರ ಗಾತ್ರ

ದೇಶದ ಎಪ್ಪತ್ತೈದನೇ ಸ್ವಾತಂತ್ರ್ಯೋತ್ಸವ ಸಂದರ್ಭವು ಭಾರತೀಯರಲ್ಲಿ ಸಹಜವಾಗಿಯೇ ಹೆಮ್ಮೆ, ಅಭಿಮಾನ ಹಾಗೂ ಪುಳಕಕ್ಕೆ ಕಾರಣವಾಗಿದೆ. ಸ್ವಾತಂತ್ರ್ಯ ದಿನಾಚರಣೆಯ ‘ಅಮೃತ ಮಹೋತ್ಸವ’ ಸಂಭ್ರಮ 2023ರ ಆಗಸ್ಟ್‌ 15ರವರೆಗೂ ಮುಂದುವರಿಯಲಿದ್ದು, ಈ ವಿಶೇಷ ಸಂದರ್ಭವನ್ನು ಅವಿಸ್ಮರಣೀಯಗೊಳಿಸಲು ಕೇಂದ್ರ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಯಾವಾಗ ಬೇಕಾದರೂ ಎರಗಬಹುದಾದ ಕೊರೊನಾದ ಮೂರನೇ ಅಲೆಯ ಆತಂಕದ ಕಾರಣದಿಂದಾಗಿ ಸಂಭ್ರಮದಲ್ಲಿ ಮೈಮರೆಯಲು ಅವಕಾಶವಿಲ್ಲವಾದರೂ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಅರ್ಥಪೂರ್ಣಗೊಳಿಸಲು ಸೃಜನಶೀಲ ದಾರಿಗಳು ಇದ್ದೇ ಇವೆ. ಅಂಥ ದಾರಿಗಳಲ್ಲೊಂದು, ದೇಶವನ್ನು ಸದೃಢವಾಗಿ ರೂಪಿಸುವ ದಿಸೆಯಲ್ಲಿ ನಡೆದಿರುವ ಪ್ರಯತ್ನಗಳನ್ನು, ಸರ್ಕಾರದ ಯೋಜನೆಗಳನ್ನು ವಿಮರ್ಶೆ ಮತ್ತು ವಿಶ್ಲೇಷಣೆಗೆ ಒಳಪಡಿಸುವ ವಿವೇಕವನ್ನು ಪ್ರದರ್ಶಿಸುವುದು.

ಯಾವುದೇ ಸಂಭ್ರಮದ ಸಂದರ್ಭವು ಜವಾಬ್ದಾರಿಯನ್ನೂ ಅಪೇಕ್ಷಿಸುತ್ತದೆ. ಆ ಜವಾಬ್ದಾರಿಯಿಂದಲೇ ಸ್ವತಂತ್ರ ಭಾರತಕ್ಕೆ ಎಪ್ಪತ್ತೈದು ವರ್ಷಗಳಾಗಿರುವ ಸಂದರ್ಭವನ್ನು ಎದುರುಗೊಳ್ಳಬೇಕಾಗಿದೆ. ತ್ಯಾಗ, ಬಲಿದಾನಗಳ ಮೂಲಕ ಪಡೆದ ಸ್ವಾತಂತ್ರ್ಯವನ್ನು ಸಾರ್ಥಕಗೊಳಿಸಲು ಕಳೆದ ಏಳೂವರೆ ದಶಕಗಳಲ್ಲಿ ದೇಶ ಬಹಳಷ್ಟು ಸವಾಲುಗಳನ್ನು ಎದುರಿಸಿದೆ; ಎಡರು ತೊಡರುಗಳನ್ನು ದಾಟಿ ಮುನ್ನಡೆದಿದೆ. ಸ್ವಾತಂತ್ರ್ಯ ಪಡೆದ ಸಂದರ್ಭದಲ್ಲಿ ದೇಶ ಎದುರಿಸುತ್ತಿದ್ದ ಹಸಿವು, ಬಡತನ, ಅನಕ್ಷರತೆಯ ಸಮಸ್ಯೆಗಳು ಏಳೂವರೆ ದಶಕಗಳ ಹಾದಿಯಲ್ಲಿ ತಕ್ಕಮಟ್ಟಿಗೆ ಬಗೆಹರಿದಿದ್ದರೂ, ಈಗಲೂ ದೇಶದಲ್ಲಿ ಕೋಟ್ಯಂತರ ಜನ ಹಸಿವಿನ ದವಡೆಗೆ ಸಿಲುಕಿರುವುದನ್ನು ನಿರಾಕರಿಸಲಾಗದು. ಸ್ವಾತಂತ್ರ್ಯ ಚಳವಳಿಯ ಭಾಗವಾಗಿದ್ದ ಸ್ವರಾಜ್ಯದ ಪರಿಕಲ್ಪನೆ ಈಗಲೂ ಪೂರ್ಣ ಪ್ರಮಾಣದಲ್ಲಿ ಸಾಕಾರಗೊಂಡಿಲ್ಲ.

ಭಾರತದ ಆತ್ಮ ಹಳ್ಳಿಗಳಲ್ಲಿದೆ ಎಂದು ಎಲ್ಲ ನಾಯಕರೂ ಸರ್ಕಾರಗಳೂ ಹೇಳುತ್ತಾ ಬಂದಿದ್ದರೂ ಸಾವಿರಾರು ಗ್ರಾಮಗಳು ಸ್ವಾವಲಂಬನೆ ಸಾಧಿಸುವುದಿರಲಿ, ಮೂಲಸೌಕರ್ಯಗಳನ್ನೂ ಹೊಂದಿಲ್ಲ. ಈ ಎಲ್ಲ ಸಂಗತಿಗಳ ಬಗ್ಗೆ, ಸ್ವತಂತ್ರ ಭಾರತದ ಸಾಧನೆಗಳೊಂದಿಗೆ ವೈಫಲ್ಯಗಳ ಬಗ್ಗೆಯೂ ಪರಾಮರ್ಶೆ ನಡೆಸಲು ಅಮೃತೋತ್ಸವ ಸಂದರ್ಭವನ್ನು ಪ್ರೇರಣೆಯ ರೂಪದಲ್ಲಿ ಬಳಸಿಕೊಳ್ಳಬೇಕಾಗಿದೆ.

ನವದೆಹಲಿಯ ಕೆಂಪುಕೋಟೆಯಲ್ಲಿ ನಡೆದ 75ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ದೇಶವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿರುವ ಭಾಷಣದಲ್ಲಿ, ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಹಾಗೂ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಕಾರ್ಯರೂಪಕ್ಕೆ ತರುವ ವಿಷಯಕ್ಕೆ ಒತ್ತು ದೊರೆತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡ ಗ್ರಾಮೀಣಾಭಿವೃದ್ಧಿಗೆ ಆದ್ಯತೆ ನೀಡುವ ಮಾತುಗಳನ್ನಾಡಿದ್ದಾರೆ. ‘ಅಮೃತ ಗ್ರಾಮ ಪಂಚಾಯಿತಿ’ ಯೋಜನೆಯಡಿ ಗ್ರಾಮ ಪಂಚಾಯಿತಿಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಉದ್ದೇಶ ಅವರದು.

‘ದೇಶದ ಎಲ್ಲ ಯೋಜನೆಗಳು ಶೇಕಡ 100ರಷ್ಟು ಜನರಿಗೆ ಸಂಪೂರ್ಣವಾಗಿ ತಲುಪಬೇಕು’ ಎಂದು ಹೇಳಿರುವ ಪ್ರಧಾನಿ, ‘ದೇಶವು ಅಭಿವೃದ್ಧಿ ಪಥದಲ್ಲಿ ಸಾಗುವಾಗ ಯಾರೂ ಹಿಂದುಳಿಯಬಾರದು. ಸೌಲಭ್ಯಗಳಿಂದ ವಂಚಿತರಾದವರಿಗೆ ವಿಶೇಷ ಆದ್ಯತೆ ನೀಡಬೇಕು. ದುರ್ಬಲ ವರ್ಗದವರನ್ನು ಅಭಿವೃದ್ಧಿ ಪಥದಲ್ಲಿ ಕೈಹಿಡಿದು ನಡೆಸುವ ಅಗತ್ಯವಿದೆ’ ಎಂದು ಹೇಳಿದ್ದಾರೆ. ಗ್ರಾಮೀಣ ಕರಕುಶಲಕರ್ಮಿಗಳಿಗೆ ಮಾರುಕಟ್ಟೆ ಕಲ್ಪಿಸಲು ಕೇಂದ್ರ ಸರ್ಕಾರ ಆರಂಭಿಸಲಿರುವ ಇ–ಕಾಮರ್ಸ್‌ ವೇದಿಕೆ ಹಾಗೂ ಪ್ರಾದೇಶಿಕ ಭಾಷೆಗಳಿಗೆ ಪ್ರೋತ್ಸಾಹ ನೀಡಲಿದೆ ಎಂದು ಹೇಳಲಾಗುತ್ತಿರುವ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಪ್ರಧಾನಿ ಉತ್ಸಾಹದಿಂದ ಮಾತನಾಡಿದ್ದಾರೆ. ‘ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್‌’ ಎನ್ನುವ ತಮ್ಮ ಜನಪ್ರಿಯ ಘೋಷಣೆಯನ್ನು ಅವರು ‘ಸಬ್‌ಕಾ ವಿಶ್ವಾಸ್‌ ಸಬ್‌ಕಾ ಪ್ರಯಾಸ್‌’ ಎಂದು ವಿಸ್ತರಿಸಿದ್ದಾರೆ.

‘ಎಲ್ಲರ ಜೊತೆ ಎಲ್ಲರ ಏಳ್ಗೆಗೆ ಎಲ್ಲರ ವಿಶ್ವಾಸ ಎಲ್ಲರ ಪ್ರಯತ್ನ’ ಎನ್ನುವ ಆಶಯ ಬಹುತ್ವ ಭಾರತದ ಪರಿಕಲ್ಪನೆಗೆ ಪೂರಕವಾದುದು. ಸಾಮರಸ್ಯದ ಸಹಿಷ್ಣು ಭಾರತವನ್ನು ಕೇವಲ ಹೇಳಿಕೆಗಳಿಗೆ ಸೀಮಿತಗೊಳಿಸದೆ ನಿಜವಾದ ಅರ್ಥದಲ್ಲಿ ಬಹುತ್ವ ಭಾರತವನ್ನು ರೂಪಿಸುವ ಸವಾಲು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ನಮ್ಮ ಮುಂದಿರುವುದನ್ನು ಪ್ರಧಾನಿ ಸೂಚ್ಯವಾಗಿ ಹೇಳಿರುವಂತಿದೆ.

ಅಮೃತೋತ್ಸವ ಸಂದರ್ಭದ ಪ್ರಧಾನಿಯವರ ಮಾತುಗಳು ಭಾರತದ ನಾಳೆಗಳ ಬಗ್ಗೆ ಆಶಾಭಾವನೆ ಮೂಡಿಸುವಂತಿವೆ. ಆದರೆ, ಈ ಮಾತುಗಳು ವೇದಿಕೆಯ ಔಪಚಾರಿಕತೆಗೆ ಸೀಮಿತವಾಗದೆ ಕೃತಿರೂಪಕ್ಕೆ ಬರುವಂತಾಗಬೇಕು. ಅಮೃತ ಮಹೋತ್ಸವ ಸಂದರ್ಭವಾದ 2022–23ರ ವೇಳೆಗೆ ಪೂರ್ಣ ರೂಪದಲ್ಲಿ ಕಾರ್ಯರೂಪಕ್ಕೆ ತರಬೇಕಾದ ಗುರಿಗಳನ್ನು ‘ನೀತಿ ಆಯೋಗ’ 2018ರಲ್ಲಿ ಪ್ರಕಟಿಸಿತ್ತು. ಜನಜೀವನ ಉತ್ತಮಗೊಳ್ಳುವುದು, ರೈತರ ಬದುಕು ಸುಧಾರಿಸುವುದು ಹಾಗೂ ದೇಶದ ಆರ್ಥಿಕ ಪ್ರಗತಿಗೆ ವೇಗ ನೀಡಲಿಕ್ಕೆ ಅಗತ್ಯವಾದ ಅಂಶಗಳನ್ನು ಪ್ರಮುಖವಾಗಿ ಚರ್ಚಿಸಿದ್ದ ನೀತಿ ಆಯೋಗ, ಉದ್ದೇಶಿತ ಗುರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವುದಾಗಿ ಹೇಳಿತ್ತು.

ಆಯೋಗದ ಗುರಿಗಳು ಎಷ್ಟರಮಟ್ಟಿಗೆ ಈಡೇರಿವೆ ಎನ್ನುವುದನ್ನು ತಿಳಿಸುವ ಹೊಣೆ ಸರ್ಕಾರದ್ದೇ ಆಗಿದೆ. ನೀತಿ ಆಯೋಗದ ಹಳೆಯ ಗುರಿಗಳನ್ನೇ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ಹೊಸ ರೂಪದಲ್ಲಿ ಹೇಳಿರುವಂತಿದೆ. ತಾನೇ ಗೊತ್ತುಪಡಿಸಿದ ಗುರಿಗಳನ್ನು ಸಾಧಿಸದೆ ಹೋದಲ್ಲಿ, ಸರ್ಕಾರದ ಮಾತುಗಳ ಬಗ್ಗೆ ಜನ ನಂಬಿಕೆ ಕಳೆದುಕೊಳ್ಳುವಂತಾಗುತ್ತದೆ. ಅಂಥ ಅಪನಂಬಿಕೆಗೆ ಅವಕಾಶ ಕೊಡದೆ, ಉದ್ದೇಶಿತ ಸಾಧನೆಯನ್ನು ನಿರ್ದಿಷ್ಟ ಅವಧಿಯಲ್ಲಿ ಸಾಧಿಸಲು ಕೇಂದ್ರ ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸಬೇಕಾಗಿದೆ. ಮಾತಿನ ಬಲದಿಂದ ದೇಶವನ್ನು ಕಟ್ಟುವ ಪ್ರಯತ್ನದಲ್ಲಿ ನಂಬಿಕೆಯಿಡದೆ, ಕರ್ತೃತ್ವಶಕ್ತಿಯ ಮೂಲಕ ಎಲ್ಲರನ್ನೂ ಅಭಿವೃದ್ಧಿಪಥದಲ್ಲಿ ಕರೆದೊಯ್ಯುವ ಮುತ್ಸದ್ದಿತನವನ್ನು ಸರ್ಕಾರ ಪ್ರದರ್ಶಿಸಬೇಕು. ಆಗ, ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಅರ್ಥಪೂರ್ಣಗೊಳ್ಳಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT